ಆಂಗ್ಲ ಮಾಧ್ಯಮ ಶಿಕ್ಷಣ ವ್ಯವಸ್ಥೆಯ ಬಳಿಕ ಹೊಸ ಕಟ್ಟಡದ ನಿರೀಕ್ಷೆ
ಮಂಗಳೂರು, ಡಿ.16: ಉಳ್ಳಾಲ-ಮಾಣಿ ರಸ್ತೆಯ (ತೊಕ್ಕೊಟ್ಟು-ಕುತ್ತಾರ್ ನಡುವಿನ)ಲ್ಲಿ ಸಾಗುವಾಗ ಸಿಗುವ ಪೆರ್ಮನ್ನೂರು ಗ್ರಾಮದ ಬಬ್ಬುಕಟ್ಟೆ ಎಂಬಲ್ಲಿನ ಸರಕಾರಿ ಶಾಲೆಯು ಕೆಲವು ಕಾರಣದಿಂದ ಮುಚ್ಚುಗಡೆಯ ಭೀತಿ ಎದುರಿಸುತ್ತಿದ್ದರೂ ಕೂಡ ಇದೀಗ 2019-20ನೆ ಶೈಕ್ಷಣಿಕ ವರ್ಷದಿಂದ ಆರಂಭಗೊಂಡಿರುವ ಆಂಗ್ಲಮಾಧ್ಯಮ ಶಿಕ್ಷಣ ವ್ಯವಸ್ಥೆಯಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಸುಮಾರು 45 ವರ್ಷಗಳ ಹಿಂದೆ ಅಂದರೆ, 1974ರಲ್ಲಿ ಸ್ಥಾಪನೆಗೊಂಡಿರುವ ಈ ಶಾಲೆಯಲ್ಲಿ 1ರಿಂದ 7ನೇ ತರಗತಿ ವರೆಗೆ ಇರುವ ಮಕ್ಕಳ ಸಂಖ್ಯೆ ಕೇವಲ 87. ಅದರಲ್ಲಿ 49 ಬಾಲಕರು ಮತ್ತು 38 ಬಾಲಕಿಯರಿದ್ದಾರೆ. ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಲೇ ಈ ಭಾಗದ ವಿದ್ಯಾರ್ಥಿಗಳ ಹೆತ್ತವರು, ಶಿಕ್ಷಕರು ಆತಂಕ ಎದುರಿಸುವಂತಾಗಿತ್ತು. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಅದೂ ಎರಡುವರೆ ತಿಂಗಳ ಬಳಿಕ ಆಂಗ್ಲಮಾಧ್ಯಮ ಶಿಕ್ಷಣ ಕಲಿಕೆಗೆ ಸರಕಾರ ಅವಕಾಶ ಕಲ್ಪಿಸಿದೆ. ಇದರಿಂದ ಶಿಕ್ಷಕರ, ಎಸ್‌ಡಿಎಂಸಿ ಮುಖ್ಯಸ್ಥರ, ವಿದ್ಯಾರ್ಥಿಗಳ ಹೆತ್ತವರ ಆತಂಕ ಸ್ವಲ್ಪ ದೂರವಾಗಿದೆ. ಅಷ್ಟೇ ಅಲ್ಲ, ಕೆಲವು ಕನಸುಗಳು ಕೂಡಾ ಗರಿಗೆದರಿವೆ. ಅಂದರೆ ಈ ಶಾಲೆಯು ಹೆಂಚಿನದ್ದಾಗಿದ್ದು, ಪ್ರತೀ ವರ್ಷವೂ ಅದರ ದುರಸ್ತಿಯು ಸಮಸ್ಯೆಯಾಗಿ ಕಾಡುತ್ತಿತ್ತು. ಮಕ್ಕಳಿಗೆ ಕಲಿಯುವ ಉತ್ತಮ ವಾತಾವರಣವಿದ್ದರೂ ಕೂಡ ಹಳೆಯ ಕಟ್ಟಡವಾದ ಕಾರಣ ಸದಾ ಕತ್ತಲು ಆವರಿಸಿರುತ್ತದೆ. ಆಂಗ್ಲಮಾಧ್ಯಮ ಶಿಕ್ಷಣ ವ್ಯವಸ್ಥೆಯ ಆರಂಭದ ಬಳಿಕ ಎಲ್ಲರೂ ಹೊಸ ಕಟ್ಟಡದ ನಿರೀಕ್ಷೆಯಲ್ಲಿದ್ದಾರೆ. ಅದರೊಂದಿಗೆ ಸುಸಜ್ಜಿತ ಕೊಠಡಿ, ಬೆಂಚು, ಡೆಸ್ಕು, ಶೌಚಾಲಯ ನಿರ್ಮಾಣ ಇತ್ಯಾದಿ ಆಸೆಯನ್ನೂ ಹೊತ್ತಿದ್ದಾರೆ.
1ನೇ ತರಗತಿ ಮಕ್ಕಳಿಗೆ ಸರಕಾರಿ ಪಠ್ಯಪುಸ್ತಕ, ಸಮವಸ್ತ್ರ, ಸಾಕ್ಸ್, ಚಪ್ಪಲಿ, ಇಸ್ಕಾನ್ ಮೂಲಕ ಬಿಸಿಯೂಟ, ಹಾಲು, ಎಸ್‌ಡಿಎಂಸಿ-ಶಿಕ್ಷಕ ವೃಂದದ ಸಹಕಾರದಿಂದ ನೋಟು ಪುಸ್ತಕ, ಬ್ಯಾಗ್, ಟೈ, ಗುರುತಿನ ಕಾರ್ಡ್ ನೀಡಲಾಗಿದೆ. ಅಲ್ಲದೆ ದಾನಿಗಳ ನೆರವು ಪಡೆದು ಪ್ರತ್ಯೇಕ ಬಣ್ಣದ ಒಂದು ಜೊತೆ ಸಮವಸ್ತ್ರವನ್ನೂ ನೀಡಲಾಗಿದೆ. ಆದಾಗ್ಯೂ ಒಂದೇ ಶಾಲೆಯಲ್ಲಿ ಕಲಿಯುವ ಆಂಗ್ಲ ಮತ್ತು ಕನ್ನಡ ಮಾಧ್ಯಮಗಳ ತರಗತಿಗಳ ಮಕ್ಕಳ ಮಧ್ಯೆ ಯಾವುದೇ ಭೇದಭಾವ ಬಾರದಂತೆ ಶಿಕ್ಷಕಿಯರು ಮುನ್ನೆಚ್ಚರಿಕೆ ವಹಿಸಿರುವುದು ಗಮನಾರ್ಹ.
ಆರಂಭದಲ್ಲಿ 1ನೇ ತರಗತಿಯಲ್ಲಿ 10 ಇದ್ದ ಮಕ್ಕಳ ಸಂಖ್ಯೆಯು ಆಂಗ್ಲಮಾಧ್ಯಮ ಆರಂಭಗೊಳ್ಳುತ್ತಲೇ 12ಕ್ಕೇರಿದೆ. ಆರಂಭದಲ್ಲೇ ಆಂಗ್ಲಮಾಧ್ಯಮಕ್ಕೆ ಅವಕಾಶ ಸಿಕ್ಕಿದ್ದರೆ 30 ಮಕ್ಕಳನ್ನು 1ನೇ ತರಗತಿಗೆ ಸೇರಿಸಲು ಪ್ರಯತ್ನಿಸುತ್ತಿದ್ದೆವು ಎಂದು ಹೇಳುವ ಶಿಕ್ಷಕ ವರ್ಗ ಮತ್ತು ಎಸ್‌ಡಿಎಂಸಿ ಮುಖ್ಯಸ್ಥರು, ಪ್ರತೀ ವರ್ಷ 1ನೇ ತರಗತಿಗೆ ಕನಿಷ್ಠ 30 ಮಕ್ಕಳನ್ನು ಆಂಗ್ಲ ಮಾಧ್ಯಮ ತರಗತಿಗೆ ಸೇರ್ಪಡೆ ಗೊಳಿಸುತ್ತಾ ಹೋದರೆ ಆರ್ಥಿಕ ಸಮಸ್ಯೆಯಿಂದ ತತ್ತರಿಸಿರುವ ಮಕ್ಕಳ ಹೆತ್ತವರಿಗೆ ತುಂಬಾ ಅನುಕೂಲವಾದೀತು ಮತ್ತು ಶಾಲೆಯೂ ಮುಚ್ಚುವ ಭೀತಿಯಿಂದ ಪಾರಾದೀತು ಎಂದು ಅಭಿಪ್ರಾಯಪಡುತ್ತಾರೆ.
ಆರಂಭದಲ್ಲಿ ನೂರಾರು ಮಕ್ಕಳು ನಮ್ಮ ಶಾಲೆಯಲ್ಲಿ ಕಲಿಯುತ್ತಿದ್ದರು. ವರ್ಷದಿಂದ ವರ್ಷಕ್ಕೆ ಮಕ್ಕಳ ಸೇರ್ಪಡೆ ಸಂಖ್ಯೆಯಲ್ಲಿ ಇಳಿಮುಖ ಕಂಡರೂ ಆಂಗ್ಲಮಾಧ್ಯಮ ಶಿಕ್ಷಣ ಆರಂಭಿಸಿದ ಕಾರಣ ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದೀತು. ನಮ್ಮಲ್ಲಿ ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಕರು ಹಾಗೂ ಇತರ ನಾಲ್ಕು ಮಂದಿ ಶಿಕ್ಷಕಿಯರಿದ್ದಾರೆ. 1ನೇ ತರಗತಿಯ ಶಿಕ್ಷಕಿ ತರಬೇತಿ ಪಡೆದು ಬಂದಿದ್ದಾರೆ. ಆದರೆ, ನಲಿಕಲಿಗೆ ಶಿಕ್ಷಕಿಯರ ಕೊರತೆ ಇದೆ. ಅಲ್ಲದೆ, ಕಟ್ಟಡವು ನಾದುರಸ್ತಿಯಲ್ಲಿದ್ದು, ಶಾಸಕರ ಸಹಕಾರದಿಂದ ಇನ್ಫೋಸಿಸ್ ಸಂಸ್ಥೆಯವರು ಕಟ್ಟಡ ನಿರ್ಮಾಣದ ಭರವಸೆ ನೀಡಿದ್ದಾರೆ. ಅದಾದರೆ ಈ ಹಳೆಯ ಕಟ್ಟಡಕ್ಕೆ ಮುಕ್ತಿ ಕಾಣಿಸಿ ಮಕ್ಕಳಿಗೆ ಪೂರಕ ವಾತಾವರಣ ಕಲ್ಪಿಸಿಕೊಡುವ ವಿಶ್ವಾಸವಿದೆ.
ವತ್ಸಲಾ ಜೋಗಿ, ಮುಖ್ಯ ಶಿಕ್ಷಕಿ
ಪೆರ್ಮನ್ನೂರು (ಬಬ್ಬುಕಟ್ಟೆ) ಸರಕಾರಿ ಹಿ.ಪ್ರಾ.ಶಾಲೆ
ಸರಕಾರ ಒಂದು ಒಳ್ಳೆಯ ಯೋಜನೆಯನ್ನು ನಮಗೆ ನೀಡಿದೆ. ಇದನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಈ ನಿಟ್ಟಿನಲ್ಲಿ ಎಸ್‌ಡಿಎಂಸಿಯ ಸರ್ವರೂ ಪ್ರಯತ್ನಿಸುತ್ತಿದ್ದೇವೆ. ಈ ಬಾರಿ ನಮಗೆ ಅನುಮತಿ ಸಿಗುವಾಗ ಎರಡುವರೆ ತಿಂಗಳು ಕಳೆದಿತ್ತು. ಹಾಗಾಗಿ ಮಕ್ಕಳ ಸಂಖ್ಯೆಯು ಕೇವಲ 12ಕ್ಕೆ ಸೀಮಿತವಾಯಿತು. ಮುಂದಿನ ವರ್ಷವು ಮಕ್ಕಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಪ್ರಯತ್ನಿಸುತ್ತೇವೆ. ಆಂಗ್ಲಮಾಧ್ಯಮ ಶಿಕ್ಷಣ ಕಲಿಕೆಯು ನೆಪಮಾತ್ರ ಆಗಬಾರದು. ಹಾಲಿ ಶಿಕ್ಷಕಿ ತರಬೇತಿ ಪಡೆದಿದ್ದರೂ ಕೂಡ ಸಂಪೂರ್ಣವಾಗಿ ಆ ಮಾಧ್ಯಮದಲ್ಲಿ ಹಿಡಿತವಿರುವ ಶಿಕ್ಷಕಿಯರ ನೇಮಕಾತಿಯನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಸರಕಾರವು ಈ ಬಗ್ಗೆಯೂ ಹೆಚ್ಚು ಗಮನಹರಿಸಬೇಕಿದೆ.
ವಿಜಯ್ ಬಾಬುಅಧ್ಯಕ್ಷರು, ಎಸ್‌ಡಿಎಂಸಿ
ಪೆರ್ಮನ್ನೂರು ಸರಕಾರಿ ಹಿ.ಪ್ರಾ.ಶಾಲೆ
ಆರ್ಥಿಕ ಸಮಸ್ಯೆಯಿಂದಾಗಿ ನನಗೆ ನನ್ನ ಮಗಳನ್ನು ಆಂಗ್ಲಮಾಧ್ಯಮ ಶಿಕ್ಷಣ ಸಂಸ್ಥೆಗೆ ಸೇರಿಸಲು ಆಗಿರಲಿಲ್ಲ. ಹಾಗಾಗಿ ಈ ಸರಕಾರಿ ಶಾಲೆಯ ಕನ್ನಡ ಮಾಧ್ಯಮದ 1ನೇ ತರಗತಿಗೆ ಸೇರಿಸಿದೆ. ಎರಡೂವರೆ ತಿಂಗಳ ಬಳಿಕ ಇಲ್ಲಿ ಆಂಗ್ಲ ಮಾಧ್ಯಮದ ಶಿಕ್ಷಣ ಸಿಗುವ ಸಿಹಿ ಸುದ್ದಿ ಸಿಕ್ಕಿತು. ಇದನ್ನು ಕೇಳಿ ತುಂಬಾ ಖುಷಿಯಾಯಿತು. ಇಲ್ಲಿ ಒಳ್ಳೆಯ ಶಿಕ್ಷಣ ಸಿಗುತ್ತಿದೆ. ಮಗಳು ಚೆನ್ನಾಗಿ ಕಲಿಯುತ್ತಿದ್ದಾಳೆ. ಕನ್ನಡದ ಜೊತೆಗೆ ಉಚಿತವಾಗಿ ಇಂಗ್ಲಿಷ್ ಶಿಕ್ಷಣ ಸಿಗುತ್ತಿರುವುದು ನಮ್ಮಂತಹವರಿಗೆ ಸಿಕ್ಕಿದ ಭಾಗ್ಯ ಎನ್ನಬಹುದು.
ಝುಲೇಖಾ, ಸೇವಂತಿಗುಡ್ಡೆ
(ವಿದ್ಯಾರ್ಥಿಯ ತಾಯಿ)