ಸಾವಿರಾರು ಕೂಲಿ ಕಾರ್ಮಿಕರಿಗೆ ಉಚಿತ ಊಟದ ವ್ಯವಸ್ಥೆ
ಬೆಂಗಳೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಬರುವ ಕರ್ನಾಟಕ-ತಮಿಳುನಾಡಿನ ಅತ್ತಿಬೆಲೆ ಗಡಿ ಪ್ರದೇಶದ ಕೈಗಾರಿಕೆಗಳಲ್ಲಿ ದುಡಿಯುತ್ತಿರು ತಮಿಳುನಾಡು, ಬಿಹಾರ, ಉತ್ತರಪ್ರದೇಶ, ಒರಿಸ್ಸಾ ಸೇರಿದಂತೆ ಇತರ ರಾಜ್ಯಗಳ ಸಾವಿರಾರು ಕೂಲಿ ಕಾರ್ಮಿಕರಿಗೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಉಚಿತ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.
ರಾಜಕೀಯ ಕಾರಣಗಳಿಗಾಗಿ ರಾಜ್ಯ ರಾಜ್ಯಗಳ ನಡುವೆ ವೈಮನಸ್ಸು ಇರಬಬಹುದು. ಆದರೆ, ದುಡಿಯುವಂತಹ ಜನತೆಯ ನಡುವೆ ಯಾವುದೇ ವೈಮನಸ್ಸು ಇರಲಾರದೆಂದು ಕೊರೋನ ಸೋಂಕಿನ ಸಂದರ್ಭದಲ್ಲಿ ಅತ್ತಿಬೆಲೆ ಗಡಿ ಪ್ರದೇಶದ ಜನತೆ ಸಾಬೀತು ಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಇಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಪ್ರದೇಶ, ಜಿಗಣಿ ಕೈಗಾರಿಕಾ ಪ್ರದೇಶ, ಸರ್ಜಾಪುರ, ಬೊಮ್ಮಸಂದ್ರ, ಅತ್ತಿಬೆಲೆ ಕೈಗಾರಿಕಾ ಪ್ರದೇಶ ಹಾಗೂ ತಮಿಳುನಾಡಿನ ಹೊಸೂರು ಕೈಗಾರಿಕಾ ಪ್ರದೇಶ, ಜೂಜುವಾಡಿ ಕೈಗಾರಿಕೆ ಪ್ರದೇಶಗಳಿದ್ದು, ಅದರಲ್ಲಿ ಉತ್ತರ ಭಾರತ, ಈಶಾನ್ಯ ಭಾರತದ ಲಕ್ಷಾಂತರ ಕೂಲಿ ಕಾರ್ಮಿಕರು ದುಡಿಯುತ್ತಿದ್ದಾರೆ.
ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಏಕಾಏಕಿ ದೇಶಾದ್ಯಂತ ನಿರ್ಬಂಧ ಘೋಷಿಸಿತು. ಇದರ ಪರಿಣಾಮ ಇಲ್ಲಿ ದುಡಿಯುತ್ತಿದ್ದ ವಲಸೆ ಕಾರ್ಮಿಕರು ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ. ತಮ್ಮ ರಾಜ್ಯಗಳಿಗೂ ಹೋಗಲಾರದೆ, ಇಲ್ಲಿಯೂ ಇರಲಾರದ ಪರಿಸ್ಥಿತಿ ನಿರ್ಮಾಣವಾಯಿತು. ಇಂತಹ ಸಂದರ್ಭದಲ್ಲಿ ಗಡಿಪ್ರದೇಶದ ಗ್ರಾಮಗಳ ಜನತೆ ಅವರಿಗೆ ಧೈರ್ಯತುಂಬಿ ಮಧ್ಯಾಹ್ನ ಹಾಗೂ ರಾತ್ರಿಯ ಊಟದ ವ್ಯವಸ್ಥೆಯನ್ನು ಮಾಡಿದ್ದಾರೆ.
ಅತ್ತಿಬೆಲೆ ಹೋಬಳಿಯ ಬಳ್ಳೂರು, ದಾಸನಪುರ ಗ್ರಾಮದ ಸುಮಾರು 20ಕ್ಕಿಂತಲೂ ಹೆಚ್ಚಿರುವ ಯುವಕರ ತಂಡ ಇಲ್ಲಿನ ಸಿಪ್‌ಕಾಟ್, ಜೂಜುವಾಡಿಯ ಕೈಗಾರಿಕಾ ಪ್ರದೇಶದಲ್ಲಿ ದುಡಿಯುತ್ತಿರುವ ಬಿಹಾರ, ಪಶ್ಚಿಮ ಬಂಗಾಳದ ಸಾವಿರಾರು ಕಾರ್ಮಿಕರಿಗೆ ಉಚಿತ ವ್ಯವಸ್ಥೆ ಮಾಡಿದ್ದಾರೆ. ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಲಾಕ್‌ಡೌನ್ ಮುಗಿಯುವವರೆಗೆ ಇಲ್ಲಿನ ವಲಸೆ ಕಾರ್ಮಿಕರಿಗೆ ಉಚಿತ ಊಟದ ವ್ಯವಸ್ಥೆಯನ್ನು ಮಾಡಲು ಸಿದ್ಧರಿದ್ದೇವೆ. ಹೀಗಾಗಿ ಯಾವಕಾರ್ಮಿಕರು, ಬಡವರು ಅನಗತ್ಯವಾಗಿ ಆತಂಕಕ್ಕೆ ಒಳಗಾಗಬಾರದು. ಇದರ ಜೊತೆಗೆ ಊಟವನ್ನು ಹೊರತು ಪಡಿಸಿ ಅವರಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಚಿಂತನೆ ನಡೆಸುತ್ತಿದ್ದೇವೆಂದು ತಾಲೂಕು ಪಂಚಾಯತ್ ಸದಸ್ಯ ಮಂಜುನಾಥರೆಡ್ಡಿ ಮಾಹಿತಿ ನೀಡಿದರು.
ಈಗ ಮಧ್ಯಾಹ್ನ ಹಾಗೂ ಸಂಜೆ ಸಮಯದಲ್ಲಿ ಉಚಿತ ಊಟದ ವ್ಯವಸ್ಥೆ ಮಾಡಿದ್ದೇವೆ. ನಮ್ಮೆಂದಿಗೆ ಹೆಚ್ಚಿನ ದಾನಿಗಳು ಕೈ ಜೋಡಿಸಿದರೆ ಬೆಳಗಿನ ತಿಂಡಿ ಸೇರಿದಂತೆ ಮತ್ತಿತರರ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ. ಹೀಗಾಗಿ ಆಸಕ್ತ ದಾನಿಗಳು ನನ್ನ ನಂ. 99022-64289ಕ್ಕೆ ಕರೆ ಮಾಡಿ ಸಹಾಯ ಮಾಡಬಹುದು.
ಮಂಜುನಾಥರೆಡ್ಡಿ, ತಾಪಂ ಸದಸ್ಯ