‘ಕೋವಿಡ್’ಗಳಿಂದಾಗಿ ನಡೆದ ಕ್ರಾಂತಿಗಳು - ಇತಿಹಾಸ ಹುಟ್ಟಿಸುವ ಆಶಾವಾದ

Update: 2020-04-19 15:13 GMT

"ಕತ್ತಲ ಕಾಲದಲ್ಲೂ ಹಾಡುಗಳಿರಬಹುದೇ ...ಇರಬಹುದು ಕತ್ತಲ ಕಾಲದ ಬಗ್ಗೆ"... ಎಂದು ಬ್ರೆಕ್ಟ್ ಆಶಾವಾದಿ ಪದ್ಯ ಕಟ್ಟಿದ ಸಮಯದಲ್ಲಿ ಇಡೀ ಯುರೋಪ್ ಫ್ಯಾಷಿಸಂನ ಕ್ರೌರ್ಯದ ಕತ್ತಲಲ್ಲಿ ಮುಳುಗಿತ್ತು. ಬಿಕ್ಕಟ್ಟುಗಳು, ಯುದ್ಧಗಳು , ನೈಸರ್ಗಿಕ ವಿಪತ್ತುಗಳು, ಮಾನವ ನಿರ್ಮಿತ ಪಿಡುಗುಗಳು, ಸುಧಾರಿಸಲಾಗದ ದ್ವೇಷಗಳಿಂದಾಗಿ  ಆವರಿಸುವ ಕತ್ತಲು ಬೆಳಕನ್ನು ಕಾಣಿಸದಂತೆ ಮಾಡಿದಾಗಲೆಲ್ಲಾ ಭವಿಷ್ಯದ ಬಗೆಗಿನ ಆಶಾವಾದವು ಮಾತ್ರ ವ್ಯಕ್ತಿಯನ್ನು ಮತ್ತು ಸಮಾಜವನ್ನು ಕಾಪಾಡಿದೆ.. ಒಬ್ಬ ಕವಿಯಾಗಿ ಅಂದು ಬ್ರೆಕ್ಟ್ ಕೂಡ ಅದೇ ಪ್ರಯತ್ನ ಮಾಡುತ್ತಿದ್ದ.

ಮೋದಿ ಸರ್ಕಾರದ ವಂಚನೆಯಂತೆ ಏರುತ್ತಲೇ ಇರುವ ಕೋರೋನ ಸೋಂಕಿತರ ಮತ್ತು ಸಾವಿನ ಸಂಖ್ಯೆಗಳು, ಮುಗಿಯದ ಲಾಕ್ ಡೌನ್ ಗಳು, ಕೊರೋನಾದಿಂದ ಉಳಿಸುತ್ತೇವೆ ಎನ್ನುವ ನೆಪದಲ್ಲಿ ಹಸಿವಿಗೆ ಬಲಿಗೊಟ್ಟು ದೀಪಹಚ್ಚಿ ಚಪ್ಪಾಳೆ ತಟ್ಟುತ್ತಿರುವ ಬಾಲ್ಕನಿ ಭಾರತ, ನಿರರ್ಥಕ  "ಪವಿತ್ರ" ಹೋರಾಟಗಳ ಆತ್ಮವಂಚನೆಗಳು...ಇವೆಲ್ಲವೂ ಸಹ ಮತ್ತೊಮ್ಮೆ ಭಾರತವನ್ನು  ಹತಾಶೆಯ ಕತ್ತಲಿಗೆ ದೂಡುತ್ತಿರುವುದು ನಿಜ..

ಆದರೆ ಇದಕ್ಕಿಂತ ಹತಾಶ ಸಂದರ್ಭದಲ್ಲೂ ಇಂತಹ ಸಾಂಕ್ರಾಮಿಕಗಳೇ  ಸಮಾಜದಲ್ಲಿ ಕಂಡರಿಯದ ಬದಲಾವಣೆಗಳನ್ನು ತಂದ ಹಲವಾರು  ಉದಾಹರಣೆಗಳಿವೆ...  ಅವುಗಳಲ್ಲಿ ಕೆಲವನ್ನು ಮಾತ್ರ ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ:

1. 1897ರಲ್ಲಿ ಭಾರತವು "ಬುಬೊನಿಕ್ ಪ್ಲೇಗ್" ಎಂಬ ಬೃಹತ್ ಪ್ಲೇಗು ಮಾರಿಗೆ ತುತ್ತಾಗಿದ್ದು ನಮಗೆಲ್ಲಾ ಗೊತ್ತೇ ಇದೆ. ಆದರೆ ಅದನ್ನು ನಿಭಾಯಿಸುವ ಹೆಸರಲ್ಲಿ ಆಗಿನ ವಸಾಹತುಶಾಹಿ ಬ್ರಿಟಿಷ ಸರ್ಕಾರ ಭಾರತದ ಜನರ ಮೇಲೆ ಪೈಶಾಚಿಕ ದಬ್ಬಾಳಿಕೆಯನ್ನು ನಡೆಸಿತು. ಇದರಿಂದಾಗಿಯೇ ಕೋಟಿಗೂ ಹೆಚ್ಚು ಭಾರತೀಯರು ಹುಳುಗಳಂತೆ ಸತ್ತುಹೋದರು.

ಆದರೆ ಇದು ಹಲವು ಊಹಿಸಲಸಾಧ್ಯ ರಾಜಕೀಯ ಪರಿಣಾಮಗಳಿಗೂ ಕಾರಣವಾಯಿತು.

ಉದಾಹರಣೆಗೆ, ಭಾರತವು ಬ್ರಿಟಿಷ್ ಚಕ್ರಾಧಿಪತ್ಯದೊಳಗೆ ಇರಬೇಕೆಂದು ಆಶಿಸುತ್ತಿದ್ದ ಕಾಂಗ್ರೆಸ್ಸಿನ ಮಂದವಾದಿ ನಾಯಕ  ಗೋಪಾಲ್ ಕೃಷ್ಣ ಗೋಖಲೆ ಸಹ ಬ್ರಿಟಿಷ್ ಕ್ರೌರ್ಯವನ್ನು ತೀವ್ರವಾಗಿ ಖಂಡಿಸಿಸುವಂತಾಯಿತು. ಕಾಂಗ್ರೆಸ್ಸಿನ ಸಂಸ್ಥಾಪಕ  ಎ..ಓ . ಹ್ಯೂಮನೇ 1903ರಲ್ಲಿ ಭಾರತದಲ್ಲಿ ಸಾಂವಿಧಾನಿಕ ಮಾರ್ಗಗಳಿಂದ ಬದಲಾವಣೆ ಬರುವುದು ಕಷ್ಟ ಎಂದು ಹೇಳಬೇಕಾಯಿತು.

ಅಷ್ಟು ಮಾತ್ರವಲ್ಲ. ಹಿಂದೂ ಪುನರುತ್ಥಾನದ ಸುತ್ತ ಸುತ್ತುತ್ತಿದ್ದ ತಮ್ಮ ಗಮನವನ್ನು ಬಾಲಗಂಗಾಧರ ತಿಲಕರು ಬ್ರಿಟಿಷರ ವಿರುದ್ಧ  ತಿರುಗಿಸಿಕೊಳ್ಳಲೇಬೇಕಾಯಿತು ಮತ್ತು  "ಸ್ವಾತಂತ್ರ್ಯ"ವನ್ನು ಕೂಡ ಕೇಳುವಂತಾಯಿತು .

ಇವೆಲ್ಲಕ್ಕಿಂತ ಮಿಗಿಲಾದ ಮತ್ತೊಂದು ರಾಜಕೀಯ ಬೆಳವಣಿಗೆಯೂ ಭಾರತದಲ್ಲಿ ಸಂಭವಿಸಿತು.

1897ರಲ್ಲಿ ಭಾರತ ಜನ ಪ್ಲೇಗು ಮಾರಿಯಿಂದ ಮತ್ತು ಬ್ರಿಟಿಶರ ದಮನಗಳಿಂದ ಹುಳುಗಳಂತೆ ಸಾಯುತ್ತಿದ್ದಾಗ ಬ್ರಿಟನ್ ರಾಣಿ  ವಿಕ್ಟೋರಿಯಾ, ಲಂಡನ್ನಿನಲ್ಲಿ ತನ್ನ ವಜ್ರಮಹೋತ್ಸವವನ್ನು ಆಚರಿಸಿಕೊಂಡಳು. ಭಾರತೀಯರ ಬಗ್ಗೆ ಬ್ರಿಟಿಷರ ಈ ಸಂವೇದನಾಶೂನ್ಯತೆಯಿಂದ ಕ್ರುದ್ಧರಾಗಿದ್ದ ಚಾಪೇಕರ್ ಸಹೋದರರು ಅದೇ ದಿನ ಪುಣೆಯಲ್ಲಿ ಬ್ರಿಟಿಷ್ ಪ್ಲೇಗ್ ಕಮಿಷನರ್ ಒಬ್ಬರನ್ನು ಕೊಂದು ಹಾಕಿದರು.

ಈ ಘಟನೆಯೇ ಮುಂದೆ ಭಾರತದ ಸುಶಿಕ್ಷಿತ ಮಧ್ಯಮ ವರ್ಗದಲ್ಲಿ  ಬ್ರಿಟಿಷ್ ವಸಾಹತುಶಾಹಿ ವಿರೋಧಿ ಕ್ರಾಂತಿಕಾರಿ ಪ್ರಜ್ಞೆಯನ್ನು ಹುಟ್ಟುಹಾಕಿತು ಮತ್ತು ಬಂಗಾಳದಲ್ಲಿ ಅನುಶೀಲನ್, ಮಹಾರಾಷ್ಟ್ರದಲ್ಲಿ ಅಭಿನವ್ ಭಾರತ್ ತರಹದ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ಯುವ ಸಂಘಟನೆಗಳ ಹುಟ್ಟಿಗೂ ಕಾರಣವಾಯಿತು.

ಇದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ತುಂಬಾ ಪ್ರಮುಖವಾದ ತಿರುವು ಬಿಂದು ಆಗಿತ್ತು. ಏಕೆಂದರೆ ಆ ವೇಳೆಗಾಗಲೇ ಬಂಗಾಳ, ಪಂಜಾಬ್ ಮತ್ತು ಮಹಾರಾಷ್ಟ್ರಗಳಲ್ಲಿ ಮೇಲ್ಜಾತಿ ಮಧ್ಯಮ ವರ್ಗಗಳಲ್ಲಿ ಹಿಂದೂ ಮಹಾಸಭಾದಂತಹ ಸಂಘಟನೆಗಳು   ಸಕ್ರಿಯವಾಗತೊಡಗಿದ್ದವು ಹಾಗು ಭಾರತೀಯರ ಶತ್ರುಗಳು ಮುಸ್ಲಿಮರೇ ಹೊರತು ಬ್ರಿಟಿಷರಲ್ಲವೆನ್ನುವ ಮತ್ತು ಬ್ರಿಟಿಷರು  ಸ್ವಾತಂತ್ರ್ಯ ಹೋರಾಟದ ಮಿತ್ರರು ಎಂಬ ನಂಜಿನ ಹಾಗು ದ್ರೋಹದ ರಾಜಕೀಯವನ್ನು ಪ್ರಾರಂಭಿಸಿದ್ದರು. ಇದೆ ಬಗೆಯ ನಂಜಿನ ಕಥಾನಕವನ್ನು ಇಟ್ಟುಕೊಂಡು 1882ರಲ್ಲಿ ಬಂಕಿಮ ಚಂದ್ರ ಚಟರ್ಜಿಯವರು ರಚಿಸಿದ್ದ  "ಆನಂದ ಮಠ" ಕಾದಂಬರಿ ಹಾಗು ಅದರಲ್ಲಿನ "ವಂದೇ ಮಾತರಂ" ಎಂಬ ಮುಸ್ಲಿಂ ದ್ವೇಷದ ಗೀತೆ  ಬಂಗಾಳದಲ್ಲಿ ಜನಪ್ರಿಯವಾಗತೊಡಗಿತ್ತು.

ಆದರೆ 1897ರ ಪ್ಲೇಗ್ ಸಾಂಕ್ರಾಮಿಕವನ್ನು  ಬ್ರಿಟಿಷರು ನಿಭಾಯಿಸಿದ ರೀತಿ ಹಾಗು ಚಾಪೇಕರ್ ಸಹೋದರರ ಧೈರ್ಯಶಾಲಿ ಕೃತ್ಯ  ಹಿಂದುತ್ವವಾದಿ ಹಾಗು ಬ್ರಿಟಿಷ ಪರವಾದಿ ರಾಜಕೀಯವನ್ನು ಹಿಂದಕ್ಕೆ ಸರಿಸಿ ಬ್ರಿಟಿಷ ವಸಾಹತುಶಾಹಿ ವಿರೋಧಿ ಪ್ರಜ್ಞೆಯನ್ನು ಬಲಗೊಳಿಸಿತು..

2.  ಅದೇರೀತಿ  ಮೊದಲನೇ ಮಹಾಯುದ್ಧದ ನಂತರ 1918 ರಲ್ಲಿ  ಭಾರತವು "ಸ್ಪಾನಿಶ್ ಫ್ಲೂ" ಎಂದು ಕರೆಯುವ ಸಾಂಕ್ರಾಮಿಕಕ್ಕೆ ಬಲಿಯಾಯಿತು. ಆಗಲೂ ಭಾರತೀಯರ ಬಗ್ಗೆ  ಆಳುವ ಬ್ರಿಟಿಷರ ವಸಾಹತುಶಾಹಿ ಧೋರಣೆಯಿಂದಾಗಿ ಕೋಟ್ಯಾದಿ  ಭಾರತೀಯರು ಬಲಿಯಾದರು. ಇದು ಮತ್ತೊಮ್ಮೆ ದೇಶಾದ್ಯಂತ ಬ್ರಿಟಿಷ್ ವಿರೋಧಿ ಧೋರಣೆ ತಾರಕಕ್ಕೇರಲು ಕಾರಣವಾಯಿತು. 

3.  ಯುರೋಪಿನಲ್ಲಿ 14 ನೇ ಶತಮಾನದಲ್ಲಿ ದೊಡ್ಡ ಪ್ಲೇಗು ಮಾರಿ  ದಾಳಿ ಇಟ್ಟಿತ್ತು. ಒಂದು ಅಂದಾಜಿನ ಪ್ರಕಾರ ಅದರಿಂದಾಗಿ ಯೂರೋಪಿನ ಅಂದಿನ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನ ಸತ್ತು ಹೋದರು. ಅಂದರೆ ಹೆಚ್ಚು-ಕಡಿಮೆ ಯೂರೋಪಿನ ಪ್ರತಿ ಮನೆಯಲ್ಲೂ ಹೆಣಗಳು ಬಿದ್ದಿದ್ದವು. ಇದರಿಂದಾಗಿ ಯೂರೋಪಿನ ದೊಡ್ಡ ಸಂಖ್ಯೆಯ ಜನರಿಗೆ ಚರ್ಚು ಹಾಗು ರಾಜ ತಮ್ಮನ್ನು ರಕ್ಷಿಸಬಹುದೆಂಬ ಬಗ್ಗೆ ಬಲವಾದ ಮತ್ತು ಆಳವಾದ ಪ್ರಶ್ನೆಗಳು ಹಾಗು ಅನುಮಾನಗಳು ಹುಟ್ಟಿಕೊಂಡವು. ಇದೇ ಮುಂದೆ ಯುರೋಪಿನಲ್ಲಿ ನಿಧಾನವಾಗಿ ವೈಚಾರಿಕವಾದದ  ಉತ್ಥಾನಕ್ಕೂ ನಂತರದಲ್ಲಿ ದೊಡ್ಡ ದೊಡ್ಡ ಬೂರ್ಜ್ವಾ  ಕ್ರಾಂತಿಗಳಿಗೆ  ಬೇಕಾದ ಮೌಲಿಕ ಬುನಾದಿಯನ್ನು ಹಾಕಿಕೊಟ್ಟವು. ...

ಇಂದು ಕೋವಿಡ್ ಫ್ಲೂ ಸಾಂಕ್ರಾಮಿಕ ಜಗತ್ತಿನ ಮೇಲೆ ಆಕ್ರಮಣ ಮಾಡಿದೆ.

ಮನುಷ್ಯಕುಲವೇ ವೈರಸ್ಸಿಗೆ ಹೆದರಿ ಮನೆಯಲ್ಲೇ ಅವಿತುಕೊಂಡಿದೆ. ಇಡೀ ಜಗತ್ತನ್ನೇ ಹತ್ತಿಪ್ಪತ್ತು ಬಾರಿ ನಾಶಮಾಡಬಲ್ಲಷ್ಟು ಶಕ್ತಿ ಉಳ್ಳ ಶಕ್ತರಾಷ್ಟ್ರಗಳು ವೈರಸ್ಸಿನ ಮುಂದೆ ಕೈಚೆಲ್ಲಿ ಕೂತಿವೆ.

ಕೋವಿಡ್ ಗೆ ಮುಂಚೆ ನವ ಉದಾರವಾದಿ ಆರ್ಥಿಕ ನೀತಿಗಳ ಭಾಗವಾಗಿ ಜನಕಲ್ಯಾಣ ಕಾರ್ಯಕ್ರಮಗಳನ್ನೆಲ್ಲಾ ಹಿಂತೆಗೆದುಕೊಳ್ಳುತ್ತಿದ್ದ ಕ್ರೋನಿ ಸರ್ಕಾರಗಳೇ ಇಂದು ಅನಿವಾರ್ಯವಾಗಿ ಒಂದಷ್ಟು ಜನಕಲ್ಯಾಣ ಕಾರ್ಯಕ್ರಮಗಳನ್ನು ಒಂದಷ್ಟು ಕಾಲವಾದರೂ ನಡೆಸಲೇಬೇಕಾದ ಅನಿವಾರ್ಯತೆಗೆ ಒಳಗಾಗಿವೆ....

ನಡೆಯುತ್ತಿರುವ ಬೆಳವಣಿಗೆಗಳನ್ನು ಹೀಗೂ ನೋಡಬಹುದು ...

ಆದರೆ ಅದೇ ಸಮಯದಲ್ಲಿ ವಿಶೇಷವಾಗಿ ಭಾರತದಲ್ಲಿ, ಬಿಕ್ಕಟ್ಟಿನ ಸಮಯದಲ್ಲೂ ಗಟ್ಟಿಗೊಳ್ಳುತ್ತಿರುವ ದ್ವೇಷ ರಾಜಕಾರಣ, ಅದಕ್ಕೆ ಆಳುವ ಸರ್ಕಾರದ ಬೆಂಬಲ ಹಾಗು ಸಮಾಜದ ಮೌನ ಸಮ್ಮತಿ, ವೆಲ್ಫೇರ್ನ ಹೆಸರಲ್ಲಿ ಪ್ರಕಟಿಸುತ್ತಿರುವ ಪ್ರತಿ ಕಾರ್ಯಕ್ರಮದಲ್ಲೂ ಕೋವಿಡ್ ಪರಿಣಾಮದ ಹೊರೆಯನ್ನು ಉಳ್ಳವರಿಗಿಂತ ಇಲ್ಲದವರ ಮೇಲೆ ಜಾರಿಸುತ್ತಿರುವ ನರಹಂತಕ ಮನೋಭಾವ ...ಇವುಗಳು ಸಂದರ್ಭದ ಮತ್ತೊಂದು ಮುಖ...

ಹೀಗಾಗಿ, ಡಿಕೆನ್ಸ್  ಹೇಳುವಂತೆ ಇದು...  ಕೆಟ್ಟಕಾಲವು ಹೌದು ...ಒಳ್ಳೆಯ ಕಾಲವು ಹೌದು.. ಅಪಾಯಗಳ ಕಾಲವು ಹೌದು..ಅವಕಾಶಗಳ ಕಾಲವು ಹೌದು.. ಆದರೆ ಅಪಾಯಗಳು ತನ್ನಂತೆ ತಾನೇ ಅವಕಾಶವಾಗಿಬಿಡುವುದಿಲ್ಲ. ಅಪಾಯದ ವಿರುದ್ಧ ಒಂದು ಸಂಘಟಿತ, ಪ್ರಜ್ಞಾಪೂರ್ವಕ, ರಾಜಿ ರಹಿತ, ದಣಿವು ರಹಿತ -ಸಂಘರ್ಷ ಮಾತ್ರ, ಸಂಘರ್ಷ ಮಾತ್ರ -ಅಪಾಯದ ಸಂದರ್ಭವನ್ನು ಬದಲಾವಣೆಯ ಅವಕಾಶವನ್ನಾಗಿ ಮಾಡಬಲ್ಲದು.

ಅಂದಹಾಗೆ , ಭಾರತದಲ್ಲಿ ಕೊರೋನಾ ಪಿಡುಗನ್ನು ತಡೆಯಲು ಮೋದಿ ಸರ್ಕಾರವು ಬಳಸುತ್ತಿರುವ ಕಾಯಿದೆಯು 1897ರ ಪ್ಲೇಗು ಮಾರಿಯನ್ನು ತಡೆಯಲು ಬ್ರಿಟಿಷರು ಭಾರತೀಯರ ಮೇಲೆ ಪ್ರಯೋಗಿಸಿದ ಕಾಯಿದೆಯೇ ಆಗಿದೆ...

- ಶಿವಸುಂದರ್

Writer - - ಶಿವಸುಂದರ್

contributor

Editor - - ಶಿವಸುಂದರ್

contributor

Similar News