ಜೆಎನ್‌ಯು ಮೇಲಿನ ದಾಳಿಗಳು: ಭಾರತದ ಶಿಕ್ಷಣ ವ್ಯವಸ್ಥೆಯ ಮೇಲಿನ ದಾಳಿಗಳಾಗಿವೆ
ಜೆಎನ್‌ಯುವಿನ ಮೇಲಿನ ದಾಳಿಯನ್ನು ನಾವು ಕೇವಲ ಆ ಒಂದು ವಿಶ್ವವಿದ್ಯಾನಿಲಯದ ಮೇಲಿನ ದಾಳಿಯನ್ನಾಗಿ ಮಾತ್ರ ಗ್ರಹಿಸಲು ಹೋದರೆ ಸರಿಯಾಗುವುದಿಲ್ಲ. ಅದು ನಮ್ಮ ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳು ಹಾಗೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲೆಯೇ ನಡೆಯುತ್ತಿರುವ ನೇರ ದಾಳಿಗಳೆಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ.
ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ ಮತ್ತೆ ಜಾಗತಿಕ ಸುದ್ದಿಗೆ ಗ್ರಾಸವಾಗಿದೆ. ಸಂಕ್ಷಿಪ್ತವಾಗಿ ಜೆಎನ್‌ಯು ಎಂದು ಕರೆಯಲ್ಪಡುವ ಈ ಕೇಂದ್ರೀಯ ವಿಶ್ವವಿದ್ಯಾನಿಲಯ ಜಾಗತಿಕ ಮನ್ನಣೆ ಪಡೆದ ಭಾರತದ ವಿಶ್ವ ವಿದ್ಯಾನಿಲಯವಾಗಿದೆ. ಭಾರತದಲ್ಲಿ ಜೆಎನ್‌ಯುವಿನಂತಹ ವಿಶ್ವ ವಿದ್ಯಾನಿಲಯ ಬೇರೊಂದಿಲ್ಲ. ಇಲ್ಲಿ ಅತ್ಯಂತ ಅಗ್ಗದಲ್ಲಿ ಉನ್ನತ ಶಿಕ್ಷಣ ಸಮಾಜದ ಎಲ್ಲಾ ಅದರಲ್ಲೂ ದಲಿತ ದಮನಿತ ವರ್ಗದ ವಿದ್ಯಾರ್ಥಿಗಳಿಗೆ ದೊರೆಯುತ್ತಾ ಬಂದಿತ್ತು. ಈ ವಿಶ್ವವಿದ್ಯಾನಿಲಯವನ್ನು ಕಳೆದ ಕೆಲವು ವರ್ಷಗಳಿಂದ ವಿವಾದಗಳ ಕೇಂದ್ರವನ್ನಾಗಿ ಮಾಡಲಾಗುತ್ತಿದೆ. ಹಾಗೆ ಮಾಡುವುದರಲ್ಲಿ ಆಳುವ ಶಕ್ತಿಗಳಿಗೆ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಉದ್ದೇಶಗಳಿವೆ. ಬೌದ್ಧಿಕವಾಗಿ ಮುಂಚೂಣಿಯಲ್ಲಿರುವ ಈ ವಿಶ್ವವಿದ್ಯಾನಿಲಯವನ್ನು ಇಲ್ಲದಂತೆ ಮಾಡುವ ಸಂಚುಗಳು ನಡೆಯುತ್ತಾ ಬಂದಿವೆ. ಈ ಬಗ್ಗೆ ಕರ್ನಾಟಕದ ವಿಶ್ವವಿದ್ಯಾನಿಲಯಗಳ ಬೋಧಕ ವಲಯಗಳಲ್ಲಿರುವ ಬಹುತೇಕ ಪ್ರಾಧ್ಯಾಪಕರು ಸಣ್ಣ ದನಿಯನ್ನೂ ಕೂಡ ಎತ್ತಲಾಗದಷ್ಟು ಬಲಹೀನರಾಗಿದ್ದಾರೆ ಎನ್ನುವುದು ಕಣ್ಣಿಗೇ ರಾಚುತ್ತಿರುವ ವಿಚಾರ. ಪಡೆಯುತ್ತಿರುವ ಯುಜಿಸಿ ಸಂಬಳ ಹಾಗೂ ಸವಲತ್ತುಗಳು ಅವರ ಕಣ್ಣು ಹಾಗೂ ಮೆದುಳುಗಳಿಗೆ ಗರಬಡಿಸಿದಂತೆ ಕಾಣುತ್ತಿದೆ.
ಜವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯವನ್ನು 1969ರಲ್ಲಿ ಸಂಸತ್ತಿನ ಮಸೂದೆಯಡಿ ಸ್ಥಾಪಿಸಲಾಗಿತ್ತು. 1965ರ ಸೆಪ್ಟಂಬರ್ 1ರಂದು ರಾಜ್ಯಸಭೆಯಲ್ಲಿ ಜೆಎನ್‌ಯು ಮಸೂದೆ ಮಂಡನೆಯಾಗುತ್ತದೆ. ಅದನ್ನು ಉನ್ನತ ಚಿಂತನೆಗಳಿರುವ ಭಾರತದ ವಿಶೇಷ ಶಿಕ್ಷಣ ಕೇಂದ್ರವನ್ನಾಗಿಸುವ ಉದ್ದೇಶದಿಂದಲೇ ಸ್ಥಾಪಿಸಲಾಗಿತ್ತು. ರಾಜತಾಂತ್ರಿಕ, ಪತ್ರಕರ್ತ ಹಾಗೂ ಶಿಕ್ಷಣ ತಜ್ಞ ಜಿ. ಪಾರ್ಥಸಾರಥಿ ಈ ಕೇಂದ್ರೀಯ ವಿಶ್ವವಿದ್ಯಾನಿಲಯದ ಮೊದಲ ಉಪಕುಲಪತಿಗಳಾಗಿದ್ದರು. ಅಲ್ಲಿ ವೈಜ್ಞಾನಿಕ ಸಮಾಜವಾದವನ್ನು ಕೂಡ ಒಂದು ನಿಕಾಯವಾಗಿ ಮಾಡಬೇಕೆಂಬ ಪ್ರಸ್ತಾವನೆಯೊಂದಿಗೆ ಮಸೂದೆ ಮಂಡನೆಯಾಗಿತ್ತು. 1970ರಲ್ಲಿ ಅಂತರ್‌ರಾಷ್ಟ್ರೀಯ ಅಧ್ಯಯನಗಳಿಗಾಗಿನ ಭಾರತೀಯ ಕೇಂದ್ರವನ್ನು ಇದರೊಂದಿಗೆ ವಿಲೀನಗೊಳಿಸಲಾಗುತ್ತದೆ.
ಈ ವಿಶ್ವವಿದ್ಯಾನಿಲಯ ದೇಶದಲ್ಲಿ ಉನ್ನತ ಮಟ್ಟದ ವಿಶ್ವವಿದ್ಯಾನಿಲಯ ವೆಂದು ಪರಿಗಣಿತವಾಗಿದೆ. ಸಂಶೋಧನೆ ಹಾಗೂ ಪಾಠಗಳಿಗೆ ಜಾಗತಿಕ ಮನ್ನಣೆಯನ್ನು ಪಡೆದಿದೆ. ಹಲವು ಸೇನಾ ಶಿಕ್ಷಣ ಸಂಸ್ಥೆಗಳು, ಕೆಲವು ಬಿಸಿನೆಸ್ ಶಿಕ್ಷಣ ಸಂಸ್ಥೆಗಳು, ಹಲವಾರು ಸಂಶೋಧನಾ ಸಂಸ್ಥೆಗಳು ಜೆಎನ್‌ಯುಯಡಿ ಕಾರ್ಯ ನಿರ್ವಹಿಸುತ್ತಿವೆ. ದೇಶದ ವಿವಿಧ ಭಾಗಗಳಿಗೆ ಸೇರಿದ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿ/ನಿಯರು ಜೆಎನ್‌ಯುವಿನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಅದರಲ್ಲಿ ಸಮಾಜದ ತಳಪಾಯದ ಸಮುದಾಯಗಳಿಗೆ ಸೇರಿದವರೇ ಅಧಿಕ. ಇಡೀ ದೇಶದಲ್ಲೇ ಅತ್ಯಂತ ಕಡಿಮೆ ಖರ್ಚಿನಲ್ಲಿ ಉನ್ನತ ಶಿಕ್ಷಣ ನೀಡುವ ಉನ್ನತ ಮಟ್ಟದ ಮಾನ್ಯತೆ ಪಡೆದಿರುವ ಏಕೈಕ ವಿಶ್ವ ವಿದ್ಯಾನಿಲಯ ಜೆಎನ್‌ಯು ಆಗಿದೆ ಎನ್ನಬಹುದು.
ಇಲ್ಲಿ ಶಿಕ್ಷಣ ಪಡೆದವರಲ್ಲಿ ಹೆಸರಾಂತ ಅರ್ಥ ಶಾಸ್ತ್ರಜ್ಞರು, ಶಿಕ್ಷಣತಜ್ಞರು, ಸಾಹಿತಿಗಳು, ಇತಿಹಾಸಕಾರರು, ಭಾಷಾ ವಿದ್ವಾಂಸರು, ರಾಜಕಾರಣಿಗಳು, ಅಧಿಕಾರಿಗಳು ಸೇರಿದ್ದಾರೆ. ಭಾರತದಲ್ಲಿ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯದ ರೀತಿಯ ವೈವಿಧ್ಯಮಯ, ಬಹುತ್ವ, ದೇಶದ ಎಲ್ಲಾ ಆಗುಹೋಗುಗಳನ್ನು ಮುಕ್ತವಾಗಿ ಚರ್ಚಿಸುವ ನಿಜವಾದ ಪ್ರಜಾತಾಂತ್ರಿಕ ವಾತಾವರಣವಿರುವ ಉನ್ನತ ಶಿಕ್ಷಣ ಸಂಸ್ಥೆ ಬೇರೊಂದಿಲ್ಲ ಎನ್ನಬಹುದು. ಭಾರತದಲ್ಲಿ ಇಂತಹ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತಷ್ಟು ಹೆಚ್ಚಾಗಬೇಕಿತ್ತು. ಅದನ್ನು ನಮ್ಮನ್ನಾಳುತ್ತಾ ಬಂದ ಯಾವ ಸರಕಾರಗಳೂ ಮಾಡಲಿಲ್ಲ. ಅಷ್ಟೇ ಅಲ್ಲ ಜೆಎನ್‌ಯುವನ್ನೇ ನಾಶಗೊಳಿಸುವ ಕಾರ್ಯದಲ್ಲಿ ತೊಡಗಿದವು. ಜಾಗತೀಕರಣವನ್ನು ದೇಶದ ಮೇಲೆ ಹೇರಿದ ನಂತರ ಶಿಕ್ಷಣ ಒದಗಿಸಬೇಕಾದ ಸರಕಾರಗಳ ಶಿಕ್ಷಣದ ಬಗೆಗಿನ ವ್ಯಾಖ್ಯಾನಗಳೇ ಬದಲಾದವು. ಕಾರ್ಪೊರೇಟೀಕರಣವೇ ಎಲ್ಲಾ ರಂಗಗಳ ಅಭಿವೃದ್ಧಿಗೆ ಪರಿಹಾರದ ಮಂತ್ರವೆಂಬಂತೆ ಬಿಂಬಿಸಲಾಯಿತು. ಅದರ ಭಾಗವಾಗಿ ಕಿಂಡರ್ ಗಾರ್ಟನ್‌ನಿಂದ ಹಿಡಿದು ಉನ್ನತ ಶಿಕ್ಷಣ ರಂಗದ ಮೇಲೆ ಖಾಸಗಿಯವರ ಹಿಡಿತ ಪ್ರಧಾನವಾಗಿ ಸರಕಾರಿ ಹಿಡಿತ ನಾಮ ಮಾತ್ರದ್ದಾಯಿತು. ನಂತರ ಖಾಸಗಿ ವಿಶ್ವವಿದ್ಯಾನಿಲಯ ಜಾರಿಯಾಗತೊಡಗಿದವು.
ವಿದೇಶಿಮೂಲದ ವಿಶ್ವವಿದ್ಯಾನಿಲಯಗಳ ಪ್ರವೇಶಕ್ಕೂ ಕಾನೂನು ತಿದ್ದುಪಡಿಯನ್ನು ಹಿಂದಿನ ಕಾಂಗ್ರೆಸ್ ಸರಕಾರದ ಕಾಲದಲ್ಲೇ ಮಾಡಲಾಗಿತ್ತು. ಇದರ ಜೊತೆಯಲ್ಲೇ ಹಾಲಿ ಇರುವ ವಿಶ್ವವಿದ್ಯಾನಿಲಯಗಳನ್ನು ಕೂಡ ಭಾರೀ ಕಾರ್ಪೊರೇಟ್‌ಗಳ ಕೈಗಳಿಗೆ ದಾಟಿಸುವ ಪ್ರಕ್ರಿಯೆಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಡೆಯತೊಡಗಿದವು. ಸರಕಾರಿ ಯಂತ್ರಾಂಗಗಳು ಶಿಕ್ಷಣ ನೀಡುವ ಬದಲಿಗೆ ಯಾವ್ಯಾವ ರೀತಿಗಳಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಕಾರ್ಪೊರೇಟ್ ಕೈಗಳಿಗೆ ದಾಟಿಸಲು ನೀತಿ ಕುನೀತಿಗಳನ್ನು ಹೆಣೆದು ಜಾರಿಗೊಳಿಸುವ ಬಗ್ಗೆಯೇ ಚಿಂತಿಸತೊಡಗಿದವು. ಅದರ ಭಾಗವಾಗಿ ಹಲವಾರು ಕಾರ್ಪೊರೇಟ್ ವಿಶ್ವವಿದ್ಯಾನಿಲಯಗಳು ಅಸ್ತಿತ್ವಕ್ಕೆ ಬಂದವು. ಅದನ್ನು ಡೀಮ್ಡ್ ಯೂನಿವರ್ಸಿಟಿಗಳೆಂದು ಕರೆಯಲಾಯಿತು. ಸ್ವಾಯತ್ತತೆಯನ್ನೂ ನೀಡಲಾಯಿತು. ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ಮೇಲೆ ಜಿಯೋ ಹೆಸರಿನ ಮುಖೇಶ್ ಅಂಬಾನಿಯ ಕಾರ್ಪೊರೇಟ್ ವಿಶ್ವವಿದ್ಯಾನಿಲಯವನ್ನು ಭಾರತದ ಅತ್ಯುನ್ನತ ವಿಶ್ವ ವಿದ್ಯಾನಿಲಯವೆಂದು ಮಾನ್ಯತೆ ನೀಡಿ ಸುಮಾರು ಸಾವಿರ ಕೋಟಿಗಳಷ್ಟು ರೂಪಾಯಿಗಳ ಅನುದಾನವನ್ನು ನೀಡಲಾಯಿತು.
ಆದರೆ ಈ ಜಿಯೋ ವಿಶ್ವವಿದ್ಯಾನಿಲಯ ಕೇವಲ ಕಾಗದದಲ್ಲಿ ಮಾತ್ರ ಅಸ್ತಿತ್ವದಲ್ಲಿತ್ತು. ಅದೂ ಅಲ್ಲದೆ ಅದು ಆಗಷ್ಟೇ ಆರಂಭವಾದ ಸ್ವಂತ ಕಟ್ಟಡ ಕೂಡ ಇಲ್ಲದ, ಒಂದು ವಿಶ್ವ ವಿದ್ಯಾನಿಲಯವಾಗಿತ್ತು. ಅದಕ್ಕೆ ಅಕ್ರಮವಾಗಿ ಅತ್ಯುತ್ತಮ ಎಂದು ಮಾನ್ಯತೆ ನೀಡಿದ್ದಲ್ಲದೆ ಅನುದಾನವನ್ನೂ ಕೊಟ್ಟಿದ್ದು ಸಾಕಷ್ಟು ವಿವಾದವನ್ನೂ ಸೃಷ್ಟಿಸಿತ್ತು. ಜೆಎನ್‌ಯುವಿನಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ, ಕಲೆ, ಸಾಹಿತ್ಯ, ಪತ್ರಿಕೋದ್ಯಮ, ಹೀಗೆ ಎಲ್ಲಾ ಮುಖ್ಯ ರಂಗಗಳಲ್ಲಿ ನಡೆಯುವ ಸಮಕಾಲೀನ ಬೆಳವಣಿಗೆಗಳ ಬಗ್ಗೆ ವ್ಯಾಪಕ ಚರ್ಚೆ, ಸಂವಾದ, ಪ್ರತಿಭಟನೆ ಹೋರಾಟಗಳು ದಿನನಿತ್ಯದ ಸಂಗತಿಗಳಾಗಿ ಬೆಳೆದು ಬಂದಿವೆ. ಭಾರತದಲ್ಲಿ ಅತೀ ಹೆಚ್ಚು ಪ್ರಜಾತಾಂತ್ರಿಕ ಚರ್ಚೆಗಳು ಸಂವಾದಗಳು ಜೆಎನ್‌ಯುವಿನಲ್ಲಿ ನಡೆಯುತ್ತವೆ. ಅಲ್ಲಿರುವಷ್ಟು ರಾಜಕೀಯ ಹಾಗೂ ಪ್ರಜಾತಾಂತ್ರಿಕ ವಾತಾವರಣ ಭಾರತದ ಇತರ ಯಾವ ವಿಶ್ವವಿದ್ಯಾನಿಲಯಗಳಲ್ಲಿಯೂ ಇಲ್ಲವೆನ್ನಬಹುದು. ಹಾಗಾಗಿ ಅಲ್ಲಿ ವ್ಯಾಸಂಗ ಮಾಡಿದ ಹಲವರಲ್ಲಿ ಪ್ರಜ್ಞಾಮಟ್ಟ ಕೂಡ ಹೆಚ್ಚಿನದಾಗಿರುವುದು ಸಾಮಾನ್ಯ ಸಂಗತಿಯಾಗಿದೆ.
ವಿಶ್ವವಿದ್ಯಾನಿಲಯ ಖಾಸಗೀಕರಣದ ಭಾಗವಾಗಿ ಮೋದಿ ಸರಕಾರ ಬಂದ ಮೇಲೆ ಜೆಎನ್‌ಯುವನ್ನು ಪೂರ್ಣ ನಾಶ ಮಾಡುವ ಪ್ರಕ್ರಿಯೆಗಳು ಚುರುಕುಗೊಂಡವು. ಜೊತೆಗೆ ಬ್ರಾಹ್ಮಣಶಾಹಿ ಫ್ಯಾಶಿಸ್ಟ್ ಗುಪ್ತ ಕಾರ್ಯ ಸೂಚಿಯೂ ಇತ್ತು. ವಸಾಹತು ಕಾಲದ ರಾಜ ದ್ರೋಹ ಕಾಯ್ದೆಗಳನ್ನು ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಪ್ರಯೋಗಿಸಿ ಜೈಲಿಗೆ ತಳ್ಳುವ, ಸಂಘ ಪರಿವಾರದ ಅಂಗಗಳ ಮೂಲಕ ವಿಶ್ವವಿದ್ಯಾನಿಲಯದ ಖ್ಯಾತಿಗೆ ಮಸಿ ಬಳಿಯುವ, ದುಷ್ಟಾಚಾರ ನಡೆಸುವ, ಆಡಳಿತಾಂಗಗಳಲ್ಲಿ ಕೋಮುವಾದಿಗಳನ್ನು, ಜಾತೀವಾದಿಗಳನ್ನು ತುರುಕುವ ಕಾರ್ಯಗಳು ಕೂಡ ಚುರುಕುಗೊಂಡವು. ಜೆಎನ್‌ಯುವಿನ ಪ್ರಜಾತಾಂತ್ರಿಕ ವಾತಾವರಣವನ್ನು ನಾಶ ಮಾಡುವ ಕಾರ್ಯಗಳು ಹೆಚ್ಚಾದವು. ಕ್ಯಾಂಪಸ್‌ನಲ್ಲಿ ಪೊಲೀಸ್ ಬಲಗಳನ್ನು ಹೆಚ್ಚಿಸಲಾಯಿತು. ಜೆಎನ್‌ಯು ಆಡಳಿತದಿಂದ ವಿದ್ಯಾರ್ಥಿ ಚಟುವಟಿಕೆಗಳ ಮೇಲೆ ನಿರ್ಬಂಧಗಳು, ವಸ್ತ್ರ ಸಂಹಿತೆಗಳನ್ನು ಹೇರುವ ಕಾರ್ಯಗಳು ಅಧಿಕವಾದವು. ಜೊತೆ ಜೊತೆಯಲ್ಲಿ ಹಾಸ್ಟೆಲ್ ಮೊದಲಾದ ಸೌಲಭ್ಯಗಳನ್ನು ತುಟ್ಟಿ ಮಾಡಲಾರಂಭಿಸಿದರು. ಅವೆಲ್ಲಾ ಪ್ರಧಾನವಾಗಿ ದೇಶದ ವಿವಿಧ ಭಾಗಗಳ ಬಡ ಹಾಗೂ ತಳಪಾಯದ ಸಮುದಾಯಗಳಿಗೆ ಉನ್ನತ ಶಿಕ್ಷಣದ ತಾಣವಾಗಿದ್ದ ಒಂದು ವಿಶ್ವವಿದ್ಯಾನಿಲಯ ಮಾದರಿಯನ್ನೇ ಇಲ್ಲವಾಗಿಸುವ ಪ್ರಯತ್ನಗಳಾಗಿದ್ದವು. ಹಣವುಳ್ಳವರಿಗೆ, ಶ್ರೀಮಂತರಿಗೆ ಮಾತ್ರ ಶಿಕ್ಷಣ ಎನ್ನುವಂತಹ ಮಟ್ಟಕ್ಕೆ ಜೆಎನ್‌ಯುವನ್ನು ಇಳಿಸುವ ಕಾರ್ಯಗಳು ಎಲ್ಲಾ ರೀತಿಗಳಿಂದಲೂ ಚುರುಕಾಯಿತು.
ಜೆಎನ್‌ಯುವಿನ ಮೇಲಿನ ದಾಳಿಯನ್ನು ನಾವು ಕೇವಲ ಆ ಒಂದು ವಿಶ್ವವಿದ್ಯಾನಿಲಯದ ಮೇಲಿನ ದಾಳಿಯನ್ನಾಗಿ ಮಾತ್ರ ಗ್ರಹಿಸಲು ಹೋದರೆ ಸರಿಯಾಗುವುದಿಲ್ಲ. ಅದು ನಮ್ಮ ದೇಶದ ಎಲ್ಲಾ ವಿಶ್ವವಿದ್ಯಾನಿಲಯಗಳು ಹಾಗೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲೆಯೇ ನಡೆಯುತ್ತಿರುವ ನೇರ ದಾಳಿಗಳೆಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ. ಇಂದು ದೇಶದ ಎಲ್ಲಾ ರಂಗಗಳನ್ನು ಕಾರ್ಪೊರೇಟ್‌ಗಳಿಗೆ ಹಸ್ತಾಂತರಿಸುವ ಕಾರ್ಯಗಳು ಹಿಂದೆಂದೂ ಇಲ್ಲದ ವೇಗವನ್ನು ಪಡೆದಿರುವ ಸಂದರ್ಭವಾಗಿದೆ. ಅದರ ಜೊತೆಯಲ್ಲೇ ದೇಶದಲ್ಲಿ ಆರ್ಥಿಕ ರಾಜಕೀಯ ಬಿಕ್ಕಟ್ಟು ಕೂಡ ಹಿಂದೆಂದಿಗಿಂತ ತೀವ್ರವಾಗಿದೆ. ಇದೀಗ ಭಾರತ್ ಪೆಟ್ರೋಲಿಯಂ, ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಸೇರಿದಂತೆ ಸುಮಾರು 28ಕ್ಕೂ ಹೆಚ್ಚು ಸಾರ್ವಜನಿಕ ರಂಗದ ಲಾಭ ಮಾಡುತ್ತಿರುವ ಉದ್ದಿಮೆಗಳನ್ನು ಕಾರ್ಪೊರೇಟ್‌ಗಳ ಹಿಡಿತಕ್ಕೆ ಒಪ್ಪಿಸುವ ತೀರ್ಮಾನ ತೆಗೆದುಕೊಂಡಿದೆ ಮೋದಿ ಸರಕಾರ. ಈ ತೀರ್ಮಾನಗಳು ಮುಂದಿನ ದಿನಗಳಲ್ಲಿ ಉದ್ಯೋಗ ಹಾಗೂ ಅಲ್ಪಮಟ್ಟದಲ್ಲಾದರೂ ಇರುವ ಮೀಸಲಾತಿಯಂತಹ ಸಾಮಾಜಿಕ ನ್ಯಾಯಗಳಲ್ಲಿ ಭಾರೀ ಹೊಡೆತಗಳಿಗೆ ಕಾರಣವಾಗುವುದರಲ್ಲಿ ಅನುಮಾನ ಬೇಕಿಲ್ಲ. ಇಂತಹುದೇ ಕ್ರಮಗಳು ವಿಶ್ವವಿದ್ಯಾನಿಲಯಗಳ ವಿಚಾರದಲ್ಲೂ ಚಾಲ್ತಿಯಲ್ಲಿವೆ.
ಅಲ್ಲಿ ನೇರವಾಗಿ ಇಡೀ ವಿಶ್ವ ವಿದ್ಯಾನಿಲಯಗಳನ್ನೇ ಕಾರ್ಪೊರೇಟ್‌ಗಳಿಗೆ ವಹಿಸಿಕೊಡುವ ಕಾರ್ಯ ಈಗ ಆರಂಭವಾಗದಿದ್ದರೂ ಬೇರೆ ರೀತಿಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ವಿಧಾನಗಳ ಮೂಲಕ ಆ ಕಾರ್ಯ ಚಾಲ್ತಿಯಲ್ಲಿದೆ. ಫೀ ಹೆಚ್ಚಳ, ಯುಜಿಸಿ ಅನುದಾನ ಸೌಲಭ್ಯಗಳ ಕಡಿತ ಇಲ್ಲವೇ ನಿರಾಕರಣೆ, ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ಹಕ್ಕುಗಳ ದಮನ, ಹೊಸಹೊಸ ದಮನಕಾರಿ ನಿಯಮಗಳ ಜಾರಿ, ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿ ಚುನಾವಣೆಗಳು ನಡೆಯದಂತೆ ಮಾಡುವ ಕ್ರಮಗಳು, ಅದೇ ವೇಳೆಯಲ್ಲೇ ಜಿಯೋ ವಿಶ್ವವಿದ್ಯಾನಿಲಯಗಳಂತಹವುಗಳಿಗೆ ಬೇಕಾಬಿಟ್ಟಿ ಅನುದಾನ ಹಾಗೂ ಮನ್ನಣೆ ನೀಡುತ್ತಿರುವುದು ಕೆಲವು ಉದಾಹರಣೆಗಳಾಗಿವೆ. ಇದೇ ಸಂದರ್ಭದಲ್ಲೇ 2.18 ಟ್ರಿಲಿಯನ್ ರೂ.ಗಳಷ್ಟು ಶಿಕ್ಷಣ, ಸ್ವಚ್ಛತೆ, ಮೊದಲಾದ ಕಾರ್ಯಗಳಿಗೆಂದೇ ವಸೂಲಿ ಮಾಡಿದ ತೆರಿಗೆಯ ಹಣವನ್ನೂ ಕೂಡ ಆ ಉದ್ದೇಶಗಳಿಗಾಗಿ ಉಪಯೋಗಿಸಿಯೇ ಇಲ್ಲವೆಂದು ಸಿಎಜಿ ವರದಿ ಹೇಳಿದೆ.
ಉನ್ನತ ಶಿಕ್ಷಣಕ್ಕಾಗಿ ತೆಗೆದಿರಿಸಲ್ಪಟ್ಟಿದ್ದ ಸುಮಾರು 940 ಬಿಲಿಯನ್ ರೂಪಾಯಿಗಳಷ್ಟು ಹಣವನ್ನು ಆ ಉದ್ದೇಶಕ್ಕೆ ಬಳಸದೇ ಮೂರ್ತಿ ಸ್ಥಾಪನೆ, ಕಾರ್ಪೊರೇಟ್‌ಗಳ ಸಾಲ ಮನ್ನಾ ಮೊದಲಾದವುಗಳಿಗೆ ಹರಿಸಲಾಗುತ್ತಿದೆ. ಹಂತ ಹಂತವಾಗಿ ಸಾರ್ವಜನಿಕ ರಂಗಗಳನ್ನು ಕಾರ್ಪೊರೇಟ್‌ಗಳಿಗೆ ಮುಕ್ತಗೊಳಿಸುತ್ತಾ ಈಗ ರಕ್ಷಣೆ, ವಿಮೆ, ಶಿಕ್ಷಣ, ರೈಲ್ವೆ, ತೈಲ, ಕಲ್ಲಿದ್ದಲು, ವಿದ್ಯುತ್, ಬ್ಯಾಂಕಿಂಗ್, ಮಾಧ್ಯಮ, ವಿಮಾನಯಾನ ಮೊದಲಾದ ರಂಗಗಳನ್ನು ಸಂಪೂರ್ಣವಾಗಿ ಭಾರೀ ಕಾರ್ಪೊರೇಟ್‌ಗಳಿಗೆ ಒಪ್ಪಿಸಲಾಗುತ್ತಿದೆ. ಅದಕ್ಕೆ ಹಲವು ಹೆಸರುಗಳನ್ನು ನೀಡಲಾಗುತ್ತಿದೆ. ಜೆಎನ್‌ಯು ಮೇಲಿನ ದಾಳಿ, ಐಐಟಿ ಮದ್ರಾಸ್, ರೋಹಿತ್ ವೇಮುಲಾ, ಜಾದವ್ ಪುರ್ ವಿವಿ ಪ್ರಕರಣ, ದಿಲ್ಲಿ ವಿವಿ ಪ್ರಕರಣ ಹೀಗೆ ಎಲ್ಲವೂ ಈ ದೇಶದ ಜನಸಾಮಾನ್ಯರ ಶಿಕ್ಷಣದ ಹಕ್ಕಿನ ಮೇಲೆಯೇ ನಡೆಯುತ್ತಿರುವ ಭಾರೀ ಕಾರ್ಪೊರೇಟ್ ಪ್ರಾಯೋಜಿತ ಸರಕಾರಿ ದಾಳಿಗಳಾಗಿವೆ. ಅದನ್ನು ಪ್ರತಿರೋಧಿಸಿ ತಡೆಗಟ್ಟಬೇಕಾದ ಕರ್ತವ್ಯ ಎಲ್ಲಾ ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರದಾಗಿದೆ.
ಮಿಂಚಂಚೆ: nandakumarnandana67@gmail.com