ಮಾನವನ ಸರ್ವತೋಮುಖ ಅಭಿವೃದ್ಧಿಯಲ್ಲಿ ವಿಜ್ಞಾನದ ಸಿಂಹಪಾಲು

Update: 2020-02-28 07:10 GMT

ಮನುಕುಲದ ಇತಿಹಾಸದಲ್ಲಿ ಕಳೆದ ಒಂದು ಶತಮಾನದಲ್ಲಿ ನಡೆದಷ್ಟು ವೈಜ್ಞಾನಿಕ ಪ್ರಗತಿ ಇನ್ಯಾವ ಕಾಲದಲ್ಲಿಯೂ ನಡೆದಿಲ್ಲ. ವಿಶ್ವೇಶ್ವರಯ್ಯ ಹಾಗೂ ಸಿ.ವಿ. ರಾಮನ್ ಅವರನ್ನು ಮರೆತಿರುವ ಕಾಲವಿದು. ನಮ್ಮ ದೇಶದ ವಿಶ್ವವಿದ್ಯಾನಿಲಯಗಳು ಕಳೆದ ಎಂಬತ್ತು ವರ್ಷಗಳಲ್ಲಿ ಮತ್ತೊಬ್ಬ ಸಿ.ವಿ.ರಾಮನ್, ವಿಶ್ವೇಶ್ವರಯ್ಯರನ್ನು ಕೊಟ್ಟಿಲ್ಲ. ಇದರ ಬಗ್ಗೆ ಕಾರಣ ಹುಡುಕಲು ಹೊರಟರೆ ನಮ್ಮಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಮೂಲ ವಿಜ್ಞಾನ ಅಧ್ಯಯನದಿಂದ ವಿಮುಖರಾಗಿರುವ ಕಠೋರ ಸತ್ಯ ಗೋಚರಿಸುತ್ತದೆ. ಒಂದೆಡೆ ಸಂಪನ್ಮೂಲಗಳ ಕೊರತೆ, ಮತ್ತೊಂದೆಡೆ ಅನ್ವೇಷಕ ಪ್ರವೃತ್ತಿಯ ವಿದ್ಯಾರ್ಥಿಗಳ ಅಭಾವ ಈ ನೆಪಗಳಿಗೂ ಮಿಗಿಲಾಗಿ ಒಂದು ಪ್ರಮುಖ ಕಾರಣವೊಂದಿದೆ ಅದುವೇ ಬದಲಾಗುತ್ತಿರುವ ಆದ್ಯತೆ.

ಜಗತ್ತಿನ ಮೂರನೇ ಅತಿದೊಡ್ಡ ಸಂಖ್ಯೆಯ ವಿಜ್ಞಾನ (ತಂತ್ರಜ್ಞಾನ) ಪದವೀಧರರನ್ನು ಉತ್ಪಾದಿಸುತ್ತಿರುವ ದೇಶ ನಮ್ಮದು. ಸದ್ಯಕ್ಕೆ ಫ್ಯಾಕ್ಟರಿಯಲ್ಲಿ ಹೊರಬರುವ ಉತ್ಪನ್ನಗಳಂತೆ ಇಂಜಿನಿಯರಿಂಗ್ ಪದವೀಧರರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ಆದರೆ ಮೂಲ ವಿಜ್ಞಾನ ವಿಷಯಗಳನ್ನು ಗಂಭೀರವಾಗಿ ಅಭ್ಯಸಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ನಮ್ಮ ದೇಶದ ಪರಮಾಣು ಶಕ್ತಿ ಮತ್ತು ರಕ್ಷಣಾ ಸಂಶೋಧನಾ ಇಲಾಖೆಗಳನ್ನು ಸ್ವಾವಲಂಬನೆಯ ದಾರಿಗೆ ಎಳೆದ ರಾಜಾರಾಮಣ್ಣನವರನ್ನೂ ಇಂದು ನೆನೆಯಬೇಕು.

ವಿಶ್ವವಿಖ್ಯಾತ ವಿಜ್ಞಾನಿ ಸರ್ ಸಿ. ವಿ. ರಾಮನ್ ಬೆಳಕಿನ ಚದುರುವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣಗಳ ಪರಿಣಾಮದ ಬಗ್ಗೆ ಹೊಸ ವಿಷಯವನ್ನು ಪ್ರತಿಪಾದಿಸಿದ ಈ ದಿನ ಮಾನವನ ಏಳ್ಗೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳು ವಹಿಸುತ್ತಿರುವ ಮಹತ್ತರ ಪಾತ್ರವನ್ನು ಗುರುತಿಸಿ, ಆ ವಲಯಕ್ಕೆ ಮತ್ತಷ್ಟು ಬಲತುಂಬುವ, ಸಂಶೋಧನಾ ರಂಗದಿಂದ ವಿಮುಖರಾಗುತ್ತಿರುವ ಪೀಳಿಗೆಯನ್ನು ವಿಜ್ಞಾನಮುಖಿಯಾಗಿಸುವ ಕೆಲಸ ಆಗಬೇಕಿದೆ.

ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ (ಎನ್.ಸಿ.ಎಸ್.ಒ.ಸಿ)ಯ ಕೋರಿಕೆಯ ಮೇರೆಗೆ ಭಾರತ ಸರಕಾರವು ಫೆಬ್ರವರಿ 28ನ್ನು 1987ರಿಂದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಎಂದು ಆಚರಿಸಲು ನಿರ್ದೇಶನ ನೀಡಿದೆ. 2020 ಸಾಲಿನ ಉದ್ಭೋಷಣೆ ‘‘Women in Scienc’’ ‘‘ವಿಜ್ಞಾನದಲ್ಲಿ ಮಹಿಳೆಯರು.

1928ರ ಫೆಬ್ರವರಿ 28 ದೇಶವೇ ಸಂಭ್ರಮಿಸುವ ದಿನ. ವಿಜ್ಞಾನ ಜಗತ್ತಿನಲ್ಲಿ ಭಾರತವನ್ನು ಮೇರು ಶಿಖರಕ್ಕೆ ಕೊಂಡೊಯ್ದ ಸರ್ ಸಿ.ವಿ. ರಾಮನ್ ತಮ್ಮ ಮಹತ್ತರ ಸಂಶೋಧನೆಯನ್ನು ಪ್ರಸ್ತುತ ಪಡಿಸಿದ ದಿನವಿದು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಕ್ರಿ.ಶ. 1928ರ ಫೆಬ್ರವರಿ 2 ರಂದು ಸಿ.ವಿ.ರಾಮನ್ ಅವರು ಬೆಳಕಿನ ಚದುರುವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷಣಗಳ ಪರಿಣಾಮದ ಬಗ್ಗೆ ಹೊಸ ವಿಷಯವನ್ನು ಪ್ರತಿಪಾದಿಸಿದರು. ಎರಡು ವರ್ಷಗಳ ನಂತರ ಈ ಆವಿಷ್ಕಾರಕ್ಕಾಗಿ ರಾಮನ್ ಅವರಿಗೆ ನೊಬೆಲ್ ಪುರಸ್ಕಾರ ದೊರಕಿತು. ಮುಂದಿನ ದಿನಗಳಲ್ಲಿ ಅದು ‘ರಾಮನ್ ಪರಿಣಾಮ’ವೆಂದು ಪ್ರಸಿದ್ಧವಾಯಿತು. 1987ರಿಂದಲೂ ದೇಶದಾದ್ಯಂತ ಫೆಬ್ರವರಿ 28 ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಗುತ್ತದೆ.

 ಸಿ.ವಿ. ರಾಮನ್‌ರವರ ತಂದೆಯ ಹೆಸರು ಚಂದ್ರಶೇಖರ ಅಯ್ಯರ ತಾಯಿ ಪಾರ್ವತಿ ಅಮ್ಮಾಳ್ ಇವರ ಮಗನಾಗಿ ರಾಮನ್‌ರವರು 7 ನವೆಂಬರ್ 1888ರಲ್ಲಿ ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಜನಿಸಿದರು. 1904ರಲ್ಲಿ ಬಿ.ಎ. ಪದವಿಯನ್ನು ಇಂಗ್ಲಿಷ್ ಹಾಗೂ ಭೌತಶಾಸ್ತ್ರದಲ್ಲಿ ಅಧ್ಯಯನ ಮಾಡಿ ಚಿನ್ನದ ಪದಕವನ್ನು ಪಡೆದರು. ತದನಂತರ 1907ರಲ್ಲಿ ಭೌತಶಾಸ್ತ್ರ ವಿಷಯದಲ್ಲಿ ಎಂ.ಎ. ಪದವಿಯನ್ನು ಪಡೆದರು. ಮದ್ರಾಸ್ ಸರಕಾರವು ನಡೆಸಿದ ಅಖಿಲ ಭಾರತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಿ.ವಿ. ರಾಮನ್‌ರು ಪ್ರಥಮ ಸ್ಥಾನವನ್ನು ಪಡೆದರು. 1907ರಲ್ಲಿ ಕೋಲ್ಕತಾದಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಜನರಲ್ ಆಗಿ ಸೇವೆಗೆ ಸೇರಿದರು. 1917ರಲ್ಲಿ ಕೋಲ್ಕತಾ ವಿಶ್ವವಿದ್ಯಾನಿಲಯದ ಭೌತಶಾಸ್ತ್ರದ ಪ್ರಾಧ್ಯಾಪಕರಾದರು. 1930ರಲ್ಲಿ ‘ರಾಮನ್ ಪರಿಣಾಮ’ಕ್ಕೆ ನೊಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಮನ್‌ರು 1931ರಲ್ಲಿ ಬೆಂಗಳೂರಿನಲ್ಲಿರುವ ಟಾಟಾ ವಿಜ್ಞಾನ ಸಂಸ್ಥೆಯ ಅಧ್ಯಕ್ಷರಾಗಿ ನೇಮಕಗೊಂಡರು. 1934 ಎಪ್ರಿಲ್‌ನಲ್ಲಿ ಇಂಡಿಯನ್ ಅಕಾಡಮಿ ಆಫ್ ಸೈನ್ಸ್‌ನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದರು. 1941ರಲ್ಲಿ ಅಮೆರಿಕದ ಅತ್ಯುನ್ನತ ಫ್ರಾಂಕ್ಲಿನ್ ಪದಕ ಪಡೆದರು. 1948ರಲ್ಲಿ ಪ್ರಾಧ್ಯಾಪಕ ವೃತ್ತಿಯಿಂದ ನಿವೃತ್ತರಾದರು. 1948ರಲ್ಲಿ ತಮ್ಮ ಸ್ವಂತ ಸಂಶೋಧಾನಾಲಯ ರಾಮನ್ ಸಂಶೋಧನಾ ಸಂಸ್ಥೆ ಆರಂಭಿಸಿದರು. 1954ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದರು. ತಮ್ಮ ಜೀವನವನ್ನು ಪೂರ್ತಿಯಾಗಿ ವಿಜ್ಞಾನಕ್ಕೆ ಮುಡಿಪಾಗಿಟ್ಟ ರಾಮನ್‌ರು ನವೆಂಬರ್ 21, 1970ರಂದು ನಿಧನರಾದರು.

1921ರಲ್ಲಿ ಅವರು ಭಾರತದಿಂದ ಲಂಡನ್‌ನತ್ತ ಕೈಗೊಂಡ ಮೊದಲ ಪಯಣದಲ್ಲಿ ಮೆಡಿಟರೇನಿಯನ್ ಸಮುದ್ರದ ನೀರಿನ ಪಾರದರ್ಶಕವಲ್ಲದ ನೀಲ ವರ್ಣವು ಬೆರಗು ಹುಟ್ಟಿಸಿತು. ನಂತರ ಇವರು ಯುರೋಪ್ ಪ್ರವಾಸ ಕೈಗೊಂಡರು. ಯುರೋಪ್ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ಹಿಮರಾಶಿಯ ಬಣ್ಣ ನೀಲಿ, ಹಸಿರು, ಆದರೆ ಒಂದು ಹಿಡಿ ಹಿಮವನ್ನು ಕೈಯಲ್ಲಿ ತೆಗೆದುಕೊಂಡು ಗಮನಿಸಿದ್ದರೆ ಪಾರದರ್ಶಕವಾಗಿ ಕಾಣುತ್ತದೆ. ಇದು ಸಮುದ್ರ ನೀರಿಗೂ ಅನ್ವಯಿಸುತ್ತದೆ. ಹಿಮರಾಶಿ ಅಥವಾ ಸಮುದ್ರ ನೀರಿನ ಬಣ್ಣ ಎಲ್ಲರ ದೃಷ್ಟಿಯಲ್ಲಿ ಅದೇ ಸಹಜವೆನಿಸಿದ್ದರೆ, ರಾಮನ್‌ರಿಗೆ ಕುತೂಹಲಕಾರಿ ಸಂಗತಿಯಾಗಿತ್ತು.

 ವಾಯುಮಂಡಲದಲ್ಲಿ, ದ್ರವರೂಪ ವಸ್ತುಗಳಲ್ಲಿ ಬೆಳಕು ಚದುರುವ ಬಗ್ಗೆ ಸಾಗರದ ನೀರಿನಲ್ಲಿ ತೋರುವ ವರ್ಣವೈವಿಧ್ಯವನ್ನು ಕುರಿತು ‘Molecular Diffraction of Light’ ಎಂಬ ಪ್ರಬಂಧ ಬರೆದರು. ಭಾರತಕ್ಕೆ ಹಿಂದಿರುಗುವಾಗ ಮೆಡಿಟರೇನಿಯನ್ ಸಾಗರವನ್ನು ದಾಟುವಾಗ ಸೂರ್ಯನ ಬಿಸಿಲಿನಲ್ಲಿ ಅದು ಕ್ಷಣಕ್ಕೊಂದು ಬಣ್ಣ ತಾಳುತ್ತಿತ್ತು. ಬೆಳಕು ನೀರನ್ನು ಹೊಕ್ಕು ಚದುರಿದ್ದ ಕಾರಣ ವರ್ಣ ವೈವಿಧ್ಯ ಉಂಟಾಯಿತು. ಈ ವಿಷಯವನ್ನು ಚಿಂತಿಸಿ ‘The colour of the Sea’ ಎನ್ನುವ ಪ್ರಬಂಧವನ್ನು ಬರೆದರು.

ರಾಮನ್ ಪರಿಣಾಮ (Raman Effect ), ಏಕ ವರ್ಣೀಯ (ತರಂಗಾಂತರ) ಬೆಳಕನ್ನು ಪಾರದರ್ಶಕ ಮಾಧ್ಯಮದ ಮೂಲಕ ಹಾಯಿಸಿದಾಗ ಅದರಲ್ಲಿ ಕೆಲವಂಶ ಚದುರುತ್ತದೆ. ಈ ಬೆಳಕನ್ನು ರೋಹಿತ ದರ್ಶಕ (Spectrometer)ದ ಮೂಲಕ ಪರೀಕ್ಷಿಸಿದಾಗ ಮೂಲ ಬೆಳಕಿನ ಅಲೆಯೊಂದಿಗೆ ಅದಕ್ಕಿಂತ ಕಡಿಮೆ ಮತ್ತು ಹೆಚ್ಚಿನ ತರಂಗಾಂತರವುಳ್ಳ ಬೆಳಕಿನ ಅಲೆಗಳು ಕಂಡುಬರುತ್ತವೆ. ಇದಕ್ಕೆ ಕಾರಣವೆಂದರೆ ಬೆಳಕು ಮಾಧ್ಯಮದಲ್ಲಿನ ಅಣುಗಳೊಂದಿಗೆ ವರ್ತಿಸಿ ತನ್ನಲ್ಲಿನ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಅಥವಾ ಅವುಗಳಿಂದ ಶಕ್ತಿಯನ್ನು ಪಡೆಯುತ್ತದೆ. ಈ ಪರಿಣಾಮಕ್ಕೆ ‘ರಾಮನ್ ಪರಿಣಾಮ’ ಎನ್ನುವರು.

ಈ ಅನ್ವೇಷಣೆಯ ಮಹತ್ವವೆಂದರೆ ಇದನ್ನು ರಾಸಾಯನಿಕ ಸಂಯುಕ್ತಗಳ ಅಣು ರಚನೆ ಮತ್ತು ವಿನ್ಯಾಸವನ್ನು ತಿಳಿಯಲು ಬಳಸಿಕೊಳ್ಳಬಹುದು. ರಾಮನ್‌ರ ಈ ಅನ್ವೇಷಣೆಯಿಂದ 25,000 ರಾಸಾಯನಿಕ ಸಂಯುಕ್ತಗಳ ರಚನೆಯನ್ನು ತಿಳಿಯಲಾಯಿತು. ಈ ಹೊಸ ಯಂತ್ರ ಸ್ಪೆಕ್ಟೋಮೀಟರ್‌ನಿಂದ ಪೆಟ್ರೋರಾಸಾಯನಿಕ ಪ್ರಮಾಣದ ಬಗ್ಗೆ ನಿಗಾ ವಹಿಸಬಹುದು. ಅಪರಾಧಗಳು ನಡೆದ ಸಂದರ್ಭದಲ್ಲಿ ಪೊಟ್ಟಣಗಳಲ್ಲಿಟ್ಟ ರಾಸಾಯನಿಕ ಕುರುಹುಗಳನ್ನು ಹೊರೆತೆಗೆಯದೆಯೇ ವಿಶ್ಲೇಷಿಸಲು ಇದೇ ಯಂತ್ರವನ್ನು ಬಳಸಲಾಗುತ್ತದೆ. ಹಾಗೆಯೇ ಸೂಕ್ಷ್ಮ ಬಿಡಿಭಾಗಕ್ಕೆ ಹಚ್ಚಿದ ವರ್ಣದ್ರವ್ಯ ಎಷ್ಟರಮಟ್ಟಿಗೆ ಒಣಗಿದೆಯೆಂಬುದನ್ನು ಅರಿಯಬಹುದು. ಸುರಕ್ಷಾ ಅಂತರದಿಂದ ಪರಮಾಣು ವಿದ್ಯುತ್ ಸ್ಥಾವರಗಳ ತ್ಯಾಜ್ಯದ ರಾಸಾಯನಿಕ ಅಂಶಗಳನ್ನು ಅಳೆಯಬಹುದು. ಕ್ಯಾನ್ಸರ್ ರೋಗದ ಆರಂಭದ ಹಂತಗಳನ್ನು ಕೋಶ ಬದಲಾವಣೆಗಳನ್ನು ದಾಖಲಿಸಬಲ್ಲ ಈ ಯಂತ್ರದ ಮೂಲಕ ಅರಿಯಬಹುದು.

ರಾಮನ್‌ರು ಈ ಪ್ರಯೋಗಕ್ಕೆ ಉಪಯೋಗಿಸಿದ ಉಪಕರಣಗಳು ಮುಖ್ಯವಾಗಿ ಬೆಳಕು ನೀಡುವ Mercury Arc Lamp, ಬೆಂಜಿನ್ ತುಂಬಿದ ಗಾಜಿನ ಪಾತ್ರೆ ಮತ್ತು ರೋಹಿತ ದರ್ಶಕ (Pocket Spectroscope) ಇವೆಲ್ಲವುಗಳ ಮೊತ್ತ 200ರೂ. ಗಿಂತ ಕಡಿಮೆ.

ನಮ್ಮ ದೇಶದ ಇಸ್ರೋ ವಿಜ್ಞಾನಿಗಳು 2008ರಲ್ಲಿ ಚಂದ್ರಯಾನ-1 ಕೃತಕ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದರು. ಮಂಗಳಯಾನ-1 ಉಪಗ್ರಹವನ್ನು 2013ರ ನವೆಂಬರ್ 5ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. 2017ರಲ್ಲಿ ಒಂದೇ ರಾಕೆಟ್‌ನಲ್ಲಿ ಏಕಕಾಲಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಇಸ್ರೋ ವಿಶ್ವದಾಖಲೆ ನಿರ್ಮಿಸಿತು. 2018ರ ಜನವರಿ 12ರಂದು ಸ್ವದೇಶಿ ನಿರ್ಮಿತ 100ನೇ ಉಪಗ್ರಹ ಯಶಸ್ವಿಯಾಗಿ ಉಡಾವಣೆಗೊಂಡಿತು. ಚಂದ್ರನ ಮೇಲೆ ಚಲಿಸುವ ರೋವರ್ 2019ರಲ್ಲಿ ಯಶಸ್ವಿಯಾಗಿ ಉಡಾವಣೆಗೊಂಡಿತು. ಮಾನವ ಸಹಿತ ಗಗನಯಾನಕ್ಕೆ ಇಸ್ರೋ ಸಿದ್ಧತೆ ನಡೆಸಿದೆ. ನಮ್ಮ ಭಾರತೀಯ ಬಾಹ್ಯಾಕಾಶಗಳ ಸಂಶೋಧನಾ ಸಂಸ್ಥೆ (ಇಸ್ರೋ) ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶ್ವ ದಾಖಲೆ ನಿರ್ಮಿಸಿದೆ. ಇದನ್ನು ನಾವು ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯೆಂದು ಸ್ಮರಿಸಬಹುದು. ಅಬ್ದುಲ್ ಕಲಾಂ, ಸಿ.ವಿ.ರಾಮನ್, ವಿಶ್ವೇಶ್ವರಯ್ಯ ಇವರು ನಮ್ಮ ಯುವ ವಿಜ್ಞಾನ ವಿದ್ಯಾರ್ಥಿಗಳಿಗೆ ರೋಲ್ ಮಾಡೆಲ್‌ಗಳಾಗಬೇಕು. ಹಾಗಾದಲ್ಲಿ ಮಾತ್ರ ನಮ್ಮ ದೇಶವೂ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ತಲೆಯೆತ್ತಿ ನಿಲ್ಲಬಹುದು. ಇಂದು ಮಾತ್ರವಲ್ಲ, ಪ್ರತಿದಿನವೂ, ಪ್ರತಿ ಕ್ಷಣವೂ ವಿಜ್ಞಾನವಾಗಲಿ ಎಂಬುದು ವಿಜ್ಞಾನಾಸಕ್ತರೆಲ್ಲರ ಹಾರೈಕೆ. ಸರ್ ಸಿ.ವಿ.ರಾಮನ್‌ಅವರನ್ನು ಒಳಗೊಂಡಂತೆ ಭಾರತದ ವಿಜ್ಞಾನಿಗಳು ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದರೊಂದಿಗೆ ಅದು ಶಾಲಾ ಕಾಲೇಜಿನಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ವಿಜ್ಞಾನ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು.

Writer - ಜಗದೀಶ ವಡ್ಡಿನ, ಕಾರವಾರ

contributor

Editor - ಜಗದೀಶ ವಡ್ಡಿನ, ಕಾರವಾರ

contributor

Similar News