ವಲಸೆ ಕಾರ್ಮಿಕರನ್ನು ಶುಚಿಗೊಳಿಸಲು ವಿಲಕ್ಷಣ ವಿಧಾನಗಳ ಬಳಕೆ

Update: 2020-04-05 17:58 GMT

ಹೊಸದಿಲ್ಲಿ, ಎ.5: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ ಬಳಿಕ ವಲಸೆ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಸಿಕ್ಕಿದ ವಾಹನದಲ್ಲಿ ಊರಿಗೆ ತೆರಳಲು ಕೆಲವರು ಪ್ರಯತ್ನಿಸಿದರೆ ಕೆಲವರು ಕಾಲ್ನಡಿಗೆಯಲ್ಲೇ ಊರಿನತ್ತ ಹೊರಟಿದ್ದಾರೆ. ಈ ಮಧ್ಯೆ, ವಲಸೆ ಕಾರ್ಮಿಕರು ಊರಿಗೆ ಮರಳಿದರೆ ಕೊರೋನ ವೈರಸ್ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಎಂಬ ಭೀತಿಯಿಂದ ಅವರನ್ನು ವಿಲಕ್ಷಣ ವಿಧಾನಗಳಿಂದ ಶುಚಿಗೊಳಿಸುತ್ತಿರುವ ಘಟನೆಯೂ ವರದಿಯಾಗಿದೆ.

ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಮರಳಿದ ವಲಸೆ ಕಾರ್ಮಿಕರ ಮೇಲೆ ರಾಸಾಯನಿಕ ಮಿಶ್ರಿತ ನೀರನ್ನು ಪೈಪ್ ಮೂಲಕ ಸಿಂಪಡಿಸಿದ ಘಟನೆ ವರದಿಯಾಗಿದೆ. ಚೆನ್ನೈಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಪುರೂಲಿಯಾ ಮೂಲದ ಕಾರ್ಮಿಕರು ಸ್ವಗ್ರಾಮಕ್ಕೆ ವಾಪಸಾದಾಗ ಅವರಿಗೆ ಆಲದ ಮರದ ಮೇಲೆ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.( ಇಲ್ಲಿ ಕಾಡಾನೆಗಳ ಹಾವಳಿ ಹೆಚ್ಚು. ಆದ್ದರಿಂದ ಪ್ರತ್ಯೇಕ ಶಿಬಿರಕ್ಕಿಂತ ಮರದ ಮೇಲಿನ ವಾಸ ಸುರಕ್ಷಿತ ಎಂಬ ಕಾರಣಕ್ಕೆ).

ಇನ್ನೊಂದೆಡೆ, ಉತ್ತರಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ವಲಸೆ ಕಾರ್ಮಿಕರು ಸ್ವಗ್ರಾಮಕ್ಕೆ ಮರಳಲು ಪ್ರಯತ್ನಿಸುತ್ತಿರುವ ಮಾಹಿತಿಯ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರನ್ನು ಗ್ರಾಮಸ್ಥರಿಂದ ಪ್ರತ್ಯೇಕಿಸಲು ಅಧಿಕಾರಿಗಳು ಹಲವು ವಿಧಾನಗಳನ್ನು ಕಂಡುಕೊಂಡಿದ್ದಾರೆ. ಗ್ರಾಮಕ್ಕೆ ಆಗಮಿಸುವ ಹೊರಗಿನ ವ್ಯಕ್ತಿಗಳ ಮೇಲೆ ಒಂದು ಕಣ್ಣಿಡುವಂತೆ ಗ್ರಾಮದ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಹೊರಗಿನಿಂದ ಬರುವ ಯಾವುದೇ ವ್ಯಕ್ತಿ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಿದೆ. “ಗ್ರಾಮೀಣ ಜನರಲ್ಲಿ ಈಗ ಕೊರೋನ ವೈರಸ್ ಸೋಂಕು ಹರಡದಂತೆ ಕೈಗೊಂಡಿರುವ ಕ್ರಮದ ಬಗ್ಗೆ ಅರಿವು ಮೂಡಿದೆ. ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಜೊತೆಗೆ, ಯಾವುದೇ ಹೊರಗಿನ ವ್ಯಕ್ತಿ ಗ್ರಾಮವನ್ನು ಪ್ರವೇಶಿಸಿದರೆ ತಕ್ಷಣ ನಮಗೆ ಕರೆ ಮಾಡಿ ತಿಳಿಸುತ್ತಾರೆ. ಹೊರಗಿನಿಂದ ಬಂದವರು ನಿಕಟ ಸಂಬಂಧಿಗಳಾದರೂ ಮೊದಲು ತಪಾಸಣೆ ನಡೆಸಿಯೇ ಗ್ರಾಮವನ್ನು ಪ್ರವೇಶಿಸುವಂತೆ ಕಟ್ಟುನಿಟ್ಟಾಗಿ ಸೂಚಿಸುತ್ತಿದ್ದಾರೆ. ಜೀವವನ್ನು ಅಪಾಯಕ್ಕೆ ಒಡ್ಡಿಕೊಳ್ಳಲು ಯಾರೂ ಬಯಸುವುದಿಲ್ಲ” ಎಂದು ಜಾರ್ಖಂಡ್‌ನ ಗದವಾ ಜಿಲ್ಲಾಧಿಕಾರಿ ಹರ್ಷ ಮಂಗಲ್ ಹೇಳಿದ್ದಾರೆ.

ಪಶ್ಚಿಮ ಬಂಗಾಳ, ಒಡಿಶಾ ಮತ್ತು ಅಸ್ಸಾಂನ ವಲಸೆ ಕಾರ್ಮಿಕರ ಕೇಂದ್ರ ಎಂದೇ ಹೆಸರಾಗಿರುವ ಕೇರಳದಲ್ಲಿ ವಿಭಿನ್ನ ಪರಿಸ್ಥಿತಿಯಿದೆ. ಇಲ್ಲಿಂದ ತಮ್ಮ ರಾಜ್ಯಕ್ಕೆ ಹಿಂತಿರುಗಲು ವಲಸೆ ಕಾರ್ಮಿಕರು ತುದಿಗಾಲಲ್ಲಿ ನಿಂತಿದ್ದಾರೆ. ಕಾರ್ಮಿಕರು ತಮ್ಮ ಗ್ರಾಮಕ್ಕೆ ತೆರಳಲು ಕೇರಳ ಸರಕಾರ ವಿಶೇಷ ರೈಲಿನ ವ್ಯವಸ್ಥೆ ಮಾಡಿದೆ ಎಂದು ಪ್ರಸಾರವಾದ ವದಂತಿಯನ್ನು ನಂಬಿ ಮಾರ್ಚ್ 29ರಂದು ಸಾವಿರಾರು ಕಾರ್ಮಿಕರು ರಸ್ತೆಯಲ್ಲಿ ಒಟ್ಟು ಸೇರಿದ್ದರು. ಇವರಿಗೆ ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟು ವಲಸೆ ಕಾರ್ಮಿಕರ ಶಿಬಿರಕ್ಕೆ ವಾಪಸು ಕಳಿಸುವುದೇ ದೊಡ್ಡ ಸಮಸ್ಯೆಯಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

 ಬಿಹಾರದ ಸೀತಾಮಡಿ ಜಿಲ್ಲೆಯಲ್ಲಿ ಕಳೆದ 2 ವಾರಗಳಲ್ಲಿ 4000ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಸೇರಿದ್ದಾರೆ. ದಿಲ್ಲಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಮಾರ್ಚ್ 15ರಂದು ಸ್ವಗ್ರಾಮಕ್ಕೆ ಹೊರಟಿದ್ದರು. ಇವರನ್ನು ಹಲವು ರಾಜ್ಯಗಳಲ್ಲಿ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿದ್ದರೂ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾರೆ. ಆದ್ದರಿಂದ ಈಗ ಅವರ ಕೈಗಳ ಮೇಲೆ ಹೋಂ ಕ್ವಾರಂಟೈನ್ ಎಂಬ ಮುದ್ರೆ ಹಾಕಲಾಗುತ್ತಿದೆ ಎಂದು ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಪರಿಮಳ ಹೇಳಿದ್ದಾರೆ. ಬಿಹಾರದಲ್ಲಿ 242 ಶಾಲೆಗಳನ್ನು ಕ್ವಾರಂಟೈನ್ ಹೋಮ್‌ಗಳನ್ನಾಗಿ ಪರಿವರ್ತಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಅಭಿಲಾಶಾ ಕುಮಾರಿ ಶರ್ಮ ಹೇಳಿದ್ದಾರೆ.

ಉತ್ತರಪ್ರದೇಶದ ಉನ್ನಾವೊ ಜಿಲ್ಲಾ ವ್ಯಾಪ್ತಿಯ 20 ಗ್ರಾಮಗಳಲ್ಲಿ ಕಳೆದ 15 ದಿನದಲ್ಲಿ ಸುಮಾರು 1000 ವಲಸೆ ಕಾರ್ಮಿಕರು ಆಗಮಿಸಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು ಸಮುದಾಯ ಕೇಂದ್ರ, ಕಲ್ಯಾಣ ಮಂಟಪ ಮತ್ತು ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಪರಿವರ್ತಿಸಿ ಅವರನ್ನು ಅಲ್ಲಿರಿಸಲಾಗಿದೆ ಎಂದು ಉನ್ನಾವೊ ಜಿಲ್ಲೆಯ ನವಾಬ್‌ಗಂಜ್ ಬ್ಲಾಕ್‌ನ ಮುಖ್ಯಸ್ಥ ಅರುಣ್ ಸಿಂಗ್ ಹೇಳಿದ್ದಾರೆ.

ಬಾಕ್ಸ್:

6.75 ಲಕ್ಷ ವಲಸೆ ಕಾರ್ಮಿಕರು ಶಿಬಿರದಲ್ಲಿ

ಕೇರಳದಲ್ಲಿ ವಲಸೆ ಕಾರ್ಮಿಕರಿಗೆ ಆಶ್ರಯ ನೀಡಲು ಸರಕಾರ 5000 ಶಿಬಿರಗಳನ್ನು ವ್ಯವಸ್ಥೆ ಮಾಡಿದೆ. ರಾಜಸ್ತಾನಕ್ಕೆ ಹೊರಟಿದ್ದ ವಲಸೆ ಕಾರ್ಮಿಕರನ್ನು ಕರ್ನಾಟಕದ ಬೆಳಗಾಂವ್ ಜಿಲ್ಲೆಯ ಗಡಿಭಾಗದಲ್ಲಿ ತಡೆದು ಅವನ್ನು ಸರಕಾರಿ ಹಾಸ್ಟೆಲ್‌ಗೆ ಕಳುಹಿಸಲಾಗಿದೆ. ದೇಶದಲ್ಲಿ ಸುಮಾರು 6.75 ಲಕ್ಷ ವಲಸೆ ಕಾರ್ಮಿಕರನ್ನು 21,000 ಪರಿಹಾರ ಶಿಬಿರದಲ್ಲಿ ಇರಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News