ಹೋಂ ಕ್ವಾರೆಂಟೈನ್ ಬಯೋ ಮೆಡಿಕಲ್ ವೇಸ್ಟ್ ವಿಲೇವಾರಿ ಹೇಗೆ ?
ಕೇಂದ್ರ ಸರ್ಕಾರ ಕೊರೋನ ಸಾಂಕ್ರಾಮಿಕ ರೋಗ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಾದ್ಯಂತ ಸಾವಿರಾರು ಜನರನ್ನು
ಹೋಂ ಕ್ವಾರೆಂಟೈನ್ ನಲ್ಲಿ ಇರಿಸಿದೆ. ಅದರಲ್ಲಿ ಬಹುತೇಕ ಯಾವುದೇ ರೋಗದ ಪಾಸಿಟಿವ್ ಲಕ್ಷಣ ಕಂಡು ಬಂದಿರುವುದಿಲ್ಲ. ಇದುವರೆಗೂ ಪರೀಕ್ಷಿಸಿದ ರಕ್ತ ಪರೀಕ್ಷೆಯಲ್ಲೂ ಬಹುತೇಕ ನೆಗಟಿವ್ ಇದೆ.
ಆದರೆ ಹೋಂ ಕ್ವಾರೆಂಟೈನ್ ನಲ್ಲಿ ಇರುವ ವ್ಯಕ್ತಿಗಳು ಬಳಸಿದ ಬಯೋ ಮೆಡಿಕಲ್ ವೇಸ್ಟ್ ಹೇಗೆ ವಿಲೇವಾರಿ ಆಗಿದೆ ಎಂಬ ಬಗ್ಗೆ ಸರ್ಕಾರ ಇದುವರೆಗೂ ಯಾವುದೇ ಮಾಹಿತಿ ನೀಡಿರುವುದಿಲ್ಲ. ಹೋಂ ಕ್ವಾರೆಂಟೈನ್ ನಲ್ಲಿ ಇರುವ ವ್ಯಕ್ತಿಗಳು 28 ದಿನ ಮನೆಯಲ್ಲಿ ಇರಬೇಕಾಗುತ್ತದೆ. ಅವರು ಬಳಸಿದ ಯಾವುದೇ ವಸ್ತುಗಳನ್ನು ಮರು ಬಳಕೆ ಮಾಡುವುದು ಅಪಾಯಕಾರಿ ಅಥವಾ ಅವರು ಬಳಸಿದ ಔಷಧಿ ಹೊರಗೆಸೆಯಲು ಅವಕಾಶ ಇಲ್ಲ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಕೊರೋನ ಬಯೋ ಮೆಡಿಕಲ್ ವೇಸ್ಟ್ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಮತ್ತು ಸ್ಥಳೀಯ ಆಡಳಿತ ಸಂಸ್ಧೆಗಳಿಗೆ ಒಂದು ಮಾರ್ಗಸೂಚಿ ಹೊರಡಿಸಿದೆ. ಮಾರ್ಗಸೂಚಿಯಲ್ಲಿ ಹೋಂ ಕ್ವಾರೆಂಟೈನ್ ನಲ್ಲಿ ಇರುವ ವ್ಯಕ್ತಿಗಳು ಬಳಸಿದ ವೇಸ್ಟ್‌ಗಳನ್ನು ಹೇಗೆ ವಿಲೇವಾರಿ ಮಾಡಬೇಕೆಂಬ ಸಲಹೆ ಇದೆ.
ಮಾರ್ಗಸೂಚಿಯಲ್ಲಿ ಹಳದಿ ಬಣ್ಣದ ಬ್ಯಾಗ್ ಗಳಲ್ಲಿ ಹೋಂ ಕ್ವಾರೆಂಟೈನ್ ನಲ್ಲಿರುವವರ ಮನೆ ಬಾಗಿಲಿಗೆ ಹೋಗಿ ಬಯೋ ಮೆಡಿಕಲ್ ವೇಸ್ಟ್ ನಿರ್ದಿಷ್ಟ ಪಡಿಸಿದ ರೀತಿಯಲ್ಲಿ ಸಂಗ್ರಹಿಸಬೇಕು. ಈ ಕೆಲಸ ನಿರ್ವಹಿಸುವವರಿಗೆ ತರಬೇತಿ ನೀಡಿ ಪೂರ್ಣ ಸುರಕ್ಷತಾ ಸಾಧನಗಳೊಂದಿಗೆ ಕಳುಹಿಸಬೇಕು.
ಅವರಿಗೆ ಪಿಪಿಇ ಮತ್ತು ಎನ್ 95 ಮಾಸ್ಕ್ ನೀಡಬೇಕು. ಕೇಂದ್ರ ಸರ್ಕಾರ ಇದನ್ನು ಅವಶ್ಯ ಸೇವೆ ಅಡಿಯಲ್ಲಿ ತಂದಿದೆ. ಮಾಲಿನ್ಯ ನಿಯಂತ್ರಣ ಮಂಡಳಿ ತನ್ನ ಸೂಚನೆಯಲ್ಲಿ ಕ್ವಾರೆಂಟೈನ್ ಕ್ಯಾಂಪ್ ಮತ್ತು ಹೋಂ ಕ್ವಾರೆಂಟೈನ್ ನಲ್ಲಿರುವ ವ್ಯಕ್ತಿಗಳ ಸಂಪರ್ಕದಲ್ಲಿ ಇರುವ ಎಲ್ಲರನ್ನು ಕನಿಷ್ಟ ಹದಿನಾಲ್ಕು ದಿನ ಹೋಂ ಕ್ವಾರೆಂಟೈನ್ ನಿಗಾದಲ್ಲಿರಿಸಲು ಸೂಚಿಸಿದೆ. ಅವರು ಬಳಸಿದ ವಸ್ತುಗಳನ್ನು ಅತ್ಯಂತ ವೈಜ್ಞಾನಿಕವಾಗಿ ಸಂಪೂರ್ಣ ವಾಗಿ ನಾಶ ಪಡಿಸಲು ಕಟ್ಟು ನಿಟ್ಟಿನ ನಿರ್ದೇಶನ ನೀಡಿದೆ.
ರಾಜ್ಯ ಸರ್ಕಾರ ಈ ಬಗ್ಗೆ ಯಾವುದೇ ಸುರಕ್ಷತಾ ಕ್ರಮ ಜರುಗಿಸಿದ ಬಗ್ಗೆ ಎಲ್ಲೂ ಕಾಣುತ್ತಿಲ್ಲ. ಸರ್ಕಾರ ದಿನ ನಿತ್ಯ ನಡೆಸುವ ಯಾವುದೇ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿರುವುದಿಲ್ಲ. ಸರ್ಕಾರ ಕ್ವಾರೆಂಟೈನ್ ನಲ್ಲಿ ಇರುವ ವ್ಯಕ್ತಿಗಳು ಬಳಸಿದ ವಸ್ತುಗಳನ್ನು ಮತ್ತು ಔಷಧಿಗಳನ್ನು ಸೂಕ್ತ ರೀತಿಯಲ್ಲಿ ನಾಶ ಪಡಿಸುವ ಬಗ್ಗೆ ಮುಂಜಾಗ್ರತೆ ವಹಿಸದಿದ್ದರೆ ಸಣ್ಣ ತಪ್ಪು ಮಹಾ ದುರಂತಕ್ಕೆ ಕಾರಣವಾದೀತು.