ಕೊರೋನದಿಂದ ಭಾರತ ಕಲಿಯಬೇಕಾದ ಪಾಠ

Update: 2020-03-31 18:03 GMT

ಯಾವುದೇ ದೇಶ ತನ್ನ ಮಾನವ ಸಂಪನ್ಮೂಲದ ಅಭಿವೃದ್ಧ್ದಿಗೆ ಪರಿಗಣಿಸಬೇಕಾದ ಮುಖ್ಯ ಅಂಶಗಳೆಂದರೆ ಶಿಕ್ಷಣ, ಆಹಾರ ಮತ್ತು ಆರೋಗ್ಯ. ಪ್ರಸ್ತುತ ಕೊರೋನದ ಪರಿಣಾಮ ಪ್ರಪಂಚಾದ್ಯಂತ ಬೀರುತ್ತಿದ್ದು, ಭಾರತ ಶಿಕ್ಷಣ, ಆಹಾರ ಮತ್ತು ಆರೋಗ್ಯದ ಕೊರತೆಯನ್ನು ಎದುರಿಸುತ್ತಿದೆ. 183 ದೇಶಗಳಲ್ಲಿ ಹರಡಿ ಸುಮಾರು 36 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಕೊರೋನ ಭಾರತದಲ್ಲಿಯೂ 34 ಜನರನ್ನು ಪರಿಣಮಿಸಿ, ದೇಶದ ನೈಜ ಸ್ಥಿತಿಯನ್ನು ಎತ್ತಿ ತೋರಿಸುತ್ತಿದೆ. ಜಾನ್ಸ್ ಹಾಕಿನ್ಸ್ ವಿಶ್ವವಿದ್ಯಾನಿಲಯದ ಸಮೀಕ್ಷೆ ಪ್ರಕಾರ ಭಾರತದಲ್ಲಿ 2 ಕೋಟಿ ಜನರಿಗೆ ಕೋವಿಡ್-19 ತಗುಲುವ ಸಾಧ್ಯತೆ ಇದೆ ಎನ್ನುವ ಭಯಾನಕ ಮಾಹಿತಿಯೂ ದೊರೆತಿದೆ. ದೇಶದಲ್ಲಿ ಕೊರೋನದಿಂದಲ್ಲದೇ ಹಸಿವಿನಿಂದ ಮತ್ತು ಕಾಲ್ನಡಿಗೆಯಿಂದಲೂ ಜನ ಸಾಯುತ್ತಿರುವುದು ವಿಶೇಷ.
 
ಆರ್ಥಿಕತೆಯಲ್ಲಿ ಪ್ರಪಂಚದ ನಾಲ್ಕನೇ ಸ್ಥಾನದಲ್ಲಿರುವ ಭಾರತ 2030ರವರೆಗೆ ಅಮೆರಿಕವನ್ನು ಹಿಂದೆ ಹಾಕಲಿದೆ ಎನ್ನುವ ಆರ್ಥಿಕ ತಜ್ಞರ ಅಭಿಪ್ರಾಯವನ್ನು ಪರಿಗಣಿಸುವುದಾದರೆ, ದೇಶದ ಕೇವಲ ಶೇ.1 ಜನರು ದೇಶದ ಶೇ.71 ಸಂಪನ್ಮೂಲಗಳನ್ನು ಮತ್ತು ಶೇ.9 ಜನರು ದೇಶದ ಶೇ.6 ಸಂಪನ್ಮೂಲಗಳನ್ನು, ಅಂದರೆ ಮೇಲಿನ ಶೇ.10 ಜನರ ಹತ್ತಿರ ಶೇ.77 ಸಂಪನ್ಮೂಲಗಳು ಸಂಗ್ರಹವಾಗಿದ್ದರೆ, ಮಧ್ಯಮ ವರ್ಗದ ಶೇ.30 ಜನರ ಹತ್ತಿರ ಶೇ.16.8 ಸಂಪನ್ಮೂಲಗಳು ಇವೆ, ಉಳಿದ ಶೇ.60 ಕೆಳ ವರ್ಗದ ಜನರ ಹತ್ತಿರ ಕೇವಲ ಶೇ.4.70ದಷ್ಟು ಸಂಪನ್ಮೂಲಗಳು ಇವೆ. ಅಂದರೆ ದೇಶದ ಸಂಪನ್ಮೂಲಗಳು ಸಮನಾಗಿ ಹಂಚಿಕೆಯಾಗದಿರುವುದು ದೇಶದ ಜನರಲ್ಲಿಯ ತಾರತಮ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕೇಂದ್ರದ 1.70 ಲಕ್ಷ ಕೋಟಿ ರೂ. ಪರಿಹಾರ ಕೊಡುಗೆಯನ್ನು ದೇಶದ 80 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ ಎನ್ನುವ ಮಾಹಿತಿ ಸರಕಾರವೇ ನೀಡಿದೆ. ಇದರಿಂದ ದೇಶದ ನೈಜ ಚಿತ್ರಣ ಹೊರಬಿದ್ದಿದೆ ಮತ್ತು ಗುಳೆ ಹೋದವರು ಮತ್ತು ಕಾರ್ಮಿಕರು, ನಗರ ವಲಸಿಗರ ಸಂಖ್ಯೆ ಎಷ್ಟಿದೆ ಎನ್ನುವುದು ಮನವರಿಕೆಯಾಗಿದೆ.

2019ರ ಎನ್‌ಎಸ್‌ಎಸ್‌ಒ ಪ್ರಕಾರ ದೇಶದಲ್ಲಿ ಸರಿ ಸುಮಾರು 13ರಿಂದ 17 ಲಕ್ಷ ಜನ ಉದ್ಯೋಗ ಅರಿಸಿ ನಗರ ಪ್ರದೇಶಕ್ಕೆ ಹೋಗುತ್ತಿದ್ದಾರೆ. ಹಾಗಾಗಿ ಕೊರೋನದಿಂದ ಉದ್ಯೋಗ ಕಳೆದುಕೊಂಡು ಆಹಾರವಿಲ್ಲದೆ ವಾಪಸ್ ತಮ್ಮ ಊರುಗಳಿಗೆ ತೆರಳುತ್ತಿರುವ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಸದ್ಯದ ಆಹಾರದ ಕೊರತೆಯೊಂದಿಗೆ ಎಪ್ರಿಲ್ ತಿಂಗಳಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ ಮತ್ತು ಕರ್ನಾಟಕದ ಜಿಲ್ಲೆಗಳಲ್ಲಿ ನೀರಿನ ಹಾಹಾಕಾರವೂ ಹೆಚ್ಚಾಗುವುದರಿಂದ ಸರಕಾರ ಈ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ದೇಶ ಕೊರೋನದಿಂದ ಹೊರಬಂದ ಮೇಲೆ ಪ್ರತಿ ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರವಾರು ಮಾನವ ಸಂಪನ್ಮೂಲವನ್ನು ಪರಿಗಣನೆಗೆ ತೆಗೆದುಕೊಂಡು ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗಗಳನ್ನು ನೀಡಿ ಗುಳೆ ಹೋಗುವ ಸಂಪ್ರದಾಯಕ್ಕೆ ಸಮಾಪ್ತಿ ಮಾಡಬೇಕಾದ ಅವಶ್ಯಕತೆಯಿದೆ.

ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸಿ ವರ್ಷಗಳೇ ಕಳೆದರೂ ಇಂದಿಗೂ ಸ್ವಚ್ಛತೆಯನ್ನು ಕಾಪಾಡುವಲ್ಲಿ ಅರಾಜಕತೆ ರಾರಾಜಿಸುತ್ತಿದೆ. ಉದಾಹರಣೆಗೆ ಕೊರೋನ ಹರಡುವ ಭೀತಿಯಿದ್ದರೂ ರಾಯಚೂರಿನ ಪೌರ ಕಾರ್ಮಿಕರು ಕೈಚೀಲಗಳಿಲ್ಲದೇ ಕೆಲಸ ನಿರ್ವಹಿಸುತ್ತಿದ್ದಾರೆ. ಅಂದರೆ ದೇಶದಲ್ಲಿ ಸ್ವಚ್ಛತೆಗೆ ಯಾವ ರೀತಿಯಲ್ಲಿ ಮುನ್ನೆಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಅಧಿಕಾರಿಗಳ ಮನೋಧೋರಣೆಯನ್ನು ತೋರಿಸುತ್ತಿದೆ.

ಭಾರತದಲ್ಲಿ 5 ವರ್ಷಗಳಲ್ಲಿ ಸುಮಾರು 47,000 ವೆಂಟಿಲೇಟರ್‌ಗಳು ಮಾರಾಟವಾಗಿವೆ. ಅವುಗಳಲ್ಲಿ ಕೇವಲ 8,432 ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ವೆಂಟಿಲೇಟರ್‌ಗಳು ಅಂದರೆ ಉಳಿದ ವೆಂಟಿಲೇಟರ್‌ಗಳು ಖಾಸಗಿ ಆಸ್ಪತ್ರೆಗಳಲ್ಲಿ ಇವೆ. ಹಾಗಾಗಿ ಸರಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳೆ ಕೊರೋನ ಸೋಂಕನ್ನು ನಿಭಾಯಿಸಲು ಸುಸಜ್ಜಿ ತವಾಗಿವೆ ಎಂಬುದನ್ನು ಮನಗಾಣಬಹುದು. ಆದ್ದರಿಂದ ಸ್ಪೇನ್ ಸರಕಾರ ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕರಣಗೊಳಿಸಿದ ಹಾಗೆ ಭಾರತವೂ ತನ್ನ ಖಾಸಗಿ ಆಸ್ಪತ್ರೆಗಳನ್ನು ರಾಷ್ಟ್ರೀಕರಣಗೊಳಿಸಬಹುದಾಗಿದೆ. ಭಾರತದಲ್ಲಿ ವೈದ್ಯರ ಸಂಖ್ಯೆ ಕಡಿಮೆಯಿರುವುದನ್ನು ಪರಿಗಣಿಸಿ ಎಲ್ಲ ಖಾಸಗಿ ವೈದ್ಯರನ್ನು ಸೇವೆಗೆ ಬಳಸಿಕೊಳ್ಳಬಹುದು ಮತ್ತು ಕೊನೆಯ ವರ್ಷದ ಮೆಡಿಕಲ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲೂ ಸೂಕ್ತ ಕ್ರಮಕೈಗೊಳ್ಳಬಹುದು.

 ದೇಶದ ಬೆನ್ನೆಲುಬಾದ ರೈತರೂ ಆರ್ಥಿಕ ಸಮಸ್ಯೆಯಿಂದ ಬಳಲುವ ಸ್ಥಿತಿಯಲ್ಲಿದ್ದಾರೆ. ತಾವು ಬೆಳೆದ ಹಣ್ಣು, ತರಕಾರಿಯನ್ನು ಮಾರಲಾಗದೇ ಹಾಗೂ ಬೆಂಬಲ ಬೆಲೆ ಸಿಗದೇ ದಾರಿಯಲ್ಲಿ ಬಿಸಾಡುತ್ತಿದ್ದಾರೆ. ಹೈನುಗಾರಿಕೆಯನ್ನು ನಂಬಿ ಜೀವನ ಮಾಡುತ್ತಿರುವ ರೈತರಿಂದ ಹಾಲು ಖರೀದಿ ನಿಲ್ಲಿಸಿದ ಕೆಎಮ್‌ಎಫ್ ದೊಡ್ಡ ಆಘಾತವನ್ನೇ ನೀಡಿದೆ. ಆರ್ಥಿಕ ಹಿನ್ನೆಡೆಯ ಸಂದರ್ಭದಲ್ಲಿ ಸರಕಾರಗಳು ಯಾವುದೇ ನಿರ್ದಿಷ್ಟವಾದ ರೂಪುರೇಷೆಯನ್ನು ರೂಪಿಸದೇ ದೇಶದ ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗಿವೆ.

ಎಲ್ಲರ ಕುರಿತು ಚಿಂತಿಸುತ್ತಿರುವ ಸರಕಾರಗಳು ಮತ್ತು ಜನಪ್ರತಿನಿಧಿಗಳು ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಸಿಗಬೇಕಾದ ಸವಲತ್ತುಗಳು ಮತ್ತು ಸಂಬಳದ ಗ್ಯಾರಂಟಿಯ ಕುರಿತು ಸೂಕ್ತ ನಿರ್ದೇಶನಗಳನ್ನು ನೀಡಬೇಕಿದೆ. ಶಿಕ್ಷಕರ ಸಂಘ ಸಂಸ್ಥೆಗಳು ಮತ್ತು ಶಿಕ್ಷಕರ ಕ್ಷೇತ್ರದ ಎಮ್ಮೆಲ್ಸಿಗಳು ಖಾಸಗಿ ಸಂಸ್ಥೆಗಳಲ್ಲಿ ಅಲ್ಪ ಮೊತ್ತದ ಸಂಬಳಕ್ಕೆ ಸೇವೆಗೈಯುತ್ತಿರುವ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಸಹಾಯ ಹಸ್ತ ನೀಡಬೇಕಾದ ಅವಶ್ಯಕತೆಯೂ ಎದ್ದು ಕಾಣುತ್ತಿದೆ.

ದಿನ ರಾತ್ರಿಯೆನ್ನದೇ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು, ವೈದ್ಯರು, ಪೋಲಿಸ್ ಸಿಬ್ಬಂದಿ, ಸಫಾಯಿ ಕರ್ಮಚಾರಿಗಳು, ನರ್ಸ್ ಮತ್ತು ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ಭತ್ಯೆಗಳನ್ನು ಮತ್ತು ಸೌಲಭ್ಯಗಳು ಮತ್ತು ವಿಮೆಯನ್ನು ಒದಗಿಸಬೇಕಾದ ಅವಶ್ಯಕತೆಯಿದೆ. ಮನುಕುಲಕ್ಕೆ ಸೇವೆಗೈದ ಈ ಎಲ್ಲರನ್ನೂ (ಕನಿಷ್ಠ ಕೆಲವರನ್ನಾದರೂ) ಅಭಿನಂದಿಸುವ ಮತ್ತು ಪ್ರಶಸ್ತಿಗಳನ್ನು ನೀಡುವ ಪ್ರಾವಧಾನಕ್ಕೆ ನಾಂದಿ ಹಾಡಬೇಕು.

ಕೊರೋನದಿಂದ ಭಾರತದ ಜನ ಮೂರು ವರ್ಗದಲ್ಲಿ ಹಂಚಿ ಹೋಗಿದ್ದಾರೆ. ಶ್ರೀಮಂತರು ಎಸಿ ಮನೆಗಳಲ್ಲಿ, ಮಧ್ಯಮವರ್ಗ ಮನೆಗಳಲ್ಲಿ ಮತ್ತು ಬಡವರು ರಸ್ತೆಗಳಲ್ಲಿ. ಇವರಲ್ಲಿ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎನ್ನುವ ಯಾವುದೇ ಭೇದಭಾವಗಳಿಲ್ಲ. ಎಲ್ಲ ಜನರು ಮಾಂಸವಿಲ್ಲದೇ, ಮದ್ಯವಿಲ್ಲದೇ ಬದುಕಬಲ್ಲರು ಎಂಬುದು ತೋರಿಸಿದ್ದಾರೆ. ಅಷ್ಟೆ ಅಲ್ಲದೇ ದೇವಸ್ಥಾನ, ಮಸೀದಿ ಮತ್ತು ಚರ್ಚ್‌ಗೆ ಹೋಗದೆಯೇ ಆತ್ಮವಿಶ್ವಾಸದಿಂದ ಬದುಕಬಲ್ಲರು ಎಂಬುದು ಪ್ರಪಂಚಕ್ಕೆ ಪರಿಚಿತವಾಗಿದೆ. ಮನೆಯಲ್ಲಿಯೇ ಪೂಜೆಯನ್ನು ಮಾಡಿ ಭಕ್ತಿಯನ್ನು ವ್ಯಕ್ತಪಡಿಸಬಹುದು ಎಂಬುದನ್ನು ಮನಗಂಡಿದ್ದಾರೆ. ಮೌಢ್ಯತೆಯಿಲ್ಲದೇ ವೈಚಾರಿಕವಾಗಿ ಬದುಕುತ್ತಿದ್ದಾರೆ ಹಾಗೂ ಧರ್ಮ,ಲಿಂಗ, ಜಾತಿ ಆಧಾರಿತ ಮೋಸಗಳು ಕೂಡ ಕಡಿಮೆಯಾಗಿವೆ. ದೇಶದ ಆರ್ಥಿಕತೆಯನ್ನು ಸಬಲೀಕರಣ ಮಾಡಲು ಸಾಮಾಜಿಕ ಸಂಸ್ಥೆಗಳಾದ ಎಲ್ಲ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳ ಒಂದಿಷ್ಟು ಆದಾಯವನ್ನು ಸರಕಾರ ಬಳಸಿಕೊಳ್ಳುವುದು ಸೂಕ್ತ.

ಇನ್ನು ಮುಂದಾದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ಶಿಕ್ಷಣ, ಆಹಾರ ಮತ್ತು ಆರೋಗ್ಯಕ್ಕೆ ಸೂಕ್ತ ಬಜೆಟ್ ನೀಡಿ, ಸರಕಾರಿ ಸಂಸ್ಥೆಗಳಲ್ಲಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿ ಮಾಡಿ, ಖಾಸಗೀಕರಣಕ್ಕೆ ಅವಕಾಶ ನೀಡದೆ, ದೇಶದ ಸುಧಾರಣೆಗೆ ಹೆಚ್ಚಿನ ಗಮನ ಹರಿಸಬೇಕಾದ ಅವಶ್ಯಕತೆಯಿದೆ. ಕೊರೋನ ರೋಗದಂತೆ ಅದಕ್ಕಿಂತ ಭಯಂಕರವಾಗಿರುವ ಸಮಾಜದ ಇತರ ರೋಗಗಳಾದ ಜಾತೀಯತೆ, ಅಂಧಶ್ರದ್ಧೆ, ಮೂಢನಂಬಿಕೆ, ಲಿಂಗ ತಾರತಮ್ಯ ಮತ್ತು ಧರ್ಮಾಂಧತೆಯನ್ನು ಹೋಗಲಾಡಿಸಿದರೆ ಮಾತ್ರ ಮನುಕುಲ ಪರಿಶುದ್ಧವಾಗಲಿದೆ. ಇದಕ್ಕೆ ನಾವೆಲ್ಲರೂ ಪಣತೊಟ್ಟು ಪರಿಶ್ರಮಿಸಬೇಕಿದೆ.

Writer - ಡಾ. ಜಗನ್ನಾಥ ಕೆ. ಡಾಂಗೆ

contributor

Editor - ಡಾ. ಜಗನ್ನಾಥ ಕೆ. ಡಾಂಗೆ

contributor

Similar News