ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಮೂಲಕ ಎನ್‌ಆರ್‌ಸಿ ಹಾಗೂ ಸಿಎಎ ಜಾರಿಗೆ ಹೊರಟ ಸರಕಾರ!
ದೇಶದ ಜನರು ನೋಂದಣಿಗೆ ಬರುವವರಿಗೆ ಅವರು ಕೇಳಿದ ಮಾಹಿತಿಗಳನ್ನು ದಾಖಲೆಗಳನ್ನು ನೀಡುವುದರ ಜೊತೆಗೆ ತಮ್ಮ ತಂದೆ ತಾಯಿಗಳ ಹುಟ್ಟು, ಜನನ ಪತ್ರ, ಮರಣ ಪತ್ರ, ಊರು ಇತ್ಯಾದಿ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಆ ಮಾಹಿತಿಗಳು ಸರಿಯಿಲ್ಲದವರನ್ನು ಎನ್‌ಆರ್‌ಸಿ ತಯಾರಿಯ ಭಾಗವಾಗಿ ಅನುಮಾನಾಸ್ಪದ ಪೌರರ ಪಟ್ಟಿಯಲ್ಲಿ ಸೇರಿಸುವ ಅಪಾಯವಿದೆ. ಅನುಮಾನಾಸ್ಪದ ಪೌರರು ತಮ್ಮ ಪೌರತ್ವವನ್ನು ತಾವೇ ದೃಢೀಕರಿಸಬೇಕಾಗುತ್ತದೆ.
ಅಸ್ಸಾಂ ರಾಜ್ಯದಲ್ಲಿ ಅಕ್ರಮ ನುಸುಳುಕೋರರನ್ನು ಹೊರಗಟ್ಟುತ್ತೇವೆ ಎಂದು ಮೋದಿಯ ಬಿಜೆಪಿ ಸರಕಾರ ಅಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿ ಮಾಡಿ ಅದರಿಂದಾಗಿ ಸುಮಾರು ಹತ್ತೊಂಬತ್ತು ಲಕ್ಷಕ್ಕೂ ಹೆಚ್ಚಿನ ಜನರು ಇಂಡಿಯಾದ ಪೌರತ್ವವನ್ನೇ ಕಳೆದುಕೊಂಡ ವಿಚಾರ ಈಗ ಬಹುತೇಕ ಜನರಿಗೆ ಗೊತ್ತಿರುವಂತಹುದೇ ಆಗಿದೆ. ಅದರಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ಮುಸ್ಲಿಮೇತರ ಸಮುದಾಯಗಳು, ಆರು ಲಕ್ಷಕ್ಕೂ ಹೆಚ್ಚು ಜನರು ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದವರು ಎನ್ನುವುದೂ ಕೂಡ ಸಾಕಷ್ಟು ಜನರಿಗೆ ಗೊತ್ತಿರುವ ವಿಚಾರ. ಮೋದಿಯ ಬಿಜೆಪಿ ಸರಕಾರ ಮುಸ್ಲಿಮರನ್ನು ಗುರಿಯಾಗಿಟ್ಟುಕೊಂಡು ನಡೆಸಿದ ಈ ಕೋಮುವಿಷಕಾರಿ ಪ್ರಯೋಗ ಇಂತಹ ತಿರುವು ಪಡೆದಾಗ ಅದನ್ನು ಸರಿಪಡಿಸುವ ನೆಪದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ 2019 (ಸಿಎಎ 2019 )ಅನ್ನು ಜಾರಿಗೆ ತರಲಾಯಿತು. ಅದರ ಪ್ರಕಾರ ಎನ್‌ಆರ್‌ಸಿಯ ಮೂಲಕ ಪೌರತ್ವ ಕಳೆದುಕೊಂಡ ಮುಸ್ಲಿಮೇತರ ಜನರಿಗೆ, ಅದರಲ್ಲೂ ಕೇವಲ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಿಗೆ ಸೇರಿರುವ ಹಿಂದೂ, ಫಾರ್ಸಿ, ಸಿಖ್, ಜೈನ, ಕ್ರಿಶ್ಚಿಯನ್ ಧರ್ಮಗಳಿಗೆ ಸೇರಿರುವ, ಧಾರ್ಮಿಕ ಕಿರುಕುಳಗಳಿಗೆ ಒಳಗಾದ ಜನರಿಗೆ ಇಂಡಿಯಾದ ಪೌರತ್ವವನ್ನು ನೀಡುವ ಸಲುವಾಗಿ ಜಾರಿಗೆ ತರಲಾಗಿದೆ ಎಂದು ಹೇಳಲಾಯಿತು. ಆದರೆ ತಾವು ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಇಂಡಿಯಾಕ್ಕೆ ಬಂದಿರುವ ಇಂತಿಂತಹ ರಾಷ್ಟ್ರಗಳಿಗೆ ಸೇರಿದ ಜನರು ಎಂದು ಸಾಬೀತು ಪಡಿಸಬೇಕಾದ ಜವಾಬ್ದಾರಿ ಆಯಾ ಜನರದೇ ಆಗಿರುತ್ತದೆ. ಆದರೆ ಅದರಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಮರನ್ನು ಹೊರಗಿಟ್ಟಂತೆ ಕಂಡರೂ ಅದು ವಾಸ್ತವದಲ್ಲಿ ಬಹುಸಂಖ್ಯಾತ ಜನಸಾಮಾನ್ಯರನ್ನು ಪೌರತ್ವದಿಂದ ಹೊರಗಿಟ್ಟು, ಕಿರುಕುಳ ಕೊಡುವ, ಭಯಾಂದೋಳನಕ್ಕೆ ದೂಡುವ ಸ್ಪಷ್ಟ ಉದ್ದೇಶಗಳನ್ನು ಹೊಂದಿರುವಂತಹವು. ಜೊತೆಗೆ ನಿರ್ದಿಷ್ಟವಾಗಿ ಇಂತಿಂತಹ ಧರ್ಮದವರಿಗೆ ಮಾತ್ರ ಎಂದು ಹೇಳುವ ಮೂಲಕ ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ಪರಂಪರೆ ಆರಂಭಿಸಲು ಕಾನೂನಾತ್ಮಕ ಮಾನ್ಯತೆ ಒದಗಿಸಿಕೊಳ್ಳುವ ಕಾರ್ಯವಾಗಿತ್ತು.
ಧಾರ್ಮಿಕತೆಯ ಆಧಾರದಲ್ಲಿ ಪೌರತ್ವ ನೀಡುವ ಕಾನೂನು ಮುಸ್ಲಿಮ್ ರಾಷ್ಟ್ರಗಳೆಂದು ಘೋಷಿಸಿಕೊಂಡಿರುವ ಪಾಕಿಸ್ತಾನ, ಬಾಂಗ್ಲಾದೇಶದಂತಹ ರಾಷ್ಟ್ರಗಳಲ್ಲೂ ಕೂಡ ಇಲ್ಲ. ಪಾಕಿಸ್ತಾನದ ಒಟ್ಟು ಜನಸಂಖ್ಯೆಯಲ್ಲಿ ಶೇ. 1.85ರಷ್ಟು ಹಿಂದೂಗಳು, ಶೇ. 1.59ರಷ್ಟು ಕ್ರಿಶ್ಚಿಯನ್ನರು ಇದ್ದಾರೆ. ಅವರನ್ನೆಲ್ಲಾ ಅಲ್ಲಿನ ಪೌರರೆಂದೇ ಕಾನೂನಾತ್ಮಕವಾಗಿ ಪರಿಗಣಿಸಲಾಗಿದೆ. ಅದೇ ರೀತಿ ಬಾಂಗ್ಲಾ ದೇಶದಲ್ಲಿ ಶೇ. 8.54ರಷ್ಟು ಹಿಂದೂಗಳು, ಶೇ. 0.63ರಷ್ಟು ಬೌದ್ಧರು, ಶೇ.0.37ರಷ್ಟು ಕ್ರಿಶ್ಚಿಯನ್ನರು ಅಲ್ಲಿನ ಪೌರರಾಗಿದ್ದಾರೆ. ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಸಂವಿಧಾನಗಳು ಅಲ್ಲಿರುವ ಎಲ್ಲಾ ಧರ್ಮದವರಿಗೂ ಸಮಾನ ಅವಕಾಶವನ್ನು ಖಾತರಿ ಪಡಿಸುತ್ತದೆ.
ಇದರ ಅರ್ಥ ಇಂಡಿಯಾದಂತೆ ಬಹುಸಂಖ್ಯಾತ ಧರ್ಮದ ಹೆಸರಿನಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲೆ ಕೋಮುವಾದಿ ಹಿಂಸೆಗಳು, ಕಿರುಕುಳಗಳು ಇಲ್ಲವೆಂದಲ್ಲ. ಇಲ್ಲಿನ ಆಳುವ ಶಕ್ತಿಗಳು ಹೇಗೆಲ್ಲಾ ಧರ್ಮ ಜಾತಿಗಳನ್ನು ಬಳಸಿಕೊಂಡು ಒಡೆದಾಳುವ, ಲೂಟಿ ಮಾಡುವ ಕಾರ್ಯಗಳನ್ನು ಮಾಡುವಂತೆ ಆ ರಾಷ್ಟ್ರಗಳ ಆಳುವ ಶಕ್ತಿಗಳೂ ಅವುಗಳನ್ನೆಲ್ಲಾ ಬಳಸುತ್ತವೆ. ಆದರೆ ಧಾರ್ಮಿಕ ಆಧಾರವಾಗಿ ಪೌರತ್ವ ನೀಡುವ ಕ್ರಮ ಆ ರಾಷ್ಟ್ರಗಳಲ್ಲೂ ಇಲ್ಲ. ಬದಲಿಗೆ ಆಯಾ ರಾಷ್ಟ್ರಗಳ ಗಡಿಯೊಳಗೆ ಜೀವಿಸುತ್ತಿರುವವರನ್ನು, ಹುಟ್ಟಿರುವವರನ್ನು ಆಯಾ ರಾಷ್ಟ್ರಗಳ ಪೌರರು ಎಂದೇ ಗುರುತಿಸಲಾಗುತ್ತದೆ. ಇನ್ನು ವಿದೇಶಿಯರನ್ನು ಮದುವೆಯಾಗುವವರಿಗೆ, ಅವರಿಗೆ ಹುಟ್ಟುವ ಮಕ್ಕಳ ಪೌರತ್ವವನ್ನೂ ಕೂಡ ಧರ್ಮದ ಆಧಾರದಲ್ಲಿ ಅಲ್ಲೂ ಕೂಡ ನಿರ್ಧರಿಸಲಾಗುತ್ತಿಲ್ಲ ಎನ್ನುವುದನ್ನು ಗುರುತಿಸಲಷ್ಟೇ ಈ ವಿಚಾರವನ್ನು ಹೇಳಬೇಕಾಯಿತು. ಒಟ್ಟಿನಲ್ಲಿ ಹೇಳುವುದಾದರೆ ಧರ್ಮದ ಆಧಾರದಲ್ಲಿ ಪೌರತ್ವವನ್ನು ನಿರ್ಧರಿಸುವ ನಿಯಮಗಳು ಜಾಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಜಾರಿಯಲ್ಲಿ ಇಲ್ಲ. ವಾಸ ಹಾಗೂ ಹುಟ್ಟುವಿಕೆಗಳನ್ನು ಆಧರಿಸಿಯೇ ಪ್ರಧಾನವಾಗಿ ಪೌರತ್ವವನ್ನು ನೀಡಲಾಗುತ್ತದೆ. ಮ್ಯಾನ್ಮಾರ್, ಶ್ರೀಲಂಕಾ, ಭೂತಾನ್, ನೇಪಾಳ ಮೊದಲಾದ ರಾಷ್ಟ್ರಗಳ ಬೌದ್ಧ, ಹಿಂದೂ ನಿರಾಶ್ರಿತರ ಬಗ್ಗೆ ಮೋದಿ ಸರಕಾರ ಜಾರಿಗೊಳಿಸಿರುವ ಸಿಎಎ 2019ರಲ್ಲಿ ಉಲ್ಲೇಖವೇ ಇಲ್ಲ. ಇದೂ ಕೂಡ ಉದ್ದೇಶಪೂರ್ವಕವೇ ಆಗಿದೆ.
ಇಲ್ಲಿ ಮುಸ್ಲಿಮರನ್ನು ಉದ್ದೇಶಪೂರ್ವಕವಾಗಿ ಹೊರಗಿಟ್ಟು ಪೌರತ್ವ ನೀಡುವ ರೀತಿ ತೋರಿಸುತ್ತಾ ಹಿಂದೂ ಸಮುದಾಯವೆಂದು ಹೇಳಿಕೊಳ್ಳುವವರ, ಕ್ರೈಸ್ತ, ಬೌದ್ಧ, ಜೈನ, ಸೇರಿದಂತೆ ಇಂಡಿಯಾದ ಎಲ್ಲಾ ಜನಸಾಮಾನ್ಯರ ಪೌರತ್ವವನ್ನೇ ಪ್ರಶ್ನೆಗೆ ಒಡ್ಡಿ ಅವರನ್ನೆಲ್ಲಾ ಆತಂಕದಡಿ ಇರಿಸುವ ಮಹಾ ಕುತಂತ್ರವೂ ಇದರ ಹಿಂದೆ ಅಡಗಿದೆ. ಯಾಕೆಂದರೆ ಎನ್‌ಆರ್‌ಸಿಯ ಮೂಲಕ ಅಸ್ಸಾಮಿನಲ್ಲಿ ಮಾಡಿರುವ ಸಾಮಾಜಿಕ ಕ್ಷೋಭೆ ಒಂದೆರಡೇನಲ್ಲ. ಮಾಜಿ ರಾಷ್ಟ್ರಪತಿಗಳ ಕುಟಂಬ, ಸಿ ಆರ್‌ಪಿಎಫ್‌ನ ಮಾಜಿ ಅಧಿಕಾರಿ, ಮಾಜಿ ಸರಕಾರಿ ನೌಕರರು, ಬುಡಕಟ್ಟು ಜನಾಂಗಕ್ಕೆ ಸೇರಿದ ಹಾಲಿ ಶಾಸಕ ಕೂಡ ಇಂಡಿಯಾದ ಪೌರರಲ್ಲ ಎಂದು ಅಲ್ಲಿನ ಎನ್‌ಆರ್‌ಸಿ ದಾಖಲಿಸಿಬಿಟ್ಟಿತ್ತು. ಪೌರತ್ವ ಸಾಬೀತುಪಡಿಸುವ ಕಾಗದ ಪತ್ರಗಳನ್ನು, ತಮ್ಮ ಪೂರ್ವಜರ ವಾಸಸ್ಥಳಗಳ, ಹುಟ್ಟು ಸಾವಿನ, ದಾಖಲೆಗಳನ್ನು ಒದಗಿಸಬೇಕಾದ ಹೊಣೆಗಾರಿಕೆಯನ್ನು ಜನಸಾಮಾನ್ಯರ ಮೇಲೆ ಹೇರಲಾಗಿದೆ. ಅಂತಹ ದಾಖಲೆಗಳನ್ನು ಒದಗಿಸುವುದು ನಮ್ಮ ದೇಶದ ಬಹುಸಂಖ್ಯಾತ ಜನರಿಗೆ ಅಸಾಧ್ಯವಾದ ವಿಚಾರ. ತಲೆತಲಾಂತರಗಳಿಂದ ಇಂಡಿಯಾದ ಭೂಭಾಗವೆಂದು ಪರಿಗಣಿಸಿರುವ ಜಾಗಗಳಲ್ಲೇ ವಾಸ ಮಾಡುತ್ತಾ ಬಂದಿದ್ದರೂ ಬಹುಸಂಖ್ಯಾತ ಜನರಿಗೆ ಯಾವುದೇ ಕಾಗದ ಪತ್ರಗಳು ಇಲ್ಲ. ಇರುವವರ ಕಾಗದಪತ್ರಗಳೂ ಕೂಡ ಅಕ್ಷರ ದೋಷ, ಹೆಸರಿನ ವ್ಯತ್ಯಾಸ, ದಿನಾಂಕ ವ್ಯತ್ಯಾಸ ಹೀಗೆ ಹಲವಾರು ಲೋಪಗಳಿಂದ ಕೂಡಿದವುಗಳೇ ಹೆಚ್ಚಿನವು.
ತಾವು ವಾಸ ಮಾಡುತ್ತಾ ಬಂದಿರುವ, ಕೃಷಿ ಮಾಡುತ್ತಾ ಬಂದಿರುವ ತುಂಡುಭೂಮಿಗಳಿಗೆ ದಾಖಲೆ ಪತ್ರಗಳಿಗಾಗಿ ಕೋಟ್ಯಂತರ ಜನಸಾಮಾನ್ಯರು ಹಕ್ಕೊತ್ತಾಯಗಳನ್ನು ಮಂಡಿಸುತ್ತಾ ಬರುತ್ತಿದ್ದರೂ ಇದುವರೆಗೂ ಅವುಗಳನ್ನು ಒದಗಿಸಿಕೊಡುವ ಕಾರ್ಯವನ್ನು ಆಳುತ್ತಾ ಬಂದ ಸರಕಾರಗಳು ಮಾಡಲೇ ಇಲ್ಲ. ಇದು ಇಂಡಿಯಾದ ದಲಿತ, ಆದಿವಾಸಿ, ದಮನಿತ, ಬಡವ ಜನಸಾಮಾನ್ಯರ ಪರಿಸ್ಥಿತಿ. ಅಸ್ಸಾಮಿನಲ್ಲಿ ಸಾವಿರಾರು ಮಹಿಳೆಯರು, ಮುಸ್ಲಿಮ್ ಅಲ್ಪಸಂಖ್ಯಾತರು ಈಗಲೂ ತಮ್ಮ ಪೌರತ್ವ ಸಾಬೀತು ಪಡಿಸಲಾಗದೇ ಡಿಟೆನ್ಷನ್ ಸೆಂಟರ್ ಎಂಬ ಬಂದಿಖಾನೆಗಳಲ್ಲಿ ಕೊಳೆಯುತ್ತಿದ್ದಾರೆ. ಅದರಲ್ಲಿ ಮುಸ್ಲಿಮರೇ ಹೆಚ್ಚಿನವರಾಗಿರುವುದು ಸರಕಾರದ ಕೋಮುವಾದಿ ಕಾರ್ಯ ಸೂಚಿಯ ಸ್ಪಷ್ಟ ಲಕ್ಷಣವಾಗಿದೆ. ಯಾಕೆಂದರೆ ಪೌರತ್ವ ಸಾಬೀತು ಪಡಿಸಲು ವಿಫಲರಾದವರು ಎಂದು ಪರಿಗಣಿಸಿದವರಲ್ಲಿ ಮುಸ್ಲಿಮೇತರರದೇ ದೊಡ್ಡ ಸಂಖ್ಯೆಯಾಗಿದೆ. ಆದರೆ ಡಿಟೆನ್ಷನ್ ಸೆಂಟರ್‌ಗಳಲ್ಲಿ ಮಾತ್ರ ಮುಸ್ಲಿಮರ ಸಂಖ್ಯೆಯೇ ಹೆಚ್ಚಿನದಾಗಿದೆ. ಈ ಎಲ್ಲಾ ಕ್ರೌರ್ಯ ತಾಳಲಾಗದೇ ಹಲವರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಎಎ 2019 ಕಾಯ್ದೆಯಾಗಿ ಕೇಂದ್ರ ಸರಕಾರ ಅಂಗೀಕರಿಸಿದಂದಿನಿಂದ ದೇಶಾದ್ಯಂತ ಭಾರೀ ಹೋರಾಟಗಳು ಭುಗಿಲೆದ್ದಿದ್ದು ಇನ್ನೂ ನಿಂತಿಲ್ಲ. ಸರಕಾರ ಲಾಠಿ ಪ್ರಹಾರ, ಕೇಸು, ಬಂಧನ, ಗುಂಡೇಟು, ಕಗ್ಗೊಲೆಗಳನ್ನು ನಡೆಸಿ ದಮನಿಸಲು ಹಲವಾರು ರೀತಿಯಲ್ಲಿ ಪ್ರಯತ್ನಿಸಿದರೂ ಹೋರಾಟ ಹೆಚ್ಚುತ್ತಾ ಹೋಗುತ್ತಿದೆ.
ಜನರಿಗಿರುವ ಸರಕಾರದ ಮೇಲಿನ ಸಿಟ್ಟು ದಾಖಲಾಗುತ್ತಿರುವ ಪರಿ ನೋಡಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ತಾವು ಹಿಂದಿನಿಂದಲೂ ಹೇಳಿಕೊಂಡು ಬಂದ ಪ್ರತಿಪಾದನೆಗಳನ್ನು ಅಲ್ಲಗೆಳೆದು ದೇಶಾದ್ಯಂತ ಎನ್‌ಆರ್‌ಸಿ ಜಾರಿ ಮಾಡುವ ಪ್ರಸ್ತಾವ ತಮ್ಮ ಸರಕಾರದ ಬಳಿ ಇಲ್ಲ ಎಂದೆಲ್ಲಾ ಹೇಳತೊಡಗಿದ್ದಾರೆ. ಲೋಕಸಭೆಯಲ್ಲಿ, ಬಹಿರಂಗ ಸಭೆಗಳಲ್ಲಿ, ತಾವು ಆಡುತ್ತಾ ಬಂದ ಪ್ರತಿಪಾದನೆಗಳ ಬಗ್ಗೆ ಜಾಣ ಮರೆವು ತೋರಿಸಲು ಯತ್ನಿಸುತ್ತಿದ್ದಾರೆ. ಇದೇ 22ರಂದು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ವಿಧಾನ ಸಭೆಯ ಚುನಾವಣಾ ಪ್ರಚಾರದ ಭಾಗವಾಗಿ ನಡೆಸಿದ ಬಹಿರಂಗಸಭೆಯನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ತಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಮಾಡುವ ಬಗ್ಗೆ ಪ್ರಸ್ತಾವವನ್ನಾಗಲೀ, ಚರ್ಚೆಯನ್ನಾಗಲೀ ಯಾವತ್ತೂ ಮಾಡೇ ಇಲ್ಲವೆಂದು ಭಾವಾವೇಶ ಬಳಸಿ ಭಾರೀ ಸುಳ್ಳನ್ನು ಹೇಳಿದ್ದರು. ಸುಳ್ಳುಗಳ ಮುಂದುವರಿಕೆಯಾಗಿ ‘‘ಯಾರೂ ಪೌರತ್ವ ಹೋಗುತ್ತದೆ ಎಂದು ಹೆದರಲೇ ಬೇಕಾಗಿಲ್ಲ.
ಯಾರ ಪೌರತ್ವವನ್ನೂ ಕಿತ್ತುಕೊಳ್ಳಲು ಕಾಯ್ದೆ ಮಾಡಿಲ್ಲ. ಪೌರತ್ವ ಕೊಡುವುದಕ್ಕಾಗಿ ಮಾತ್ರ ಕಾಯ್ದೆ ಮಾಡಿದ್ದು. ಅವೆಲ್ಲಾ ನಗರ ನಕ್ಸಲರು! ಹಾಗೂ ಕಾಂಗ್ರೆಸ್ ಮೊದಲಾದ ವಿರೋಧ ಪಕ್ಷಗಳ ಅಪಪ್ರಚಾರವಾಗಿದೆ. ಇವರೆಲ್ಲಾ ಸೇರಿಕೊಂಡು ದೇಶದ ಜನರನ್ನು ದಾರಿ ತಪ್ಪಿಸಿ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳಲು ನೋಡುತ್ತಿದ್ದಾರೆ. ದೇಶದ ಅಭಿವೃದ್ಧಿಯನ್ನು ತಡೆಯಲು ಹೊರಟಿದ್ದಾರೆ. ನಮ್ಮ ಸರಕಾರದ ವಿರುದ್ಧದ ಅಂತಹ ಮಾತುಗಳನ್ನು ಯಾರೂ ನಂಬಬೇಡಿ’’ ಎಂದೆಲ್ಲಾ ಹೇಳುತ್ತಾ ‘‘ನನ್ನನ್ನು ಬೇಕಾದರೆ ಬೈಯಿರಿ, ನನಗೆ ಬೇಕಾದರೆ ಶಿಕ್ಷೆ ನೀಡಿ.. ಆದರೆ ದೇಶದ ಹಿತಾಸಕ್ತಿಗೆ ಧಕ್ಕೆ ಮಾಡಬೇಡಿ’’ ಎಂದೆಲ್ಲಾ ಹೇಳಿ ಭಾವನಾತ್ಮಕ ಬ್ಲಾಕ್ ಮೇಲ್ ತಂತ್ರ ಬಳಸಿದರು. ಸುಮಾರು ಒಂದೂವರೆ ಗಂಟೆಗಳ ಅವರ ಭಾಷಣದುದ್ದಕ್ಕೂ ಹಸಿ ಸುಳ್ಳುಗಳನ್ನೇ ಹೇಳುತ್ತಾ ಮುಕ್ತಾಯಗೊಳಿಸಿದರು. ಅವರು ನೋಟು ರದ್ದತಿಯನ್ನು ಜಾರಿಗೊಳಿಸುವಾಗ ಇದೇ ತಂತ್ರವನ್ನು ಬಳಸಿ ದೇಶದ ಜನರನ್ನು ಯಾಮಾರಿಸಿದ್ದನ್ನು ಬಹಳಷ್ಟು ಜನ ಮರೆತಿರಲಾರರು.
ಆದರೆ ಅವರು ಈ ಭಾಷಣ ಮಾಡಿದ ಎರಡು ದಿನಗಳಲ್ಲಿಯೇ ಅವರ ಸಚಿವ ಸಂಪುಟದ ತೀರ್ಮಾನವೊಂದು ಹೊರಬಿತ್ತು. ಅದು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಚಾಲನೆಗೊಳಿಸುವ ನಿರ್ಣಯವಾಗಿತ್ತು. 2020ರ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಕಾರ್ಯ ಆರಂಭಿಸುವ ತೀರ್ಮಾನವಾಗಿತ್ತು. ಎನ್‌ಪಿಆರ್‌ಗೂ ಎನ್‌ಆರ್‌ಸಿಗೂ ಸಂಬಂಧವಿಲ್ಲವೆಂದೂ ಹೇಳಲಾಯಿತು. ಆದರೆ ಅಮಿತ್ ಶಾ ಮೊದಲು ಎನ್‌ಪಿಆರ್ ಜಾರಿಗೊಳಿಸಿ ನಂತರ ಎನ್‌ಆರ್‌ಸಿ ದೇಶಾದ್ಯಂತ ಜಾರಿಗೊಳಿಸಲಾಗುತ್ತದೆ ಎಂದು ಹೇಳುತ್ತಾ ಬಂದಿರುವ ಹಲವು ದಾಖಲೆಗಳಿವೆ. ಸಾಮಾಜಿಕ ಜಾಲತಾಣಗಳಲ್ಲೂ ಅವರ ಮಾತುಗಳು ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿವೆ. ಬಿಜೆಪಿಯ ಅಂತರ್ಜಾಲ ತಾಣದಲ್ಲೂ ಈ ವಿಚಾರ ಸ್ಪಷ್ಟವಾಗಿ ಹೇಳಲಾಗಿದೆ. ಅಲ್ಲದೆ ಹಿಂದೆ ಬಿಜೆಪಿಯ ಅಟಲ್ ಬಿಹಾರಿ ವಾಜಪೇಯಿ ಸರಕಾರ ಜಾರಿ ಮಾಡಿದ ‘ಸಿಎಎ 2003’ರಲ್ಲೂ ಈ ವಿಚಾರವನ್ನು ಹೇಳಲಾಗಿದೆ. ಅದನ್ನು ಅನುಸರಿಸಿಯೇ ಈಗಿನ ಸಿಎಎ 2019, ಹಾಗೂ ಎನ್‌ಪಿಆರ್, ಎನ್‌ಆರ್‌ಸಿಯನ್ನು ರೂಪೀಕರಿಸಲಾಗಿದೆ. ಇವೆಲ್ಲವೂ ಪರಸ್ಪರ ಬೆಸೆದಿರುವ ಯೋಜನೆಗಳಾಗಿವೆ. ಹಾಗಿದ್ದೂ ಜನರನ್ನು ಯಾಮಾರಿಸಲು ಸಿಎಎ, ಎನ್‌ಪಿಆರ್, ಎನ್ ಆರ್‌ಸಿಗಳಿಗೆ ಪರಸ್ಪರ ಸಂಬಂಧವಿಲ್ಲವೆಂದು ಹೇಳುತ್ತಾ ಮತ್ತೆ ಮತ್ತೆ ಯಾಮಾರಿಸಲು ನೋಡುತ್ತಿದ್ದಾರೆ. ಆದರೆ ಇದೇ ಸರಕಾರ ಪ್ರಕಟಿಸಿದ ಗೆಜೆಟ್ ಪ್ರಕಟಣೆ ಹಾಗೂ ಎನ್‌ಪಿಆರ್ ಕೈಪಿಡಿಗಳಲ್ಲಿ ಇವುಗಳ ಪರಸ್ಪರ ನೇರ ಸಂಬಂಧಗಳನ್ನು ಸ್ಪಷ್ಟವಾಗಿ ಗುರುತಿಸಬಹುದು..
ಎನ್‌ಪಿಆರ್ ಮೂಲಕ ಸಂಗ್ರಹಿಸಿದ ವಿವರಗಳನ್ನು ಆಧರಿಸಿಯೇ ಎನ್ ಆರ್‌ಸಿ ಪಟ್ಟಿ ತಯಾರಾಗುತ್ತದೆ. ಅದನ್ನು ಅಧರಿಸಿ ಪೌರತ್ವದ ಗುರುತಿನ ಪತ್ರ ನೀಡುವ ನಿಯಮಾವಳಿಗಳು ಸಿಎಎ 2003ರಲ್ಲಿವೆ. ಇವೆಲ್ಲದರ ಪ್ರಕಾರ ದೇಶದ ಜನರು ನೋಂದಣಿಗೆ ಬರುವವರಿಗೆ ಅವರು ಕೇಳಿದ ಮಾಹಿತಿಗಳನ್ನು ದಾಖಲೆಗಳನ್ನು ನೀಡುವುದರ ಜೊತೆಗೆ ತಮ್ಮ ತಂದೆ ತಾಯಿಗಳ ಹುಟ್ಟು, ಜನನ ಪತ್ರ, ಮರಣ ಪತ್ರ, ಊರು ಇತ್ಯಾದಿ ಮಾಹಿತಿಗಳನ್ನು ನೀಡಬೇಕಾಗುತ್ತದೆ. ಆ ಮಾಹಿತಿಗಳು ಸರಿಯಿಲ್ಲದವರನ್ನು ಎನ್‌ಆರ್‌ಸಿ ತಯಾರಿಯ ಭಾಗವಾಗಿ ಅನುಮಾನಾಸ್ಪದ ಪೌರರ ಪಟ್ಟಿಯಲ್ಲಿ ಸೇರಿಸುವ ಅಪಾಯವಿದೆ. ಅನುಮಾನಾಸ್ಪದ ಪೌರರು ತಮ್ಮ ಪೌರತ್ವವನ್ನು ತಾವೇ ದೃಢೀಕರಿಸಬೇಕಾಗುತ್ತದೆ.
ಹಾಗಾಗಿ ಸಿಎಎ 2003, ಸಿಎಎ 2019, ಎನ್‌ಪಿಆರ್ 2020 ಹಾಗೂ ಎನ್‌ಆರ್‌ಸಿ ಇವೆಲ್ಲವುಗಳನ್ನೂ ತಿರಸ್ಕರಿಸದೇ ಹೋದರೆ ಮುಂದಿನ ದಿನಗಳಲ್ಲಿ ಭಾರೀ ಅಪಾಯ ಕಟ್ಟಿಟ್ಟ ಬುತ್ತಿಯೇ ಸರಿ. ಇದರಿಂದೆಲ್ಲಾ ಮುಂದಿನ ದಿನಗಳಲ್ಲಿ ದೇಶದ ಅಸ್ತಿತ್ವಕ್ಕೇ ಮುಳುವಾಗುವ ಸಾಧ್ಯತೆಗಳಿವೆ.
ಮಿಂಚಂಚೆ: nandakumarnandana67@gmail.com