ಜಾಮಿಯಾ ಸಅದಿಯ್ಯಾ ವಿಶ್ವವಿದ್ಯಾನಿಲಯ ಸ್ಥಾಪನೆಯ ಗುರಿ

Update: 2019-12-16 12:42 GMT

ಮಂಜನಾಡಿ ಸಮೀಪದ ಮೋಂಟುಗೋಳಿಯಲ್ಲಿ ಹುಟ್ಟಿ ಬೆಳೆದರೂ ಬೇಕಲದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಕಾರಣ ‘ಬೇಕಲ ಉಸ್ತಾದ್’ ಎಂದೇ ಖ್ಯಾತರಾಗಿರುವ ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದ.ಕ. ಮತ್ತು ಕಾಸರಗೋಡು ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿಯಾಗಿ ಕಾರ್ಯನಿರ್ವಹಿಸುತ್ತಿರುವ ‘ತಾಜುಲ್ ಫುಖಹಾಅ್’ ಬಿರುದಾಂಕಿತ ಅಲ್ಹಾಜ್ ಪಿ.ಎಂ. ಇಬ್ರಾಹೀಂ ಮುಸ್ಲಿಯಾರ್ ಕಳೆದೊಂದು ವರ್ಷದಿಂದ ಕಾಸರಗೋಡು ಜಿಲ್ಲೆಯ ದೇಳಿ ಎಂಬಲ್ಲಿರುವ ‘ಜಾಮಿಯಾ ಸಅದಿಯ್ಯಿ ಅರಬಿಯ್ಯಿ’ ಶರೀಅತ್ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಮುಶಾವರ ಸಮಿತಿಯ ಸದಸ್ಯರಾಗಿ, ಕರ್ನಾಟಕ ರಾಜ್ಯ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾಗಿ, ಅಲ್ ಅನ್ಸಾರ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿರುವ ಬೇಕಲ ಉಸ್ತಾದ್ ಖ್ಯಾತ ವಾಗ್ಮಿ ಹಾಗೂ ವಿದ್ವಾಂಸರಾಗಿಯೂ ಚಿರಪರಿಚಿತರು.

‘ಜಾಮಿಯಾ ಸಅದಿಯ್ಯಾ ಅರಬಿಯ್ಯಾ’ ಸಂಸ್ಥೆಯು ಸುವರ್ಣ ಸಂಭ್ರಮದ ಹೊಸ್ತಿಲಲ್ಲಿದೆ. ಡಿ.27ರಿಂದ 29ರವರೆಗೆ ದೇಳಿಯ ‘ಸಅದಾಬಾದ್’ನಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಕಾರ್ಯಕ್ರಮದೊಂದಿಗೆ ಬೃಹತ್ ಸಮ್ಮೇಳನವೂ ನಡೆಯಲಿದೆ. ಆ ಹಿನ್ನೆಲೆಯಲ್ಲಿ ‘ಬೇಕಲ ಉಸ್ತಾದ್’ರ ಜೊತೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನ ಆಯ್ದ ಭಾಗ ಇಲ್ಲಿದೆ.

ದೇಶಾದ್ಯಂತ ‘ಎನ್‌ಆರ್‌ಸಿ-ಸಿಎಬಿ’ ಬಗ್ಗೆ ಮುಸ್ಲಿಮರು ಆತಂಕಿತರಾಗಿದ್ದಾರೆ. ಈ ಸಂದರ್ಭ ಮುಸ್ಲಿಮ್ ಸಮುದಾಯ ಯಾವ ರೀತಿ ಪ್ರತಿಕ್ರಿಯಿಸಬೇಕು ಎಂದು ನೀವು ಅಭಿಪ್ರಾಯಪಡುವಿರಿ?

 ಎನ್‌ಆರ್‌ಸಿ, ಸಿಎಬಿ ಅಪಾಯದ ಬಗ್ಗೆ ಮುಸ್ಲಿಮರಲ್ಲಿ ಆತಂಕವಿರುವುದು ನಿಜ. ಇದು ಯಾರ್ಯಾರ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂದು ಸದ್ಯ ಹೇಳಲಿಕ್ಕಾಗದು. ಹಾಗಂತ ಕೈಕಟ್ಟಿ ಕೂರುವಂತಿಲ್ಲ. ಇದು ಅಪಾಯ ಅಥವಾ ಮಾರಕ ಎಂದು ಯಾರೆಲ್ಲಾ ಭಾವಿಸುತ್ತಾರೋ ಅವರೆಲ್ಲಾ ಒಗ್ಗೂಡಬೇಕು, ಧ್ವನಿ ಎತ್ತಬೇಕು. ಕಾನೂನಿನ ಇತಿಮಿತಿಯೊಳಗೆ ಪ್ರಜಾಪ್ರಭುತ್ವದಲ್ಲಿ ನೀಡಲಾದ ಅವಕಾಶ ಬಳಸಿಕೊಂಡು ಇದರ ವಿರುದ್ಧ ಮುನ್ನಡೆಯಬೇಕು.

►‘ಜಾಮಿಯಾ ಸಅದಿಯ್ಯಾ ಅರಬಿಯ್ಯಾ’ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿದೆ. ಸಂಸ್ಥೆಯು ಈ ಮಟ್ಟಕ್ಕೆ ಬೆಳೆಯಲು ಹೇಗೆ ಸಾಧ್ಯವಾಯಿತು?

ಇದು ಕಲ್ಲಟ್ರ ಅಬ್ದುಲ್ ಖಾದರ್ ಹಾಜಿಯವರಿಂದ ಸ್ಥಾಪನೆಗೊಂಡ ಸಂಸ್ಥೆಯಾಗಿದೆ. ಅಗರ್ಭ ಶ್ರೀಮಂತ, ಉದ್ಯಮಿಯಾಗಿದ್ದರೂ ಅವರು ಧಾರ್ಮಿಕ ನಿಷ್ಠೆಯುಳ್ಳವರು. ಅವರು 50 ವರ್ಷಗಳ ಹಿಂದೆ ತನ್ನ ಮನೆಯಲ್ಲೇ ಕೆಲವು ಮುತಅಲ್ಲಿಂ ಮಕ್ಕಳೊಂದಿಗೆ ಆರಂಭಿಸಿದ ದರ್ಸ್ ಇಂದು ಬೃಹತ್ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿದೆ. ಕೆಲ ವರ್ಷಗಳ ಬಳಿಕ ಅದನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಕಲ್ಲಟ್ರ ಅಬ್ದುಲ್ ಖಾದರ್ ಹಾಜಿ ಈ ಸಂಸ್ಥೆಯನ್ನು ಮುನ್ನೆಡಸಲು ಕಣ್ಣೂರು ಜಿಲ್ಲಾ ಜಂಇಯ್ಯತುಲ್ ಉಲಮಾಕ್ಕೆ ಒಪ್ಪಿಸಿದರು. ಅದರಂತೆ ಉಳ್ಳಾಲ ಖಾಝಿ ಇದರ ಸ್ಥಾಪಕ ಅಧ್ಯಕ್ಷರಾದರು. ಎಂ.ಎ. ಉಸ್ತಾದ್, ಚಿತ್ತಾರಿ ಉಸ್ತಾದ್ ಈ ಸಂಸ್ಥೆಗೆ ಬೆನ್ನೆಲುಬಾಗಿ ನಿಂತರು. ‘ಸಅದಿಯ್ಯೆ’ದ ಯಶಸ್ಸಿಗೆ ಕಣ್ಣೂರು ಮತ್ತು ಕಾಸರಗೋಡು ಜಿಲ್ಲಾ ಜಂಇಯ್ಯತುಲ್ ಉಲಮಾ ಸಂಘಟನೆಯ ಸರ್ವರೂ ಕೈಜೊಡಿಸಿದರು. ಈಗಲೂ ಶ್ರಮಿಸುತ್ತಿದ್ದಾರೆ. ಹೀಗೆ ಉಲಮಾ-ಉಮರಾಗಳ ಅವಿರತ ಶ್ರಮ, ಉದಾರ ದಾನಿಗಳ, ಕಾರ್ಯಕರ್ತರ ಶ್ರಮದಿಂದ ಈ ಸಂಸ್ಥೆಯು ಇಂದು ಎಲ್ಲರ ನಿರೀಕ್ಷೆಗೂ ಮೀರಿ ಬೆಳೆದಿದೆ.

► ‘ಸಅದಿಯಾಕ್ಕೂ ಕರಾವಳಿಯ ಕನ್ನಡಿಗ ಮುಸ್ಲಿಮರಿಗೂ ಇರುವ ನಂಟಿನ ಬಗ್ಗೆ...?

ಒಂದು ಕಾಲಕ್ಕೆ ಕಾಸರಗೋಡು ಕರ್ನಾಟಕದ ಭಾಗವೇ ಆಗಿತ್ತು. ಹಾಗಾಗಿ ಅಲ್ಲಿ ಈಗಲೂ ಕನ್ನಡಿಗರ ಪ್ರಭಾವ ಇದ್ದೇ ಇದೆ. ಅಲ್ಲದೆ, ನಮ್ಮ ಹಾಗೂ ಆ ಭಾಗದ ಮುಸ್ಲಿಮರ ಸಂಸ್ಕೃತಿಗೂ ಹೆಚ್ಚೇನು ವ್ಯತ್ಯಾಸ ಕಾಣುತ್ತಿಲ್ಲ. ನಮ್ಮ ಸಂಸ್ಥೆಯಲ್ಲಿ ಇಸ್ಲಾಮಿಕ್ ಶರೀಅತ್ ಕಾಲೇಜು, ಅರಬಿಕ್ ಮತ್ತು ಇಸ್ಲಾಮಿಕ್ ಸ್ಟಡೀಸ್‌ನ ಸ್ನಾತಕೋತ್ತರ ವಿಭಾಗ, ತಹ್‌ಫೀಝುಲ್ ಕುರ್‌ಆನ್ ಕಾಲೇಜು, ದಅ್ವಾ ಕಾಲೇಜು, ಕುರ್‌ಆನ್ ಅಕಾಡಮಿ, ಅರಬಿಕ್ ಕಾಲೇಜು, ಯತೀಂ ಖಾನಾ, ಕಲೆ ಮತ್ತು ವಿಜ್ಞಾನ ತರಗತಿ, ವಿಮೆನ್ಸ್ ಕಾಲೇಜು, ಬೋರ್ಡಿಂಗ್ ಮದ್ರಸ, ಐಟಿಐ, ಆಂಗ್ಲಮಾಧ್ಯಮ ರೆಸಿಡೆನ್ಸಿಯಲ್ ಸ್ಕೂಲ್, ಮಲಯಾಳಂ, ಕನ್ನಡ, ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ, ಇಸ್ಲಾಮಿಕ್ ಹಾಸ್ಟೆಲ್, ಸ್ಕೂಲ್ ಆಫ್ ಕುರ್‌ಆನ್, ಗ್ರಂಥಾಲಯ, ಕಿಡ್ಸ್ ಗಾರ್ಡನ್, ಸೆಕೆಂಡರಿ ಮದ್ರಸ ಹೀಗೆ ಹತ್ತಾರು ವಿಭಾಗಗಳು ಸಅದಿಯ್ಯಾ ಸಂಸ್ಥೆಯ ಅಧೀನದಲ್ಲಿದೆ. ಇಲ್ಲೆಲ್ಲಾ ಸುಮಾರು 8 ಸಾವಿರಕ್ಕೂ ಅಧಿಕ ಮಂದಿ ಕಲಿಯುತ್ತಿದ್ದಾರೆ. 600ರಷ್ಟು ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿ ಶೇ.40ಕ್ಕೂ ಅಧಿಕ ಮಕ್ಕಳು ಕನ್ನಡಿಗರೇ ಆಗಿದ್ದಾರೆ ಎಂದು ಹೇಳಲು ನನಗೆ ಹೆಮ್ಮೆಯಾಗುತ್ತಿದೆ.

►‘ಸುವರ್ಣ ಸಂಭ್ರಮದ ನೆನಪಿಗಾಗಿ ಯಾವ ಹೊಸ ಯೋಜನೆಯನ್ನು ಹಮ್ಮಿಕೊಂಡಿದ್ದೀರಿ?

ಶರೀಅತ್ ಕೇಂದ್ರೀಕರಿಸಿಕೊಂಡು ‘ಸಅದಿಯ್ಯ ವಿಶ್ವವಿದ್ಯಾನಿಲಯ’ವನ್ನು ಸ್ಥಾಪಿಸುವ ಗುರಿ ಇದೆ. ನಾವು ಕಂಡ ಆ ಕನಸನ್ನು ನನಸಾಗಿಸಲ ಈಗಿನಿಂದಲೇ ಪ್ರಯತ್ನ ಆರಂಭಿಸಿದ್ದೇವೆ.

 ‘ಸಾಮಾನ್ಯವಾಗಿ ಕರ್ನಾಟಕದ ಮಸೀದಿ, ಮದ್ರಸ, ಅರಬಿಕ್ ಶಿಕ್ಷಣ ಸಂಸ್ಥೆಗಳಲ್ಲಿ ಕೇರಳದ ಮೌಲವಿಗಳ, ವಿದ್ವಾಂಸರು ಜವಾಬ್ದಾರಿಯುತ ಸ್ಥಾನಗಳಲ್ಲಿರುವುದು ಈಗಲೂ ಕಂಡು ಬರುತ್ತದೆ. ಆದರೆ ತಾವು ಕರ್ನಾಟಕದವರಾಗಿ ಕರಾವಳಿ, ಪಶ್ಚಿಮ ಘಟ್ಟ, ಕಾಸರಗೋಡು ಜಿಲ್ಲೆಯ ಮೊಹಲ್ಲಾಗಳಲ್ಲೂ ಖಾಝಿಯಾಗಿ ಸೇವೆ ಸಲ್ಲಿಸುತ್ತಿದ್ದೀರಿ. ಜೊತೆಗೆ ಸಅದಿಯ್ಯಿದಂತಹ ಪ್ರತಿಷ್ಠಿತ ಸಂಸ್ಥೆಯ ಪ್ರಾಂಶುಪಾಲರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದೀರಿ. ಇದು ಹೇಗೆ ಸಾಧ್ಯವಾಯಿತು?

ಈ ಪ್ರಶ್ನೆಗೆ ‘ನಾನೇ’ ಉತ್ತರಿಸುವುದು ಅಷ್ಟು ಸಮಂಜಸವಲ್ಲ. ಆದರೆ, ಒಂದು ಮಾತು... ಹಿಂದೆ ನಮ್ಮವರಿಗೆ ಹೆಚ್ಚಿನ ಧಾರ್ಮಿಕ ಶಿಕ್ಷಣವಿರಲಿಲ್ಲ. ಹಾಗಾಗಿ ಕೇರಳದ ಉಲಮಾಗಳನ್ನು ನಾವು ಅವಲಂಬಿಸುವುದು ಅನಿವಾರ್ಯವಾಗಿತ್ತು. ಆದರೆ, ಕಾಲ ಬದಲಾಗಿದೆ.ನಮ್ಮವರು ಎಲ್ಲಾ ರಂಗದಲ್ಲೂ ಈಗ ಮುಂಚೂಣಿಯಲ್ಲಿದ್ದಾರೆ. ಧಾರ್ಮಿಕ ಶಿಕ್ಷಣ ಪಡೆದವರು ಕೂಡ ಇಹದ ವಸ್ತುಸ್ಥಿತಿಯನ್ನೂ ಅರ್ಥ ಮಾಡಿಕೊಂಡಿದ್ದಾರೆ. ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಮುನ್ನಡೆಯುತ್ತಿದ್ದಾರೆ.

►‘ಕರ್ನಾಟಕದಲ್ಲೂ ಇಂಥದ್ದೊಂದು ಸಂಸ್ಥೆಯನ್ನು ಕಟ್ಟಲು ತಾವು ಮುಂದೆ ಬರಬಾರದೇಕೆ?

ಸದ್ಯ ಕರ್ನಾಟದಲ್ಲಿ ಉಳ್ಳಾಲದಲ್ಲಿ ‘ತಾಜುಲ್ ಉಲಮಾ’ ಸ್ಥಾಪಿಸಿ ಬೆಳೆಸಿದ ಇಂತಹ ಉನ್ನತ ಸಂಸ್ಥೆ ಇದೆ. ಮಾಣಿಯಲ್ಲಿ ದಾರುಲ್ ಇರ್ಶಾದ್ ಪ್ರಗತಿಯಲ್ಲಿದೆ. ಹೆಸರು, ಪ್ರತಿಷ್ಠೆಗೆ ಅಲ್ಲಲ್ಲಿ ದೊಡ್ಡ ದೊಡ್ಡ ಸಂಸ್ಥೆಗಳನ್ನು ಸ್ಥಾಪಿಸುವ ಬದಲು ಒಂದೇ ಕಡೆ ಕೇಂದ್ರೀಕರಿಸಿ ಸಂಸ್ಥೆ ಸ್ಥಾಪಿಸಿದರೆ ಭವಿಷ್ಯದಲ್ಲಿ ಅದರ ಪ್ರಯೋಜನ ಸಿಗಬಹುದು.

►‘ಕರಾವಳಿಯ ಸುನ್ನಿ ಮುಸ್ಲಿಮರ ಮಧ್ಯೆ ಇರುವ ಗುಂಪುಗಾರಿಕೆಯನ್ನು ಹೇಗೆ ಹೋಗಲಾಡಿಸಬಹುದು ?

ಸುನ್ನಿ ಮುಸ್ಲಿಮರು ಸದಾ ಐಕ್ಯದಿಂದಿರಬೇಕು ಎಂಬುದು ನನ್ನ ಸಹಿತ ಎಲ್ಲರ ಕನಸಾಗಿದೆ. ಕಾಲದ ಬೇಡಿಕೆಯಂತೆ ಅದರ ಅಗತ್ಯತೆಯು ಹಿಂದಿಗಿಂತ ಈಗ ಹೆಚ್ಚು ಅನಿವಾರ್ಯವಾಗಿದೆ. ನಾನು ನನ್ನ ಇತಿಮಿತಿಯೊಳಗೆ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ. ನಾವೆಲ್ಲಾ ನಮ್ಮ ಪ್ರತಿಷ್ಠೆಯನ್ನು ಬದಿಗಿಟ್ಟು ಒಂದಾಗಲು ಮನಸ್ಸು ಮಾಡಬೇಕು. ಆವಾಗ ಸಂಘಟಿತರಾಗಲು ಸಾಧ್ಯವಿದೆ.

►‘ಖಾಝಿಯ ಜವಾಬ್ದಾರಿ ನಿರ್ವಹಿಸುವಾಗ ಕಂಡುಕೊಂಡ ಅನುಭವದ ಆಧಾರದ ಮೇಲೆ ಮುಸ್ಲಿಮ್ ಸಮಾಜ ಯಾವ್ಯಾವ ಸಮಸ್ಯೆಯನ್ನು ಎದುರಿಸುತ್ತಿವೆ?

ಮೊದಲು ನಮ್ಮಲ್ಲಿ ಶಿಕ್ಷಣದ ಕೊರತೆ ಇತ್ತು. ಎಲ್ಲೆಲ್ಲೂ ಅನಕ್ಷರತೆ ಎದ್ದು ಕಾಣುತ್ತಿತ್ತು. ಬಳಿಕ ವರದಕ್ಷಿಣೆಯ ಸಮಸ್ಯೆ ಬಹುವಾಗಿ ಕಾಡತೊಡಗಿತು. ಈಗ ನಮಗೆ ಮಾದಕ ದ್ರವ್ಯವು ಸಮಸ್ಯೆಯಾಗಿ ಪರಿಣಮಿಸಿದೆ. ಮುಸ್ಲಿಮ್ ಯುವಕರು ಈ ಜಾಲದಲ್ಲಿ ಅತಿಯಾಗಿ ಸಿಲುಕಿಕೊಂಡಿದ್ದಾರೆ.

►‘ಈ ಸಮಸ್ಯೆಗಳಿಂದ ಯುವ ಸಮೂಹನ್ನು ಹೇಗೆ ಪಾರು ಮಾಡಬಹುದು?

ಈ ಬಗ್ಗೆ ಬ್ಯಾರೀಸ್ ಸಂಸ್ಥೆಯ ಮುಖ್ಯಸ್ಥ ಸೈಯದ್ ಮುಹಮ್ಮದ್ ಬ್ಯಾರಿ ಸಹಿತ ಹಲವು ಮುಖಂಡರು ಈಗಾಗಲೆ ನನ್ನೊಂದಿಗೆ ಚರ್ಚಿಸಿದ್ದಾರೆ. ಇದರ ನಿರ್ಮೂಲನೆಗೆ ಜಿಲ್ಲಾ ಮಟ್ಟದಲ್ಲಿ ಕೇಂದ್ರೀಕರಿಸಿ ಕಾರ್ಯಕ್ರಮ ಹಮ್ಮಿಕೊಳ್ಳುವ ಬದಲು ಪ್ರತಿಯೊಂದು ಮಸೀದಿ ಅಥವಾ ಜಮಾಅತ್ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಬೇಕಿದೆ. ಕೇವಲ ಶುಕ್ರವಾರದ ಜುಮಾ ನಮಾಝ್ ಬಳಿಕ ಇದರ ಬಗ್ಗೆ ಪ್ರವಚನ ಮಾಡಿದರೆ ಸಾಲದು. ಮಸೀದಿಯ ಖತೀಬರು, ಆಡಳಿತ ಕಮಿಟಿಯವರು ಪ್ರತಿಯೊಂದು ಮನೆಗೆ ಭೇಟಿ ನೀಡಿ ಇದರ ಅಪಾಯದ ಬಗ್ಗೆ ತಿಳುವಳಿಕೆ ನೀಡಬೇಕು. ಜಾಲದಲ್ಲಿ ಸಿಲುಕಿದ ಹೆತ್ತವರ, ಸಹೋದರರ ವಿಶ್ವಾಸ ಗಳಿಸಬೇಕು. ಧಾರ್ಮಿಕ ಭೋದನೆ ನೀಡಿ ಸಂಭಾವ್ಯ ಅನಾಹುತದ ಬಗ್ಗೆ ಮನವರಿಕೆ ಮಾಡಿಕೊಡಬೇಕು. ನಮ್ಮ ಮಕ್ಕಳು ಮದ್ರಸದಲ್ಲಿ ಒಳಿತು-ಕೆಡುಕು, ಪಾಪ-ಪುಣ್ಯದ ಬಗ್ಗೆ ಕಲಿತಿರುತ್ತಾರೆ. ಆದರೆ, ಅರಿತುಕೊಂಡಿರುವುದಿಲ್ಲ. ಮದ್ರಸ ಮುಗಿಸಿದ ಬಳಿಕ ಶಾಲಾ-ಕಾಲೇಜಿನ ಮೆಟ್ಟಲು ಹತ್ತುತ್ತಲೇ ಧಾರ್ಮಿಕ ಮೌಲ್ಯದಿಂದ ದೂರ ಸರಿಯುತ್ತಾರೆ. ಹಾಗಾಗಬಾರದು. ಧಾರ್ಮಿಕ ವಿಚಾರವು ಬದುಕಿನ ಅವಿಭಾಜ್ಯ ಅಂಗ ಎಂಬ ಭಾವನೆ ಅವರಲ್ಲಿ ಮೂಡಬೇಕು. ಹಾಗಾಗಿ ಯುವತ್ವದಲ್ಲಿ ಅವರಿಗೆ ಧಾರ್ಮಿಕ ವಿಚಾರಗಳ ಮರು ಓದು ಅಥವಾ ತಿಳುವಳಿಕೆ ಮೂಡಿಸಬೇಕು. ಇದು ಒಂದು ಮಸೀದಿ ಅಥವಾ ಒಂದು ಸಂಸ್ಥೆಯವರು ಮಾಡಿದರೆ ಸಾಲದು. ಎಲ್ಲಾ ಮಸೀದಿ, ಸಂಸ್ಥೆಯವರು ಅಭಿಪ್ರಾಯ ಭೇದ ಮರೆತು ಜಾಗೃತರಾಗಬೇಕು. ಉಲಮಾ-ಉಮರಾಗಳ ಪಾತ್ರವೂ ಅಪಾರವಿದೆ. ಹೀಗೆ ಎಲ್ಲರೂ ಸಂಘಟಿತ ಪ್ರಯತ್ನ ನಡೆಸುವ ಮೂಲಕ ಮಾದಕ ದ್ರವ್ಯದ ಅಪಾಯದಿಂದ ಪಾರಾಗಬಹುದಾಗಿದೆ.

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News