ಕಿರಂ ಎಂಬ ಚಿಟ್ಟೆಯ ನವಿರು ಜಾಡನ್ನು ಅರಸುತ್ತಾ...
ಕಿ. ರಂ. ನಾಗರಾಜ್ ಅವರು ಬರೆದಷ್ಟು ಮುಗಿಯದ ವ್ಯಕ್ತಿತ್ವ. ಬರಹಕ್ಕಿಂತ ವೌಖಿಕ ಮಾಧ್ಯಮಕ್ಕೆ ಅವರು ಆದ್ಯತೆ ನೀಡಿರುವ ಕಾರಣದಿಂದಲೋ ಏನೋ, ಅವರ ವ್ಯಕ್ತಿತ್ವದ ವಿವಿಧ ಆಯಾಮಗಳನ್ನು ದಾಖಲಿಸಿದಷ್ಟೂ ಅದು ವಿಸ್ತಾರವಾಗುತ್ತಾ ಹೋಗುತ್ತದೆ. ಕಿರಂ ಕುರಿತಂತೆ ಹಲವರು ಹಲವು ಕೃತಿಗಳನ್ನು ಸಂಪಾದಿಸಿದ್ದಾರೆ. ಅವರ ಮಾತುಗಳನ್ನು ದಾಖಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅಂತಹ ಪ್ರಯತ್ನದಲ್ಲಿ ಒಂದು ಗಮನಾರ್ಹ ಕೃತಿಯಾಗಿದೆ ಶೂದ್ರ ಶ್ರೀನಿವಾಸ್ ಕಂಡ ‘ಕಿರಂ ಲೋಕ’.
ಕನ್ನಡದ ನವ್ಯ ಸಾಹಿತ್ಯದ ಬಹುಮುಖ್ಯ ಲೇಖಕರ ಜೊತೆಗಿನ ಸಮಕಾಲೀನರು ಶೂದ್ರ ಶ್ರೀನಿವಾಸ್ ಅವರು. ಲಂಕೇಶ್, ಅನಂತ ಮೂರ್ತಿಯ ಕಾಲದ ಕೊನೆಯ ಕೊಂಡಿಯಂತೆ ಅವರು ಬದುಕುತ್ತಿದ್ದಾರೆ. ಈಗಾಗಲೇ ಅನಂತಮೂರ್ತಿ, ಲಂಕೇಶ್‌ರ ಬಗ್ಗೆ ತಮ್ಮ ನೆನಪುಗಳನ್ನು ಅವರು ದಾಖಲಿಸಿದ್ದಾರೆ. ಇದೀಗ ಅವರು ಕಿರಂ ಅವರ ಲೋಕವನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಮುನ್ನುಡಿಯಲ್ಲಿ ಎಚ್. ದಂಡಪ್ಪ ಅವರು ಹೇಳುವಂತೆ ‘‘...ಕಿರಂ ನಾಗರಾಜರ ಜೀವನ ಚರಿತ್ರೆಯನ್ನು ಕಟ್ಟಿಕೊಡುವಾಗ ಅವರ ಸಾಹಿತ್ಯದ ಬಗೆಗಿನ ಅಭಿರುಚಿ ಎಂತಹದ್ದು, ಅವರು ಪಾಠ ಮಾಡುತ್ತಿದ್ದ ರೀತಿ, ಅವರ ವಿದ್ವತ್ತು, ಪಠ್ಯವನ್ನು ವಿವರಿಸಿ ವಿಶ್ಲೇಷಿಸುತ್ತಿದ್ದ ಕ್ರಮ, ಅವರ ಒಳನೋಟಗಳು, ಇತ್ಯಾದಿಗಳನ್ನು ನಿದರ್ಶನಗಳ ಮೂಲಕ ಸೋದಾಹರಣವಾಗಿ ಈ ಬರವಣಿಗೆ ನಮ್ಮ ಮುಂದಿಡುತ್ತದೆ’’ ಶೂದ್ರ ಅವರು ಕಿರಂ ಅವರನ್ನು ನಾಲ್ಕು ಮಾದರಿಯ ಮೂಲಕ ವಿವರಿಸುತ್ತಾರೆ. ಮೊದಲನೆಯ ಭಾಗಕ್ಕೆ ಅವರು ‘ನಿಜದ ನಿಜ ನೀನಂತೆ...’ ಎಂದು ಹೆಸರಿಸಿದ್ದಾರೆ. ಈ ಅಧ್ಯಾಯದಲ್ಲಿ ಸಾಹಿತ್ಯ ಲೋಕದಲ್ಲಿ ಜಾನಪದವಾಗಿ ಬಿಟ್ಟಿರುವ ವ್ಯಕ್ತಿತ್ವವೊಂದನ್ನು ಹಿಡಿದಿಡಲು ಅವರು ಅನುಸರಿಸುವ ತಂತ್ರ ಇಷ್ಟವಾಗುತ್ತವೆ. ಎಲ್ಲೆಲ್ಲೋ ಹರಡಿ, ಯಾವು ಯಾವುದೋ ರೂಪಗಳಲ್ಲಿ ಬಚ್ಚಿಟ್ಟುಕೊಂಡಿರುವ ಕಿರಂ ಅವರನ್ನು ಹುಡುಕಿ ತೆಗೆಯುವ ಶೂದ್ರ ಅವರು, ಕಾವ್ಯದ ಭಾವವೊಂದನ್ನು ಅನುಭವಿಸುವವರಂತೆ ಅನುಭವಿಸುತ್ತಾ ಬರೆಯುತ್ತಾರೆ. ಕಿರಂ ಕೇವಲ ಸಾಹಿತ್ಯ, ಪುಸ್ತಕ, ವಿಮರ್ಶೆಗಳಲ್ಲಿ ಮಾತ್ರವಿಲ್ಲ. ಹೊಟೇಲು, ಅಂಗಡಿ, ಬೆಂಗಳೂರು ಬೀದಿಗಳಲ್ಲಿ....ಹೀಗೆ ಗಾಳಿಯಲ್ಲಿ ಹರಡಿರುವ ಪರಿಮಳವನ್ನು ಅರಸುವಂತೆ ಈ ಕೃತಿಯಲ್ಲಿ ಕಿರಂನನ್ನು ಅರಸುತ್ತಾರೆ. ಎರಡನೇ ಅಧ್ಯಾಯಕ್ಕೆ ಅವರು ‘ಬಹುಮುಖಿ ಕಿರಂ’ ಎಂದು ಹೆಸರಿಟ್ಟಿದ್ದಾರೆ. ಕಿರಂ ಯಾವೆಲ್ಲ ಕ್ಷೇತ್ರಗಳಲ್ಲಿ ಹೇಗೆ ತೊಡಗಿಸಿಕೊಂಡಿದ್ದಾರೆ ಎನ್ನುವುದನ್ನು ಈ ಕೃತಿ ಹೇಳುತ್ತದೆ. ಇನ್ನೊಂದು ಅಧ್ಯಾಯಕ್ಕೆ ‘ನಿಂತಲ್ಲೆಲ್ಲ ಗುರುಪೀಠ’ ಎಂಬ ಹೆಸರು ಕೂಡ ಕಿರಂ ವ್ಯಕ್ತಿತ್ವಕ್ಕೆ ಒಪ್ಪುತ್ತದೆ. ಅವರು ಈ ಮೂಲಕವೇ ಅದೆಷ್ಟೋ ಶಿಷ್ಯ ವೃಂದವನ್ನು ಕಟ್ಟಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಹಲವು ಗುರುಗಳಿಗೇ ಕಿರಂ ಗುರುವಾಗಿ ಬದುಕಿದ್ದಾರೆ. ಬದುಕಿನ ವೈವಿಧ್ಯತೆಯನ್ನು ತನ್ನದಾಗಿಸಿಕೊಳ್ಳುವ ಬಗೆಯನ್ನು ಅವರು ತಮ್ಮ ಬದುಕಿನ ಮೂಲಕವೇ ತೋರಿಸಿಕೊಟ್ಟರು. ಅಂತಿಮ ಅಧ್ಯಾಯದಲ್ಲಿ ‘ಕಿರಂ ತಲುಪಿಸುತ್ತಿದ್ದ ಮಾದರಿಗಳ ಜಾಡು’ ಕುರಿತಂತೆ ಶೂದ್ರ ಬರೆದಿದ್ದಾರೆ. ಇಡೀ ಕೃತಿ ಕಥನ ರೂಪದಲ್ಲಿ ಸಾಗುತ್ತದೆ. ಕಿರಂ ನವಿರು ಬದುಕನ್ನು ಅಷ್ಟೇ ನವಿರಾಗಿ ಶೂದ್ರ ಅವರು ಹಿಡಿದಿಟ್ಟಿದ್ದಾರೆ.
ಬಹುರೂಪಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 72. ಮುಖಬೆಲೆ 100 ರೂಪಾಯಿ. ಆಸಕ್ತರು 70191 82729 ದೂರವಾಣಿಯನ್ನು ಸಂಪರ್ಕಿಸಬಹುದು.