ಲಾಕ್‌ಡೌನ್ ಬಳಿಕ ಜಾರ್ಖಂಡ್‌ನಲ್ಲಿ ಹಸಿವೆಗೆ 3 ಬಲಿ: ಆರೋಪ

Update: 2020-04-12 16:39 GMT

ಹೊಸದಿಲ್ಲಿ, ಎ.12: ಜಾರ್ಖಂಡ್‌ನ ಗರ್ವಾ ಜಿಲ್ಲೆಯ 32 ವರ್ಷದ ಮಹಿಳೆ ಚಂದ್ರಾವತಿ ದೇವಿ ಹಾಗೂ ಆಕೆಯ ಕುಟುಂಬದ 8 ಮಂದಿ, ಕಳೆದ ಮೂರು ದಿನಗಳಿಂದ ಬರಿಹೊಟ್ಟೆಯಲ್ಲಿಯೇ ದಿನಕಳೆಯುತ್ತಿದ್ದಾರೆ. ಕೊರೋನ ವೈರಸ್ ಹಾವಳಿ ತಡೆಗೆ ದೇಶಾದ್ಯಂತ ಲಾಕ್‌ಡೌನ್ ಘೋಷಿಸಿದ ಬಳಿಕ ಈ ಕುಟುಂಬವು ಹಸಿವಿನಿಂದ ನರಳುತ್ತಿದೆ. ಒಂದು ವೇಳೆ ತನಗೆ ಇನ್ನೂ ಆಹಾರ ಸಿಗದೆ ಹೋದಲ್ಲಿ ತಾನು ಹಾಗೂ ತನ್ನ ಕುಟುಂಬ ಹಸಿವಿನಿಂದ ಸಾಯುವುದಂತೂ ಖಂಡಿತ ಎಂಬ ಭಯ ಆಕೆಯನ್ನು ಕಾಡುತ್ತಿದೆ.

ಚಂದ್ರಾವತಿಯ ಕುಟುಂಬ ಮಾತ್ರವಲ್ಲ ಜಾರ್ಖಂಡ್‌ನ ಅನೇಕ ದಿನಗೂಲಿ ಕಾರ್ಮಿಕ ಕುಟುಂಬಗಳು ಕೂಡಾ ಲಾಕ್‌ಡೌನ್ ನಂತಹ ಹೊಟ್ಟೆಗೆ ಹಿಟ್ಟಿಲ್ಲದೆ ಯಾತನೆ ಪಡುತ್ತಿವೆ.

ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದಾಗಿನಿಂದ ಜಾರ್ಖಂಡ್‌ನಲ್ಲಿ ಮೂವರು ಹಸಿವಿನಿಂದ ಸಾವನ್ನಪ್ಪಿದ್ದಾರೆಂದು ಅವರ ಕುಟುಂಬಿಕರು ಆಪಾದಿಸಿದ್ದಾರೆ. ಆದರೆ ಜಿಲ್ಲಾಡಳಿತ ಹಾಗೂ ರಾಜ್ಯ ಸರಕಾರ ಅವನ್ನು ಹಸಿವಿನಿಂದ ಸಂಭವಿಸಿದ ಸಾವುಗಳೆಂದು ಒಪ್ಪಲು ನಿರಾಕರಿಸಿವೆ.

ರಾಷ್ಟ್ರೀಯ ಸುದ್ದಿವಾಹಿನಿಯೊಂದು ಈ ಮೂರು ಕುಟುಂಬಗಳನ್ನು ಸಂದರ್ಶಿಸಿತ್ತು. ಮಾರ್ಚ್ 24ರ ಲಾಕ್‌ಡೌನ್ ಬಳಿಕ ಕೇವಲ ಈ ಕುಟುಂಬಗಳು ಮಾತ್ರವಲ್ಲದೆ ಜಾರ್ಖಂಡ್‌ನ ಹಲವಾರು ಮಂದಿ ಕಡುಬಡತನದಲ್ಲಿ ಸಿಲುಕಿರುವುದನ್ನು, ಪಡಿತರ ಆಹಾರವಿಲ್ಲದೆ ಮತ್ತು ಆದಾಯವಿಲ್ಲದೆ ಕಂಗಾಲಾಗಿರುವುದನ್ನು ಪತ್ತೆಹಚ್ಚಿತ್ತು.

ಜಾರ್ಖಂಡ್‌ ನಲ್ಲಿ ದುರ್ಬಲವರ್ಗಗಳು ಅದರಲ್ಲೂ ವಿಷಯವಾಗಿ ದುರ್ಬಲ ಬುಡಕಟ್ಟು ಸಮುದಾಯಗಳು ಅಧಿಕ ಸಂಖ್ಯೆಯಲ್ಲಿರುವ 50 ತಹಶೀಲುಗಳ ಪೈಕಿ 15 ತಹಶೀಲುಗಳು, ಹಸಿವು ಹಾಗೂ ಆಹಾರ ಕೊರತೆಯ ಸಮಸ್ಯೆಗಳನ್ನು ಎದುರಿಸುತ್ತಿವೆ. 50 ಬ್ಲಾಕ್‌ಗಳ ಪೈಕಿ 21ರಲ್ಲಿ ಹಲವು ಪಡಿತರ ಚೀಟಿದಾರರು ತಮ್ಮ ಎಪ್ರಿಲ್ ತಿಂಗಳ ಪಡಿತರಕ್ಕಾಗಿ ಕಾದು ಕುಳಿತಿದ್ದಾರೆ. ಕನಿಷ್ಠ ನಾಲ್ಕು ಬ್ಲಾಕ್‌ಗಳಲ್ಲಿ ಮಾರ್ಚ್ ತಿಂಗಳ ಪಡಿತರ ಇನ್ನಷ್ಟೇ ಬಿಡುಗಡೆಗೊಳ್ಳಬೇಕಿದೆ.

ಪಡಿತರ ವಿತರಿಸುವ ಪ್ರದೇಶಗಳಲ್ಲಿ ಜನರ ಪಡಿತರದಲ್ಲಿ ಡೀಲರ್‌ಗಳು ಪಾಲು ಪಡೆಯುವುದನ್ನು ಕೂಡಾ ಸುದ್ದಿವಾಹಿನಿ ತಂಡವು ಪತ್ತೆಹಚ್ಚಿದೆ. ಪಡಿತರ ಚೀಟಿದಾರರಿಗೆ ಅವರು ಲಭಿಸುವುದಕ್ಕಿಂತ ಕಡಿಮೆ ಪ್ರಮಾಣದಲ್ಲಿ ವ್ಯಾಪಾರಿಗಳು ಪಡಿತರವನ್ನು ವಿತರಿಸುತ್ತಿದ್ದು, ಉಳಿದ ಪ್ರಮಾಣವನ್ನು ತಮ್ಮ ಕೈಯಲ್ಲೇ ಇಟ್ಟುಕೊಳ್ಳುವ ಪ್ರವೃತ್ತಿ ಜಾರ್ಖಂಡ್‌ನ ಬುಡಕಟ್ಟು ಪ್ರದೇಶಗಳಲ್ಲಿ ವ್ಯಾಪಕವಾಗಿದೆ ಎಂದು ಸುದ್ದಿವಾಹಿನಿ ತಿಳಿಸಿದೆ.

ಬೊಕಾರೊ ಜಿಲ್ಲೆಯಲ್ಲಿ 17 ವರ್ಷದ ಅಂಗವಿಕಲ ಬಾಲಕಿ ಹಸಿವಿನಿಂದ ಸಾವನ್ನಪ್ಪಿದ್ದಾಗಿ ಆಕೆಯ ಹೆತ್ತವರು ಹೇಳಿದ್ದಾರೆ. ಆದರೆ ಜಿಲ್ಲಾಡಳಿತ ಅದನ್ನು ಅಲ್ಲಗಳೆದಿತ್ತು. ಸ್ಥಳಕ್ಕೆ ಭೇಟಿ ನೀಡಿದ ಸಾಮಾಜಿಕ ಕಾರ್ಯಕರ್ತರು, ಈ ಕುಟುಂಬವು ಕಡುಬಡತನದಿಂದ ನರಳುತ್ತಿದ್ದುದಾಗಿ ಹೇಳಿದ್ದಾರೆ. ಈ ಕುಟುಂಬದ ಬಳಿಕ ಪಡಿತರ ಚೀಟಿ ಇರಲಿಲ್ಲ ಮತ್ತು ಆಕೆಯ ತಂದೆ ಜೀತನ್ ತಿಂಗಳಿಗ ಕೇವಲ 500 ರೂ. ಸಂಪಾದಿಸುತ್ತಿದ್ದನು. ಲಾಕ್‌ಡೌನ್ ಆನಂತರವಂತೂ ಆತನಿಗೆ ಕೆಲಸವೇ ದೊರೆತಿರಲಿಲ್ಲವೆಂದು, ಆದಿವಾಸಿ ಮೂಲವಾಸಿ ಮಂಚ್‌ನ ಸದಸ್ಯ, ಟೀಕಾವಾಡಿ ಗ್ರಾಮದ ನಿವಾಸಿ ಅನಿಲ್ ಹಾನ್ಸ್‌ಡಾ ಹೇಳುತ್ತಾರೆ.

ಜಾರ್ಖಂಡ್‌ನ ರಾಮ್‌ಘರ್ ಜಿಲ್ಲೆಯ ಸಂಗ್ರಾಮ್‌ಪುರ ಗ್ರಾಮದಲ್ಲಿ 72 ವರ್ಷ ವಯಸ್ಸಿನ ಉಪಾಸಿ ದೇವಿ ಕೊನೆಯುಸಿರೆಳೆದಿದ್ದಾರೆ ಉಪಾಸಿ ದೇವಿ ಹಸಿವಿನಿಂದ ಮೃತಪಟ್ಟಿದ್ದಾಗಿ ಆಕೆಯ ಕುಟುಂಬಿಕರು ಆಪಾದಿಸಿದ್ದಾರೆ. ಆಕೆಯ ಪುತ್ರ 48 ವರ್ಷದ ಪುತ್ರ ಜಗನ್ ನಾಯಕ್ ಕಳೆದ ಕೆಲವು ದಿನಗಳಿಂದ ದಿನಗೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಆದರೆ ಕಳೆದ ತಿಂಗಳು ಲಾಕ್‌ಡೌನ್ ಆರಂಭಗೊಂಡ ಬಳಿಕ ಆತನಿಗೆ ಸಂಪಾದನೆ ಇರಲಿಲ್ಲ.

ಹಸಿವಿನಿಂದಲೇ ತನ್ನ ತಾಯಿ ಮೃತಪಟ್ಚಿದ್ದಾರೆಂದು ಜಗನ್ ನಾಯಕ್ ಹೇಳಿದ್ದರೂ ರಾಮ್‌ಘರ್‌ನ ಬಿಡಿಓ ಹಾಗೂ ಸ್ಥಳೀಯ ಶಾಸಕಿ ಮಮತಾ ದೇವಿ ಅದನ್ನು ಅಲ್ಲಗಳೆದಿದ್ದಾರೆ.

ಆದರೆ ಜಾರ್ಖಂಡ್‌ನಲ್ಲಿ ಹಸಿವಿನಿಂದ ಸಾವು ಸಂಭವಿಸಿರುವುದನ್ನು ರಾಜ್ಯ ಸರಕಾರ ತಳ್ಳಿಹಾಕಿರುವುದು ಇದು ಮೊದಲೇನಲ್ಲ. ಹೇಮಂತ ಸೊರೇನ್ ನೇತೃತ್ವದ ಜಾರ್ಖಂಡ್ ಮುಕ್ತಿ ಮೋರ್ಚಾ- ಕಾಂಗ್ರೆಸ್ ಸರಕರವು ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಹಸಿವಿನಿಂದ ಸಾವು ಸಂಭವಿಸಿರುವುದನ್ನು ನಿರಾಕರಿಸುತ್ತಲೇ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News