ಸಿಡಿದು ನಿಂತ ದೇಶದ ಜನಸಾಮಾನ್ಯರು! ದಂಗುಬಡಿದ ಮೋದಿ ಸರಕಾರ!

Update: 2019-12-23 18:39 GMT

ಜನರನ್ನು ಬಹಳ ಕಾಲ ಭ್ರಮೆಯಲ್ಲಿಟ್ಟು, ಆಮಿಷಗಳಿಗೆ ದೂಡಿ ಹಿಡಿದಿಟ್ಟು, ಬೇಕಾಬಿಟ್ಟಿಯಾಗಿ ಜನಸಾಮಾನ್ಯರ ಹಕ್ಕುಗಳನ್ನು ಕಸಿದು, ಸಂಪನ್ಮೂಲಗಳನ್ನು ದೋಚುವ ಕಾರ್ಯವನ್ನು ನಡೆಸಲು ಸಾಧ್ಯವಿಲ್ಲ ಎನ್ನುವುದನ್ನು ಈ ಜನಪ್ರತಿರೋಧ ನಿರೂಪಿಸಿದೆ.


ದೇಶದ ಜನಸಾಮಾನ್ಯರು ಇಂದು ಭಾರೀ ದೊಡ್ಡ ಪ್ರಮಾಣದಲ್ಲಿ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ದೇಶದ ಪ್ರಮುಖ ನಗರಗಳು, ವಿಶ್ವವಿದ್ಯಾನಿಲಯಗಳು, ಐಐಟಿ, ಐಐಎಮ್ ನಂತಹ ಶಿಕ್ಷಣ ಸಂಸ್ಥೆಗಳು ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳು ಕಳೆದ ಹತ್ತಾರು ದಿನಗಳಿಂದ ಬಿರುಸಿನ ಜನಪ್ರತಿರೋಧದ ಕೇಂದ್ರಗಳಾಗಿ ಮಾರ್ಪಟ್ಟಿವೆ. ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯ ದೇಶಾದ್ಯಂತ ಮೋದಿ ಸರಕಾರದ ಜನವಿರೋಧಿ ಹಾಗೂ ದೇಶವಿರೋಧಿ ನೀತಿಗಳ ವಿರುದ್ಧ ಭಾರೀ ಹೋರಾಟಗಳಿಗೆ ಇಳಿದಿದ್ದಾರೆ. ಮೋದಿ ಸರಕಾರ ಜನರ ಮೇಲೆ ಮಾಡುತ್ತಿರುವ ಆರ್ಥಿಕ ಹಾಗೂ ಸಾಮಾಜಿಕ ದಮನ ದೌರ್ಜನ್ಯಗಳ ವಿರುದ್ಧ ಸಿಡಿದೆದ್ದು ನಿಂತಿದ್ದಾರೆ. ಪ್ರತಿಬಂಧಕಾಜ್ಞೆ, ಕರ್ಫ್ಯೂ, ಬಂಧನ, ಸುಳ್ಳುಕೇಸು, ಲಾಠಿ ಚಾರ್ಜ್, ಗೋಲಿಬಾರ್‌ಗಳಿಗೆ ಅಂಜದೆ, ಅಳುಕದೆ ಧೈರ್ಯದಿಂದ ಎದೆಯೊಡ್ಡಿ ಲಕ್ಷಾಂತರ ಸಂಖ್ಯೆಯಲ್ಲಿ ಹೋರಾಟದಲ್ಲಿ ದುಮುಕುತ್ತಿದ್ದಾರೆ. ದೇಶವನ್ನು ಅಧೋಗತಿಗೆ ದೂಡಿರುವ ಆಳುವ ಶಕ್ತಿಗಳು ಮತ್ತವರ ಸರಕಾರವನ್ನು ಪ್ರಶ್ನಿಸಲು ತೊಡಗಿದ್ದಾರೆ. ಜನರನ್ನು ಬಹಳ ಕಾಲ ಭ್ರಮೆಯಲ್ಲಿಟ್ಟು, ಆಮಿಷಗಳಿಗೆ ದೂಡಿ ಹಿಡಿದಿಟ್ಟು, ಬೇಕಾಬಿಟ್ಟಿಯಾಗಿ ಜನಸಾಮಾನ್ಯರ ಹಕ್ಕುಗಳನ್ನು ಕಸಿದು, ಸಂಪನ್ಮೂಲಗಳನ್ನು ದೋಚುವ ಕಾರ್ಯವನ್ನು ನಡೆಸಲು ಸಾಧ್ಯವಿಲ್ಲ ಎನ್ನುವುದನ್ನು ಈ ಜನಪ್ರತಿರೋಧ ನಿರೂಪಿಸಿದೆ. ಜನರು ಸರಿಯಿಲ್ಲ, ಯುವ ಸಮೂಹ ಸಂವೇದನೆಯನ್ನೇ ಕಳೆದುಕೊಂಡಿದೆ, ಮೊಬೈಲು ಸೆಲ್ಫಿಗಳಲ್ಲಿ ಮುಳುಗಿ ತಮ್ಮ ಅಸ್ತಿತ್ವ ಹಾಗೂ ಕ್ರಿಯಾ ಶೀಲತೆಗಳನ್ನು ನಾಶಮಾಡಿಕೊಂಡಿದೆ ಎಂದೆಲ್ಲಾ ಬೆಳೆದುಬಂದ ಆರೋಪಗಳಿಗೆ ಉತ್ತರಗಳನ್ನು ಈ ಹೋರಾಟಗಳ ಮೂಲಕ ಯುವ ಸಮೂಹ ನೀಡ ತೊಡಗಿದೆ. ಇದು ಬಹಳ ಆಶಾದಾಯಕ ಬೆಳವಣಿಗೆಯಾಗಿದೆ. ದೇಶದ ಎಲ್ಲಾ ಜನರಲ್ಲಿ ನವ ಸಂಚಲನವನ್ನು ಮೂಡಿಸುತ್ತಿದೆ.

ದೇಶದ ವಿವಿಧ ಭಾಗಗಳಲ್ಲಿ ಸರಕಾರದ ಸಶಸ್ತ್ರ ಪಡೆಗಳು ಹೋರಾಟ ನಿರತ ಜನರನ್ನು ಗುಂಡಿಟ್ಟು ಕೊಂದು ಹಾಕುತ್ತಿವೆ. ಉತ್ತರ ಪ್ರದೇಶ ಒಂದರಲ್ಲೇ ಹಲವಾರು ಜನರನ್ನು ಕೊಂದು ಹಾಕಿರುವ ವರದಿಯಿದೆ. ಕರ್ನಾಟಕದ ಮಂಗಳೂರಿನಲ್ಲೂ ಇಬ್ಬರು ಯುವಕರನ್ನು ಪೊಲೀಸರು ಗುಂಡಿಟ್ಟು ಕೊಂದು ಹಾಕಿದ್ದಾರೆ. ಅಲ್ಲದೆ ದೇಶದ ಹಲವಾರು ಕಡೆಗಳಲ್ಲಿ ಪೊಲೀಸ್ ಪಡೆಗಳೇ ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು, ಮನೆಗಳನ್ನು, ಮನೆಮುಂದೆ ಹಾಗೂ ರಸ್ತೆಯಲ್ಲಿ ನಿಲ್ಲಿಸಿದ್ದ ಖಾಸಗಿ ವಾಹನಗಳನ್ನು ಒಡೆದು ಹಾಕಿರುವ, ಬೆಂಕಿ ಕೊಟ್ಟಿರುವ ವರದಿಗಳಿವೆ. ಅದನ್ನು ಹೋರಾಟಗಾರರ ತಲೆಗಳಿಗೆ ಕಟ್ಟುವ ಕಾರ್ಯಗಳನ್ನು ಮಾಡಲಾಗುತ್ತಿದೆ. ಅದು ಸರಕಾರಗಳ ಫ್ಯಾಶಿಸ್ಟ್ ನೀತಿಯ ಭಾಗವಾಗಿಯೇ ನಡೆಯುತ್ತಿದೆ.

ಕರ್ನಾಟಕದ ಮಂಗಳೂರಿನಲ್ಲೂ ಅದು ಮರುಕಳಿಸಿದೆ. ಅಲ್ಲಿನ ಪೊಲೀಸರು ಆಸ್ಪತ್ರೆಗಳಿಗೂ ನುಗ್ಗಿ ಹಾನಿಗೊಳಿಸಿರುವ, ಬಸ್ ಕಾಯುತ್ತಿದ್ದವರನ್ನೂ, ರಸ್ತೆಯಲ್ಲಿದ್ದ ಮಹಿಳೆಯರು ಮಕ್ಕಳನ್ನು ಹೊಡೆದು ಗಾಯಗೊಳಿಸಿರುವ, ಪ್ರತಿಭಟನೆಗೆ ಸಂಬಂಧ ಪಡದವರನ್ನೂ ಕೂಡ ಹಿಡಿದು ಹೊಡೆದು ಬಂಧಿಸಿರುವ, ಪತ್ರಕರ್ತರನ್ನೂ ಹೊಡೆದು, ಅವರ ಕ್ಯಾಮರಾ, ಮೊಬೈಲುಗಳನ್ನೂ ಹಾನಿಗೊಳಿಸಿರುವ ವೀಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ. ತುರ್ತು ನಿಗಾಘಟಕಕ್ಕೂ ನುಗ್ಗಿ ಭಯ ಮೂಡಿಸಿರುವ ಘಟನೆ ಕೂಡ ನಡೆದಿದೆ. ಯಾವುದೇ ಕಾನೂನು ಕಟ್ಟಳೆಗಳನ್ನು ಪಾಲಿಸದೇ ಮಂಗಳೂರಿನಲ್ಲಿ ಜನರನ್ನು ಕೊಲ್ಲುವ ಉದ್ದೇಶದಿಂದಲೆ ಪ್ರತಿಭಟನೆಗಳ ಮೇಲೆ ನೇರವಾಗಿ ಗುಂಡಿನ ದಾಳಿ ನಡೆಸಲಾಗಿದೆ. ಅದಕ್ಕೆ ಸಾಕ್ಷಿಯೆಂಬಂತೆ ಪೊಲೀಸ್ ಅಧಿಕಾರಿಗಳು ನಡೆಸಿದ ಸಂಭಾಷಣೆಗಳ ವೀಡಿಯೊ ಹಾಗೂ ಆಡಿಯೊ ತುಣುಕುಗಳು, ಸಿಸಿ ಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಇಂಡಿಯಾದ ಈಶಾನ್ಯ ಭಾಗದ ರಾಜ್ಯಗಳಾದ ಅಸ್ಸಾಂ, ಮಣಿಪುರ, ತ್ರಿಪುರ, ಮೇಘಾಲಯ, ನಾಗಾಲ್ಯಾಂಡ್‌ಗಳ ಜನಸಮುದಾಯ ಲೋಕಸಭೆಯ ಎರಡೂ ಸದನಗಳು ಸಿಎಬಿಯನ್ನು ಸಿಎಎಯಾಗಿ ಕಾಯ್ದೆಯಾಗಿಸಿದ ತಕ್ಷಣವೇ ಭಾರೀ ಮಟ್ಟದಲ್ಲಿ ಬೀದಿಗಿಳಿದು ಪ್ರತಿಭಟಿಸಲಾರಂಭಿಸಿದರು. ಮತೀಯ ಆದಾರದಲ್ಲಿ ತಮ್ಮ ಪೌರತ್ವವನ್ನು ತೀರ್ಮಾನಿಸಲು ಮೋದಿಯ ಬಿಜೆಪಿಯ ಕೇಂದ್ರ ಸರಕಾರ ಯಾರು ಎನ್ನುವಂತಹ ಪ್ರಶ್ನಗಳೆದ್ದವು. ಅಸ್ಸಾಮಿನಲ್ಲಿ ಅಕ್ರಮ ವಲಸಿಗ ವಿಚಾರವನ್ನು ಸಂಕೀರ್ಣಗೊಳಿಸುತ್ತಾ ಬಹಳ ವಿವಾದಾತ್ಮಕ ಹಾಗೂ ರಾಜಕೀಯ ಲಾಭಗಳ ವಿಚಾರಗಳನ್ನಾಗಿ ಮಾಡಿಕೊಂಡು ಬಳಸುತ್ತಾ ಬರಲಾಗಿತ್ತು. ಅದರಲ್ಲಿ ಸಂಘ ಪರಿವಾರ ಮುಂಚೂಣಿಯಲ್ಲಿತ್ತು. ಅದರ ಪರಿಣಾಮವೂ ಈ ಪ್ರತಿಭಟನೆಯಲ್ಲಿ ಕಾಣುತ್ತಿದೆ. ಧಾರ್ಮಿಕ ತುಳಿತಕ್ಕೊಳಗಾದ ನಿರ್ದಿಷ್ಟ ರಾಷ್ಟ್ರಗಳ ಧಾರ್ಮಿಕ ಅಲ್ಪಸಂಖ್ಯಾತರಿಗೆ ಇಂಡಿಯಾದ ಪೌರತ್ವ ನೀಡಲು ಜಾರಿಗೆ ತಂದಿದ್ದೆಂದು ಹೇಳಲಾಗುತ್ತಿರುವ ಸಿಎಎ ಎನ್ನುವಂತಹ ಕಾಯ್ದೆಯನ್ನು ಅಲ್ಲಿನ ಜನರು ಅಕ್ಷರಶಃ ಸ್ವೀಕರಿಸಲಿಲ್ಲ. ಎನ್‌ಆರ್‌ಸಿ ಜಾರಿಯ ನೇರ ಪರಿಣಾಮವನ್ನು ನೋಡಿದ ಅಲ್ಲಿನ ಜನಸಾಮಾನ್ಯರು ಮತಾಧಾರಿತವಾಗಿ ಪೌರತ್ವ ನೀಡುವ ಜನವಿರೋಧಿಯಾದ ಮೋದಿ ಹಾಗೂ ಶಾ ಸರಕಾರದ ನಡೆಯನ್ನು ಹಿಮ್ಮಟ್ಟಿಸತೊಡಗಿದರು.

ಕೇಂದ್ರದ ಮೋದಿಯ ಬಿಜೆಪಿ ಸರಕಾರ ದೇಶದ ಸಮಸ್ತ ನಾಗರಿಕರ ಪೌರತ್ವವನ್ನೇ ಪ್ರಶ್ನಿಸುವಂತಹ ಕಾಯ್ದೆಗಳನ್ನು ಜಾರಿಗೆ ತಂದಿದೆ. ಇಂಡಿಯಾ ಸಿಟಿಝನ್‌ಶಿಪ್ ಅಮೆಂಡ್‌ಮೆಂಟ್ ಆ್ಯಕ್ಟ್ 2019 ಎನ್ನುವ ಕಾಯ್ದೆ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳ ಧಾರ್ಮಿಕ ದಮನಗಳನ್ನು ಎದುರಿಸುತ್ತಿರುವ ಹಿಂದೂ, ಪಾರ್ಸಿ, ಕ್ರಿಶ್ಚಿಯನ್, ಜೈನ, ಸಿಖ್ ಸಮುದಾಯಗಳ ಜನರಿಗೆ ಇಂಡಿಯಾದ ಪೌರತ್ವ ಒದಗಿಸುವ ಕಾಯ್ದೆಯೆಂದು ಸರಕಾರ ಹೇಳುತ್ತಿದೆ. ಅದರ ಜೊತೆಗೆ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ)ಯನ್ನೂ ದೇಶದಾದ್ಯಂತ ಜಾರಿಮಾಡುವ ತಯಾರಿಯಲ್ಲಿ ತೊಡಗಿದೆ. ಅಕ್ರಮ ವಲಸಿಗರೆಂದು ತೀರ್ಮಾನಿಸಿದವರನ್ನೆಲ್ಲಾ ಕೂಡಿ ಹಾಕಿಡಲು ಡಿಟೆನ್ಷನ್ ಸೆಂಟರ್ ಅಥವಾ ಡಿಟೆನ್ಷನ್ ಕ್ಯಾಂಪ್ ಎಂದೆಲ್ಲಾ ಕರೆಯಲಾಗುವ ನಾಝಿ ಹಿಟ್ಲರ್‌ನ ಕುಪ್ರಸಿದ್ಧ ಕಾನ್‌ಸೆಂಟ್ರೇಷನ್ ಕ್ಯಾಂಪುಗಳನ್ನು ಹೋಲುವ ಬಂದಿಖಾನೆಗಳನ್ನು ದೇಶದ ಎಲ್ಲೆಡೆಯೂ ನಿರ್ಮಿಸಲಾಗುತ್ತಿದೆ. ಈಗಿನ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ತಮ್ಮ ಭಾಷಣಗಳಲ್ಲಿ ಮೊದಲಿನಿಂದಲೂ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಯನ್ನು ಜಾರಿ ಮಾಡಿ ಅಕ್ರಮ ವಲಸಿಗರನ್ನು ಹೊರಹಾಕಲಾಗುತ್ತದೆ ಎಂದು ಬಹಿರಂಗ ಭಾಷಣಗಳಲ್ಲಿ ಹೇಳುತ್ತಾ ಬಂದಿದ್ದಾರೆ. ಪ್ರಧಾನಿ ಮೋದಿ ಕೂಡ ಹಲವು ಸಂದರ್ಭಗಳಲ್ಲಿ ಈ ಮಾತನ್ನು ಹೇಳಿದ್ದಾರೆ. ಆದರೆ ಅಕ್ರಮ ವಲಸಿಗರೆಂದು ಮುದ್ರೆಯೊತ್ತಿದ ಜನರನ್ನು ಎಲ್ಲಿಗೂ ಕಳಿಸಲು ಸಾಧ್ಯವಾಗದು. ಬೇರೆ ಯಾವ ದೇಶಗಳೂ ಅವರನ್ನು ಸ್ವೀಕರಿಸುವ ಮೂರ್ಖ ನಡೆಗಳನ್ನು ಮಾಡುವುದು ಸುಲಭದಲ್ಲಿ ಆಗದು. ಹಾಗಿದ್ದಾಗ ಅವರನ್ನೆಲ್ಲಾ ಡಿಟೆನ್ಷನ್ ಸೆಂಟರ್‌ಗಳೆಂಬ ಬಂದಿಖಾನೆಗಳಲ್ಲಿ ಕುರಿಗಳಂತೆ ಕೂಡಿ ಹಾಕಿ, ಅವರಿಂದ ಬಿಟ್ಟಿ ಚಾಕರಿ ಮಾಡಿಸುವ, ಭಾರೀ ಕಾರ್ಪೊರೇಟುಗಳಿಗೆ ಬಿಟ್ಟಿಯಾಗಿ ಶ್ರಮಶಕ್ತಿಯನ್ನು ಒದಗಿಸುವ ಕಾರ್ಯಗಳಲ್ಲಿ ಬಲವಂತದಿಂದ ತೊಡಗಿಸುವ ಕೆಲಸ ನಡೆಯುತ್ತದೆ. ಈಗಾಗಲೇ ಇರುವ ಕಾರಾಗೃಹಗಳಲ್ಲಿ ಅಂತಹ ಪ್ರಯೋಗಗಳು ಶುರುವಾಗಿ ಬಹಳ ಕಾಲವಾಗಿದೆ.

ಅಸ್ಸಾಮಿನಲ್ಲಿ ಎನ್‌ಆರ್‌ಸಿಯನ್ನು ಜಾರಿ ಮಾಡಿ ಸುಮಾರು 19 ಲಕ್ಷದಷ್ಟು ಜನರು ಇಂಡಿಯಾದ ಪೌರರಲ್ಲ ಎಂದು ನಿರ್ಧರಿಸಲಾಯಿತು. ಅದರಲ್ಲಿ 12 ಲಕ್ಷದಷ್ಟು ಜನರು ಹಿಂದೂಗಳೆಂದು ಗುರುತಿಸುವ ಸಮುದಾಯಕ್ಕೆ ಸೇರಿದವರಾಗಿದ್ದರು. ಉಳಿದ ಏಳು ಲಕ್ಷದಷ್ಟು ಜನರು ಮಾತ್ರವೇ ಮುಸ್ಲಿಮರಾಗಿದ್ದರು. ಆಶ್ಚರ್ಯದ ವಾಸ್ತವವೇನೆಂದರೆ ಸರಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ, ಸೇನೆಯಲ್ಲಿ ಮೇಜರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾದವರೂ ಕೂಡ ದೇಶದ ಪೌರರಲ್ಲ ಎಂದು ಹೇಳಲಾಯಿತು. ಮಾಜಿ ರಾಷ್ಟ್ರಪತಿಗಳಾದ ದಿವಂಗತ ಫಕ್ರುದ್ದೀನ್ ಅಲಿ ಅಹಮದ್‌ರ ಕುಟುಂಬಸ್ಥರು ಕೂಡ ದೇಶದ ಪೌರರಲ್ಲ ಎಂದು ತೀರ್ಮಾನಿಸಲಾಯಿತು. ರೇಷನ್ ಕಾರ್ಡ್ ಇದ್ದವರು, ಮತದಾರರ ಗುರುತಿನ ಚೀಟಿ ಇದ್ದವರು, ಕಂದಾಯ ಕಟ್ಟಿದ ರಸೀದಿ ಇದ್ದವರು ಕೂಡ ತಮ್ಮ ಪೌರತ್ವವನ್ನು ಸಾಬೀತು ಮಾಡಲಾಗದೇ ಡಿಟೆನ್ಷನ್ ಕ್ಯಾಂಪುಗಳೆಂಬ ಅಕ್ರಮ ವಾಸಿಗಳಿಗೆಂದೇ ಇರುವ ಜೈಲುಗಳಲ್ಲಿ ಬಂದಿಗಳಾಗಬೇಕಾಯಿತು. ಅಂದರೆ ಮೋದಿ ಸರಕಾರ ದೇಶಾದ್ಯಂತ ಜಾರಿ ಮಾಡಲು ಹೊರಟಿರುವ ಎನ್‌ಆರ್‌ಸಿ ತಲೆತಲಾಂತರದಿಂದ ವಾಸ ಮಾಡುತ್ತಾ ಬಂದ, ಇಲ್ಲೇ ಹುಟ್ಟಿ ಬೆಳೆದ ದೇಶದ ಜನಸಾಮಾನ್ಯರಿಗೆ ಎಂತಹ ಮಾರಕವಾದ ಯೋಜನೆ ಎನ್ನುವುದನ್ನು ಅಸ್ಸಾಮಿನ ಉದಾಹರಣೆ ನಮಗೆ ಸ್ಪಷ್ಟವಾಗಿ ಹೇಳುತ್ತದೆ. ಮೋದಿ ಹಾಗೂ ಅಮಿತ್ ಶಾ ಜೋಡಿ ಮೊದಲಿನಿಂದಲೂ ಎನ್‌ಆರ್‌ಸಿ ಬಗ್ಗೆ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ದೇಶದಿಂದ ಹೊರಗೆ ಕಳಿಸುವ ಭಾರೀ ಜನಪರ ಯೋಜನೆ ಎಂಬಂತೆ ಬಹಿರಂಗಸಭೆಗಳಲ್ಲಿ ಹೇಳುತ್ತಾ ತಮ್ಮ ಭಕ್ತರಿಂದ ಶಿಳ್ಳೆ ಹಾಗೂ ಚಪ್ಪಾಳೆಗಳನ್ನು ಗಿಟ್ಟಿಸಿಕೊಳ್ಳುತ್ತಾ ಬಂದಿದ್ದರು.

ನೋಟು ರದ್ದತಿ ಮಾಡಿದಾಗ ದೇಶದ ಜನಸಾಮಾನ್ಯರನ್ನು ನಾಜೂಕಾಗಿ ಯಾಮಾರಿಸಿದಂತೆ ಸಿಎಎ ಹಾಗೂ ಎನ್‌ಆರ್‌ಸಿ ವಿಚಾರದಲ್ಲಿ ಮೋದಿ ಸರಕಾರಕ್ಕೆ ಸಾಧ್ಯವಾಗದೇ ಹೋಗಿದೆ. ಆದರೂ ಮೋದಿ ಸರಕಾರದ ಪ್ರಯತ್ನ ನಿಂತಿಲ್ಲ. ಇದೇ ಡಿಸೆಂಬರ್ 22ರಂದು ದಿಲ್ಲಿಯ ರಾಮ ಲೀಲಾ ಮೈದಾನದಲ್ಲಿ ಜನಸಾಮಾನ್ಯರನ್ನು ಭಾವೋದ್ವೇಗಗೊಳಿಸಲು ಪ್ರಯತ್ನಿಸುತ್ತಾ ಮೋದಿ, ‘‘ಸಿಎಎ ಬೇರೆ ಎನ್‌ಆರ್‌ಸಿ ಬೇರೆ! ಸಿಎಎಯಿಂದ ಯಾರಿಗೂ ಅಪಾಯವಿಲ್ಲ! ಎನ್ ಆರ್ ಸಿಯನ್ನು ದೇಶದಾದ್ಯಂತ ಜಾರಿಗೊಳಿಸುವ ಯೋಜನೆ ತಮ್ಮ ಸರಕಾರದ ಬಳಿ ಇಲ್ಲ.! ಡಿಟೆನ್ಷನ್ ಸೆಂಟರ್‌ಗಳನ್ನು ಎಲ್ಲೂ ನಿರ್ಮಿಸಲಾಗುತ್ತಿಲ್ಲ.! ವಿರೋಧ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಸುಳ್ಳುಗಳನ್ನು ಹರಡಿ ಜನರನ್ನು ತಪ್ಪುದಾರಿಗೆಳೆದು ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಿಸಲು ಪ್ರಯತ್ನಿಸುತ್ತಿವೆ.!... ದೇಶದಲ್ಲಿರುವ ಮುಸ್ಲಿಮ್ ಅಲ್ಪಸಂಖ್ಯಾತರಿಗೆ ನಮ್ಮ ಸರಕಾರದಿಂದ ಯಾವುದೇ ತೊಂದರೆಯೂ ಇಲ್ಲ.! ನಮ್ಮ ಸರಕಾರ ಇಂಡಿಯಾ ದೇಶದ ಬಹುತ್ವವನ್ನು ಗೌರವಿಸುತ್ತದೆ.!. ಯಾರೂ ಕೂಡ ಆತಂಕಕ್ಕೆ ಒಳಗಾಗದೇ ಶಾಂತಿ ಕಾಪಾಡಿ ....’’ಎಂದೆಲ್ಲಾ ತಮ್ಮ ಬಹಿರಂಗ ಭಾಷಣದಲ್ಲಿ ಹೇಳಿದ್ದಾರೆ. ಆದರೆ ಪ್ರಧಾನಿ ಮೋದಿಯ ಮಾತುಗಳನ್ನು ಮೊದಲಿನಂತೆ ಜನರು ನಂಬುವ ಸ್ಥಿತಿಯಲ್ಲಿ ಇಲ್ಲ ಎನ್ನುವುದು ಸಾಬೀತಾಗಿದೆ. ಆದರೂ ಮೋದಿ ತಮ್ಮ ಪ್ರಯತ್ನಗಳನ್ನು ನಿಲ್ಲಿಸದೇ ಮುಂದುವರಿಸಿದ್ದಾರೆ. ನನ್ನನ್ನು ನಂಬಿ ಎಂದು ಪದೇ ಪದೇ ಹೇಳತೊಡಗಿದ್ದಾರೆ.

ಆದರೆ ಜನರು ಮಾಡುತ್ತಿರುವ ಈ ಭಾರೀ ಮಟ್ಟದ ಹೋರಾಟದಲ್ಲಿ ವಿರೋಧ ಪಕ್ಷಗಳ ಪಾತ್ರ ಬಹಳ ನಗಣ್ಯವಾದುದು ಎನ್ನುವುದು ಬಹಿರಂಗವಾಗಿರುವ ಸತ್ಯ. ಕೆಲವು ಎಡಪಕ್ಷಗಳು ಮಾತ್ರ ಈ ಹೋರಾಟದಲ್ಲಿ ಒಂದು ಮಟ್ಟದಲ್ಲಿ ತೊಡಗಿಸಿಕೊಂಡಿವೆ. ಆದರೆ ಅವುಗಳು ಕೂಡ ಹೇಲಿಕೊಳ್ಳುವಂತಹ ರೀತಿಯಲ್ಲಿ ಜನರನ್ನು ಸಂಘಟಿಸಿ ಹೋರಾಟಗಳನ್ನು ನಡೆಸುತ್ತಿಲ್ಲ. ಹೋರಾಟದಲ್ಲಿ ತೊಡಗುತ್ತಿರುವ ಜನರೊಂದಿಗೆ ಕೈಜೋಡಿಸುವುದನ್ನು ಮಾಡುತ್ತಿದ್ದಾರೆ. ಮಮತಾ ಬ್ಯಾನರ್ಜಿ ತಮ್ಮ ರಾಜ್ಯದ ಜನರನ್ನು ಸಂಘಟಿಸಿ ಸಮಾವೇಶವನ್ನು ನಡೆಸಿದ್ದಾರೆ. ಉಳಿದಂತೆ ಕಾಂಗ್ರೆಸ್ ನಂತಹ ಪಕ್ಷಗಳು ಜನರ ಹೋರಾಟಗಳ ರಾಜಕೀಯ ಲಾಭ ಪಡೆಯಲು ಪ್ರಯತ್ನ ನಡೆಸುತ್ತಿದೆಯಾದರೂ ಅದೂ ಕೂಡ ಅದರಿಂದ ಸಾಧ್ಯವಾಗದಂತಹ ಸ್ಥಿತಿಯಿದೆ. ಹಾಗಾಗಿ ಈಗ ಜನರು ನಡೆಸುತ್ತಿರುವ ಭಾರೀ ಹೋರಾಟ ಈ ಚುನಾವಣೆಗಳ ಲೆಕ್ಕಾಚಾರದ ರಾಜಕೀಯ ಪಕ್ಷಗಳಿಂದ ಹೊರತಾದ ಹೋರಾಟವಾಗಿ ನಿಂತಿದೆ. ಅದೇ ಕಾರಣದಿಂದಾಗಿಯೇ ಮೋದಿ ಸರಕಾರಕ್ಕೆ ಈ ಹೋರಾಟವನ್ನು ದಮನ ಮಾಡಿ ಅಡಗಿಸಲು ಸಾಧ್ಯವಾಗದೇ ಹೋಗಿದೆ. ಒಂದು ವೇಳೆ ಈ ರಾಜಕೀಯ ಪಕ್ಷಗಳ ನೇತೃತ್ವ ಹೋರಾಟಗಳಿಗೆ ಇದ್ದಿದ್ದರೆ ಈ ಹೋರಾಟ ಈ ಮಟ್ಟದ ತೀವ್ರತೆಯನ್ನೂ ಹಾಗೂ ನಿರಂತರತೆಯನ್ನು ಪಡೆಯುತ್ತಿರಲಿಲ್ಲ. ಬಹಳ ಸಾಂಕೇತಿಕ ಮಟ್ಟಕ್ಕೆ ಇಳಿದುಬಿಡುವ ಅಪಾಯವಿತ್ತು.

ಆದರೆ ಈಗ ನಡೆಯುತ್ತಿರುವ ಮಾದರಿಯ ಹೋರಾಟಗಳಿಂದಲೇ ಬಹಳ ಕಾಲ ಹೋರಾಟಗಳನ್ನು ಮುನ್ನೆಡೆಸಲು ಸಾಧ್ಯವಾಗದು. ಜನರ ಸಿಟ್ಟು ಆಕ್ರೋಶಗಳು ಹೊರಹಾಕಲು ಮಾತ್ರ ಸೀಮಿತವಾಗುವ ಅಪಾಯವಿದೆ. ಇವಿಷ್ಟರಿಂದಲೇ ಜನಹೋರಾಟಕ್ಕೆ ಜಯ ಸಿಗಲಾರದು. ಈ ಎಲ್ಲಾ ಹೋರಾಟಗಳನ್ನು ಸಂಯೋಜನೆಗೊಳಿಸುವ ಸಂಘಟನಾ ರಚನೆಯನ್ನು ಚುನಾವಣಾ ಲೆಕ್ಕಾಚಾರದ ರಾಜಕೀಯ ಪಕ್ಷಗಳನ್ನು ಹೊರಗಿಟ್ಟು ಮಾಡಿಕೊಳ್ಳುವ ಅಗತ್ಯವಿದೆ. ದೇಶದ ಎಲ್ಲಾ ಭಾಗದ ಹೋರಾಟ ನಿರತ ಜನರ, ಸಂಘಟನೆಗಳ, ಗುಂಪುಗಳ ಒಕ್ಕೂಟದ ರೀತಿಯ ಸಂರಚನೆಯೊಂದರ ಅಗತ್ಯವಿದೆ. ಅಲ್ಲೂ ಕೂಡ ಹೋರಾಟಗಳನ್ನು ದಿಕ್ಕು ತಪ್ಪಿಸುವ ಸರಕಾರಕ್ಕೆ ಅಥವಾ ಯಾವುದೋ ಪಕ್ಷಕ್ಕೆ ಅಡವಿಡುವ ಅಪಾಯದ ಬಗ್ಗೆ ಎಚ್ಚರ ವಹಿಸಬೇಕಾಗುತ್ತದೆ. ಕೇವಲ ಸಿಎಎ, ಎನ್‌ಆರ್‌ಸಿ ಮಾತ್ರವಲ್ಲದೆ ಮೋದಿ ಸರಕಾರ ಮತ್ತು ಹಿಂದಿನ ಸರಕಾರಗಳು ಮಾಡುತ್ತಾ ಬಂದ ಎಲ್ಲಾ ಜನವಿರೋಧಿ ಹಾಗೂ ಭಾರೀ ಕಾರ್ಪೊರೇಟ್ ಪರ ನೀತಿಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಬೇಕಿದೆ.

Writer - ನಂದಕುಮಾರ್ ಕೆ. ಎನ್.

contributor

Editor - ನಂದಕುಮಾರ್ ಕೆ. ಎನ್.

contributor

Similar News