ಪೌರತ್ವ ಕಾಯ್ದೆ ಕುರಿತು ಶ್ರೀಲಂಕಾ ನಿರಾಶ್ರಿತರ ಸಂದರ್ಶನ: ಪತ್ರಕರ್ತರ ವಿರುದ್ಧ ಪ್ರಕರಣ ದಾಖಲು

Update: 2019-12-31 16:06 GMT
ಸಾಂದರ್ಭಿಕ ಚಿತ್ರ

ಚೆನ್ನೈ, ಡಿ.31: ಶ್ರೀಲಂಕಾದ ನಿರಾಶ್ರಿತರ ಜತೆ ಸಂದರ್ಶನ ನಡೆಸಿ, ಪೌರತ್ವ ಕಾಯ್ದೆ ಹಾಗೂ ಎನ್‌ಆರ್‌ಸಿ ಕುರಿತು ಅವರ ಅನಿಸಿಕೆಯ ವರದಿ ಪ್ರಕಟಿಸಿದ ತಮಿಳುನಾಡಿನ ಇಬ್ಬರು ಪತ್ರಕರ್ತರ ವಿರುದ್ಧ ಜಾಮೀನುರಹಿತ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

‘ವಿಕಟನ್’ ಸಮೂಹದ ವರದಿಗಾರ ಹಾಗೂ ಫೋಟೋ ಜರ್ನಲಿಸ್ಟ್ ವಿರುದ್ಧ ಐಪಿಸಿ ಸೆಕ್ಷನ್ 188(ಸರಕಾರಿ ಅಧಿಕಾರಿಯ ಆದೇಶಕ್ಕೆ ಅವಿಧೇಯತೆ ತೋರಿರುವುದು), ಸೆಕ್ಷನ್ 447(ಅಕ್ರಮ ಪ್ರವೇಶ ಅಪರಾಧ) ಮತ್ತು ಸೆಕ್ಷನ್ 505 1ಬಿ( ಹೆದರಿಕೆ ಹುಟ್ಟಿಸುವ ಉದ್ದೇಶದಿಂದ ಲೇಖನ ಪ್ರಕಟಿಸುವುದು)ರಡಿ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಪತ್ರಕರ್ತರು ನಿರಾಶ್ರಿತರ ಶಿಬಿರ ಪ್ರವೇಶಿಸಿ, ಅಲ್ಲಿದ್ದ ನಿರಾಶ್ರಿತರನ್ನು ವಿದ್ರೋಹ ನಡೆಸಲು ಪ್ರೇರೇಪಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿರುವ ನಾಗರ್‌ಕೋಯಿಲ್ ಪ್ರೆಸ್‌ ಕ್ಲಬ್, ಪತ್ರಕರ್ತರು ವರದಿ ಸಿದ್ಧಪಡಿಸುವ ಉದ್ದೇಶದಿಂದ ತೆರಳಿದ್ದರು. ಬೇರೆ ಯಾವುದೇ ದುರುದ್ದೇಶ ಇರಲಿಲ್ಲ ಎಂದಿದೆ. ಘಟನೆಯನ್ನು ಹಲವು ರಾಜಕೀಯ ಪಕ್ಷಗಳು ಖಂಡಿಸಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದ ಮೇಲೆ ನಡೆದಿರುವ ದಾಳಿ ತೀವ್ರ ಖಂಡನೀಯ ಎಂದು ಡಿಎಂಕೆ ಸಂಸದೆ ಕಣಿಮೋಳಿ ಪ್ರತಿಕ್ರಿಯಿಸಿದ್ದಾರೆ. ಪತ್ರಕರ್ತರ ವಿರುದ್ಧದ ಜಾಮೀನುರಹಿತ ಪ್ರಕರಣ ಹಿಂಪಡೆಯುವಂತೆ ಕಮಲ್ ಹಾಸನ್‌ರವರ ಮಕ್ಕಳ್ ನೀಧಿ ಪಕ್ಷ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News