ಇಂದಿರಾ ಗಾಂಧಿ ಹಾಗೇಕೆ ಮಾಡಿದರು?

Update: 2019-11-29 09:02 GMT

1971ರ ಯುದ್ಧದಲ್ಲಿ ಭಾರತ ಗಳಿಸಿದ ಗೆಲುವನ್ನು ದೀರ್ಘಾವಧಿಯ ಶಾಂತಿಗಾಗಿ ಪರಿವರ್ತಿಸುವಲ್ಲಿ ಇಂದಿರಾ ಗಾಂಧಿಯವರ ವಿವರಿಸಲಾಗದ ಸೋಲು ಅವರ ಸಾಧನೆಯ ದಾಖಲೆಗಳಲ್ಲಿ ಒಂದು ಕಪ್ಪುಚುಕ್ಕೆಯಾಗಿ ಉಳಿಯುತ್ತದೆ. ಅಂದು ಇಂದಿರಾ ಗಾಂಧಿ ಹಾಗೇಕೆ ಮಾಡಿದರು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಾ ಇರುತ್ತದೆ. ಅವರ ಸೋಲಿನ ಪರಿಣಾಮಗಳನ್ನು ನಾವು ಅನುಭವಿಸುತ್ತಲೇ ಇರಬೇಕಾಗುತ್ತದೆ. ಈಗ ಪರಮಾಣು ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ಮುಖಾಮುಖಿಯಾಗುವುದು ಆ ಪರಿಣಾಮಗಳಲ್ಲಿ ಒಂದು.

ಇಂದಿರಾ ಗಾಂಧಿ ಅವರು ನಿಧನರಾಗಿ ಮೂವತ್ತೈದು ವರ್ಷಗಳ ನಂತರವೂ ಅವರನ್ನು ಭಾರತ ಕಂಡ ಓರ್ವ ಅತ್ಯಂತ ಧೈರ್ಯಶಾಲಿ ಹಾಗೂ ನಿರ್ಣಾಯಕ ನಾಯಕಿ ಎಂದು ಇವತ್ತಿಗೂ ಅವರನ್ನು ಗೌರವಿಸಲಾಗುತ್ತಿದೆ. ಅವರ ಅಧಿಕಾರಾವಧಿ ಯುಗ ಪ್ರವರ್ತಕವೆನ್ನಬಹುದಾದ ಸಾಧನೆಗಳ ಕಾಲವಾಗಿತ್ತು. ಇವುಗಳಲ್ಲಿ 1971ರಲ್ಲಿ ಪಾಕಿಸ್ತಾನದ ವಿರುದ್ಧ ಆಕೆ ಸಾರಿದ ಕಿರು ಅವಧಿಯ ಯಶಸ್ವಿಯಾದ ಯುದ್ಧವೂ ಸೇರಿದೆ. ಆದರೆ ಅವರ ನಿರ್ಧಾರದಲ್ಲಿ ಕೆಲವು ಗಂಭೀರ ತಪ್ಪುಗಳೂ ಆಗಿದ್ದವು. 1975-77ರ ತುರ್ತು ಪರಿಸ್ಥಿತಿ ಮತ್ತು 1984ರಲ್ಲಿ ಅಮೃತಸರದ ಸ್ವರ್ಣ ದೇವಾಲಯದೊಳಗೆ ನಡೆಸಿದ ಕಾರ್ಯಾಚರಣೆ ಇದಕ್ಕೆ ಎರಡು ಉದಾಹರಣೆಗಳು.

ಅವರ ಸೋಲುಗಳಲ್ಲಿ ಅತ್ಯಂತ ಕಡಿಮೆ ಚರ್ಚಿತವಾದ ಸೋಲು ಅವರ ಅತ್ಯಂತ ಕೆಟ್ಟ ಸೋಲು ಕೂಡ ಆಗಿತ್ತು. 1972ರ ಜುಲೈ 2ರಂದು ಸಹಿ ಮಾಡಲಾದ ಶಿಮ್ಲಾ ಒಪ್ಪಂದದ ಎಲ್ಲಾ ದಾಖಲೆಗಳು ಬಹಿರಂಗಗೊಳ್ಳುವ ವರೆಗೆ, 1971ರ ಯುದ್ಧದಲ್ಲಿ ಅವರು ಯಾಕೆ ಭಾರತದ ಪಾಲಿಗೆ ಅಷ್ಟೊಂದು ನಷ್ಟಕರವಾದ ಒಂದು ಶಾಂತಿ ಸಂಧಾನಕ್ಕೆ ಒಪ್ಪಿಗೆ ನೀಡಿದರೆಂಬುದು ನಮಗೆ ತಿಳಿಯಲಾರದು. ಶಿಮ್ಲಾ ಒಪ್ಪಂದ ಮತ್ತು ಆ ಬಳಿಕ ದಿಲ್ಲಿ ಒಪ್ಪಂದ ಪಾಕಿಸ್ತಾನಕ್ಕೆ ಅದು ಬಯಸಿದ್ದ ಎಲ್ಲವನ್ನೂ ನೀಡಿದವು: ಯುದ್ಧದಲ್ಲಿ ಭಾರತ ವಶಪಡಿಸಿಕೊಂಡಿದ್ದ ಅದರ ಭೂಪ್ರದೇಶ ಮತ್ತು ಈಗ ಬಾಂಗ್ಲಾ ದೇಶವಾಗಿರುವ ಭೂಭಾಗದಲ್ಲಿ ಅದರ ಸೈನಿಕರು ನಡೆಸಿದ ನರಹತ್ಯೆ ಅಭಿಯಾನಕ್ಕೆ ಆ ಸೈನಿಕರಲ್ಲಿ ಯಾವ ಒಬ್ಬನನ್ನೂ ಜವಾಬ್ದಾರನನ್ನಾಗಿ ಮಾಡದೆ ಅದರ ಎಲ್ಲ ಸೈನಿಕರ ಸುರಕ್ಷಿತ ವಾಪಸಾತಿ.

ಒಪ್ಪಂದಕ್ಕೆ ಸಹಿ ಬಿದ್ದುದೇ ತಡ ಪಾಕಿಸ್ತಾನದ ಅಂದಿನ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೊ ಭಾರತವನ್ನು ಅವಮಾನಿಸಲು, ಭಾರತದ ಕುರಿತು ಹಗುರವಾಗಿ ಮಾತನಾಡಲು ಆರಂಭಿಸಿದರು. 1973ರಲ್ಲಿ ‘ಫಾರಿನ್ ಅಫೇರ್ಸ್’ ಪತ್ರಿಕೆಯಲ್ಲಿ ಬರೆಯುತ್ತಾ, ‘‘ಪಾಕಿಸ್ತಾನವು ಭಾರತದ ಯಾವುದೇ ಮುಲಾಜಿಲ್ಲದ ದಾಳಿಗೆ ಬಲಿಪಶುವಾಗಿತ್ತು’’ ಎಂದು ಅವರು ಹೇಳಿದರು: ಪಾಕಿಸ್ತಾನದ ಪೂರ್ವ ಭಾಗವನ್ನು ಭಾರತೀಯ ಸೇನೆ ವಶಪಡಿಸಿಕೊಂಡಿತ್ತು ಎಂದು ಬರೆದರು. ‘‘ಆ ದಾಳಿ ಒಂದು ಪ್ರತ್ಯೇಕವಾದ ಏಕೈಕ ಕ್ರಮವಲ್ಲ, ಬದಲಾಗಿ ಬಹಳ ಸಮಯದಿಂದ ಭಾರತ ನಡೆಸುತ್ತಾ ಬಂದಿರುವ ದ್ವೇಷ ಪೂರಿತವಾದ ದಾಳಿಯ ಕ್ರಮಗಳ ಅಂತಿಮ ಹಂತ ಅದು. ಎರಡು ದೇಶಗಳು ಸಾರ್ವಭೌಮ ಹಾಗೂ ಸ್ವತಂತ್ರದೇಶಗಳಾಗಿ ರಚನೆಗೊಂಡಂದಿನಿಂದ ನಡೆದು ಬಂದ ದಾಳಿ ಅದು.’’ ಭಾರತವು ಶಿಮ್ಲಾ ಒಪ್ಪಂದದಿಂದ ಏನನ್ನು ಪಡೆಯಲು ವಿಫಲವಾಯಿತೋ ಅದನ್ನು ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಸಹಿ ಹಾಕಿದ 1973ರ ದಿಲ್ಲಿ ಒಪ್ಪಂದ ಮೂಲಕ ಪಡೆಯಬಹುದಾಗಿತ್ತು.

ಪಾಕಿಸ್ತಾನದ ಜೊತೆಗಿನ ಭಾರತದ ಸಂಬಂಧದಲ್ಲಿ ಒಂದು ತುಂಬಾ ಸೂಕ್ಷ್ಮವಾದ ಸಂದರ್ಭವಿದ್ದದ್ದು ಪಾಕಿಸ್ತಾನ ಭಾರತದ ಎದುರು ಮೊಣಕಾಲೂರಿದ ಸಂದರ್ಭ, ಅಂದರೆ 15,000 ಚದರ ಕಿಲೋಮೀಟರ್ ವರೆಗೂ ಹೆಚ್ಚು ಭೂ ಪ್ರದೇಶ ಮತ್ತು ಅದರ 93,000 ಸೈನಿಕರು (ಅದರ ಸೇನೆಯ ಸುಮಾರು ನಾಲ್ಕನೇ ಒಂದು ಭಾಗ) ಯುದ್ಧ ಕೈದಿಗಳಾಗಿ ಭಾರತದ ವಶವಿದ್ದ ಸಂದರ್ಭ. ಭಾರತ ಅಷ್ಟೊಂದು ಸುಲಭವಾಗಿ ಇವೆರಡನ್ನು ಯಾಕೆ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿತು ಎಂಬುದು ನಿಜವಾಗಿಯೂ ಅರ್ಥವಾಗದ ಒಂದು ವಿಷಯ. ‘‘ಶೇಕ್ ಮುಜೀಬುರ್ರಹಮಾನ್ ಅವರನ್ನು ಜೀವಂತವಾಗಿ ಮರಳಿ ಪಡೆಯುವುದಕ್ಕಾಗಿ’’ ಪಾಕಿಸ್ತಾನದ ಯುದ್ಧ ಕೈದಿಗಳನ್ನು ಅವರ ದೇಶಕ್ಕೆ ಬಿಟ್ಟುಕೊಡಲಾಯಿತೆಂದು ಭಾರತದ ಓರ್ವ ಮಾಜಿ ರಾಜತಾಂತ್ರಿಕ ಶಶಾಂಕ್ ಬ್ಯಾನರ್ಜಿ ಹೇಳಿದ್ದಾರೆ. ಆದರೆ ಅವರ ಈ ವಿವರಣೆ ಸರಿ ಅನ್ನಿಸುವುದಿಲ್ಲ. ಯಾಕೆಂದರೆ ದಿಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕವಷ್ಟೇ ಪಾಕಿಸ್ತಾನಿ ಯುದ್ಧ ಸೈನಿಕರನ್ನು ಪಾಕಿಸ್ಥಾನಕ್ಕೆ ಮರಳಿಸಲಾಗಿತ್ತು. ಅಂದರೆ ಶೇಕ್ ಮುಜೀಬುರ್ರಹಮಾನ್ 1972ರ ಜನವರಿಯಲ್ಲಿ ಬಾಂಗ್ಲಾದೇಶಕ್ಕೆ ಮರಳಿದ ಬಹಳ ಸಮಯದ ಬಳಿಕ.

ಬಾಂಗ್ಲಾದೇಶದಲ್ಲಿ ನಡೆದಿದ್ದ ನರಮೇಧಕ್ಕೆ ಕಾರಣರಾಗಿದ್ದ ಪಾಕಿಸ್ತಾನ ಯುದ್ಧ ಕೈದಿಗಳ ವಿರುದ್ಧ ಅಂತರ್‌ರಾಷ್ಟ್ರೀಯ ನ್ಯಾಯಮಂಡಳಿಯೊಂದು ವಿಚಾರಣೆ ನಡೆಸಬೇಕೆಂದು ಭಾರತ ಸಕಾರಣವಾಗಿಯೇ ಪಟ್ಟು ಹಿಡಿಯಬೇಕಾಗಿತ್ತು. ಭಾರತ ಹೀಗೆ ಮಾಡುತ್ತಿದ್ದಲ್ಲಿ ಪಾಕಿಸ್ತಾನಿ ಸೇನೆಯ ವಿಶ್ವಾಸಾರ್ಹತೆ ನಾಶವಾಗುತ್ತಿತ್ತು. ಅದು ಒಂದು ರಾಜಕೀಯ ಶಕ್ತಿಯಾಗಿ ಉಳಿಯದಂತೆ ಮಾಡಬಹುದಾಗಿತ್ತು ಮತ್ತು ಆಗ ಉಭಯ ದೇಶಗಳ ನಡುವೆ ದೀರ್ಘಾವಧಿಯ ಶಾಂತಿ ನೆಲೆಸುವುದು ಸಾಧ್ಯವಾಗುತ್ತಿತ್ತು. 1971ರ ಯುದ್ಧದಲ್ಲಿ ಭಾರತ ಗಳಿಸಿದ ಗೆಲುವನ್ನು ದೀರ್ಘಾವಧಿಯ ಶಾಂತಿಗಾಗಿ ಪರಿವರ್ತಿಸುವಲ್ಲಿ ಇಂದಿರಾ ಗಾಂಧಿಯವರ ವಿವರಿಸಲಾಗದ ಸೋಲು ಅವರ ಸಾಧನೆಯ ದಾಖಲೆಗಳಲ್ಲಿ ಒಂದು ಕಪ್ಪುಚುಕ್ಕೆಯಾಗಿ ಉಳಿಯುತ್ತದೆ. ಅಂದು ಇಂದಿರಾ ಗಾಂಧಿ ಹಾಗೇಕೆ ಮಾಡಿದರು ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಾ ಇರುತ್ತದೆ. ಅವರ ಸೋಲಿನ ಪರಿಣಾಮಗಳನ್ನು ನಾವು ಅನುಭವಿಸುತ್ತಲೇ ಇರಬೇಕಾಗುತ್ತದೆ. ಈಗ ಪರಮಾಣು ರಾಷ್ಟ್ರವಾಗಿರುವ ಪಾಕಿಸ್ತಾನಕ್ಕೆ ಮುಖಾಮುಖಿಯಾಗುವುದು ಆ ಪರಿಣಾಮಗಳಲ್ಲಿ ಒಂದು.

(ಉದಯ್ ಬಾಲಕೃಷ್ಣನ್ ಬೆಂಗಳೂರಿನ ಐಐಎಸ್‌ಸಿಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.)

ಕೃಪೆ: ದಿ ಹಿಂದೂ

Writer - ಉದಯ್ ಬಾಲಕೃಷ್ಣನ್

contributor

Editor - ಉದಯ್ ಬಾಲಕೃಷ್ಣನ್

contributor

Similar News