ಕೊರೋನ ವಿರುದ್ಧದ ಹೋರಾಟ: ರಕ್ಷಣಾ ಸಾಧನಗಳು,ಮಾಸ್ಕ್‌ಗಳ ಕೊರತೆ ಬಗ್ಗೆ ಪೋಸ್ಟ್ ಹಾಕಿದ ವೈದ್ಯರ ವಜಾ

Update: 2020-04-17 15:24 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಎ.17: ಕೊರೋನ ವೈರಸ್ ಪಿಡುಗು ತಾಂಡವವಾಡುತ್ತಿದ್ದರೂ ಆಸ್ಪತ್ರೆಯಲ್ಲಿ ಸಿಬ್ಬಂದಿಗಾಗಿ ಸೂಕ್ತ ರಕ್ಷಣಾ ಸಾಧನಗಳು ಮತ್ತು ಮಾಸ್ಕ್‌ಗಳ ಕೊರತೆಯನ್ನು ಪ್ರಸ್ತಾಪಿಸಿದ್ದ ಮೂಳೆತಜ್ಞರೋರ್ವರನ್ನು ಉತ್ತರ ದಿಲ್ಲಿ ಮಹಾನಗರ ಪಾಲಿಕೆ ಅಧೀನದ ಹಿಂದು ರಾವ್ ಹಾಸ್ಪಿಟಲ್ ಸೇವೆಯಿಂದ ವಜಾಗೊಳಿಸಿ ಆದೇಶಿಸಿದೆ.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಹೊರಡಿಸಿರುವ ಆದೇಶದಲ್ಲಿ, ಮೂಳೆತಜ್ಞ ಡಾ.ಪಿಯೂಷ್ ಪುಷ್ಕರ್ ಸಿಂಗ್ ಅವರು ಸಂಸ್ಥೆಗೆ ಅಗೌರವವನ್ನು ತಂದಿದ್ದಾರೆ ಎಂದು ಆರೋಪಿಸಲಾಗಿದೆ.

 “ಅವಮಾನಕಾರಿ ಹೇಳಿಕೆಗಳೊಂದಿಗೆ ಹಿಂದು ರಾವ್ ಆಸ್ಪತ್ರೆಯ ಆರ್ಥೊಪೆಡಿಕ್ ಎಮರ್ಜನ್ಸಿ ವಾರ್ಡ್‌ನ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದು ಆಕ್ಷೇಪಾರ್ಹವಾಗಿದೆ. ಇದಕ್ಕಾಗಿ ನಿಮ್ಮನ್ನೇಕೆ ಸೇವೆಯಿಂದ ವಜಾಗೊಳಿಸಬಾರದು” ಎಂದು ಕಾರಣ ಕೇಳಿ ಆಡಳಿತ ವರ್ಗವು ಮಾ.16ರಂದು ಡಾ.ಸಿಂಗ್ ಅವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿತ್ತು.

ಈ ಹಿಂದೆ ಹೆಲ್ತ್ ಜರ್ನಲಿಸ್ಟ್ ಓರ್ವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಡಾ.ಸಿಂಗ್ ತಾನು ಅಮಾಯಕ ಎಂದು ಹೇಳಿದ್ದರು. ‘ರೋಗಿಯೋರ್ವನ ಹಾಸಿಗೆಯ ಮೇಲೆ ನೀರು ಸೋರುತ್ತಿದ್ದ ವೀಡಿಯೊವನ್ನು ಶೇರ್ ಮಾಡಿಕೊಂಡಿದ್ದಕ್ಕಾಗಿ ಮತ್ತು ಆಸ್ಪತ್ರೆಗೆ ‘ಅಗೌರವ ’ತಂದಿದ್ದಕ್ಕಾಗಿ ಡಾ.ಸಿಂಗ್ ಅವರನ್ನು ವಜಾ ಮಾಡಲಾಗಿದೆ. ಅಲ್ಲದೆ ಮಾಸ್ಕ್‌ಗಳು ಮತ್ತು ಕಿಟ್‌ಗಳ ಕಳ್ಳತನದ ಆರೋಪವೂ ಅವರ ಮೇಲಿದೆ ಮತ್ತು ಕಿಟ್‌ಗಳನ್ನು ದೇಣಿಗೆಗಳನ್ನಾಗಿ ಸ್ವೀಕರಿಸಿ ಅವುಗಳನ್ನು ವೈದ್ಯರಿಗೆ ವಿತರಿಸುತ್ತಿದ್ದರು’ ಎಂದು ಈ ಟ್ವೀಟ್‌ನಲ್ಲಿ ಹೇಳಲಾಗಿತ್ತು.

ವೈದ್ಯರಿಗಾಗಿ ಸೌಲಭ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಡಾ.ಸಿಂಗ್ ಧ್ವನಿಯೆತ್ತುತ್ತಿದ್ದರು ಎನ್ನುವುದನ್ನು ಅವರ ಟ್ವಿಟರ್ ಪೋಸ್ಟ್‌ಗಳು ತೋರಿಸುತ್ತಿವೆ. ಕೊರೋನ ವೈರಸ್ ಕುರಿತು ಜಾಗೃತಿಯನ್ನು ಮೂಡಿಸಲೂ ಅವರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಮಾ.20ರ ಪೋಸ್ಟ್‌ನಲ್ಲಿ ಅವರು ಮನೆಯಲ್ಲಿ ಇರುವಂತೆ ಮತ್ತು ವದಂತಿಗಳಿಗೆ ಕಿವಿಗೊಡದಂತೆ ಜನತೆಯನ್ನು ಕೇಳಿಕೊಂಡಿದ್ದರು.

ಲಾಕ್‌ಡೌನ್ ಆರಂಭಗೊಂಡ ಬಳಿಕ ಮಾ.17ರಂದು ಇನ್ನೊಂದು ಪೋಸ್ಟ್‌ನಲ್ಲಿ ಡಾ.ಸಿಂಗ್,ಆಸ್ಪತ್ರೆಯಲ್ಲಿ ಸೂಕ್ತ ರಕ್ಷಣಾ ಸಾಧನಗಳು ಮತ್ತು ಮಾಸ್ಕ್‌ಗಳ ಕೊರತೆಯಿದೆ ಎಂದು ಬೆಟ್ಟು ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News