ಕೊರೋನ ರೋಗಿಗಳ ತಪಾಸಣೆ ವೇಳೆ ರೈನ್ ಕೋಟ್, ಹೆಲ್ಮೆಟ್ ಧರಿಸುತ್ತಿರುವ ವೈದ್ಯರು: ವರದಿ
ಹೊಸದಿಲ್ಲಿ: ದೇಶದಲ್ಲಿ ಕೊರೋನ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಸೋಂಕು ಹರಡದಂತೆ ಧರಿಸಬೇಕಾದ ರಕ್ಷಾ ಕವಚಗಳ ಕೊರತೆ ತೀವ್ರವಾಗಿ ಕಾಡಲಾರಂಭಿಸಿದ್ದು, ಹಲವು ವೈದ್ಯರು ರೈನ್ ಕೋಟ್ ಹಾಗೂ ಬೈಕ್ ಹೆಲ್ಮೆಟ್ ಗಳನ್ನು ಕರ್ತವ್ಯದ ವೇಳೆ ಅನಿವಾರ್ಯವಾಗಿ ಬಳಸುತ್ತಿದ್ದಾರೆ ಎಂದು reuters.com ವರದಿ ತಿಳಿಸಿದೆ.
ಕೊಲ್ಕತ್ತಾದ ಪ್ರಮುಖ ಕೊರೋನ ಆಸ್ಪತ್ರೆಯಾಗಿರುವ ಬೇಲೆಘಟದಲ್ಲಿರುವ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲಿ ಕಿರಿಯ ವೈದ್ಯರಿಗೆ ಕಳೆದ ವಾರ ರೋಗಿಗಳ ತಪಾಸಣೆ ವೇಳೆ ಧರಿಸಲು ಪ್ಲಾಸ್ಟಿಕ್ ರೈನ್ ಕೋಟ್ ಗಳನ್ನು ನೀಡಲಾಗಿತ್ತು ಎಂದು ಅಲ್ಲಿನ ಇಬ್ಬರು ಕಿರಿಯ ವೈದ್ಯರು ಹೇಳಿರುವ ಕುರಿತು reuters.com ವರದಿ ತಿಳಿಸಿದೆ. ಈ ಕುರಿತಂತೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅಸಿಸ್ ಮನ್ನ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಹರ್ಯಾಣದಲ್ಲಿ ಇಎಸ್‍ಐ ಆಸ್ಪತ್ರೆಯ ವೈದ್ಯರೊಬ್ಬರು ತಮ್ಮ ಬಳಿ ಎನ್95 ಮಾಸ್ಕ್ ಇಲ್ಲದೇ ಇರುವುದರಿಂದ ಬೈಕ್ ಹೆಲ್ಮೆಟ್ ಧರಿಸಬೇಕಾಯಿತೆಂದು ಹೇಳಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತಿರುವ ಕೇಂದ್ರ ಸರಕಾರ ತಾನು ಕೋವಿಡ್-19 ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವೈದ್ಯಕೀಯ ಸಮುದಾಯಕ್ಕೆ ಅಗತ್ಯವಾಗಿರುವ ರಕ್ಷಾ ಕವಚಗಳು ಮತ್ತಿತರ ಸಾಧನಗಳನ್ನು ದೇಶದ ವಿವಿಧೆಡೆಗಳಿಂದ ಹಾಗೂ ದಕ್ಷಿಣ ಕೊರಿಯಾ ಮತ್ತು ಚೀನಾದಿಂದಲೂ ತರಿಸುವುದಾಗಿ ಹೇಳಿದೆ. ಈ ಕುರಿತಂತೆ ಆರೋಗ್ಯ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ.