ಕಾನೂನು ನಿರ್ದೇಶಿತ ಪ್ರಕ್ರಿಯೆಗಳ ಕಣ್ಮರೆ

Update: 2019-12-19 18:24 GMT

ಕ್ರಿಮಿನಲ್ ಪ್ರಕರಣಗಳಲ್ಲಿ ಕಾರ್ಯಾಚರಣೆಗೆ ಬೇಕಿರುವ ಸಮರ್ಥನೆಗಳು ಸಂವಿಧಾನದಲ್ಲಿ ಸುಸ್ಥಾಪಿತವಾಗಿರುವ ಪ್ರಕ್ರಿಯಾ ಸಂಹಿತೆಗಳಿಂದಲೇ ಒದಗಬೇಕು. ಆದರೆ ಪೊಲೀಸರು ಈ ತರ್ಕಸಂಹಿತೆಯನ್ನು ಅನುಸರಿಸಿದಂತಿಲ್ಲ. ತಮ್ಮ ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತೆನ್ನುವ ನೆಲೆಯಲ್ಲಿ ಮಾಡಿಕೊಳ್ಳುವ ಸಮರ್ಥನೆಗಳು ನಂಬುವಂತಿಲ್ಲ. ಏಕೆಂದರೆ ಅದಕ್ಕೆ ಆ ಕೃತ್ಯವನ್ನು ಮಾಡಿದವರನ್ನು ಹೊರತುಪಡಿಸಿ ಬೇರೆ ಸ್ವತಂತ್ರ ಸಾಕ್ಷಿಗಳೇ ಇಲ್ಲ.


ಹೈದರಾಬಾದ್‌ನ ಅತ್ಯಾಚಾರ ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್ ಮಾಡಿ ಸಾಯಿಸಿದ್ದರಿಂದ ಈ ಕೃತ್ಯವು ಅತ್ಯಾಚಾರಕ್ಕೆ ಬಲಿಯಾದ ಮಹಿಳೆಯ ಕುಟುಂಬದವರನ್ನು ಒಳಗೊಂಡಂತೆ ಹಲವರ ಮನಸ್ಸಿನಲ್ಲಿದ್ದ ಪ್ರತೀಕಾರದ ಭಾವನೆಯನ್ನೂ ಸಹ ಸಮಾಧಾನಪಡಿಸಿದೆ. ಅದೇನೇ ಇದ್ದರೂ ಈ ಕೊಲೆಗಳು ಒಂದು ತುದಿಯಲ್ಲಿ ಕಾನೂನನ್ನು ಜಾರಿ ಮಾಡುವ ಸಂಸ್ಥೆಯಾದ ಪೊಲೀಸರಿಗೂ ಮತ್ತು ಕಾನೂನಿನ ಪ್ರಕಾರ ನ್ಯಾಯತೀರ್ಮಾನ ಮಾಡುವ ಸಂಸ್ಥೆಯಾದ ನ್ಯಾಯಾಂಗದ ನಡುವೆ ಒಂದು ವೈರುಧ್ಯವನ್ನು ಉಂಟುಮಾಡಿರುವುದಂತೂ ನಿಜ. ಮತ್ತೊಂದು ತುದಿಯಲ್ಲಿ ಇದು ಶಾಸಕ ಮತ್ತು ರಾಜಕೀಯ ನಾಯಕರ ನಡುವಿನ ವ್ಯತ್ಯಾಸವನ್ನೂ ಸಹ ತೆಳ್ಳಗಾಗಿಸಿದೆ. ಶಾಸಕರು ಸಂವಿಧಾನದಲ್ಲಿ ಸುಸ್ಥಾಪಿತವಾಗಿರುವ ಮಾರ್ಗದರ್ಶನಗಳನ್ನು ಅನುಸರಿಸಿ ಕಾನೂನಿನ ಸಾರದ ಬಗ್ಗೆ ಶಾಸನಗಳನ್ನು ಮಾಡಬೇಕು. ಶಾಸಕರು ತಮ್ಮ ಕ್ರಿಯೆ ಮತ್ತು ಪ್ರತಿಕ್ರಿಯೆಗಳಿಗೆ ಅಗತ್ಯವಿರುವ ತಾರ್ಕಿಕ ಸಮರ್ಥನೆಗಳನ್ನು ಸಾಂವಿಧಾನಿಕವಾಗಿ ನಿರ್ದೇಶಿತವಾಗಿರುವ ಪ್ರಕ್ರಿಯೆಗಳ ಮೂಲಕವೇ ಮಾಡಬೇಕಿರುತ್ತದೆ. ಅವರ ಸಾರ್ವಜನಿಕ ಅಭಿಪ್ರಾಯಗಳೂ ಸಹ ತಾವೇ ಸೃಷ್ಟಿಸಿದ ಕಾನೂನಿನಿಂದ ನಿರ್ದೇಶಿತವಾದ ಪ್ರಕ್ರಿಯೆಗಳ ಚೌಕಟ್ಟಿಗೆ ಒಳಪಟ್ಟಿರಬೇಕಿರುತ್ತದೆ. ಆದರೆ ಈ ಸದರಿ ಪ್ರಕರಣದಲ್ಲಿ ಕೆಲವು ಶಾಸಕರು ಈ ಕಾನೂನು ನಿರ್ದೇಶಿತ ಪ್ರಕ್ರಿಯೆಗಳನ್ನು ಉಲ್ಲಂಘಿಸಿದ್ದಾರೆ. ಅತ್ಯಾಚಾರ ಆರೋಪಿಗಳನ್ನು ಕೊಂದು ಹಾಕಿದ ಪೊಲೀಸರ ಕ್ರಮವನ್ನು ಹಾಡಿಹೊಗಳಿದ ಕೆಲವು ಶಾಸಕರ ಪ್ರತಿಕ್ರಿಯೆಗಳಲ್ಲಿ ಅದು ನಿಚ್ಚಳವಾಗಿತ್ತು. ಕೆಲವು ಶಾಸಕರ ಪ್ರತಿಕ್ರಿಯೆಗಳು ಸಾಂವಿಧಾನಿಕ ನೈತಿಕತೆಯನ್ನು ಗಾಳಿಗೆ ತೂರಿತ್ತಲ್ಲದೆ, ಒಬ್ಬ ಶಾಸಕನು ಪಕ್ಷಪಾತಿ ರಾಜಕಾರಣಿಯಾಗಿ ವರ್ತಿಸಿದ್ದಕ್ಕೆ ಸಾಕ್ಷಿಯಾಯಿತು. ಇಂತಹ ಶಾಸಕರು ನಾಗರಿಕ ಸಮಾಜದ ಕೆಲವು ಸದಸ್ಯರನ್ನೂ ಒಳಗೊಂಡು ಪ್ರತೀಕಾರ ಭಾವನೆಗಳಿಂದ ಕುದಿಯುತ್ತಿದ್ದ ಶಕ್ತಿಗಳು ಹುಟ್ಟುಹಾಕಿದ್ದ ಭಾವನಾತ್ಮಕ ಅಲೆಗಳ ಮೇಲೆ ಸವಾರಿ ಮಾಡಹೊರಟಿದ್ದರು. ಪೊಲೀಸರು ಕೈಗೊಂಡ ಆ ದಿಢೀರ್ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ಈ ಶಾಸಕರು ಕಾನೂನು ನಿರ್ದೇಶಿತ ಪ್ರಕ್ರಿಯೆಗಳಿಗೆ ಕನಿಷ್ಠ ಔಪಚಾರಿಕ ಗೌರವವನ್ನಾದರೂ ಸಲ್ಲಿಸುತ್ತಾರೆಂಬ ನಿರೀಕ್ಷೆಯನ್ನೂ ಅವರು ಹುಸಿ ಮಾಡಿದರು. ಪೊಲೀಸರು ಮತ್ತು ಶಾಸಕರಿಬ್ಬರೂ ಕಾನೂನು ನಿರ್ದೇಶಿತವಾದ ಪ್ರಕ್ರಿಯೆಗಳನ್ನು ಒಂದು ಸರಳ ಪ್ರಕ್ರಿಯೆಯಾಗಿ ಅನುಸರಿಸಬೇಕಿತ್ತು. ಆದರೆ ವಿಪರ್ಯಾಸವೆಂದರೆ ಸಂವಿಧಾನವನ್ನು ಪ್ರಮಾಣವಾಗಿಟ್ಟುಕೊಂಡು ಅಧಿಕಾರ ಸ್ವೀಕರಿಸಿದವರೇ ಅದರ ನೈತಿಕ ಸ್ಫೂರ್ತಿಯನ್ನು ಕಡೆಗಣಿಸುತ್ತಿದ್ದುದು ಕಂಡುಬಂದಿತು. ಪೊಲೀಸರು ತೆಗೆದುಕೊಂಡ ಕ್ರಮಸೂಕ್ತವಾಗಿತ್ತೆಂಬ ವಾದ ದಿನಗಳೆದಂತೆ ದುರ್ಬಲವಾಗುತ್ತಾ ಅನುಮಾನಕ್ಕೆ ದಾರಿ ಮಾಡಿಕೊಡುತ್ತಿದ್ದರೆ ಪೊಲೀಸ್ ಕಾರ್ಯಾಚರಣೆಯಲ್ಲಿರುವ ತೊಡಕುಗಳು ಸಹ ಸಡಿಲಗೊಳ್ಳುತ್ತಾ ಹೋಗುತ್ತಿವೆ. ಬಹಳಷ್ಟು ಕಾನೂನು ಪಂಡಿತರು ಪೊಲೀಸರ ಈ ಕಾರ್ಯಾಚರಣೆಯನ್ನು ಕಾನೂನು ನಿರ್ದೇಶಿತ ಪ್ರಕ್ರಿಯೆಯನ್ನು ಬದಿಗೊತ್ತಿದ್ದ ಕಡಿವಾಣ ರಹಿತ ಹೆಜ್ಜೆಯೆಂದು ಪರಿಗಣಿಸುತ್ತಿದ್ದಾರೆ. ಅತ್ಯಾಚಾರ ಆರೋಪಿಗಳನ್ನು ಕೊಂದು ಹಾಕಿದ ಪೊಲೀಸರ ಕಾರ್ಯಾಚರಣೆಯು ಭಾರತೀಯ ನ್ಯಾಯಾಂಗದ ಸಕ್ರಿಯತೆ ಮತ್ತು ಪೊಲೀಸ್ ಕಾರ್ಯಾಗಳೆಂಬ ಎರಡು ಸಂಸ್ಥೆಗಳ ನಡುವಿನ ವೈರುಧ್ಯಗಳನ್ನು ತೀವ್ರಗೊಳಿಸಿದೆ.

ಪೊಲೀಸ್ ಕಾರ್ಯಾಚರಣೆಯು ನ್ಯಾಯಾಂಗದ ಬುನಾದಿಯನ್ನೇ ಇಲ್ಲವಾಗಿಸಲು ಪ್ರಯತ್ನಿಸಿತಲ್ಲದೆ ನ್ಯಾಯಾಂಗದ ಮಾನ್ಯತೆಯ ಮೇಲೆ ಸವಾರಿ ಮಾಡಿದೆ. ಇಂತಹ ಕಾರ್ಯಾಚರಣೆಗಳಲ್ಲಿ ಪೊಲೀಸರು ಕ್ರಿಮಿನಲ್ ಪ್ರಕ್ರಿಯೆಗಳಲ್ಲಿ ಅತ್ಯಗತ್ಯವಾಗಿರುವ ಕಾನೂನು ನಿರ್ದೇಶಿತ ಪ್ರಕ್ರಿಯೆಗಳಿಗೆ ಪೂರಕವಾಗುವಂತೆ ತನಿಖಾ ಪ್ರಕ್ರಿಯೆಗಳನ್ನು ಜಾಗರೂಕತೆಯಿಂದ ನಿಭಾಯಿಸಿರುವುದಿಲ್ಲ. ಪರಿಣಿತರು ಹೇಳುವಂತೆ ಇಂತಹ ದಿಢೀರ್ ಪೊಲೀಸ್ ಕಾರ್ಯಾಚರಣೆಗಳು ಕಾನೂನಾತ್ಮಕ/ ಸಂವಿಧಾನಾತ್ಮಕ ಪ್ರಕ್ರಿಯೆಗಳನ್ನು ಅರ್ಧಾಂತಕಗೊಳಿಸುತ್ತದೆ. ಇದು ಕಾನೂನು ವಿಷಯದಲ್ಲಿ ಸುಶಿಕ್ಷಿತರಾದ ಸಾರ್ವಜನಿಕರಿಂದ ಮಾನ್ಯತೆ ಪಡೆದಿರುವ ಕಾನೂನು ನಿರ್ದೇಶಿತ ಪ್ರಕ್ರಿಯೆಗಳ ಮೇಲೆ ಗಂಭೀರವಾದ ಪರಿಣಾಮಗಳನ್ನುಂಟು ಮಾಡುತ್ತವೆ. ಒಂದು ಸಾರಭೂತ ಕಾನೂನು ನಿರ್ದೇಶಿತ ಪ್ರಕ್ರಿಯೆಗಳ ಪ್ರಕಾರ ಪೊಲೀಸರ ಕಾರ್ಯಾಚರಣೆಯನ್ನೂ ಮತ್ತು ಅದಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕರಿಬ್ಬರನ್ನೂ ಪ್ರಶ್ನೆಗೊಳಪಡಿಸಬೇಕು. ಹೀಗಾಗಿ ಒಂದು ಸಾರಭೂತ ಕಾನೂನು ನಿರ್ದೇಶಿತ ಪ್ರಕ್ರಿಯೆಗಳ ಪ್ರಕಾರ ಕಾರ್ಯಾಚರಣೆಗೆ ಅಗತ್ಯವಿರುವಷ್ಟು ಕಾರಣಗಳನ್ನು ಒದಗಿಸಬೇಕೆಂಬ ಪ್ರಕ್ರಿಯೆಯು ನ್ಯಾಯಾಂಗ ಅಥವಾ ವಕೀಲರ ತೀವ್ರ ಪಾಟೀ ಸವಾಲಿನ ಮೂಲಕ ಹಾದುಹೋಗಬೇಕಿರುತ್ತದೆ. ಈ ರೀತಿ ಒಂದು ವಾದ-ಪ್ರತಿವಾದಗಳ ಪರಿಧಿಯಲ್ಲಿ ಹರಿಯುವ ವಾದಗಳು ಅಂತಿಮವಾಗಿ ಸಾಕ್ಷ್ಯಾಧಾರಿತ ನ್ಯಾಯ ತೀರ್ಮಾನಕ್ಕೆ ದಾರಿ ಮಾಡಿಕೊಡುತ್ತದೆ. ಆ ಮೂಲಕ ಆರೋಪಿಯ ಅಪರಾಧವು ರುಜುವಾತಾಗಿ ಕಠಿಣ ಶಿಕ್ಷೆಗೆ ಅರ್ಹರೆಂಬುದಕ್ಕೆ ಸಮರ್ಥನೆಯನ್ನು ಒದಗಿಸುತ್ತದೆ. ಆದರೆ ಪೊಲೀಸ್ ಕಾರ್ಯಾಚರಣೆಯು ವಾದ-ಪ್ರತಿವಾದಗಳ ಕುತ್ತಿಗೆಯನ್ನೇ ಹಿಸುಕಿದೆಯಲ್ಲದೆ ಅಪರಾಧಿಗೆ ಶಿಕ್ಷೆ ಕೊಡುವ ನ್ಯಾಯಾಂಗದ ಅಧಿಕಾರವನ್ನೇ ನಿರಾಕರಿಸಿದೆ. ಈ ಕಾರಣದಿಂದಾಗಿಯೇ ಹಲವಾರು ಗಣ್ಯ ವಕೀಲರು ಪೊಲೀಸ್ ಕಾರ್ಯಾಚರಣೆಯ ಬಗ್ಗೆ ತೀವ್ರ ಸಂದೇಹಗಳನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಾನೂನು ನಿರ್ದೇಶಿತ ಪ್ರಕ್ರಿಯೆ ಹಾಗೂ ಸಂವಿಧಾನಗಳಿಗೆ ಬದ್ಧರಾಗಿರಬೇಕೆಂಬುದನ್ನು ಇನ್ನೂ ಕಲಿಯುತ್ತಿರುವ ಸಾರ್ವಜನಿಕರಿಗೆ ಆ ಬಗ್ಗೆ ಶಿಕ್ಷಣ ನೀಡುವ ಸಾಧ್ಯತೆಯನ್ನೂ ಸಹ ಈ ಪೊಲೀಸ್ ಕಾರ್ಯಾಚರಣೆ ಇಲ್ಲವಾಗಿಸಿದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ: ಕಾನೂನು ರಕ್ಷಣೆ ಮಾಡಬೇಕಿರುವ ಸಂಸ್ಥೆಯಾದ ಪೊಲೀಸ್ ವ್ಯವಸ್ಥೆಯು ಸಂವಿಧಾನದಲ್ಲಿ ನೀಡಲಾಗಿರುವ ಕಾನೂನಿಗೆ ಪೊಲೀಸರೂ ಸಹ ಬದ್ಧರಾಗಿರಬೇಕೆಂಬುದನ್ನೂ ಹಾಗೂ ಕಾನೂನು ನಿರ್ದೇಶಿತ ಪ್ರಕ್ರಿಯೆ ಅಥವಾ ಕಾನೂನಿನ ಆಡಳಿತದ ಬಗ್ಗೆ ನಾಗರಿಕರಲ್ಲಿ ಗೌರವವನ್ನೂ ಮೂಡಿಸುವ ನಾಗರಿಕ ಸಂಸ್ಕೃತಿಯನ್ನು ಬೆಳೆಸಲು ಆಸಕ್ತವಾಗಿದೆಯೋ ಇಲ್ಲವೋ? ಕ್ರಿಮಿನಲ್ ಪ್ರಕರಣಗಳಲ್ಲಿ ಕಾರ್ಯಾಚರಣೆಗೆ ಬೇಕಿರುವ ಸಮರ್ಥನೆಗಳು ಸಂವಿಧಾನದಲ್ಲಿ ಸುಸ್ಥಾಪಿತವಾಗಿರುವ ಪ್ರಕ್ರಿಯಾ ಸಂಹಿತೆಗಳಿಂದಲೇ ಒದಗಬೇಕು. ಆದರೆ ಪೊಲೀಸರು ಈ ತರ್ಕಸಂಹಿತೆಯನ್ನು ಅನುಸರಿಸಿದಂತಿಲ್ಲ. ತಮ್ಮ ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತೆನ್ನುವ ನೆಲೆಯಲ್ಲಿ ಮಾಡಿಕೊಳ್ಳುವ ಸಮರ್ಥನೆಗಳು ನಂಬುವಂತಿಲ್ಲ. ಏಕೆಂದರೆ ಅದಕ್ಕೆ ಆ ಕೃತ್ಯವನ್ನು ಮಾಡಿದವರನ್ನು ಹೊರತುಪಡಿಸಿ ಬೇರೆ ಸ್ವತಂತ್ರ ಸಾಕ್ಷಿಗಳೇ ಇಲ್ಲ.
ಕೃಪೆ: 

Writer - ಗೋಪಾಲ್ ಗುರು

contributor

Editor - ಗೋಪಾಲ್ ಗುರು

contributor

Similar News