ವಿದ್ಯಾರ್ಥಿ ಪ್ರತಿಭಟನೆಯ ದಮನದ ಅಸ್ತ್ರಗಳು
ದೇಶದ ಸಾರ್ವಜನಿಕ ಶಿಕ್ಷಣದ ಮೇಲೆ ಸರಕಾರಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ದಾಳಿಗಳ ಕುರಿತು ವಿಚಾರಣೆ ನಡೆಸಲು ಪೀಪಲ್ಸ್ ಕಮಿಷನ್ ಫಾರ್ ಶ್ರಿಂಕಿಂಗ್ ಡೆಮಾಕ್ರಟಿಕ್ ಸ್ಪೇಸ್ (ಪಿಸಿಎಸ್‌ಡಿಎಸ್) ಸಂಘಟನೆಯು ನಿವೃತ್ತ ನ್ಯಾಯಾಧೀಶರನ್ನೂ ಒಳಗೊಂಡ ಒಂದು ಜನತಾ ನ್ಯಾಯಮಂಡಳಿಯನ್ನು ರಚಿಸಿತ್ತು. ಅದರ ಮುಂದೆ ನೂರಾರು ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸಾಕ್ಷ ಹೇಳಿ ಹಸಿಹಸಿ ಸತ್ಯಗಳನ್ನು ಬಿಚ್ಚಿಟ್ಟಿದ್ದರು. ಅವುಗಳ ಆಧಾರದಲ್ಲಿ ಈ ವಿಶೇಷ ಸರಣಿಯನ್ನು ನಿರೂಪಿಸಲಾಗಿದೆ.
ನಮ್ಮ ಸಂವಿಧಾನವು ಮೊದಲನೆಯದಾಗಿ, ವಾಕ್ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ವಿಧಿ 19(1) (a) ಅಡಿಯಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ಹಕ್ಕು ಮತ್ತು ಭಿನ್ನಮತ ವ್ಯಕ್ತಪಡಿಸುವ ಹಕ್ಕುಗಳನ್ನು ರಕ್ಷಿಸುತ್ತದೆ. ಎರಡನೆಯದಾಗಿ ವಿಧಿ 19(1) (b(c)), ಸಭೆ ಸೇರುವ ಜನರ ಹಕ್ಕಿನ ಕುರಿತು ಹೇಳುತ್ತದೆ. ಮೂರನೆಯದಾಗಿ ವಿಧಿ 19 (1) , ಪ್ರಜೆಗಳಿಗೆ ಸಂಘ, ಸಂಘಟನೆಗಳನ್ನು ಕಟ್ಟುವ ಹಕ್ಕುಗಳನ್ನು ನೀಡುತ್ತದೆ.
ಹಿರಿಯ ವಕೀಲ ಮಿಹಿರ್ ದೇಸಾಯಿಯವರು ನ್ಯಾಯಮಂಡಳಿಯ ಮುಂದೆ ಸಾಕ್ಷ್ಯ ನೀಡುತ್ತಾ, ಈ ವಿಧಿಗಳ ಅಡಿಯಲ್ಲಿ ವಿದ್ಯಾರ್ಥಿಗಳ ಮುಕ್ತ ಮಾತಿನ, ಅಭಿವ್ಯಕ್ತಿಯ, ಶಾಂತಿಯುತವಾಗಿ ಸಭೆ ಸೇರುವ, ಮತಪ್ರದರ್ಶನ ಮತ್ತು ಪ್ರತಿಭಟನೆ ನಡೆಸುವ ಮತ್ತು ಸಂಘಟನೆಗಳನ್ನು ಕಟ್ಟುವ ಹಕ್ಕುಗಳು ಸಂವಿಧಾನವು ಅವರಿಗೆ ಕೊಡಮಾಡಿರುವ ಮೂಲಭೂತ ಹಕ್ಕುಗಳಾಗಿವೆ ಎಂದು ಒತ್ತಿಹೇಳಿದರು. ಆದುದರಿಂದ ಈ ನ್ಯಾಯಮಂಡಳಿಯಲ್ಲಿ ಚರ್ಚಿಸಲಾದ ಪ್ರತಿಭಟನೆಗಳು ಕಾನೂನುಬದ್ಧ ಪ್ರತಿಭಟನೆಗಳಾಗಿದ್ದು, ಸಾಂವಿಧಾನಿಕವಾಗಿ ರಕ್ಷಿತವಾಗಿವೆ ಎಂದವರು ಹೇಳಿದರು.
ಇದಕ್ಕೆ ಹೆಚ್ಚುವರಿಯಾಗಿ, ಸಂವಿಧಾನದ ವಿಧಿ 51A ವೈಜ್ಞಾನಿಕ ಪ್ರವೃತ್ತಿ ಮತ್ತು ಪ್ರಶ್ನಿಸುವ ಮನೋಭಾವವನ್ನು ಉಂಟುಮಾಡುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಕರ್ತವ್ಯ ಎಂದು ಹೇಳುತ್ತದೆ. ಇದು ಮತ್ತು ಸಂವಿಧಾನದ ಇತರ ವಿಧಿಗಳು ಶಿಕ್ಷಣ ಸಂಸ್ಥೆಗಳಲ್ಲಿ ಆರೋಗ್ಯಕರ ಮತಭೇದ ಮತ್ತು ವಿಶ್ಲೇಷಣಾತ್ಮಕ ಚಿಂತನೆಗೆ ಅವಕಾಶ ನೀಡಿರುವುದು ಮಾತ್ರವಲ್ಲ ಅವುಗಳನ್ನು ಉತ್ತೇಜಿಸಬೇಕೆಂದು ಹೇಳುತ್ತವೆ. ನೀವು ವಿದ್ಯಾರ್ಥಿಗಳ ಅಥವಾ ಇನ್ನಾವುದೇ ಪ್ರತಿಭಟನೆಯನ್ನು ನೋಡಿದರೆ, ಅದು ಭಿನ್ನಾಭಿಪ್ರಾಯದ ಬಹಿರಂಗ ಅಭಿವ್ಯಕ್ತಿ ಅಥವಾ ಚರ್ಚೆಯಾಗಿರುತ್ತದೆ. ಅದು ವೈಯಕ್ತಿಕವಾಗಿರಬಹುದು ಅಥವಾ ಸಾಮೂಹಿಕವಾಗಿರಬಹುದು, ಶಾಂತಿಯುತವಾಗಿರಬಹುದು ಇತ್ಯಾದಿ. ನೀವು ಪ್ರತಿಭಟನೆಗೆ ಅವಕಾಶ ಕೊಡುವುದಿಲ್ಲ ಎಂದಾದರೆ ನೀವು ಭಿನ್ನಮತಕ್ಕೂ ಅವಕಾಶ ಕೊಡುವುದಿಲ್ಲ ಎಂದಾಗುತ್ತದೆ. ಏನಿದ್ದರೂ, ಇಂದಿನ ವಾತಾವರಣದಲ್ಲಿ ಕೇವಲ ಅಕಾಡಮಿಕ್ ವಲಯದಲ್ಲಿ ಮಾತ್ರವಲ್ಲ, ಇಡೀ ದೇಶದಾದ್ಯಂತ, ಕೇವಲ ಭಿನ್ನಮತವನ್ನೇ ದೇಶ ವಿರೋಧಿ ಎಂಬಂತೆ ಬಿಂಬಿಸಲಾಗುತ್ತಿದೆ ಅವರು ಹೇಳಿದರು.
ವ್ಯಕ್ತಿಯನ್ನು ರಾಕ್ಷಸನಂತೆ ಬಿಂಬಿಸಲು, ಸಂಸ್ಥೆಯ ಹೆಸರು ಹಾಳುಗೆಡವಲು, ದ್ವೇಷವನ್ನು ವ್ಯವಸ್ಥಿತವಾಗಿ ಹುಟ್ಟುಹಾಕಲು ಮತ್ತು ತಾನು ಸದಾ ಕಣ್ಗಾವಲಿನಲ್ಲಿ ಇದ್ದೇನೆ ಎಂಬ ಭಾವನೆ ಉಂಟುಮಾಡಲು ಕ್ರಿಮಿನಲ್ ಕಾನೂನನ್ನು ಬಳಸಲಾಗುತ್ತಿದೆ ಎಂದು ನ್ಯಾಯವಾದಿ ವೃಂದಾ ಗ್ರೋವರ್ ಹೇಳಿದರು. ಇದರ ಮುಖ್ಯ ಉದ್ದೇಶ ಕೇವಲ ಎಫ್‌ಐಆರ್‌ಗಳಲ್ಲಿ ಹೆಸರು ದಾಖಲಿಸಿ ಭಯದ ವಾತಾವರಣ ಉಂಟುವಾಡುವುದು ಎಂದವರು ಹೇಳಿದರು.
ದೇಶದಾದ್ಯಂತ 2014ರಿಂದ ಕಂಡುಬರುತ್ತಿರುವ ಸಾಮಾನ್ಯ ಲಕ್ಷಣವೆಂದರೆ, ಪ್ರತಿಭಟನೆ ಯಾವುದೇ ರೀತಿಯದ್ದೇ ಆಗಿರಲಿ, ಅಧಿಕಾರಿಗಳು ಅದನ್ನು ದಮನಿಸುವುದು. ಕಾನೂನು ಪ್ರಕಾರವೂ, ಸಾಂವಿಧಾನಿಕವಾಗಿಯೂ ಪ್ರತಿಭಟನೆಗಳನ್ನು ನಡೆಸಲು ಜನರಿಗೆ ಸಮರ್ಥನೆ ಇರುವಾಗ, ಸರಕಾರ ಅಥವಾ ಇನ್ನಾರದ್ದೇ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೆ, ಪ್ರತಿಭಟನೆಗಳ ವಿರುದ್ಧ ಕಾನೂನಿನ ಅಸ್ತ್ರ ಬಳಸಲಾಗುತ್ತಿದೆ ಎಂದು ಮಿಹಿರ್ ದೇಸಾಯಿ ಹೇಳುತ್ತಾರೆ. ಶಿಕ್ಷಣ ಸಂಸ್ಥೆಗಳು ಪ್ರತಿಭಟನೆ ನಡೆಸುವ ವ್ಯಕ್ತಿಯ ವಿರುದ್ಧ ವಿಚಾರಣೆಯನ್ನು ನಡೆಸುವ ಮೂಲಕ ಶಿಸ್ತುಕ್ರಮ ಆರಂಭಿಸಿ, ಆತ ಅಥವಾ ಆಕೆಯನ್ನು ಅಮಾನತು ಮಾಡಿ, ದಂಡಗಳನ್ನು ಹೇರಿ, ಬಹುಶಃ ಮುಂದೆ ವಜಾ ಮಾಡಬಹುದು. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸದಂತೆ - ಮಾರ್ಚ್ 2018ರಲ್ಲಿ ಟಿಐಎಸ್‌ಎಸ್‌ನ ವಿದ್ಯಾರ್ಥಿಗಳಿಗೆ ಮಾಡಿದಂತೆ- ಅವರನ್ನು ಕೋರ್ಟಿಗೆಳೆಯಲಾಗುತ್ತಿದೆ. ‘‘ನೀವು ಗಲಭೆ ಎಬ್ಬಿಸುತ್ತಿದ್ದೀರಿ...ನೀವು ಅಡಚಣೆ ಉಂಟುಮಾಡುತ್ತಿದ್ದೀರಿ... ನೀವು ಕಾನೂನುಬಾಹಿರವಾಗಿ ಗುಂಪು ಸೇರಿದ್ದೀರಿ...’’ ಎಂದು ಎಫ್‌ಐಆರ್ ದಾಖಲಿಸಲಾಗುತ್ತದೆ. ಅತ್ಯಂತ ಆಘಾತಕಾರಿ ವಿಷಯವೆಂದರೆ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಕಾನೂನು ಬಳಸಿದ್ದಾಗಿದೆ- ಅದೂ ಕೂಡಾ ಬ್ರಿಟಿಷರ ಕಾಲದ ಆ ಕರಾಳ ಕಾನೂನನ್ನು ಕಿತ್ತೆಸೆಯಬೇಕಾಗಿರುವಾಗ! ಒಬ್ಬ ವ್ಯಕ್ತಿಯ ಹೇಳಿಕೆಗಳು ಹಿಂಸಾಚಾರಕ್ಕೆ ಕಾರಣವಾದಾಗ ಮಾತ್ರ ಆ ವ್ಯಕ್ತಿಯ ವಿರುದ್ಧ ದೇಶದ್ರೋಹದ ಕಾನೂನನ್ನು ಬಳಸಲು ಸಾಧ್ಯ ಎಂು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳನ್ನು ದಮನಿಸಲು ಲಾಠಿಚಾರ್ಜ್ ಆಗಿರಲಿ ಅಥವಾ ಅತ್ಯಂತ ಜಾತೀವಾದಿ ಮತ್ತು ಕೋಮುವಾದಿ ಭಾಷೆಯನ್ನು ಬಳಸುವುದೇ ಆಗಿರಲಿ- ಪೊಲೀಸ್ ಕ್ರೌರ್ಯ ಕಳೆದ ಎರಡು ವರ್ಷಗಳಲ್ಲಿ ಹೆಚ್ಚಾಗಿದೆ. ಈ ಕ್ರೌರ್ಯ ಲಾಠಿ ಚಾರ್ಜ್ ಮಾಡಿ ಪ್ರತಿಭಟನೆಯೊಂದನ್ನು ನಿಲ್ಲಿಸುವಲ್ಲಿಗೆ ಮಾತ್ರವಲ್ಲದೆ, ಈ ಕ್ರೌರ್ಯವು ಲಾಕಪ್‌ನಲ್ಲಿಯೂ ಮುಂದುವರಿಯುತ್ತದೆ ಎಂದು ಮಿಹಿರ್ ದೇಸಾಯಿ ಹೇಳಿದರು.
ಪ್ರತೀಕಾರದ ಭಯ
ಪ್ರೊ. ಶಾ ಅವರು ಗುಜರಾತಿನಲ್ಲಿ ಸ್ವಾತಂತ್ರ್ಯಹರಣದ ದಯನೀಯ ಸ್ಥಿತಿಯನ್ನು ಮುಂದಿಟ್ಟರು. ರಾಜ್ಯದಾದ್ಯಂತ ಭಯದ ವಾತಾವರಣವಿದ್ದು, ಶಾಲಾ ಶಿಕ್ಷಕರು, ಕಾಲೇಜು/ವಿಶ್ವವಿದ್ಯಾನಿಲಯಗಳ ಅಧ್ಯಾಪಕ/ಪ್ರಾಧ್ಯಾಪಕರು ಇದನ್ನು ಗ್ರಹಿಸುತ್ತಿದ್ದಾರೆ. ಈಗಿನ ಸರಕಾರವು ಯಾರೊಬ್ಬರನ್ನೂ ಮಾತನಾಡಲು ಅಥವಾ ಬರೆಯಲು ಬಿಡುತ್ತಿಲ್ಲ. ಹಾಗೆ ಮಾಡುವುದರ ಅರ್ಥವೆಂದರೆ ನಿಯಂತ್ರಣಕ್ಕೆ ಒಳಗಾಗುವುದು ಮತ್ತು ಈ ನಿಯಂತ್ರಣ ಜೀವನದ ಇತರ ಅಂಶಗಳಿಗೂ ಅನ್ವಯಿಸುತ್ತದೆ. ತನ್ನದೇ ಉದಾಹರಣೆ ನೀಡುತ್ತಾ ಅವರು ನ್ಯಾಯಮಂಡಳಿಗೆ ಹೇಳಿದ್ದೆಂದರೆ, ಅವರು ಗುಜರಾತಿನ ಎರಡನೇ ದೊಡ್ಡ ಪತ್ರಿಕೆ ‘ಸಂದೇಶ’ಕ್ಕೆ ಒಂದು ಅಂಕಣ ಬರೆಯುತ್ತಿದ್ದರು. ಆದರೆ, ಅದನ್ನು ಆಗಿನ ರಾಜ್ಯ ಗೃಹಮಂತ್ರಿ, ಈಗಿನ ಬಿಜೆಪಿ ಅಧ್ಯಕ್ಷ (ಈ ಹೊತ್ತಿಗೆ ದೇಶದ ಗೃಹಮಂತ್ರಿ)ರ ಸೂಚನೆಯಂತೆ ನಿಲ್ಲಿಸಲಾಯಿತು. ತಾನು ಮೂಲಭೂತವಾಗಿ ಬರೆದದ್ದೆಂದರೆ, ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗಾಗಿ ಇರುವುದೇ ಹೊರತು ಸರಕಾರಕ್ಕಾಗಿ ಅಲ್ಲ ಎಂದು ಮಾತ್ರವಾಗಿತ್ತು. ಅಷ್ಟಕ್ಕೇ ತನ್ನ ಅಂಕಣವನ್ನು ಸೆನ್ಸಾರ್ ಮಾಡಲಾಯಿತು ಎಂದು ಅವರು ಹೇಳಿದರು.
ಉನ್ನತ ಕಲಿಕೆಯ ಸಂಸ್ಥೆಗಳಾದ ಐಐಟಿಗಳು, ಐಐಎಂಗಳು, ಐಐಎಸ್‌ಇಆರ್‌ಗಳು, ಐಐಎಸ್ ಇತ್ಯಾದಿಗಳು, ಕೇಂದ್ರದ ಅಧೀನದಲ್ಲಿರುವ ಕೇಂದ್ರಗಳಾದ ಸಿಎಸ್‌ಐಆರ್, ಡಿಬಿಟಿ, ಡಿಎಸ್‌ಟಿ ಮತ್ತು ಡಿಎಇ ಮತ್ತು ವಿವಿಧ ಸ್ವಾಯತ್ತ ಮಂಡಳಿಗಳಾದ ಐಸಿಎಚ್‌ಆರ್, ಐಸಿಎಸ್‌ಎಸ್‌ಆರ್ ಮುಂತಾದ ಸಂಸ್ಥೆಗಳಲ್ಲಿರುವ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲಿದ ಪ್ರೊ. ಪಾರ್ಥೊಸಾರತಿ ರಾಯ್ ಅವರು, ವಿಶ್ವವಿದ್ಯಾನಿಲಯಗಳಿಗೆ ವ್ಯತಿರಿಕ್ತವಾಗಿ ಈ ಸಂಸ್ಥೆಗಳನ್ನು ಸ್ಥಾಪಿಸುವಾಗಲೇ ಮಾರುಕಟ್ಟೆ ಅಗತ್ಯಗಳಿಂದ ಮತ್ತು ಆಳುವ ವರ್ಗಗಳಿಂದ ವ್ಯಾಖ್ಯಾನಿಸಲ್ಪಡುವ ಉತ್ಪಾದಕತೆ ಮತ್ತು ದಕ್ಷತೆಯ ನೆಪದಲ್ಲಿ ಸರ್ವಾಧಿಕಾರಿಯಾಗಿರುವಂತೆ ಯೋಜಿಸಲಾಗಿದೆ ಎಂದರು. ನಿಯಮಗಳು, ನಿಯಂತ್ರಣಗಳು ಮತ್ತು ಆಚರಣೆಗಳ ಮೂಲಕ ಈ ಸಂಸ್ಥೆಗಳ ವ್ಯವಸ್ಥೆಯ ಒಳಗೆಯೇ ಅಂತರ್ಗತವಾಗಿರುವ ರಾಚನಿಕ ಅಥವಾ ಸಾಂಸ್ಥಿಕ ಪ್ರಕ್ರಿಯೆಗಳ ಮೂಲಕ ಭಿನ್ನಮತಗಳನ್ನು ದಮನಿಸಲಾಗಿದೆ. ಇವೆಲ್ಲವುಗಳ ಹೊರತಾಗಿಯೂ ಅತ್ಯಂತ ದಮನಕಾರಿ ವಾತಾವರಣದಲ್ಲಿಯೂ ವಿದ್ಯಾರ್ಥಿ ಸಂಘಟನೆಗಳು ಹುಟ್ಟಿಕೊಂಡಿದ್ದು, ಇದು ಶ್ಲಾಘನೀಯ. ಈ ವಿದ್ಯಾರ್ಥಿ ಸಂಘಟನೆಗಳು ‘ಕೊಆರ್ಡಿನೇಷನ್ ಆಫ್ ಸಾಯನ್ಸ್ ಆ್ಯಂಡ್ ಟೆಕ್ನಾಲಜಿಕಲ್ ಇನ್‌ಸ್ಟಿಟ್ಯೂಷನಲ್ ಸ್ಟೂಡೆಂಟ್ಸ್ ಅಸೋಸಿಯೇಷನ್ಸ್’ (COSTISA) ಎಂಬ ಸಂಘಟನೆಯನ್ನು ರೂಪಿಸಿದ್ದು, ಅದೀಗ ಏಕೀಕೃತ ರೀತಿಯಲ್ಲಿ ದಮನಕಾರಿ ವಾತಾವರಣವನ್ನು ಎದುರಿಸಲು ಯತ್ನಿಸುತ್ತಿದೆ ಎಂದು ಪ್ರೊ. ಪಾರ್ಥೊಸಾರತಿ ರಾಯ್ ವಿವರಿಸಿದರು.
ಸರಕಾರ ಮತ್ತು ವಿಶ್ವವಿದ್ಯಾನಿಲಯಗಳ ಆಡಳಿತಗಳು ವಿದ್ಯಾರ್ಥಿಗಳನ್ನು ಬೆದರಿಸಲು, ಕಿರುಕುಳ ನೀಡಲು, ಪ್ರತಿಭಟನೆಗಳನ್ನು ದಮನಿಸಲು ಮತ್ತು ತಮ್ಮ ಧೋರಣೆಗಳನ್ನು ಹಾಗೂ ಕಾರ್ಯವನ್ನು ವಿರೋಧಿಸುವ ಧ್ವನಿಗಳನ್ನು ಅಡಗಿಸುವ ಸಲುವಾಗಿ ಅವರನ್ನು ಮತ್ತು ವಿದ್ಯಾರ್ಥಿ ಸಂಘಗಳ ನಾಯಕರನ್ನು ಗುರಿಯಾಗಿಸಿ ಕಾನೂನು ವ್ಯವಸ್ಥೆಗಳನ್ನು ಬಳಸುತ್ತಿವೆ. ಆದರೆ, ಇದೇ ವೇಳೆಗೆ ಕ್ಯಾಂಪಸಿನ ಒಳಗೆ ಬಲಪಂಥೀಯ ತೀವ್ರವಾದಿಗಳ ಹಿಂಸಾಚಾರ ತಡೆಯಿಲ್ಲದೇ ಹೆಚ್ಚುತ್ತಿದೆ.
ಬೂಟಾಸಿಂಗ್ ಎಂಬ ವಿದ್ಯಾರ್ಥಿ ಪಂಜಾಬ್ ವಿಶ್ವವಿದ್ಯಾನಿಲಯದ ಮಿತಿಮೀರಿದ ಶುಲ್ಕ ಏರಿಕೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ತಾನು ಪೊಲೀಸರಿಂದ ಎದುರಿಸಿದ ಬೆದರಿಕೆ ಮತ್ತು ಅಪರಾಧೀಕರಣವನ್ನು ಮುಂದಿಟ್ಟರು. ಎಪ್ರಿಲ್ 11, 2017ರಂದು ವಿದ್ಯಾರ್ಥಿಗಳು ಜಂಟಿಯಾಗಿ ಕರೆಕೊಟ್ಟ ವಿಶ್ವವಿದ್ಯಾನಿಲಯ ಬಂದ್ ಬಳಿಕ, ಚಂಡಿಗಡ ಪೊಲೀಸರು ಕ್ಯಾಂಪಸಿನ ಒಳಗೆ ಮತ್ತು ಹೊರಗೆ ಬಳಸಿದ ಕ್ರೂರ ಬಲಪ್ರಯೋಗದ ಭಯಾನಕ ಚಿತ್ರವನ್ನು ಅವರ ಸಾಕ್ಷ್ಯವು ಒದಗಿಸುತ್ತದೆ.
ಲಕ್ನೊದಲ್ಲಿ ನಡೆದ ‘ಕಾಲಾ ಝಂಡಾ’ (ಕರಿ ಬಾವುಟ) ಪ್ರಕರಣದಲ್ಲಿ ತಮ್ಮ ಅಪರಾಧೀಕರಣವನ್ನು ಕರುಣೇಶ್ ದಿವೇದಿ ಮತ್ತು ಅಂಕಿತ್ ಸಿಂಗ್ ಬಾಬು ನ್ಯಾಯಮಂಡಳಿಗೆ ತಿಳಿಸಿದರು. 11 ಮಂದಿ ವಿದ್ಯಾರ್ಥಿಗಳ ಮೇಲೆ ಕ್ರಿಮಿನಲ್ ಕೇಸುಗಳನ್ನು ಜಡಿದು, 23 ದಿನಗಳ ಕಾಲ ಸೆರೆಯಲ್ಲಿಡಲಾಯಿತು. ಈ ಅವಧಿಯಲ್ಲಿ ಅವರನ್ನು ಮತ್ತೆಮತ್ತೆ ಹೊಡೆದು, ಚಿತ್ರಹಿಂಸೆ ನೀಡಿ, ಕಿರುಕುಳ ಕೊಟ್ಟು, ಬೆದರಿಕೆ ಹಾಕಲಾಯಿತು.
ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫಾರಂ ಆಫ್ ಅಸ್ಸಾಂ ಆ್ಯಂಡ್ ನಾರ್ತ್ ಈಸ್ಟ್ ಇಂಡಿಯಾ (ಡಿಎಸ್‌ಎಫ್) ಪ್ರಧಾನ ಕಾರ್ಯದರ್ಶಿ ಹಾಗೂ ಗುವಾಹಟಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ವೃತ್ವಿಕ್ ಸೈಕಿಯಾ, ತಾನು ಖಾಸಗೀಕರಣ, ಭ್ರಷ್ಟಾಚಾರ ಮತ್ತು ಕ್ಯಾಂಪಸಿನೊಳಗೆ ಹೆಚ್ಚುತ್ತಿರುವ ಸಾಮಾಜಿಕ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಒಳಗಾದ ನಿರಂತರ ಪ್ರತೀಕಾರ ಕ್ರಮಗಳನ್ನು ನ್ಯಾಯಮಂಡಳಿಯ ಮುಂದಿಟ್ಟರು.
ತಾವು ಕೋಮುವಾದಿ ನಾಯಕ ದೀನದಯಾಳ್ ಉಪಾಧ್ಯಾಯರ ಹೆಸರಿನಲ್ಲಿ ಕಾಲೇಜುಗಳನ್ನು ತೆರೆಯುವುದರ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಮತ್ತು ಮೂರು ಕಾಲೇಜುಗಳಲ್ಲಿ ಅವರ ಹೆಸರಿನ ಫಲಕಕ್ಕೆ ಕಪ್ಪು ಬಣ್ಣ ಬಳಿದ ಆರೋಪದಲ್ಲಿ ತಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಯಿತು ಎಂದು ಗುವಾಹಟಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ದೇಬಬ್ರತ ಸೈಕಿಯಾ ಮತ್ತು ದಿಬ್ರುಗಢ್ ವಿಶ್ವವಿದ್ಯಾನಿಲಯದ ಬಿದ್ಯುತ್ ಸೈಕಿಯಾ ಅವರು ಹೇಳಿದರು.
ಗುವಾಹಟಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಯಾಗಿದ್ದವರೊಬ್ಬರು ಲಿಖಿತ ಸಾಕ್ಷ್ಯವನ್ನು ಸಲ್ಲಿಸಿದ್ದು, 2014ರಲ್ಲಿ ಭ್ರಷ್ಟಾಚಾರದ ಆರೋಪ ಹೊಂದಿದ್ದ ಆಗಿನ ಉಪಕುಲಪತಿಯ ವಿರುದ್ಧ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು ಶಿಸ್ತುಕ್ರಮ ಎದುರಿಸಿದರೆ, ತನ್ನ ಮೇಲೆ ಸುಳ್ಳು ಆರೋಪ ಮಾಡಿದ ಆರೋಪ ಹೊರಿಸಿ, ಅಮಾನತು ಮಾಡಲಾಯಿತು ಎಂದು ಹೇಳಿದ್ದಾರೆ. ಗುವಾಹಟಿ ವಿಶ್ವವಿದ್ಯಾನಿಲಯದಿಂದಲೇ ಬಂದ ಇನ್ನೊಂದು ಲಿಖಿತ ಸಾಕ್ಷ್ಯದಲ್ಲಿ, ಎಪ್ರಿಲ್ 20, 2015ರಂದು ನಡೆದ ಘಟನೆಯಲ್ಲಿ ತಮಗೆ ಮುಂದಿನ ಸೆಮಿಸ್ಟರ್ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುವಂತೆ ಪದವಿ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳ ಪುನರ್ ಮೌಲ್ಯಮಾಪನವನ್ನು ತ್ವರಿತಗೊಳಿಸುವಂತೆ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದಾಗ ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಸಿಬ್ಬಂದಿ ಅವರ ಮೇಲೆ ಕ್ರೂರವಾಗಿ ಲಾಠಿಚಾರ್ಜ್ ನಡೆಸಿದರು ಎಂದು ಹೇಳಲಾಗಿದೆ.
ದೇಶದಾದ್ಯಂತ 2014ರಿಂದ ಕಂಡುಬರುತ್ತಿರುವ ಸಾಮಾನ್ಯ ಲಕ್ಷಣವೆಂದರೆ, ಪ್ರತಿಭಟನೆ ಯಾವುದೇ ರೀತಿಯದ್ದೇ ಆಗಿರಲಿ, ಅಧಿಕಾರಿಗಳು ಅದನ್ನು ದಮನಿಸುವುದು. ಕಾನೂನು ಪ್ರಕಾರವೂ, ಸಾಂವಿಧಾನಿಕವಾಗಿಯೂ ಪ್ರತಿಭಟನೆಗಳನ್ನು ನಡೆಸಲು ಜನರಿಗೆ ಸಮರ್ಥನೆ ಇರುವಾಗ, ಸರಕಾರ ಅಥವಾ ಇನ್ನಾರದ್ದೇ ವಿರುದ್ಧ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೆ, ಪ್ರತಿಭಟನೆಗಳ ವಿರುದ್ಧ ಕಾನೂನಿನ ಅಸ್ತ್ರ ಬಳಸಲಾಗುತ್ತಿದೆ ಎಂದು ಮಿಹಿರ್ ದೇಸಾಯಿ ಹೇಳುತ್ತಾರೆ.