ಅಂತರ್ ಧಾರ್ಮಿಕ ಭಾಷಾ ಪರಿಣತಿಗೆ ಬೇಕಾಗಿದೆ ಪ್ರೋತ್ಸಾಹ
ಶತಮಾನಗಳಿಂದ ವಿಶ್ವದ ನಾನಾ ಭಾಗಗಳ ಜನರು ಪರಸ್ಪರ ನಂಬಿಕೆ, ಸಂಸ್ಕೃತಿಗಳು, ಪದ್ಧತಿಗಳು, ಭಾವ ಪುಂಜಗಳು ಹಾಗೂ ಹವ್ಯಾಸಗಳ ಪ್ರಭಾವಗಳನ್ನು ಹಂಚಿಕೊಳ್ಳುತ್ತಾ, ತಮ್ಮಾಳಗಾಗಿಸುತ್ತಾ ಬಂದಿದ್ದಾರೆ. ಈ ರೀತಿಯಾದ ಕೊಡುಕೊಳ್ಳುವಿಕೆಯ ಹರಿಕಾರರಾಗಿ ಇಂತಹ ಸಮುದಾಯಗಳ ಜನರು ಸಹಬಾಳ್ವೆ ನಡೆಸುತ್ತ ಬಂದಿದ್ದಾರೆ. ಹೀಗಿರುವಾಗ ಒಬ್ಬ ಹಿಂದೂ ಮಾತ್ರ ಸಂಸ್ಕೃತ ಕಲಿಸಬೇಕು ಎನ್ನುವ ವಾದ ತರ್ಕ ಒರಟು ಹಾಗೂ ಕ್ರೂರವಷ್ಟೇ ಅಲ್ಲ, ಬದಲಾಗಿ ಸಂಪೂರ್ಣ ಹಿಂಸಾತ್ಮಕ ಮತ್ತು ಹಾನಿಕಾರಕ.
ಪ್ರತಿಷ್ಠಿತ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಬೋಧಿಸಲು ಓರ್ವ ಮುಸ್ಲಿಂ, ಫಿರೋಝ್ ಖಾನ್ ಅವರ ನೇಮಕಾತಿಯ ವಿರುದ್ಧ ವ್ಯಕ್ತವಾದ ಪ್ರತಿಭಟನೆಯ ಭಾಷೆಗಳನ್ನು ಧಾರ್ಮಿಕ ಬೋಗಿಗಳಲ್ಲಿ ಬಂಧಿಸಿಡುವ ಪ್ರಯತ್ನವಾಗಿದೆ. ಧಾರ್ಮಿಕ ತತ್ವಗಳು, ಸಿದ್ಧಾಂತಗಳು ಭೌಗೋಳಿಕ ಗಡಿಗಳನ್ನು ಮೀರಿ ನಿಂತಿವೆ. ಯಾವುದೇ ಒಂದು ಭಾಷೆಯಲ್ಲಿರುವ ಪವಿತ್ರ ಶ್ರೇಷ್ಠ ಸಾಹಿತ್ಯವು ಆ ಭಾಷೆಯ ಏಕಸ್ವಾಮ್ಯವನ್ನು ಸಾಧಿಸಲು ಯಾವುದೇ ಸಮುದಾಯಕ್ಕೆ ಒಂದು ನೆವನವಾಗಬಾರದು. ಹಿಂದೂ ಧರ್ಮಕ್ಕೆ ಸಂಸ್ಕೃತ ಭಾಷೆಯ ಕೊಡುಗೆ, ಇಸ್ಲಾಂ ಧರ್ಮಕ್ಕೆ ಅರೇಬಿಕ್ ಭಾಷೆಯ ಕೊಡುಗೆಯಷ್ಟೇ ಜನಜನಿತವಾಗಿದೆ. ಆದರೆ, ಈ ಕಾರಣಕ್ಕಾಗಿ ಈ ಭಾಷೆಗಳು ಕೇವಲ ಹಿಂದೂಗಳು ಅಥವಾ ಮುಸ್ಲಿಮರ ಆಸ್ತಿ ಎಂದು ತಿಳಿಯಲು ಸಾಧ್ಯವೇ ಇಲ್ಲ. ಆದ್ದರಿಂದ ಓರ್ವ ಫಿರೋಝ್‌ಖಾನ್ ಸಂಸ್ಕೃತ ಕಲಿಸಲು ಎಷ್ಟು ಅರ್ಹನೋ ಹಾಗೆಯೇ ಒಬ್ಬಳು ಸವಿತಾ ಅಥವಾ ಒಬ್ಬ ರಾಮಚಂದ್ರನ್ ಅರೇಬಿಕ್ ಕಲಿಸಲು ಕೂಡ ಅಷ್ಟೇ ಅರ್ಹ ಎಂದು ನಾವು ಅರ್ಥ ಮಾಡಿಕೊಳ್ಳಬೇಕು.
ಬನಾರಸ್ ಘಟನೆ ಮತಾಂಧತೆಯನ್ನು ಹೊಸ ಹೊಸ ರಂಗಗಳಿಗೆ ಹಾಗೂ ಮಟ್ಟಗಳಿಗೆ ವ್ಯಾಪಿಸುವ ಸಂಘ ಪರಿವಾರದ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ಈ ನಿಟ್ಟಿನಲ್ಲಿ ಶಿಕ್ಷಣ-ಬೋಧನೆ ಅದರ ಇತ್ತೀಚಿನ ವಿವಾದದ ಕ್ಷೇತ್ರವಾಗಿದೆ. ಆದರೆ ಅಂತರ್ ಧಾರ್ಮಿಕ-ಭಾಷಾ ನೈಪುಣ್ಯ, ಕಲಿಕೆ, ಬೋಧನೆ ಈ ದೇಶದ ಪ್ರಾಚೀನ ಪರಂಪರೆಯಿಂದ ನಡೆದುಕೊಂಡು ಬಂದಿದೆ. ಮೊಘಲರ ಕಾಲದಲ್ಲಿ ಮೌಲ್ವಿಗಳು ಕೇಸರಿ ವಸ್ತ್ರಧಾರಿಯಾದ ಪರ್ಷಿಯನ್ ವಿದ್ವಾಂಸರ ಜೊತೆ ಸಂವಾದದಲ್ಲಿ ತೊಡಗಿರುತ್ತಿದ್ದರು ಹಲವಾರು ಸಂಸ್ಕೃತ ಅಭಿಜಾತ (ಕ್ಲಾಸಿಕ್) ಪಠ್ಯಗಳನ್ನು ಪರ್ಷಿಯನ್ ಭಾಷೆಗೆ ಭಾಷಾಂತರಿಸುವಂತೆ ಅಕ್ಬರ್ ಚಕ್ರವರ್ತಿ ಆಜ್ಞೆ ಮಾಡಿದ್ದ. ಮಹಾಭಾರತದ ಮೊತ್ತ ಮೊದಲ ಅನುವಾದ, ಯಾವುದೇ ಭಾರತೀಯ ಭಾಷೆಗಳಲ್ಲಿ ಅನುವಾದವಾಗುವುದಕ್ಕೆ ಮೊದಲು ಪರ್ಷಿಯನ್ ಭಾಷೆಗೆ ಆದ ಅನುವಾದವೆಂಬುದು ಬಹಳ ಮಂದಿಗೆ ತಿಳಿದಿಲ್ಲ. ‘ರಝ್ಮೆ ನಾಮಾಹ್’ (ಯುದ್ಧ ಮಹಾ ಗಾಥೆ) ಎಂಬ ಶೀರ್ಷಿಕೆಯಲ್ಲಿ ಅದು ಅನುವಾದವಾಗಿತ್ತು. ಈ ಅನುವಾದ ಯೋಜನೆಯನ್ನು ಮುಲ್ಲಾ ಅಬ್ದುಲ್ ಖಾದಿರ್‌ನ ಉಸ್ತುವಾರಿಯಲ್ಲಿ ಮಾಡಲಾಗಿತ್ತು. ಅನುವಾದಕರ ಸಮಿತಿಯಲ್ಲಿ ಮುಲ್ಲಾ ಶೆರಿ, ನಕೀಬ್ ಖಾನ್ ಹಾಗೂ ಸುಲ್ತಾನ್ ಹಾಜಿ ತಾನೆಸರಿ ಇದ್ದರು. ಒಂದು ವರ್ಷದ ಬಳಿಕ ಬದಾಯುನಿ ರಾಮಾಯಣವನ್ನು ಪರ್ಷಿಯನ್‌ಗೆ ಭಾಷಾಂತರಿಸಿದ. ಮುಲ್ಲಾ ಶೆರಿ ಶ್ರೀಕೃಷ್ಣನ ಜೀವನ ಚರಿತ್ರೆಯನ್ನು ಭಾಷಾಂತರಿಸಿದ್ದ.
ಕಲ್ಹಣನ ರಾಜತರಂಗಿಣಿಯನ್ನು ಮೌಲಾನಾ ಮುಹಮ್ಮದ್ ಭಾಷಾಂತರಿಸಿದ್ದ. ಮುಲ್ಲಾ ಹುಸೇನ್ ವಾಜ್ ಸಂಸ್ಕೃತ ಪಂಚತಂತ್ರವನ್ನು ಭಾಷಾಂತರಿಸಿದ್ದ. ಮಲಿಕ್ ಮುಹಮ್ಮದ್ ಜೈಸಿ (ಜನನ 1498) ತನ್ನ ಹಿಂದಿ ಕಾವ್ಯವನ್ನು ಶೇರ್‌ಶಾನ ಆಳ್ವಿಕೆಯಲ್ಲಿ 1542ರಲ್ಲಿ ರಚಿಸಿದ್ದ. ಪದ್ಮಾವತ್ ರಾಮಾಯಣದಷ್ಟೇ ಕಾವ್ಯ ಶಕ್ತಿ ಇರುವ ಒಂದು ಶ್ರೇಷ್ಠ ಕೃತಿಯಾಗಿದೆ.
ಅಕ್ಬರನ ಔದಾರ್ಯ, ಪರಧರ್ಮ ಪ್ರೀತಿ ಎಲ್ಲರಿಗೂ ತಿಳಿದಿದೆ. ಆದರೂ ಸ್ವತಃ ಆತನೇ ಹಿಂದಿಯಲ್ಲಿ ಕವನಗಳನ್ನು ಬರೆದಿದ್ದ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಆತ ರಾ ಕರಣ್ ಎಂಬ ಕಾವ್ಯನಾಮದಲ್ಲಿ ಬರೆದಿದ್ದ. ಗಂಗಾ ನದಿ ಮುಖಜ ಭೂಮಿಯಲ್ಲಿ ಹಿಂದಿ ಸಂವಹನ ಮಾಧ್ಯಮವಾಗಲು, ವ್ಯಾವಹಾರಿಕ ಭಾಷೆಯಾಗಲು ಮೊಘಲರ ಆಸ್ಥಾನ ಮತ್ತು ಆಡಳಿತ ನೀಡಿದ ಪ್ರೋತ್ಸಾಹವೇ ಕಾರಣ. ಹಿಂದಿ ಕವಿ ಜಗನ್ನಾಥ್ ಪಂಡಿತ್ ರಾಜ್, ಚಕ್ರವರ್ತಿ ಷಹಜಹಾನನ ಅಚ್ಚು ಮೆಚ್ಚಿನ ಕವಿಯಾಗಿದ್ದ. ಭಗವದ್ಗೀತೆಯನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ್ದು ಮೌಲಾನಾ ಅಬ್ದುರ್ರಹಮಾನ್ ಚಿಸ್ತಿ, ಹಿಂದೂ ದೇವತೆಗಳಾದ ಮಹದೇವ ಮತ್ತು ಪಾರ್ವತಿಯ ನಡುವೆ ಒಂದು ಸಂವಾದವನ್ನು ಬರೆದು ಅವರನ್ನು ಆಡಮ್ ಮತ್ತು ಈವ್‌ರೊಂದಿಗೆ ಹೋಲಿಕೆ ಮಾಡಿದ್ದ. ದಾರಾಶಿಕೋ ತನ್ನ ವಿದ್ವತ್ತನ್ನು ಧರ್ಮಕ್ಕೆ ಮಾತ್ರ ಸೀಮಿತಗೊಳಿಸಲಿಲ್ಲ. ಆತ ಗ್ರಾಮೀಣ ಪರಿಸರವನ್ನು ಆಳವಾಗಿ ಅಧ್ಯಯನ ಮಾಡಿ ‘ನುಕ್ಸಾದರ್ ಫನ್ನಿ ಫಲಾಹತ್’ (ಬೇಸಾಯದ ಕಲೆ) ಎಂಬ ರೈತರಿಗೆ ಸಲಹೆ ಸೂಚನೆಗಳನ್ನು ನೀಡುವ ಪುಸ್ತಕವೊಂದನ್ನು ಬರೆದಿದ್ದ.
ಇನ್ನು ದಕ್ಷಿಣ ಭಾರತಕ್ಕೆ ಬಂದರೆ ಮೌಲ್ವಿ ಉಮರ್ ಪುಲಾವರ್ 17ನೇ ಶತಮಾನದಲ್ಲಿ ‘ಸೀರಾಹ್ ಪುರಾಣಮ್’ನಂತಹ ಕೃತಿಗಳನ್ನು ರಚಿಸಿದ್ದ. ಸೀರಾಹ್ ಪುರಾಣಮ್ ಮೂರು ಕಾಂಡಗಳಲ್ಲಿ 5027 ಪದ್ಯಗಳಿರುವ ಒಂದು ಕೃತಿಯಾಗಿದೆ. ಇದರಲ್ಲಿ ಆತ ಪ್ರವಾದಿಯವರ ಜೀವನವನ್ನು ಪೌರಾಣಿಕ ಧ್ವನಿಯಲ್ಲಿ ಚಿತ್ರಿಸುತ್ತಾನೆ.
ಶತಮಾನಗಳಿಂದ ವಿಶ್ವದ ನಾನಾ ಭಾಗಗಳ ಜನರು ಪರಸ್ಪರ ನಂಬಿಕೆ, ಸಂಸ್ಕೃತಿಗಳು, ಪದ್ಧತಿಗಳು, ಭಾವ ಪುಂಜಗಳು ಹಾಗೂ ಹವ್ಯಾಸಗಳ ಪ್ರಭಾವಗಳನ್ನು ಹಂಚಿಕೊಳ್ಳುತ್ತಾ, ತಮ್ಮಾಳಗಾಗಿಸುತ್ತಾ ಬಂದಿದ್ದಾರೆ. ಈ ರೀತಿಯಾದ ಕೊಡುಕೊಳ್ಳುವಿಕೆಯ ಹರಿಕಾರರಾಗಿ ಇಂತಹ ಸಮುದಾಯಗಳ ಜನರು ಸಹಬಾಳ್ವೆ ನಡೆಸುತ್ತ ಬಂದಿದ್ದಾರೆ. ಹೀಗಿರುವಾಗ ಒಬ್ಬ ಹಿಂದೂ ಮಾತ್ರ ಸಂಸ್ಕೃತ ಕಲಿಸಬೇಕು ಎನ್ನುವ ವಾದ ತರ್ಕ ಒರಟು ಹಾಗೂ ಕ್ರೂರವಷ್ಟೇ ಅಲ್ಲ, ಬದಲಾಗಿ ಸಂಪೂರ್ಣ ಹಿಂಸಾತ್ಮಕ ಮತ್ತು ಹಾನಿಕಾರಕ. ಬನರಾಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಸಂಸ್ಕೃತ ಭಾಷೆ ಬೋಧಿಸಲು ಮುಸ್ಲಿಂ ಪ್ರಾಧ್ಯಾಪಕರೊಬ್ಬರ ನೇಮಕಾತಿ ಕುರಿತು ಸೃಷ್ಟಿಸಲಾಗಿರುವ ವಿವಾದವು ಹೊಸ ಕ್ಷೇತ್ರವೊಂದಕ್ಕೆ ಕೋಮು ವಿಷಯ ಹರಡುತ್ತಿರುವವರ ಸೂಚನೆಯಾಗಿದೆ. ಈ ವಿಷ ಕೋಮು ಸಾಂಕ್ರಾಮಿಕ ಇನ್ನಷ್ಟು ಹರಡುವುದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ.