ಧರೆ ಹತ್ತಿ ಉರಿಯುತ್ತಿದೆ

Update: 2020-04-15 17:40 GMT

ಮಾನವರ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ಮಾತ್ರ ನಿಸರ್ಗ ಇದೆ. ಆತನ ಸಂಗ್ರಹಬುದ್ಧಿಯ ದುರಾಸೆಯನ್ನು ಪೂರೈಸುವ ಶಕ್ತಿ ಅದಕ್ಕೆ ಇಲ್ಲ. ಇಡೀ ಜೀವಜಾಲ ಸಮತೋಲನವನ್ನು ಕಾಪಾಡುವ ಜವಾಬ್ದಾರಿ ಅದರ ಮೇಲಿದೆ. ನಿಸರ್ಗದ ಕರ್ತವ್ಯಕ್ಕೆ ಮಾನವ ಚ್ಯುತಿ ತಂದಾಗ, ಕಣ್ಣಿಗೆ ಕಾಣದ ವೈರಾಣುಗಳು ಬಂದು ಮಾನವನ ಮೇಲೆ ಯುದ್ಧ ಸಾರುತ್ತವೆ.


ಮಾನವ ನಿಸರ್ಗದ ಭಾಗವಾಗಿದ್ದಾನೆ. ಆದ್ದರಿಂದ ನಿಸರ್ಗವನ್ನು ಕಾಪಾಡುವುದು ಆತನ ಪರಮ ಕರ್ತವ್ಯವಾಗಿದೆ. ನಿಸರ್ಗವು ಆತನ ಅಸ್ತಿತ್ವಕ್ಕೆ ಬೇಕಾದುದನ್ನು ಪೂರೈಸುವ ಶಕ್ತಿಯನ್ನು ಹೊಂದಿದೆ. ಆದರೆ ಆತನ ದುರಾಸೆಯನ್ನು ಈಡೇರಿಸಲಿಕ್ಕಾಗದು. ಮಾನವನ ಹೊರತಾಗಿ ಪ್ರತಿಯೊಂದು ಜೀವಿ ತನಗೆ ಎಷ್ಟು ಬೇಕೊ ಅಷ್ಟನ್ನೇ ಮಾತ್ರ ನಿಸರ್ಗದಿಂದ ಪಡೆಯುತ್ತದೆ. ತಲೆಮಾರುಗಳವರೆಗೆ ಬೇಕಾಗುವ ಹಾಗೆ ಸಂಗ್ರಹ ಮಾಡುವ ಬುದ್ಧಿ ಅವುಗಳಿಗೆ ಇಲ್ಲ. ಮಾನವ ಮಾತ್ರ ಇದನ್ನು ಮಾಡಬಲ್ಲ. ಸಂಪತ್ತಿನ ಕ್ರೋಡೀಕರಣವು ಮಾನವ ಸಮಾಜದಲ್ಲಿ ಮೌಲ್ಯವಾಗಿ ಪರಿಣಮಿಸಿದೆ. ಇದುವೆ ಮಿಗುತಾಯಮೌಲ್ಯ (ಸರ್‌ಪ್ಲಸ್ ವ್ಯಾಲ್ಯೂ). ಇದು ನಿಜವಾದ ಅರ್ಥದಲ್ಲಿ ಶ್ರಮಜೀವಿಗಳಿಂದ ಉಳಿಸಿಕೊಂಡದ್ದು!

ಮಾನವರ ಈ ಸಂಗ್ರಹ ಬುದ್ಧಿ ಶೋಷಣೆಯ ವ್ಯವಸ್ಥೆಯ ಆಧಾರ ಸ್ತಂಭವಾಗಿದೆ. ಬಂಡವಾಳ ಶಾಹಿಗಳು ಬಂಡವಾಳದ ಮೂಲಕ ನೈಸರ್ಗಿಕ ಸಂಪನ್ಮೂಲಗಳು, ಮಾನವಶ್ರಮ ಮತ್ತು ವ್ಯವಸ್ಥಾಪನವನ್ನು ಶೋಷಣೆಯ ಗುರಿಯೊಂದಿಗೆ ಬಳಸಿ, ಅವುಗಳ ಮೇಲೆ ಮಾಡಿದ ಖರ್ಚು ವೆಚ್ಚಗಳ ಜೊತೆಗೆ ತಮ್ಮ ಶೋಷಣಾ ಪ್ರತಿಭೆಗೂ ಬೆಲೆ ಕಟ್ಟುತ್ತಾರೆ. ಇಷ್ಟೆಲ್ಲ ಲೆಕ್ಕಾಚಾರದ ನಂತರ ಉಳಿಯುವ ಸಂಪತ್ತೇ ‘ಮಿಗುತಾಯಮೌಲ್ಯ’ ಎನಿಸಿಕೊಳ್ಳುತ್ತದೆ. ‘ನನ್ನದು’ ಎನ್ನುವ ಈ ಮಿಗುತಾಯ ಮೌಲ್ಯದ ಪರಿಕಲ್ಪನೆಯಲ್ಲಿ ಮನುಷ್ಯನ ದುರಂತ ಅಡಗಿದೆ. ಮಿಗುತಾಯ ಮೌಲ್ಯವನ್ನು ಸಾಮಾಜೀಕರಣಗೊಳಿಸಿದಾಗ ವ್ಯಕ್ತಿ, ಸಮಾಜ ಮತ್ತು ಜೀವಸಂಕುಲದಿಂದ ತುಂಬಿದ ನಿಸರ್ಗ ಸುರಕ್ಷಿತವಾಗಿರುವವು ಎಂದು ಬಸವಣ್ಣನವರು 12ನೇ ಶತಮಾನದಲ್ಲೇ ಹೇಳಿದ್ದಾರೆ. ಅದನ್ನು ಕಾಯಕ, ಪ್ರಸಾದ ಮತ್ತು ದಾಸೋಹದ ಮೂಲಕ ಸೂಚಿಸಿದ್ದಾರೆ.

ನಿಸರ್ಗ ಧರ್ಮದ ಸೂತ್ರಗಳ ಮೇಲೆ ಬಸವ ಧರ್ಮ ರೂಪುಗೊಂಡಿದೆ. ಕಾಯಕವು ನಿಸರ್ಗ ಧರ್ಮದ ಮೂಲ ಸೂತ್ರವಾಗಿದೆ. ನಿಸರ್ಗದಲ್ಲಿ ಕಾಯಕವಿಲ್ಲದ ಯಾವುದೇ ವಸ್ತು ಅಥವಾ ಜೀವಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಹಸಿರೆಲೆಯು ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ತೊಡಗುವವರೆಗೂ ಗಿಡ ಅದನ್ನು ತನ್ನ ಭಾಗವಾಗಿ ಉಳಿಸಿಕೊಂಡಿರುತ್ತದೆ. ಆ ಎಲೆ ಹಳದಿ ಬಣ್ಣಕ್ಕೆ ತಿರುಗಿದ ಮೇಲೆ ಅದರಿಂದ ಆ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಯುವುದಿಲ್ಲ. ಆಗ ಗಿಡ ಆ ಹಣ್ಣೆಲೆಯನ್ನು ಉದುರಿಸುತ್ತದೆ. ಹೀಗೆ ಕಾಯಕವು ನಿಸರ್ಗದ ನಿಯಮವಾಗಿದೆ. ಬಸವಧರ್ಮದ ಮೂಲವೂ ಕಾಯಕದಲ್ಲಿಯೆ ಇದೆ. ನಿಸರ್ಗದ ಹಾಗೆಯೇ ಸಂಗ್ರಹಬುದ್ಧಿಗೆ ವಿರುದ್ಧವಾಗಿದೆ. ಹಣ್ಣಿನ ಮರವೊಂದು ಹಣ್ಣುಗಳನ್ನು ಕೊಡುತ್ತಲೇ ಇರುತ್ತದೆ. ತನಗಾಗಿ ಸಂಗ್ರಹಿಸಿ ಇಟ್ಟುಕೊಳ್ಳುವುದಿಲ್ಲ. ಆದರೆ ಮನುಷ್ಯ ತಾನು ಯಾವುದೇ ರೀತಿಯಲ್ಲಿ ಪಡೆದದ್ದನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ಸತತವಾಗಿ ಪ್ರಯತ್ನಿಸುತ್ತಿರುತ್ತಾನೆ. ಎಲ್ಲವೂ ನನ್ನದು ಎನ್ನುವುದು ಹುಲುಮಾನವನ ಸ್ವಭಾವ. ಸಂಗ್ರಹಿಸಿಟ್ಟುಕೊಳ್ಳಲು ಬಯಸುವವನು ಜಗತ್ತನ್ನು ಕೊಳ್ಳುವಷ್ಟು ಶ್ರೀಮಂತನಾದರೂ ಶರಣರ ದೃಷ್ಟಿಯಲ್ಲಿ ಹುಲುಮಾನವನೆ ಆಗಿರುತ್ತಾನೆ. ಏಕೆಂದರೆ ಶರಣರು ‘ಇದು ನನ್ನದು’ ಎಂದು ಹೇಳುವುದಿಲ್ಲ; ‘ಇದು ನಮ್ಮದು’ ಎಂದು ಹೇಳುತ್ತಾರೆ. ಅದಕ್ಕಾಗಿ ಬಸವಣ್ಣನವರು ಸೂತ್ರವೊಂದು ರೂಪಿಸಿದ್ದಾರೆ. ಕಾಯಕ ಮಾಡಬೇಕು. ಕಾಯಕದಿಂದ ಬಂದದ್ದನ್ನು ಪ್ರಸಾದವೆಂದು ಸ್ವೀಕರಿಸಬೇಕು. ಪ್ರಸಾದವಾಗಿ ಸ್ವೀಕರಿಸಿದ ನಂತರ ಪ್ರಸಾದದಂತೆ ಬಳಸಬೇಕು. ಆಗ ಉಳಿಯುವುದೆಲ್ಲವೂ ದೇವರ ಸೊತ್ತೇ ಆಗಿರುವುದರಿಂದ ಸಮಾಜವೆಂಬ ದೇವರಿಗೆ (ಜಂಗಮಲಿಂಗ) ದಾಸೋಹ ಭಾವದಿಂದ ಅರ್ಪಿಸಬೇಕು. ಇದು ಬಸವಣ್ಣನವರ ಅರ್ಥಶಾಸ್ತ್ರವೂ ಆಗಿದೆ. ಅವರ ಅರ್ಥಶಾಸ್ತ್ರ, ಹೀಗೆ ಯೋಗ್ಯ ಉತ್ಪಾದನೆ ಮಾಡುವುದು, ಉತ್ಪಾದಿಸಿದ್ದನ್ನು ಪ್ರಸಾದದ ಹಾಗೆ ಸದ್ಬಳಕೆ ಮಾಡುವುದು ಹಾಗೂ ಮಿಗುತಾಯವನ್ನು ದಾಸೋಹಿಯಾಗಿ ಸಾಮಾಜಿಕ ವಿತರಣೆ ಮಾಡುವುದು. ಆ ಮೂಲಕ ಸಂತೃಪ್ತಿಯನ್ನು ಪಡೆಯುವುದು.

ಮಾನವನ ಸಂಗ್ರಹ ಬುದ್ಧಿಯ ಮನಸ್ಸು ಇಷ್ಟೊಂದು ಉದಾತ್ತವಾಗುವುದಕ್ಕಾಗಿಯೆ ಬಸವಣ್ಣನವರು ಇಷ್ಟಲಿಂಗ ಮತ್ತು ಜಂಗಮಲಿಂಗದ ಮಹತ್ವವನ್ನು ತಿಳಿಸಿಕೊಟ್ಟಿದ್ದಾರೆ. ಇಷ್ಟಲಿಂಗದಲ್ಲಿ ಮನಸ್ಸು ಆತ್ಮನಿರೀಕ್ಷೆಯಲ್ಲಿ ತೊಡಗುತ್ತದೆ. ಆಗ ಸಕಲಜೀವಾತ್ಮರಿಂದ ಕೂಡಿದ ನಿಸರ್ಗವು ತನ್ನೊಳಗೇ ಇದೆ ಎಂಬುದರ ಅರಿವಾಗುವುದು. ತಾನು ನಿಸರ್ಗದ ಭಾಗವಾಗಿದ್ದುಕೊಂಡು ನಿಸರ್ಗವು ತನ್ನೊಳಗೆ ಇದೆ ಎಂಬ ಸಾಕ್ಷಾತ್ಕಾರವಾದ ಕೂಡಲೇ ಆತನಿಗೆ ಜಗತ್ತಿನಲ್ಲಿ ಯಾವುದೂ ಹೊರಗಿನದು ಎಂದು ಅನಿಸುವುದಿಲ್ಲ. ಇಂಥ ಮನಸ್ಸು ಮಾತ್ರ ಹೊರಗಿನ ಜಗತ್ತನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬಲ್ಲುದು. ಇದುವೆ ಜಂಗಮಲಿಂಗ ಪ್ರಕ್ರಿಯೆ. ಇಷ್ಟಲಿಂಗದಿಂದ ಪಡೆದ ಅರಿವನ್ನು ಸಕಲಜೀವಾತ್ಮರಿಂದ ಕೂಡಿದ ಜಂಗಮಲಿಂಗದಲ್ಲಿ ಲೋಕನಿರೀಕ್ಷೆ ಮಾಡುತ್ತ ಆಚರಣೆಗೆ ತರಬೇಕು. ಇದುವೇ ಲಿಂಗಾಂಗಸಾಮರಸ್ಯ. ಲಿಂಗವೇ ಸೃಷ್ಟಿಕರ್ತ, ಸೃಷ್ಟಿಯೆ ಅಂಗ! ಸೃಷ್ಟಿ ಮತ್ತು ಸೃಷ್ಟಿಕರ್ತನ ಸಾಮರಸ್ಯದಲ್ಲೇ ಕೂಡಲಸಂಗಮದೇವ ಇದ್ದಾನೆ. ಆತ ಒಬ್ಬನೇ; ಆದರೆ ವಿವಿಧ ಧರ್ಮ ಮತ್ತು ಭಾಷೆಗಳಲ್ಲಿ ಅವನ ನಾಮ ಹಲವು. ನಮ್ಮ ಅಂಗ ಮೊದಲು ಮಾಡಿ ಕಣ್ಣಿಗೆ ಕಾಣುವುದೆಲ್ಲವೂ ಅಂಗವೇ. ಅದರೊಳಗಿನ ಚೈತನ್ಯವೆಲ್ಲ ಲಿಂಗವೇ! ಆದ್ದರಿಂದ ವ್ಯಕ್ತಿ, ಸಮಾಜ ಮತ್ತು ನಿಸರ್ಗವನ್ನು ಹೀಗೆ ಒಂದಾಗಿ ನೋಡುವುದರ ಮೂಲಕ ಮಾನವರನ್ನು ಸ್ವಾವಲಂಬಿಗಳಾಗಿಸಿ; ಕುಟುಂಬ, ಸಮಾಜ ಮತ್ತು ನಿಸರ್ಗದ ರಕ್ಷಣೆ ಮಾಡುವ ತತ್ವವೇ ಬಸವತತ್ವ. ಇದುವೇ ಬಸವಾದ್ವೈತ. ವ್ಯಕ್ತಿ, ಸಕಲಜೀವಾತ್ಮರಿಂದ ಕೂಡಿದ ಸಮಾಜ ಮತ್ತು ವಿಶ್ವವನ್ನು ಒಳಗೊಂಡ ನಿಸರ್ಗ ಬಸವಾದ್ವೈತದಲ್ಲಿ ಒಂದಾಗಿ ಸಾಗುವುದರಿಂದ ವ್ಯಕ್ತಿಗಳ ಅಥವಾ ನಿಸರ್ಗದ ಶೋಷಣೆ ಆಗುವುದಿಲ್ಲ. ಆಗ ಸಹಜವಾಗಿಯೇ ಪಂಚಮಹಾಭೂತಗಳು ಮಲಿನಗೊಳ್ಳುವುದಿಲ್ಲ. ಹವಾಮಾನ ವೈಪರೀತ್ಯವಾಗುವುದಿಲ್ಲ. ಮರಗಿಡ ಸಮೇತ ಎಲ್ಲ ಜೀವಿಗಳು ಆನಂದದಿಂದ ಇರುತ್ತವೆ. ನಿಸರ್ಗ ಚೇತೋಹಾರಿಯಾಗಿರುತ್ತದೆ. ಅರಣ್ಯನಾಶವಾಗುವುದಿಲ್ಲ. ನದಿಗಳು ಮಲಿನಗೊಳ್ಳುವುದಿಲ್ಲ. ಸಮುದ್ರಜೀವಿಗಳಿಗೆ ಮಾಲಿನ್ಯದ ಕಂಟಕವಿರುವುದಿಲ್ಲ. ಕೊರೋನ ಬರುವುದಿಲ್ಲ!

ವೈರಾಣುಗಳು ಬರುವ ಕಾರಣವೇನು?
 ಮಾನವ ಮತ್ತು ನಿಸರ್ಗದ ಮಧ್ಯೆ ಅಗೋಚರ ನಿಸರ್ಗವೊಂದಿದೆ. ವೈರಾಣುಗಳು ಕಣ್ಣಿಗೆ ಕಾಣದ ಈ ನಿಸರ್ಗಕ್ಕೆ ಸಂಬಂಧಿಸಿದವುಗಳಾಗಿವೆ. ನಿಸರ್ಗ ನಿತ್ರಾಣವಾದಾಗಲೆಲ್ಲ ಈ ವೈರಾಣುಗಳು ಬಂದು ಮಾನವರನ್ನು ತಹಬಂದಿಗೆ ತಂದು ನಿಸರ್ಗ ರಕ್ಷಣೆ ಮಾಡುತ್ತವೆ ಎಂಬುದಕ್ಕೆ ಜಗತ್ತಿನ ಇತಿಹಾಸ ಸಾಕ್ಷಿ ಇದೆ.

ಮಾನವರ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ಮಾತ್ರ ನಿಸರ್ಗ ಇದೆ. ಆತನ ಸಂಗ್ರಹಬುದ್ಧಿಯ ದುರಾಸೆಯನ್ನು ಪೂರೈಸುವ ಶಕ್ತಿ ಅದಕ್ಕೆ ಇಲ್ಲ. ಇಡೀ ಜೀವಜಾಲ ಸಮತೋಲನವನ್ನು ಕಾಪಾಡುವ ಜವಾಬ್ದಾರಿ ಅದರ ಮೇಲಿದೆ. ನಿಸರ್ಗದ ಕರ್ತವ್ಯಕ್ಕೆ ಮಾನವ ಚ್ಯುತಿ ತಂದಾಗ, ಕಣ್ಣಿಗೆ ಕಾಣದ ವೈರಾಣುಗಳು ಬಂದು ಮಾನವನ ಮೇಲೆ ಯುದ್ಧ ಸಾರುತ್ತವೆ. ಹಿಂದೆ ಪ್ಲೇಗ್, ಕಾಲರಾ, ಸಿಡುಬು, ಮೈಲಿ, ಮಲೇರಿಯಾ, ಚಿಕುನ್ ಗುನ್ಯಾ, ಹಂದಿರೋಗ, ಕೋಳಿಜ್ವರ, ಮಂಗನ ಕಾಯಿಲೆಯಂಥ ಅನೇಕ ಅನಾಹುತಗಳು ಸಂಭವಿಸಿವೆ. ಆದರೆ ಅವು ಇಷ್ಟೊಂದು ವ್ಯಾಪಕವಾಗಿ ಏಕಕಾಲಕ್ಕೆ ಮಾನವನ ಮೇಲೆ ದಾಳಿ ಮಾಡಿದ್ದಿಲ್ಲ. ಇಂದು ಕೊರೋನ ವೈರಸ್ ಏಕಕಾಲಕ್ಕೆ ಇಡೀ ಜಗತ್ತನ್ನು ವ್ಯಾಪಿಸಿದೆ. 200 ದೇಶಗಳ 700 ಕೋಟಿಗೂ ಹೆಚ್ಚು ಜನರಿಗೆ ಅವರ ಮನೆಗಳೇ ಬಂದಿಖಾನೆಗಳಾಗಿವೆ. ಕಣ್ಣಿಗೆ ಕಾಣದ ಕೊರೋನ ವೈರಾಣುವಿನ ಮುಂದೆ ನ್ಯೂಕ್ಲಿಯರ್ ಶಕ್ತಿಪ್ರದರ್ಶನದಿಂದ ಜಂಭಕೊಚ್ಚಿಕೊಳ್ಳುತ್ತಿದ್ದ ದೇಶಗಳೂ ಮಂಡಿಯೂರಿವೆ. ಈ ಪೃಥ್ವಿಯನ್ನು ನೂರಾರು ಬಾರಿ ಧ್ವಂಸಮಾಡುವಂಥ ಶಕ್ತಿಶಾಲಿ ಅಣುಬಾಂಬುಗಳಿಗೆ ಈ ವೈರಾಣುವನ್ನು ಕೊಲ್ಲುವ ಶಕ್ತಿ ಇಲ್ಲ! ಎಲ್ಲ ಸಿದ್ಧಾಂತಗಳು, ಎಲ್ಲ ಧರ್ಮಗಳು ಈ ವೈರಾಣುವಿನ ಶಕ್ತಿಯ ಮುಂದೆ ನಿಬ್ಬೆರಗಾಗಿವೆ. ನಾವು ನಿಸರ್ಗಧರ್ಮವನ್ನು ಪಾಲಿಸಲೇಬೇಕು ಎಂಬುದು ಈ ವೈರಾಣುವಿನ ಆದೇಶವಾಗಿದೆ. ಇಂದು ಪೃಥ್ವಿಯ ಮೇಲೆ ಮಾನವನ ಹೊರತಾಗಿ ಉಳಿದೆಲ್ಲ ಪ್ರಾಣಿ ಪಕ್ಷಿಗಳು ಮತ್ತು ಪಂಚಮಹಾಭೂತಗಳು ನೆಮ್ಮದಿಯನ್ನು ವ್ಯಕ್ತಪಡಿಸುತ್ತಿವೆ. ಎಲ್ಲವುಗಳ ಮುಂದೆ ಮನುಷ್ಯ ನಾಲಾಯಕ್ ಆಗಿ ತಲೆ ತಗ್ಗಿಸಿ ನಿಲ್ಲುವಂತಾಗಿದೆ. ಬಸವಣ್ಣನವರು ಹೇಳುವಂತೆ ಅಂತರಂಗ ಶುದ್ಧಿ ಇಲ್ಲದೆ ಬಹಿರಂಗ ಶುದ್ಧಿ ಇಲ್ಲ. ಬಹಿರಂಗ ಶುದ್ಧಿ ಇಲ್ಲದೆ ಮಾನವ ಅಸ್ತಿತ್ವ ಇಲ್ಲ ಎಂಬುದರ ಮುನ್ಸೂಚನೆಯನ್ನು ಈ ದುರಂತ ಸೂಚಿಸುತ್ತಿದೆ.

 ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ
ಧರೆ ಹತ್ತಿ ಉರಿದಡೆ ನಿಲಲುಬಾರದು.
ಏರಿ ನೀರುಂಬಡೆ, ಬೇಲಿ ಕೆಯ್ಯ ಮೇವಡೆ,
ನಾರಿ ತನ್ನ ಮನೆಯಲ್ಲಿ ಕಳುವೊಡೆ,
ತಾಯ ಮೊಲೆವಾಲು ನಂಜಾಗಿ ಕೊಲುವಡೆ,
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ!
                              -ಬಸವಣ್ಣ
ಹತ್ತಿದ ಒಲೆಯನ್ನು ಆರಿಸುವಷ್ಟು ಮಾತ್ರ ನಮ್ಮ ಸಾಮರ್ಥ್ಯ ಇದೆ. ಆದರೆ ಧರೆ ಹತ್ತಿ ಉರಿದರೆ ನಿಲ್ಲಿಸುವ ಸಾಮರ್ಥ್ಯವಿಲ್ಲ. ನಾವಿಂದು ಇಡೀ ಧರೆ ಉರಿಯುವಂತೆ ಮಾಡಿದ್ದೇವೆ. ಆ ಉರಿಯನ್ನು ನಿಲ್ಲಿಸುವ ಶಕ್ತಿ ನಮ್ಮಲ್ಲಿಲ್ಲ. ಇಂಥವೆಲ್ಲ ನಮ್ಮ ಕುಕೃತ್ಯದಿಂದಲೇ ಸಂಭವಿಸುತ್ತಿವೆ. ನಾವು ರಕ್ಷಿಸುವ ಜಬಾಬ್ದಾರಿಯ ಬದಲಿಗೆ ಭಕ್ಷಿಸುತ್ತಿದ್ದೇವೆ. ನೀರನ್ನು ತಡೆಯಲು ಏರಿ ಇರುತ್ತದೆ. ಆದರೆ ಆ ಏರಿಯೆ ನೀರು ಉಂಡರೆ ತದ್ವಿರುದ್ಧವಾಗುವುದು. ಅದೇರೀತಿ ಬೇಲಿ ಹೊಲ ಮೆಯ್ದರೆ, ಗೃಹಿಣಿಯೆ ತನ್ನ ಮನೆಯಲ್ಲಿ ಕಳ್ಳತನ ಮಾಡಿದರೆ, ಜೀವ ಉಳಿಸುವ ತಾಯಿಯ ಮೊಲೆ ಹಾಲೇ ಕೂಸಿಗೆ ನಂಜಾದರೆ ಆಗಬಾರದ್ದು ಆಗುವುದು. ಹೀಗೆ ಮಾನವ ಈ ಪೃಥ್ವಿಗೆ ಮಾಡಬಾರದ್ದು ಮಾಡಿದ್ದರಿಂದ ಆಗಬಾರದ್ದು ಆಗುತ್ತಿದೆ.

  ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ,
ಹರದ ಕುಳ್ಳಿರ್ದ ನಮ್ಮ ಮಹಾದೇವಸೆಟ್ಟಿ.
ಒಮ್ಮನವಾದಡೆ ಒಡನೆ ನುಡಿವನು,
ಇಮ್ಮನವಾದಡೆ ನುಡಿಯನು.
ಕಾಣಿಯ ಸೋಲ, ಅರ್ಧಗಾಣಿಯ ಗೆಲ್ಲ,
ಜಾಣ ನೋಡವ್ವಾ, ನಮ್ಮ ಕೂಡಲಸಂಗಮದೇವ.
                                  -ಬಸವಣ್ಣ
ಬಸವಣ್ಣನವರು ಈ ವಚನದಲ್ಲಿ ಜೀವಜಾಲಸಮತೋಲನದ ಬಗ್ಗೆ ಹೇಳುತ್ತಾರೆ. ದೇವರು ಲೋಕವ್ಯವಹಾರ ಮಾಡುವಂಥ ಜಗನ್ನಿಯಾಮಕ. ಆತನೇ ವ್ಯಾಪಾರಕ್ಕೆ ಕುಳಿತ ಮಹಾದೇವಸೆಟ್ಟಿ. ಸಕಲಜೀವಾತ್ಮರಿಂದ ಕೂಡಿದ ನಿಸರ್ಗದ ಬಗ್ಗೆ ಮಾನವ ಒಂದೇ ಮನಸ್ಸನ್ನು ಒಳಗೊಂಡಿದ್ದರೆ ದೇವರು ಕೂಡಲೇ ಸ್ಪಂದಿಸುತ್ತಾನೆ. ಆತ ತನ್ನ ಮತ್ತು ಸಕಲಜೀವಾತ್ಮರಿಂದ ಕೂಡಿದ ನಿಸರ್ಗದ ಮಧ್ಯೆ ಅಂತರ ಕಾಯ್ದುಕೊಂಡು ಇಮ್ಮನದೊಂದಿಗೆ ನಿಸರ್ಗದ ಶೋಷಣೆ ಮಾಡತೊಡಗಿದರೆ ಆ ದೇವರು ಸ್ಪಂದಿಸುವುದಿಲ್ಲ. ಸಕಲಜೀವಾತ್ಮರಿಗೆ ಒಳ್ಳೆಯದನ್ನೇ ಬಯಸುವ ಈ ಪೃಥ್ವಿಯಲ್ಲಿ ಸೋಲು ಗೆಲವುಗಳಿಲ್ಲ. ಇರಬೇಕಾಗಿರುವುದು, ಜೀವಜಾಲ ಸಮತೋಲನವನ್ನು ಕಾಪಾಡುವುದು ಮಾತ್ರ. ಈ ಪ್ರಜ್ಞೆಯನ್ನು ಮೂಡಿಸುವ ಕೂಡಲಸಂಗಮದೇವ ಜಾಣ ಎಂದು ಬಸವಣ್ಣನವರು ಕೊಂಡಾಡುತ್ತಾರೆ.
  ಮರ ಗಿಡ ಬಳ್ಳಿ ಧಾನ್ಯಂಗಳ ಬೆಳಸೆಲ್ಲವ ತರಿತರಿದು
ಪ್ರಾಣವ ಕೊಂದುಂಡು, ಶರೀರವ ಹೊರೆವ ದೋಷಕ್ಕೆ
ಇನ್ನಾವುದು ವಿಧಿಯಯ್ಯಾ?
ಒಂದಿಂದ್ರಿಯ ಮೊದಲಾಗಿ ಐದಿಂದ್ರಿಯ ಕಡೆಯಾದ
ಜೀವಜಾಲದಲ್ಲಿದೆ ಚರಾಚರವೆಲ್ಲ.
ಅದು ಕಾರಣ,
ಕೂಡಲಸಂಗನ ಶರಣರು ಲಿಂಗಕ್ಕರ್ಪಿಸಿ ಪ್ರಸಾದವ ಕೊಂಡು
ನಿರ್ದೋಷಿಗಳಾಗಿ ಬದುಕಿದರು.
                                         -ಬಸವಣ್ಣ
ನಾವು ಸಸ್ಯಗಳನ್ನು ಕೊಂದು ಬದುಕುತ್ತೇವೆ. ಅಮೀಬಾದಿಂದ ಹಿಡಿದು ಮಾನವನವರೆಗೆ ಇಡೀ ಜೀವಜಾಲವು ಚರಾಚರದಲ್ಲಿದೆ. ಈ ಜೀವಜಾಲದಲ್ಲಿ ಆಹಾರ ಸರಪಳಿ ಒಂದನ್ನೊಂದು ತಿಂದು ಬದುಕುವ ರೀತಿಯಲ್ಲೇ ಇದೆ. ನಾವು ಸಸ್ಯವನ್ನು ‘ಕೊಂದು’ ತಿನ್ನುವ ಮೊದಲು ಆ ಆಹಾರವನ್ನು ಲಿಂಗಕ್ಕೆ ಅರ್ಪಿಸುವ ಮೂಲಕ, ಅದನ್ನು ಪ್ರಸಾದವಾಗಿ ಸ್ವೀಕರಿಸಿ ನಿರ್ದೋಷಿಗಳಾಗಬೇಕೆಂದು ಸೂಚಿಸುತ್ತಾರೆ. ಈ ನಿಸರ್ಗವನ್ನು ಪ್ರಸಾದದಂತೆ ಉಪಯೋಗಿಸಿದಾಗ ಮಾತ್ರ ಅದು ತನ್ನ ಸಮತೋಲನವನ್ನು ಕಾಯ್ದುಕೊಳ್ಳಬಲ್ಲುದು.

 ಮನೆ ನೋಡಾ ಬಡವರು; ಮನ ನೋಡಾ ಘನ
ಸೋಂಕಿನಲ್ಲಿ ಶುಚಿ; ಸರ್ವಾಂಗ ಕಲಿಗಳು.
ಪಸರಕ್ಕನುವಿಲ್ಲ; ಬಂದ ತತ್‌ಕಾಲಕ್ಕೆ ಉಂಟು,
ಕೂಡಲಸಂಗನ ಶರಣರು ಸ್ವತಂತ್ರಧೀರರು.
                                  -ಬಸವಣ್ಣ
ವ್ಯಕ್ತಿಗಳು ಶ್ರೀಮಂತರಾಗುತ್ತ ಹೋದರೆ, ಅವರ ದುರಾಸೆಯಿಂದ ನಿಸರ್ಗ ಬಡವಾಗುತ್ತ ಹೋಗುತ್ತದೆ. ಬಡವರಿಂದ ಮಾತ್ರ ಶ್ರೀಮಂತ ಸಮಾಜದ ನಿರ್ಮಾಣ ಸಾಧ್ಯ. ನಿಸರ್ಗವನ್ನು ಶ್ರೀಮಂತವಾಗಿ ನೋಡುವ ಉದ್ದೇಶದಿಂದಲೇ ಶರಣರು ಐಹಿಕ ಜಗತ್ತಿನಲ್ಲಿ ಬಡವರಾಗಿ ಇರಲು ನಿರ್ಧರಿಸಿದರು. ಅವರು ಮನೆ ಬಡವರ ಮನೆಯಾಗಿದ್ದರೂ ಮನಸ್ಸು ದೇವರ ಜೊತೆಗಿರುವ ಘನ ಮನಸ್ಸಾಗಿದ್ದರಿಂದ ತಮ್ಮಾಳಗಿನ ಲೋಕದಲ್ಲಿ ಅತ್ಯಂತ ಶ್ರೀಮಂತರಾಗಿದ್ದರು. ಪತ್ನೀವ್ರತರಾಗಿದ್ದ ಅವರು ಸಾಂಕ್ರಾಮಿಕ ರೋಗದಿಂದ (ಸೋಂಕಿನಿಂದ) ದೂರವಾಗಿದ್ದರು. ಶುಚಿತ್ವದಿಂದ ಇದು ಸಾಧ್ಯವಾಗಿತ್ತು. ಈ ಶುಚಿತ್ವವು ವಿಶಿಷ್ಟವಾಗಿದೆ. ಏಕೆಂದರೆ ಅವರು ಸರ್ವಾಂಗ ಕಲಿಗಳಾಗಿದ್ದರು. ಅಂದರೆ ಎಲ್ಲ ಅಂಗಾಂಗಗಳ ಮೇಲೆ ಅವರು ವಿಜಯವನ್ನು ಸಾಧಿಸಿದ್ದರು. ಅವರ ಕಣ್ಣು ಕೆಟ್ಟದ್ದನ್ನು ನೋಡುತ್ತಿರಲಿಲ್ಲ. ಅವರ ಕಿವಿ ಕೆಟ್ಟದ್ದನ್ನು ಕೇಳುತ್ತಿರಲಿಲ್ಲ. ಅವರ ಕೈಗಳು ಕೆಟ್ಟದ್ದನ್ನು ಮುಟ್ಟುತ್ತಿರಲಿಲ್ಲ. ಅವರ ಕಾಲುಗಳು ಕೆಟ್ಟದ್ದರ ಕಡೆಗೆ ಹೋಗುತ್ತಿರಲಿಲ್ಲ. ಹೀಗೆ ಅವರು ತಮ್ಮ ದೇಹದ ಎಲ್ಲ ಅಂಗಾಂಗಗಳ ಮೇಲೆ ವಿಜಯ ಸಾಧಿಸಿದ್ದರಿಂದಲೇ ಯಾವುದೇ ಐಹಿಕ ಆಸೆಯಿಂದ ದೂರವಾಗಿದ್ದರು. ಅವರು ತಮಗಾಗಿ ಸಂಗ್ರಹಿಸುತ್ತಿರಲಿಲ್ಲ. ತಮ್ಮಲ್ಲಿನ ಮಿಗುತಾಯವನ್ನೆಲ್ಲ ಬಸವಣ್ಣನವರು ಸ್ಥಾಪಿಸಿದ ಸಾಮಾಜಿಕ ನಿಧಿಯಾದ ಶಿವನಿಧಿಗೆ ಅರ್ಪಿಸುತ್ತಿದ್ದರು. ಕಾಯಕಜೀವಿಗಳಾಗಿದ್ದ ಅವರ ದೈನಂದಿನ ಬದುಕಿನಲ್ಲಿ ಯಾವುದೇ ಕೊರತೆ ಇರಲಿಲ್ಲ.

ಹೀಗೆ ಶರಣರು ಕುಟುಂಬ, ಸಮಾಜ ಮತ್ತು ಸಕಲಜೀವಾತ್ಮರಿಂದ ಕೂಡಿದ ನಿಸರ್ಗದೊಂದಿಗೆ ಅನ್ಯೋನ್ಯವಾಗಿ ಬದುಕುವ ಮೂಲಕ ಬದುಕಿನ ಮೂಲಾಧಾರವಾದ ಸಾಮರಸ್ಯದ ಪಾಠ ಕಲಿಸುವ ಮೂಲಕ ನಾವೆಲ್ಲ ಸಕಲ ಜೀವರಾಶಿ ಮತ್ತು ನಿಸರ್ಗದ ಜೊತೆ ಬದುಕುವಂತೆ ಮಾಡಿದರು. ಆದರೆ ನಾವು ಅವರ ಮಾತು ಕೇಳದೆ ನರಳುವಂತಾಗಿದೆ. ನಮ್ಮೆಲ್ಲರಿಗಿಂತ ವಿಶಿಷ್ಟವಾದ ವ್ಯಕ್ತಿತ್ವವನ್ನು ಶರಣರು ಹೊಂದಿದ್ದರಿಂದಲೇ ಸ್ವತಂತ್ರಧೀರರಾಗಿದ್ದರು. ಆದರೆ ಇಂದಿನ ಜಗತ್ತಿನ ದೊಡ್ಡಣ್ಣರು ಕೂಡ ಸ್ವಾತಂತ್ರ್ಯವನ್ನು ಕಳೆದುಕೊಂಡು ಅಧೀರರಾಗಿದ್ದಾರೆ. ಬಸವಮಾರ್ಗದಲ್ಲಿ ಮುನ್ನಡೆದರೆ ಮಾತ್ರ ನಾವು ಬದುಕುತ್ತೇವೆ ಮತ್ತು ಜಗತ್ತನ್ನು ಬದುಕಿಸುತ್ತೇವೆ.

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News