ಲಾಕ್ಡೌನ್ ಮಧ್ಯೆಯೂ ಉಡುಪಿಯಲ್ಲಿ ಹೆಚ್ಚಿದ ನೀರಿನ ಬಳಕೆ: ಮೇ ತಿಂಗಳಲ್ಲಿ ನೀರಿನ ಅಭಾವದ ಆತಂಕ
ಉಡುಪಿ, ಎ.2: ಕೊರೋನ ವೈರಸ್ ಭೀತಿ ಹಾಗೂ ಲಾಕ್ಡೌನ್ ಪರಿಣಾಮವಾಗಿ ಉಡುಪಿ ನಗರದಲ್ಲಿ ನೀರಿನ ಬಳಕೆ ಹೆಚ್ಚಾಗಿದೆ. ಅತಿಹೆಚ್ಚು ನೀರು ಬಳಕೆ ಮಾಡುವ ಸಂಸ್ಥೆಗಳು ಬಂದ್ ಆಗಿರುವುದರಿಂದ ನೀರು ಉಳಿಕೆಯಾಗ ಬಹುದೆಂಬ ಉಡುಪಿ ನಗರಸಭೆ ಲೆಕ್ಕಚಾರಗಳೆಲ್ಲ ಈ ಮೂಲಕ ತಲೆಕೆಳಗಾಗಿದೆ. ಇದರಿಂದ ಮೇ ಅಂತ್ಯಕ್ಕೆ ಉಡುಪಿ ನಗರದ ಜನತೆ ನೀರಿನ ಸಮಸ್ಯೆಯನ್ನು ಎದುರಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.
ಲಾಕ್ಡೌನ್ನಿಂದಾಗಿ 10 ದಿನಗಳಿಂದ ಉಡುಪಿ ನಗರ ಸ್ತಬ್ಧವಾಗಿರುವುದರಿಂದ ಜನರೆಲ್ಲ ಮನೆಯಲ್ಲೇ ಉಳಿದು, ಈ ಬೇಸಿಗೆಯಲ್ಲಿ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಬಳಕೆ ಇಳಿಕೆಯಾಗಬಹುದೆಂಬ ನಿರೀಕ್ಷೆಯನ್ನು ನಗರಸಭೆ ಹೊಂದಿತ್ತು. ನಗರದಲ್ಲಿ ಸದ್ಯ ಜನರ ಸಂಖ್ಯೆ ಕಡಿಮೆ ಇದ್ದರೂ ನೀರಿನ ಬಳಕೆ ಮಾತ್ರ ಸಾಮಾನ್ಯ ದಿನಗಳಿಗಿಂತ ಏಳು ಎಂಎಲ್ಡಿ ಹೆಚ್ಚಾಗಿರುವುದು ಕಂಡುಬಂದಿದೆ.
ವಿವಿಧ ಮೂಲಗಳಲ್ಲಿ ನೀರು ಉಳಿಕೆ: ಮಾ.1ರಿಂದ ನಗರಸಭೆಯ 35 ವಾರ್ಡ್ಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಿ ನೀರಿನ ವಿತರಣೆ ಆರಂಭಿಸಲಾಗಿತ್ತು. ಈ ಎಲ್ಲ ವಲಯ ಗಳಿಗೆ ಪ್ರತಿದಿನ ತಲಾ 6 ಗಂಟೆಗಳ ಕಾಲ ನೀರು ಪೂರೈಕೆ ಮಾಡಲಾಗುತ್ತಿದೆ. ನಗರಸಭೆ ಸುತ್ತಮುತ್ತಲಿನ ಗ್ರಾಪಂ ಹಾಗೂ ಮಣಿಪಾಲದ ಮಾಹೆಗೆ ದಿನದ 24ಗಂಟೆಗಳ ಬದಲು ಈಗ ದಿನಕ್ಕೆ 6 ಗಂಟೆಗಳ ಕಾಲ (ಬೆಳಗ್ಗೆ 7ರಿಂದ ಮಧ್ಯಾಹ್ನ 1ರ ವರೆಗೆ) ನೀರು ಸರಬರಾಜು ಮಾಡಲಾಗುತ್ತಿದೆ. ಇದರಿಂದ ಸುಮಾರು 1.5 ಎಂಎಲ್ಡಿ ನೀರು ಉಳಿಕೆಯಾಗಿದೆ.
ಲಾಕ್ಡೌನ್ ಘೋಷಣೆ ಬಳಿಕ ಉಡುಪಿ ನಗರಕ್ಕೆ ಪ್ರವಾಸಿಗರು, ಶ್ರೀಕೃಷ್ಣ ಮಠದ ಭಕ್ತರು ಸೇರಿದಂತೆ ಹೊರಗಿನಿಂದ ಬರುವವರ ಸಂಖ್ಯೆ ಸ್ಥಗಿತವಾಗಿದ್ದು, ಉಡುಪಿ ಜನತೆ ಹೊರತು ಪಡಿಸಿ ಹೊರಗಿನವರು ಯಾರು ಕೂಡ ಈಗ ನಗರದಲ್ಲಿ ಉಳಿದುಕೊಂಡಿಲ್ಲ. ಮಣಿಪಾಲ ಮತ್ತು ಉಡುಪಿ ನಗರದಲ್ಲಿರುವ 60ರಿಂದ 85 ಹೊಟೇಲ್, ಲಾಡ್ಜ್, ಅಂಗಡಿ ಮುಂಗ್ಗಟ್ಟು, ಶಾಲಾ ಕಾಲೇಜುಗಳು, ಮಣಿಪಾಲ ಮಾಹೆಯ ವಿದ್ಯಾಸಂಸ್ಥೆಗಳು, ಫ್ಯಾಕ್ಟರಿ, ಕೈಗಾರಿಕೆಗಳು, ಶ್ರೀಕೃಷ್ಣ ಮಠ ಸೇರಿದಂತೆ ದೇವಸ್ಥಾನಗಳು, ಮಸೀದಿ, ಚರ್ಚ್ಗಳು, ಸರಕಾರಿ ಕಚೇರಿಗಳು, ಮದುವೆ ಸಹಿತ ಇತರ ಕಾರ್ಯಕ್ರಮಗಳು ನಡೆಯುವ ಸಭಾಂಗಣಗಳು ಮುಚ್ಚಲ್ಪಟ್ಟಿವೆ. ಇದರಿಂದ ದೊಡ್ಡ ್ರಮಾಣದಲ್ಲಿ ನೀರು ಉಳಿಕೆಯಾಗುತ್ತಿವೆ.
ಬಳಕೆ ಮಾತ್ರ 15ರಿಂದ 22ಎಂಎಲ್ಡಿಗೆ: ಈ ಎಲ್ಲ ಮೂಲಗಳಿಂದ ನೀರು ಉಳಿಕೆಯಾದರೂ ನಗರದ ಜನ ಬಳಸುವ ನೀರಿನ ಪ್ರಮಾಣದಲ್ಲಿ ಮಾತ್ರ ಇಳಿಕೆ ಕಂಡಿಲ್ಲ. ಇಂದಿನ ಪರಿಸ್ಥಿತಿಯಲ್ಲಿ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಒಂದು ದಿನಕ್ಕೆ ಬೇಕಾಗಿರುವುದು ಕೇವಲ 15 ಎಂಎಲ್ಡಿ ನೀರು. ಆದರೆ ಇಂದು ಬಳಕೆಯಾಗುತ್ತಿರುವ ನೀರಿನ ಪ್ರಮಾಣ 22 ಎಂಎಲ್ಡಿ. ಹೀಗೆ ದಿನಕ್ಕೆ ಏಳು ಎಂಎಲ್ಡಿ ನೀು ಹೆಚ್ಚುವರಿಯಾಗಿ ಬಳಕೆಯಾಗುತ್ತಿದೆ.
ಪ್ರತಿವರ್ಷ ಬೇಸಿಗೆ ಸಮಯದಲ್ಲಿ ದಿನಕ್ಕೆ 24 ಎಂಎಲ್ಡಿ (ನಗರಸಭೆ ವಾರ್ಡ್ಗಳಿಗೆ 20 ಎಂಎಲ್ಡಿ, ಗ್ರಾಪಂಗಳಿಗೆ 2 ಎಂಎಲ್ಡಿ ಮತ್ತು ಸೋರಿಕೆ ಹಾಗೂ ಇತರ ಬಳಕೆಗಾಗಿ 2 ಎಂಎಲ್ಡಿ.) ನೀರು ಖರ್ಚಾಗುತ್ತದೆ. ಅಂದರೆ ನಗರಸಭೆ ಲೆಕ್ಕಚಾರದಂತೆ ಈ ಸಮಯದಲ್ಲಿ ಪ್ರತಿ ದಿನ ಸುಮಾರು 9 ಎಂಎಲ್ಡಿ ನೀರು ಉಳಿಕೆಯಾಗಬೇಕಿತ್ತು. ಆದರೆ ಅದರ ಬದಲು ಕೇವಲ ಎರಡು ಎಂಎಲ್ಡಿ ನೀರು ಮಾತ್ರ ಉಳಿಯುತ್ತಿದೆ.
ಇದಕ್ಕೆ ಕಾರಣ ಕೊರೋನ ವೈರಸ್ ಭೀತಿಯಿಂದ ಜನ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು. ಜನ ಮನೆಯಲ್ಲಿ ಉಳಿದುಕೊಂಡಿರುವುದರಿಂದ ದಿನಕ್ಕೆ ಎರಡು ಮೂರು ಸ್ನಾನ, ಕೈ ತೊಳೆಯುವುದು ಸೇರಿದಂತೆ ತಮ್ಮನ್ನು ಸ್ವಚ್ಛವಾರಿಸಿಕೊಳ್ಳಲು ಹೆಚ್ಚು ನೀರು ಬಳಸುತ್ತಿದ್ದಾರೆ. ಅಲ್ಲದೆ ನೀರಿನ ಪ್ರಾಮುಖ್ಯತೆ ಅರಿಯದೆ ತೋಟ, ವಾಹನ ತೊಳೆಯಲು ಹಾಗೂ ಮನೆ ಸ್ವಚ್ಛಗೊಳಿಸಲು ಸಾಮಾನ್ಯ ದಿನಗಳಿಗಿಂತ ಈಗ ಹೆಚ್ಚು ನೀರು ಬಳಕೆ ಮಾಡುತ್ತಿದ್ದಾರೆ ಎಂದು ಉಡುಪಿ ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನ್ರಾಜ್ ತಿಳಿಸಿದ್ದಾರೆ.
ಬಜೆಯಲ್ಲಿ 40 ದಿನಗಳಿಗಾಗುವಷ್ಟು ನೀರು!
ಉಡುಪಿ ನಗರಸಭೆ ನೀರು ಪೂರೈಸುವ ಬಜೆ ಡ್ಯಾಂನಲ್ಲಿ ಪ್ರಸಕ್ತ 4.98 ಮೀಟರ್ ನೀರಿನ ಸಂಗ್ರಹ ಇದ್ದು, ಕಳೆದ ವರ್ಷ ಎ.1ಕ್ಕೆ ಇದರ ಪ್ರಮಾಣ 3.88 ಮೀಟರ್ ಆಗಿತ್ತು. ಈ ಬಗ್ಗೆ ಹೋಲಿಕೆ ಮಾಡಿದಾಗ ಕಳೆದ ವರ್ಷಕ್ಕಿಂತ ಈ ವರ್ಷ ಕೇವಲ 1.1 ಮೀಟರ್ನಷ್ಟು ನೀರಿನ ಸಂಗ್ರಹ ಜಾಸ್ತಿ ಇದೆ. ಈಗಿರುವ ನೀರಿನ ಸಂಗ್ರಹವು 40ರಿಂದ 42 ದಿನಗಳವರೆಗೆ ಸಾಕಾಗುತ್ತದೆ. ಒಂದು ವೇಳೆ ಮುಂಗಾರು ಪೂರ್ವದ ಮಳೆ ಬಾರದಿದ್ದರೆ ಮೇ 2ನೇ ವಾರದಲ್ಲಿ ನೀರಿನ ಸಮಸ್ಯೆ ತಲೆದೋರಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನ್ರಾಜ್ ಅಭಿಪ್ರಾಯಪಟ್ಟಿದ್ದಾರೆ. ಶಿರೂರು ಡ್ಯಾಂನಲ್ಲಿ ಸ್ವರ್ಣ ನದಿಯ ಹರಿವು ತೀರಾ ಕಡಿಮೆಯಾಗಿದ್ದು, ಇಲ್ಲಿರುವ ಹೊಂಡಗಳಲ್ಲಿ ತುಂಬಿರುವ ನೀರನ್ನು ಡ್ರೆಜ್ಜಿಂಗ್ ಹಾಗೂ ಪಂಪ್ ಮಾಡಿ ಬಜೆ ಡ್ಯಾಂಗೆ ಹರಿಸಲಾಗುವುದು. ಇದಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಸ್ಥಳ ಪರಿಶೀಲನೆ ನಡೆಸಲಾಗಿದೆ. ಎರಡು ಮೂರು ದಿನಗಳಲ್ಲಿ ಇದರ ಕೆಲಸ ಆರಂಭವಾಗಲಿದೆ ಎಂದವರು ತಿಳಿಸಿದರು.
ಒಂದು ದಿನಕ್ಕೆ ಒಬ್ಬ ವ್ಯಕ್ತಿಗೆ 130 ಲೀಟರ್ ನೀರು ಬೇಕಾಗುತ್ತದೆ. ಆದರೆ ಉಡುಪಿಯಲ್ಲಿ ಈಗಿರುವ ಜನಸಂಖ್ಯೆಗಿಂತ ಹೆಚ್ಚು ಅಂದರೆ 2 ಕೋಟಿ ಲೀಟರ್ ನೀರು ಬಳಸಲಾಗುತ್ತಿದೆ. ಆದುದರಿಂದ ಈ ಬಗ್ಗೆ ಜನರೇ ಅರ್ಥ ಮಾಡಿಕೊಳ್ಳಬೇಕು. ಕಳೆದ ವರ್ಷ ಇದಕ್ಕೆ ನಾವೆಲ್ಲ ಸಾಕಷ್ಟು ಬೆಲೆ ತೆತ್ತಿದ್ದೇವೆ. ಆದುದರಿಂದ ಮನೆಯಲ್ಲಿದ್ದುಕೊಂಡು ಅನವಶ್ಯಕ ನೀರಿನ ಬಳಕೆ ಮಾಡಬಾರದು. ನೀರನ್ನು ಮಿತವಾಗಿ ಬಳಸುವುದರಿಂದ ಮೇ ಅಂತ್ಯದಲ್ಲಿ ಎದುರಾಗುವ ತೊಂದರೆಯನ್ನು ತಪ್ಪಿಸಬಹುದು.
-ಮೋಹನ್ರಾಜ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ, ಉಡುಪಿ ನಗರಸಭೆ