ಅರ್ಬನ್ ನಕ್ಸಲರೊಬ್ಬರ ಜೈಲುಡೈರಿ

Update: 2020-04-24 10:05 GMT

ಈ ದೇಶದ ಅಪರೂಪದ ಜನಪರ ಚಿಂತಕ ಆನಂದ್ ತೇಲ್ತುಂಬ್ಡೆ ಮತ್ತು ಹಿರಿಯ ಮಾನವ ಹಕ್ಕು ಹೋರಾಟಗಾರ ಗೌತಮ್ ನವಲಾಕ ಅವರು ಬಂಧನಕ್ಕೊಳಗಾಗಿ ಇಂದಿಗೆ 10 ದಿನಗಳಾದವು.

ಇದಕ್ಕೆ ಮುಂಚೆ ಇದೇ ಸುಳ್ಳು ಕೇಸಿನಡಿ  (ಭೀಮಾ ಕೋರೆಗಾಂವ್ ಬಂಡಾಯವನ್ನು ಬಳಸಿಕೊಂಡು ನರೇಂದ್ರ ಮೋದಿಯವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂಬ ತಲೆಬುಡವಿಲ್ಲದ ಆರೋಪ!!!) ಬಂಧಿತರಾದ  ಕವಿ- ಚಿಂತಕ  ವರವರರಾವ್, ಅಧ್ಯಾಪಕ-ಅರ್ಥಶಾಸ್ತ್ರಜ್ಞ ವರ್ನೆನ್ ಗೋನ್ಸಾಲ್ವೇಜ್, ಜನಪರ ವಕೀಲೆ ಸುಧಾ ಭಾರದ್ವಾಜ್, ಲೇಖಕ ಅರುಣ್ ಫೆರೆರಾ, ಅಧ್ಯಾಪಕಿ ಶೋಮಾ ಸೆನ್ ಹಾಗು ಇನ್ನಿತರರು ಬಂಧನಕ್ಕೊಳಗಾಗಿ ಎರಡು ವರ್ಷಗಳೇ ಆಗುತ್ತಾ ಬರುತ್ತಿದೆ. ಅವರ ಜಾಮೀನು ಅರ್ಜಿಗಳನ್ನು ಉದ್ದೇಶಪೂರ್ವಕವಾಗಿ ವಿಚಾರಣೆಗೂ ಕೈಗೆತ್ತಿಕೊಳ್ಳುತ್ತಿಲ್ಲ. ಏಕೆಂದರೆ ಅವರುಗಳ ಮೇಲಿರುವ ಆರೋಪಗಳನ್ನು ಸಾಬೀತುಪಡಿಸುವ ಒಂದೂ ನೈಜ ಪುರಾವೆಯೂ ಪೋಲೀಸರ ಬಳಿ ಇಲ್ಲ. (ಇದನ್ನು ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟಿನ ನ್ಯಾಯಾಧೀಶರುಗಳೇ ಒಪ್ಪಿಕೊಳ್ಳುತ್ತಾರೆ)

ಒಂದೆಡೆ 2002ರಲ್ಲಿ ನಡೆಸಿದ  ಗುಜರಾತಿನ ನರಮೇಧದಲ್ಲಿ ನೂರಾರು ಮುಸ್ಲಿಮರನ್ನು ಕೊಂದ ಆರೋಪಗಳು ಸಾಬೀತಾಗಿ ಶಿಕ್ಷೆಗೊಳಗಾಗಿದ್ದರೂ ಬಿಜೆಪಿಯ ಮಾಜಿ ಮಂತ್ರಿ ಮಾಯಾ ಕೊಡ್ನಾನಿ ಹಾಗು ಬಾಬಾ ಭಜರಂಗಿಗಳನ್ನು ಆರೋಗ್ಯ ಸರಿಯಿಲ್ಲ ಎನ್ನುವ ನೆಪದ ಮೇಲೆ ಕೋರ್ಟುಗಳೇ ಬಿಡುಗಡೆ ಮಾಡುತ್ತವೆ. ಮತ್ತೊಂದೆಡೆ ಮೋದಿ ಸರ್ಕಾರವನ್ನು ಟೀಕಿಸುತ್ತಿದ್ದರೆಂಬ ಏಕೈಕ ಕಾರಣಕ್ಕಾಗಿ ಮಾವೋವಾದಿ ಬೆಂಬಲಿಗನೆಂಬ ಆರೋಪಕ್ಕೆ ಗುರಿಯಾಗಿ ಕಳೆದ ಐದು ವರ್ಷಗಳಿಂದ ಜೈಲಿನಲ್ಲಿ ಕೊಳೆಯುತ್ತಿರುವ ಹಾಗು ಶೇ.90ರಷ್ಟು ಅಂಗವೈಕಲ್ಯವನ್ನು ಅನುಭವಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಇಂಗ್ಲೀಷ್  ಪ್ರೊಫೆಸರ್ ಸಾಯಿಬಾಬಾ ಅವರಿಗೆ ಆರೋಗ್ಯದ ಕಾರಣಕ್ಕಾಗಿ ಕೂಡಾ ತಾತ್ಕಾಲಿಕ ಜಾಮೀನನ್ನು ಸಹ ಇದೇ ಕೋರ್ಟುಗಳು ನಿರಾಕರಿಸುತ್ತಿವೆ. 

ಆಶ್ಚರ್ಯವೇನಿಲ್ಲ .

ಏಕೆಂದರೆ ,ಕೊರೋನಾ ಹಾಗು ಲಾಕ್ದೌನ್ ಭಯೋತ್ಪಾದನೆಯಿಂದ ಹೆದರಿ ತಮ್ಮ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ "ವಲಸೆ ಕಾರ್ಮಿಕರಿಗೆ ಮೂರೂ ಹೊತ್ತು ಕೊಟ್ಟ ಮೇಲೆ ಊಟದ ಭತ್ಯೆ ಏಕೆ ಕೊಡಬೇಕು" ಎಂದು ಕೇಳುವ ಮುಖ್ಯ ನ್ಯಾಯಾಧೀಶರು ಇರುವ ದೇಶದಲ್ಲಿ ಇನ್ಯಾವ ನಿರೀಕ್ಷೆ  ತಾನೇ ಇಟ್ಟುಕೊಳ್ಳಲು ಸಾಧ್ಯ?. ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳುವಂತೆ ಭಾರತದ ಇತಿಹಾಸದಲ್ಲೇ ಭಾರತದ ನ್ಯಾಯಾಂಗವು ಈ ಪರಿಯಲ್ಲಿ ಆಡಳಿತಾರೂಢ ಸರ್ಕಾರದ ಸೇವೆಗೆ ನಿಂತ ಉದಾಹರಣೆಯಿಲ್ಲ.

ಆದರೆ ಈ "ಅರ್ಬನ್ ನಕ್ಸಲರೆಂದರೆ ಯಾರು"?. ಆನಂದ್, ಗೌತಮ್, ಸುಧಾ ಇವರೆಲ್ಲಾ ನಿಜಕ್ಕೂ ಭಯೋತ್ಪಾದಕರೇ?

ಕರ್ನಾಟಕದ ಹೊಸ ತಲೆಮಾರಿನ ಬಹುಪಾಲು ಹೋರಾಟಗಾರರಿಗೆ ಹಾಗೂ ಬರಹಗಾರರಿಗೆ ಜೈಲು ಹಾಗೂ ಪೊಲೀಸ್ ದಮನದ  ಪರಿಚಯವಾಗಲಿ, ‘ಅರ್ಬನ್ ನಕ್ಸಲರ’ ನಿಜವಾದ ಪರಿಚಯವಾಗಲಿ ಇರಲಾರದು. ಅಥವಾ ಸಾಕುಮಾಧ್ಯಮಗಳ ಸತತ ಅಪಪ್ರಚಾರಗಳಿಂದಾಗಿ ಒಂದು ಬಗೆಯ ಅಭಿಪ್ರಾಯ ರೂಪುಗೊಂಡಿರಲೂಬಹುದು.

ನಿನ್ನೆ ಜೈಲಿನಲ್ಲಿರುವ ‘ಅರ್ಬನ್ ನಕ್ಸಲ’ರಲ್ಲಿ ಒಬ್ಬರಾದ ಅರ್ಥಶಾಸ್ತ್ರಜ್ಞ ವರ್ನೆನ್ ಗೋನ್ಸಾಲ್ವೇಜ್ ಅವರ ಜನುಮ ದಿನ(ಏಪ್ರಿಲ್ 23). ಅದನ್ನು ನೆನಸಿಕೊಂಡು ಅವರ ಮಗ ಸಾಗರ್ ಗೋನ್ಸಾಲ್ವೇಜ್ ಅವರು ತಮ್ಮ ಫೇಸ್ಬುಕ್ಕಿನಲ್ಲಿ ಅವರ ಒಂದು ಪತ್ರ   ಬರೆದಿದ್ದಾರೆ. ಆ ಪತ್ರವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ಓದಿದರೆ ಅರ್ಬನ್ ನಕ್ಸಲರ ನಿಜವಾದ ಪರಿಚಯ  ಆಗುತ್ತದೆ ಎಂದು ನನಗನ್ನಿಸಿತು .

ಅದರ ಸಂಕ್ಷಿಪ್ತ ಅನುವಾದ ಕೆಳಗಿದೆ. ದಯವಿಟ್ಟು ಬಿಡುವು ಮಾಡಿಕೊಂಡು ಓದಿ:

"ಇಂದು ನನ್ನ ತಂದೆಯ ಜನುಮ ದಿನ. ಇವತ್ತಿಗೆ ನನ್ನ ತಂದೆಗೆ 63 ವರ್ಷಗಳು ತುಂಬುತ್ತದೆ. ಸರ್ಕಾರದ ಕ್ರೌರ್ಯ ಹಾಗು ನ್ಯಾಯಾಂಗದ ವೈಫಲ್ಯಗಳಿಂದಾಗಿ ಈ ವರ್ಷದ ಜನ್ಮ ದಿನವನ್ನು ಅವರು ಜೈಲಿನಲ್ಲೇ ಕಳೆಯಬೇಕಾಗಿದೆ. ಜಗತ್ತಿನಾದ್ಯಂತ ಕೋವಿಡ್ ಮಹಾಮಾರಿ ಹರಡಿರುವ ಈ ಹೊತ್ತಿನಲ್ಲಿ, ಈ ಸಾಂಕ್ರಾಮಿಕಕ್ಕೆ ಸುಲಭವಾಗಿ ಬಲಿಬೀಳಬಹುದಾದ  ವರ್ಗಿಕರಣದಲ್ಲಿದ್ದರೂ, ನನ್ನ ತಂದೆ ಸಮರ್ಪಕವಾದ ವೈದ್ಯಕೀಯ ಸೌಕರ್ಯವಿಲ್ಲದ ಹಾಗು ಜನಸಂದಣಿಯಿಂದ ಇಕ್ಕಟ್ಟಾಗಿರುವ ಸೆರೆಮನೆಯಲ್ಲಿ ತನ್ನ ಹುಟ್ಟುದಿನವನ್ನು ಕಳೆಯಬೇಕಿದೆ. ನನ್ನ ಅಪ್ಪ ಕಳೆದ ಒಂದೂವರೆ ವರ್ಷವನ್ನು ಪುಣೆಯ ಎರವಾಡ ಜೈಲಿನಲ್ಲಿ ಹೇಗೆ ಕಳೆದರೆಂಬುದರ ಬಗ್ಗೆ ಇವತ್ತು ನಿಮ್ಮ ಜೊತೆ ಹಂಚಿಕೊಳ್ಳಬಯಸುತ್ತೇನೆ”.

ವರ್ನೆನ್ ಅವರನ್ನು ಕೆಲದಿನಗಳ ಹಿಂದೆ ಎರವಾಡ ಜೈಲಿನಿಂದ ಮುಂಬೈಗೆ ವರ್ಗಾಯಿಸಲಾಯಿತು. ಆ ನಂತರ ಎರವಾಡ ಜೈಲಿನಲ್ಲೇ ಉಳಿಸಲ್ಪಟ್ಟ ಅರುಣ್ ಅವರು ನನ್ನ ತಾಯಿಗೆ ಒಂದು ಪತ್ರ ಬರೆದಿದ್ದಾರೆ. ಅದರಲ್ಲಿ ಅವರು ವರ್ನೆನ್ ಜೊತೆಗೆ ಜೈಲಿನಲ್ಲಿದ್ದ ಸೋನಾವನೆ ಎಂಬವರು ವರ್ನೆನ್ ಬಗ್ಗೆ ಹೇಳಿದ್ದನ್ನು ಬರೆದಿದ್ದಾರೆ:

"ವರ್ನೆನ್ ಅಂಕಲ್ ತುಂಬಾ ಒಳ್ಳೆಯ ಮನುಷ್ಯ. ಅವರು ನನಗೆ ಸಂವಿಧಾನವನ್ನು ಹೇಗೆ ಓದಬೇಕು ಎಂದು ಕಲಿಸಿಕೊಟ್ಟರಲ್ಲದೆ  ಸಂವಿಧಾನದ  ಓದಿನ ಬಗ್ಗೆ ಆಸಕ್ತಿಯನ್ನೂ ಮೂಡಿಸಿದರು. ಅವರು ತುಂಬಾ ಪ್ರತಿಭಾಶಾಲಿ. ವರವರರಾವ್‌ ಜೀಯವರೂ ಸಹ ನನಗೆ ಒಂದು ಕವಿತಾ ಸಂಕಲನವನ್ನು ಕೊಟ್ಟರು. ವರ್ನೆನ್ ಮತ್ತು ವರವರರಾವ್  ಇಬ್ಬರೂ ಸಹ ನನ್ನನ್ನು ತುಂಬಾ ಗೌರವದಿಂದ ನಡೆಸಿಕೊಳ್ಳುತ್ತಿದ್ದರು. ಅವರಿಬ್ಬರೂ ಒಬ್ಬ ಉತ್ತಮ ವ್ಯಕ್ತಿಯಾಗಲು ಬೇಕಾದ ಪ್ರೇರಣೆಯನ್ನು ನನಗೆ ನೀಡಿದರು. ಈ ದಿನಗಳಲ್ಲಿ ನನ್ನ ಹೆಚ್ಚಿನ ಸಮಯವನ್ನು ನಾನು ಸಂವಿಧಾನದ ಓದಿನಲ್ಲಿ ಕಳೆಯುತ್ತಿದ್ದೇನೆ. ದಯವಿಟ್ಟು ಅವರಿಬ್ಬರಿಗೂ ನನ್ನ ಸಲಾಮುಗಳನ್ನೂ ಹಾಗೂ ನೆನಪುಗಳನ್ನು ತಲುಪಿಸಿಬಿಡಿ".

ಹೌದು..ಇದೇ ನನ್ನ ಅಪ್ಪನ ರೀತಿ.

‘ಅರ್ಬನ್ ನಕ್ಸಲ್’ ಎಂದು ಕರೆಸಿಕೊಳ್ಳಲ್ಪಡುವ ವ್ಯಕ್ತಿ ಜೈಲಿನಲ್ಲಿ ಮಾಡುತ್ತಿರುವುದು ಇದನ್ನೇ- ಜನರಿಗೆ ಸಂವಿಧಾನದ ಬಗ್ಗೆ ತಿಳವಳಿಕೆ ಕೊಡುವುದು.

ತನ್ನ ಸೆಲ್‌ ನಲ್ಲಿರುವ 10-12 ಸಹ- ಆರೋಪಿಗಳನ್ನು ಕೂಡಿಸಿಕೊಂಡು ಅವರು  ಒಂದು ಗಂಟೆಗೂ ಹೆಚ್ಚಿನ ಅವಧಿಯ ತರಗತಿಗಳನ್ನು ಪ್ರತಿನಿತ್ಯ ನಡೆಸುತ್ತಾರಂತೆ. ಅವರೆಲ್ಲರಿಗೂ ಇಂಗ್ಲಿಷನ್ನು ಅದರಲ್ಲೂ ಮುಖ್ಯವಾಗಿ ಇಂಗ್ಲಿಷ್ ಮಾತನಾಡಲು ಕಲಿಸಿಕೊಡಲು ಹೆಚ್ಚಿನ ಪ್ರಯತ್ನ ಹಾಕುತ್ತಾರಂತೆ. ಇಂಗ್ಲಿಷ್ ಪುಸ್ತಕಗಳಲ್ಲಿನ ಸಾಲುಗಳನ್ನು ಗಟ್ಟಿಯಾಗಿ ಓದಲು ಮತ್ತು ಆತ್ಮವಿಶ್ವಾಸದಿಂದ ಕೆಲವು ಸಾಲುಗಳನ್ನು ಇಂಗ್ಲೀಷಿನಲ್ಲಿ ಮಾತನಾಡಲು ಉತ್ತೇಜಿಸುವುದು ಅದರ ಭಾಗ.

“ನಾವು ತಂದೆಯವರನ್ನು ಭೇಟಿಯಾಗಲು ಹೋದಾಗಲೂ ತನ್ನ ವಿದ್ಯಾರ್ಥಿಗಳಿಗಾಗಿ ಸರಳ ಇಂಗ್ಲೀಷಿನ  ಪುಸ್ತಕಗಳನ್ನು ತಂದುಕೊಡಲು ಒತ್ತಾಯಿಸುತ್ತಿದ್ದರು. ಮತ್ತು ಜೈಲಿನ ಲೈಬ್ರರಿಯಲ್ಲಿ ಅಂಥ ಪುಸ್ತಕಗಳನ್ನು ಎರವಲು ತಂದು ಓದಿಸುತ್ತಿದ್ದರು. ಅನ್ನಾ ಫ್ರಾಂಕ್ ಅವರ ಡೈರಿ ಅವರು ಓದಿಸುತ್ತಿದ್ದ ಪುಸ್ತಕಗಳಲ್ಲಿ ಒಂದು”.

“ಹೆಚ್ಚೂ ಕಡಿಮೆ ಪ್ರತಿದಿನ ಅವರು ತರಗತಿಗಳನ್ನು ನಡೆಸುತ್ತಿದ್ದರು. ತನ್ನನ್ನು ಮುಂಬೈ ಜೈಲಿಗೆ ವರ್ಗಾಯಿಸುತ್ತಿದ್ದಾರೆ ಎಂದು ತಿಳಿದ ಮೇಲೆ ತರಗತಿಗಳ ಅವಧಿಗಳು ಹೇಗೆ ದೀರ್ಘವಾಗಿಬಿಟ್ಟಿತೆಂದು ಅವರು ಕಳೆದ ಬಾರಿ ಕೋರ್ಟಿನಲ್ಲಿ  ಭೇಟಿಯಾದಾಗ  ಉತ್ಸಾಹದಿಂದ ನನ್ನ ಬಳಿ ಹೇಳಿದರು. ಪ್ರತಿಯೊಬ್ಬರು ತಮ್ಮ ಜೀವನದ ಕಥೆಗಳನ್ನು ಹಾಗೂ ತಮ್ಮ ಅನುಭವಗಳನ್ನು ಮುಚ್ಚುಮರೆಯಿಲ್ಲದೆ ಹಂಚಿಕೊಂಡರು. ತನ್ನ ವಿದ್ಯಾರ್ಥಿಗಳು ತನಗೆ ನೀಡಿದ ಬೀಳ್ಕೊಡುಗೆಯ ವಿವರಗಳನ್ನು ನನ್ನೊಂದಿಗೆ ಅವರು ತುಂಬಾ ಉತ್ಸಾಹದಿಂದ ಹಂಚಿಕೊಂಡರು. ಅತ್ಯಂತ ನಿರಾಶಾದಾಯಕ ವಾತಾವರಣದಲ್ಲೂ ಅವರು ತೋರಿದ ಆಪ್ತತೆ ಹಾಗೂ ಅನುಬಂಧಗಳ ಚಿತ್ರಗಳು ಆ ವಿವರಗಳಲ್ಲಿದ್ದವು”.

“ಈ ಭೇಟಿಯಾಗಿ ಎರಡು ತಿಂಗಳು ಕಳೆದಿವೆ. ಆ ನಂತರ ನಾನು ನನ್ನ ತಂದೆಯನ್ನು ಭೇಟಿಯಾಗಿಲ್ಲ. ಹೀಗಾಗಿ ಮುಂಬೈನ  ತಲೋಜ ಜೈಲಿನಲ್ಲಿ ಅವರು ಹೇಗೆ ಸಮಯ ಕಳೆಯುತ್ತಿದ್ದಾರೆಂದು ನನಗೆ ತಿಳಿದಿಲ್ಲ”.

“ಇತ್ತೀಚೆಗೆ ತಲೋಜ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ವ್ಯಕ್ತಿಯ ಮುಖಾಂತರ ನನಗೆ ತಿಳಿದು ಬಂದಿದ್ದೇನೆಂದರೆ ಆ ವ್ಯಕ್ತಿಯ ಜಾಮೀನು ಅರ್ಜಿಯನ್ನೂ ಒಳಗೊಂಡಂತೆ ಕೋವಿಡ್ ಸಾಂಕ್ರಾಮಿಕ ಶುರುವಾದ ನಂತರದಲ್ಲಿ ಹಲವಾರು ವ್ಯಕ್ತಿಗಳ ಮಧ್ಯಂತರ ಜಾಮೀನಿನ ಅರ್ಜಿಯನ್ನು ವರ್ನನ್ ಅವರೇ ಬರೆದುಕೊಟ್ಟಿದ್ದಂತೆ. ನಮ್ಮ ನ್ಯಾಯ ವ್ಯವಸ್ಥೆಯಲ್ಲಿ ಹಾಗೂ ಜೈಲಿನಲ್ಲಿ ಇರುವ ಹಲವಾರು ಅಸಮಾನತೆಗಳು ಮತ್ತು ಅನ್ಯಾಯಗಳ ಸಮಗ್ರ ಚಿತ್ರಣಗಳು ನನ್ನ ಅಪ್ಪನ ಅನುಭವ ಹಾಗೂ ಬರಹಗಳ ಮೂಲಕ ನನಗೆ ಗೊತ್ತಾಗಿದೆ”.

“ಕೇವಲ ವ್ಯಕ್ತಿಗಳ ಚಹರೆಯ ಕಾರಣದಿಂದಾಗಿ ಹಲವಾರು ಅಮಾಯಕ ವ್ಯಕ್ತಿಗಳನ್ನು ಸುಳ್ಳು ಕೇಸಿನಲ್ಲಿ ಸಿಲುಕಿಸಿ ಜೈಲು ಪಾಲು ಮಾಡಲಾಗುತ್ತಿದೆ. ಅವರ ಪ್ರಕರಣಗಳ ವಿಚಾರಣೆಯು ಪ್ರಾರಂಭವಾಗುವುದಕ್ಕೆ ಹಲವಾರು ವರ್ಷಗಳು ಬೇಕಾಗುತ್ತದೆ. ಹೀಗಾಗಿ ಹಲವಾರು ಜನ ತಮ್ಮ ಶಿಕ್ಷಾವಧಿಗಿಂತ ಹೆಚ್ಚಿನ ಸಮಯವನ್ನು ಆರೋಪಿಗಳಾಗಿ ವಿಚಾರಣೆಯಿಲ್ಲದೆ ಕಳೆದುಬಿಡುತ್ತಾರೆ. ಅವರೆಲ್ಲರೂ ಬಡತನದ ಹಿನ್ನೆಲೆಯವರಾಗಿರುವುದರಿಂದ ಉತ್ತಮ ಕಾನೂನು ಸಹಾಯವೂ ದೊರೆಯದೆ ಅವರ ಸೆರೆಮನೆ ವಾಸ ಇನ್ನೂ ಅಧಿಕವಾಗಿಬಿಡುತ್ತಿದೆ”.

“ನನ್ನಪ್ಪ ನನಗೆ ಹೇಳಿದ ಈ ಕಥೆಗಳನ್ನು ಕೇಳಿದ ನಂತರ ಎಲ್ಲಾ ಸೆರೆಮನೆಗಳನ್ನು ನೆಲಸಮಗೊಳಿಸಬೇಕು ಎಂದು ಹಾಡಿದ ಜೋನ್ ಬಾಯೇಜ್ ಅವರು ನೂರಕ್ಕೆ ನೂರು ಪಾಲು ಸರಿ ಎಂದು ನನಗೆ ಅನಿಸುತ್ತದೆ. ನಮ್ಮ ಸೆರೆಮನೆ ವ್ಯವಸ್ಥೆ ಹಾಗೂ ಒಟ್ಟಾರೆ ನಮ್ಮ ನ್ಯಾಯಾಂಗ ವ್ಯವಸ್ಥೆಯೊಳಗೆ ಮೂಲಭೂತವಾದ ಬದಲಾವಣೆಗಳು ಬರದೆ ಅವು ನಿಜಕ್ಕೂ ಒಂದು ನ್ಯಾಯಿಕ ವ್ಯವಸ್ಥೆಯಾಗುವುದಿಲ್ಲ. ನನ್ನ ಅಪ್ಪ ಒಬ್ಬ ಹೃದಯವಂತ ಹಾಗೂ ಸಹಾನುಭೂತಿಯುಳ್ಳ ವ್ಯಕ್ತಿಯಾಗಿದ್ದು ತನ್ನ ಜೊತೆಗಿರುವವರನ್ನು ಸದಾ ಸಂತೋಷದಿಂದ ಇರುವಂತೆ ಮಾಡಲು ಪ್ರಯತ್ನಿಸುತ್ತಿರುತ್ತಾರೆ. ಜೈಲಿನಲ್ಲಿ ಅವರು ಮಾಡುತ್ತಿರುವ ಕೆಲಸಗಳು ಅವರ ಸಹಜ ಸ್ವಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಂಥಾ ಸಂಕಷ್ಟಗಳ ಸಂದರ್ಭದಲ್ಲೂ ಅಗತ್ಯ ಇರುವವರಿಗೆ ಸಹಾಯ ಮಾಡುತ್ತಾ ಅವರ ಮುಖದಲ್ಲೂ ಮಂದಹಾಸ ಮೂಡುವಂತೆ ಮಾಡುತ್ತಿದ್ದಾರೆ”.

“ಹುಟ್ಟು ಹಬ್ಬದ ಶುಭಾಶಯಗಳು ಡ್ಯಾಡಾ..

ನೀನು ಮಾಡುತ್ತಿರುವ ಪ್ರತಿಯೊಂದಕ್ಕೂ ಮನದಾಳದ ಕೃತಜ್ಞಗಳು. ನಿನ್ನ ಬಗ್ಗೆ ಮತ್ತು ನೀನು ಮಾಡುತ್ತಿರುವ ಕೆಲಸಗಳ ಬಗ್ಗೆ ನನಗೆ ಅತ್ಯಂತ ಹೆಮ್ಮೆಯಿದೆ. ಈ ವ್ಯವಸ್ಥೆಯಲ್ಲಿ ವ್ಯಾಪಕವಾಗಿರುವ ಅನ್ಯಾಯ, ಅಸಮಾನತೆಗಳ ಬಗ್ಗೆ ಧ್ವನಿ ಎತ್ತಿದ ನಿನ್ನನ್ನೂ ಮತ್ತು ನಿನ್ನಂಥ ಇತರರನ್ನು ಶಿಕ್ಷಿಸುತ್ತಿರುವ ಈ ವ್ಯವಸ್ಥೆಗೆ ನನ್ನ ಧಿಕ್ಕಾರ.

-ಸಾಗರ್"

...........................................

ಇದು ವರ್ನನ್ ಅವರ ಮಗ ಸಾಗರ್ ಅವರಪ್ಪನಿಗೆ ಫೇಸ್‌ ಬುಕ್ಕಿನಲ್ಲಿ ಬರೆದುಕೊಂಡ ಪತ್ರದಲ್ಲಿ ಅನಾವರಣಗೊಂಡಿರುವ ಅರ್ಬನ್ ನಕ್ಸಲ್ ಒಬ್ಬರ ಜೈಲು ದಿನಚರಿ.

ಇದು ಪ್ರಾಯಶಃ ಜೈಲಿನಲ್ಲಿರುವ ಎಲ್ಲಾ "ನಕ್ಸಲ್ ಖೈದಿ"ಗಳ ದಿನಚರಿಯೂ ಆಗಿರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಅಷ್ಟು ಮಾತ್ರವಲ್ಲ. ಜನಪರವಾಗಿ ಈ ವ್ಯವಸ್ಥೆಯನ್ನು ಬದಲಿಸಬೇಕೆಂದು ತಮ್ಮನ್ನು ತಾವು ಪ್ರಾಮಾಣಿಕವಾಗಿ ತೆತ್ತುಕೊಂಡು ಜೈಲುಪಾಲಾಗಿದ್ದ/ಜೈಲುಪಾಲಾಗಿರುವ ಎಲ್ಲಾ ನೈಜ ಗಾಂಧಿವಾದಿಗಳ, ಸಮಾಜವಾದಿಗಳ, ಕಮ್ಯುನಿಸ್ಟರ, ಜನಪರ ಚಿಂತಕರ ಡೈರಿಗಳ ಪುಟಗಳೂ ಅಗಿರುತ್ತವೆ.

ಕರ್ನಾಟಕದಲ್ಲಿ ತುರ್ತುಪರಿಸ್ಥಿತಿಯ ಕಾಲದಲ್ಲಿ ಜೈಲುಪಾಲಾದ ಹಲವಾರು ಗಾಂಧಿವಾದಿಗಳು, ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ಜೈಲಿನಲ್ಲಿ ನಡೆಯುತ್ತಿದ್ದ ಅನ್ಯಾಯವನ್ನು ಮತ್ತು ಅಸಮಾನತೆಯನ್ನು ಪ್ರತಿಭಟಿಸಿದ್ದಕ್ಕೆ ಜೈಲಿನೊಳಗೆ ಇನ್ನೂ  ಹೆಚ್ಚಿನ ಕಠಿಣ ಶಿಕ್ಷೆಗೆ ಗುರಿಯಾದ ಕಥನಗಳಿವೆ.

1980ರ ನಂತರದಲ್ಲಿ ಕರ್ನಾಟಕದಲ್ಲೂ, ರಾಜಕೀಯ ಭಿನ್ನಮತಗಳಿಗೆಲ್ಲಾ ನಕ್ಸಲೈಟ್ ಎಂಬ ಹಣೆಪಟ್ಟಿ ಹಚ್ಚಿ ಜೈಲಿಗಟ್ಟುವುದನ್ನು ಹೆಗಡೆ ಸರ್ಕಾರದಿಂದ ಮೊದಲುಗೊಂಡು ಎಲ್ಲಾ ಸರ್ಕಾರಗಳು ಅನುಸರಿಸಲಾರಭಿಸಿದವು.

ಇಂತಹ ದಮನಕ್ಕೆ ಗುರಿಯಾಗಿ 1986ರಲ್ಲಿ ನಕ್ಸಲೈಟ್ ಎಂಬ ಆರೋಪದ ಮೇಲೆ ಜೈಲುಪಾಲಾದ ಪ್ರೊ. ಬಾಬಯ್ಯನವರಿಂದ ಹಿಡಿದು ಇತ್ತೀಚಿಗೆ (2019) ಬಂಧಿತರಾದ ದೊಡ್ಡಿಪಾಳ್ಯ ನರಸಿಂಹಮೂರ್ತಿಯವರೆಗೆ ಇಂಥಾ ಎಲ್ಲಾ ಅರ್ಬನ್ ನಕ್ಸಲರ ಜೈಲು ಡೈರಿಗಳೂ ಬಿಕ್ಕಟ್ಟಿನ ಸಮಯದಲ್ಲೂ ನ್ಯಾಯಕ್ಕೆ ಹಾಗು ಮನುಷ್ಯತ್ವಕ್ಕೆ ಬದ್ಧರಾದ ವ್ಯಕ್ತಿಗಳ ಮಾನವೀಯ ಅಂತಃಕರಣ ಮತ್ತು ಸಂವೇದನೆಗೆಗಳಿಗೆ ಕನ್ನಡಿಯನ್ನು ಹಿಡಿಯುತ್ತವೆ.

ಕೆಲವರು ಬರೆದಿದ್ದಾರೆ. ಕೆಲವರು ಬರೆದಿಲ್ಲ.

ನನಗೆ ತಿಳಿದಿರುವ ಹಾಗೆ (ನನ್ನ ಗಮನಕ್ಕೆ ಬರದಿರುವ ಇನ್ನು ಸಾಕಷ್ಟು ಬರಹಗಳು ಹಾಗು ಪುಸ್ತಕಗಳಿರಬಹುದು... ), ಬಾಬಯ್ಯನವರ "ಕಗ್ಗತ್ತಲ ಜಗತ್ತಿನಲ್ಲಿ ತೊಂಭತ್ತು ದಿನಗಳು", ಕುಮಾರ್ ಸಮತಳ ಅವರ "ಜೈಲೆಂಬ ಲೋಕದಲ್ಲಿ", ಹಾಗೂ ನೂರ್ ಶ್ರೀಧರ್ ಅವರ "ನನ್ನನುಭವದ ಸೂಫಿ"  ಪುಸ್ತಕಗಳು ಜೈಲೆಂಬ ಸತ್ವ ಪರೀಕ್ಷೆಯನ್ನು ಜನಪರ ಹೋರಾಟಗಾರರು ಹೇಗೆ ಮಾನವತ್ವದ ಆಚರಣೆಯ ಮೂಲಕ ಜಯಿಸಿದರು ಎಂಬುದಕ್ಕೆ ಪುರಾವೆಯಾಗಿವೆ.

ಇದಲ್ಲದೆ ನಕ್ಸಲ್ ಆರೋಪದ ಮೇಲೆ ಹಲವಾರು ವರ್ಷಗಳ ಕಾಲ ಜೈಲುವಾಸವನ್ನನುಭವಿಸಿದ ಉಜ್ಜನಿಗೌಡ, ದೇವೇಂದ್ರಪ್ಪ, ನಂದಕುಮಾರ್, ಚಂದ್ರಶೇಖರ ಗೊರೆಬಾಳ, ಪದ್ಮನಾಭ ನಿಲಗುಳಿ, ಈಗಲೂ ಪರಪ್ಪನ ಅಗ್ರಹಾರದಲ್ಲಿ  ತನ್ನ ಒಂಭತ್ತನೇ ವರ್ಷದ ಜೈಲುವಾಸವನ್ನನುಭವಿಸುತ್ತಿರುವ ಶಿವಕುಮಾರ್ ಅಲಿಯಾಸ್ ರಮೇಶ್ (ಇತ್ತೀಚೆಗೆ ಅಲ್ಲಿ ನಡೆಯುತ್ತಿದ್ದ ತಾರತಮ್ಯವನ್ನು ವಿರೋಧಿಸಿದ್ದಕ್ಕೆ ಆತನನ್ನು ಒಂಟಿ ಶಿಕ್ಷೆಗೆ ಗುರಿ ಮಾಡಿದ್ದಾರೆಂದು ಸುದ್ದಿ) ಹಾಗೂ ಇನ್ನಿತರರೂ ಸಹ ತಮ್ಮ ಸಾಂದರ್ಭಿಕ ಲೇಖನಗಳಲ್ಲಿ ತಮ್ಮ ಜೈಲು ಹೋರಾಟವನ್ನು ದಾಖಲಿಸಿದ್ದಾರೆ.

ಇವರಲ್ಲದೆ ಎಡಪಕ್ಷಗಳ ಹಾಗೂ ಅವರ ಸಮೂಹ ಸಂಘಟನೆಗಳ ಕಾರ್ಯಕರ್ತರು, ದಲಿತ-ರೈತ ಸಂಘಟನೆಗಳ ಹಿರಿಯ ಕಾರ್ಯಕರ್ತರು, ಗಾಂಧಿವಾದಿ, ಸಮಾಜವಾದಿ-ಮಾರ್ಕ್ಸ್‌ ವಾದಿ ಚಿಂತಕರು ಜೈಲುವಾಸದಲ್ಲಿದಾಗ ಹತಾಷೆ ಹಾಗೂ ಆತ್ಮಾನುಕಂಪಗಳಲ್ಲಿ ಮುಳುಗಿ ಹೋಗದೆ ಜೈಲಿನ ಕತ್ತಲಲ್ಲೂ ಬೆಳಕು ತರುವ ಕೆಲಸ ಮಾಡಿರುವುದು ಅವರ ಮೌಖಿಕ ಕಥನಗಳಲ್ಲಿ ಗೊತ್ತಾಗುತ್ತದೆ.

ವಿಷಯವಿಷ್ಟೆ..

ಸೂರ್ಯನನ್ನು ಸೆರೆಗೆ ದೂಡಿ ಹಗಲನ್ನು ನಿಷೇಧಿಸಲಾಗದು. ಗೋಳದ ಸುತ್ತಾ ಪಹರೆಯನ್ನು ವಿಧಿಸಿ ಕಾಲವನ್ನು ಬಂಧಿಸಲಾಗದು

ಅವೆಲ್ಲ ಒಂದು ಕಡೆಯಾದರೆ.. ಬಲಪಂಥೀಯರು ಜೈಲಿಗೆ ಹೋದಾಗ ಏನು ಮಾಡಿದ್ದಾರೆ?, ಅವರಲ್ಲೂ ಕೆಳಹಂತದ ಕಾರ್ಯಕರ್ತರು ಅಲ್ಲಲ್ಲಿ ಮಾನವೀಯತೆಯಿಂದ ನಡೆದುಕೊಂಡ ಉದಾಹರಣೆಗಳು ಇದ್ದಿರಲಿಕ್ಕೇ ಬೇಕು. ಆದರೆ ಅವರ ನಾಯಕರು ಮಾತ್ರ ಜೈಲಿಗೆ ಹೋಗುವುದೇ ಕಡಿಮೆ. ಅಥವಾ ಬೇರೊಂದು ರೀತಿಯಲ್ಲಿ ಹೇಳುವುದಾದರೆ ತಮ್ಮೊಳಗೆ ಒಂದು ಬಲವಾದ ಆಂತರಿಕ ಬಿಕ್ಕಟ್ಟು ಏರ್ಪಡದೆ ಆಳುವ ವರ್ಗಗಳು ಮತ್ತವರ ಸರ್ಕಾರಗಳು ತನ್ನದೇ "ಪರಿವಾರ"ದವರನ್ನು ಬಂಧಿಸುವುದು ಅಪರೂಪ .

ಒಂದು ವೇಳೆ ಜೈಲಿಗೆ ಹೋದರೂ ಮರುದಿನದಿದಲೇ ಈ "ನಾಯಕರು" ಸರ್ಕಾರದ ಜೊತೆ ರಾಜಿ ಮಾಡಿಕೊಂಡು ಕ್ಷಮಾಭಿಕ್ಷೆ ಕೇಳಲು ಪ್ರಾರಂಭಿಸಿದ್ದೇ ಇತಿಹಾಸ. ಸಾವರ್ಕರ್ ಇಂದ ಹಿಡಿದು ಆರೆಸ್ಸೆಸ್ಸಿನ ಸರಸಂಘ ಚಾಲಕರಾದ ಗೋಳ್ವಾಲ್ಕರ್ (1948ರಲ್ಲಿ ಆರೆಸ್ಸೆಸ್ ನಿಷೇಧವಾದಾಗ), ಬಾಳಾಸಾಹೇಬ್ ದೇವರಸ್ (1975ರ ತುರ್ತುಪರಿಸ್ಥಿತಿಯಲ್ಲಿ ಎರಡನೇ ಬಾರಿ ಆರೆಸ್ಸೆಸ್ ನಿಷೇಧವಾದಾಗ)...ಎಲ್ಲ ದೇಶಭಕ್ತರದ್ದೂ ಇದೇ ಕಥೆ.

ವರ್ನೆನ್ ಗೋನ್ಸಾಲ್ವೆಜ್ ಅವರ ಮಗ ಸಾಗರ್ ಬರೆದ ಪತ್ರ ಓದಿದಾಗ ಇವೆಲ್ಲವನ್ನೂ ಹಂಚಿಕೊಳ್ಳಬೇಕೆನ್ನಿಸಿತು.

ಇಂದು ಮಾನವೀಯ ಅಂತಃಕರಣ ಉಳ್ಳವರೆಲ್ಲರೂ ‘ಅರ್ಬನ್ ನಕ್ಸಲ’ರೆಂಬ ಶಿಲುಬೆ ಹೊರಬೇಕಾಗಿದೆ. ಹೀಗಾಗಿ ಮುಂದಿರುವ ಆಯ್ಕೆ ಎರಡೇ-

ಮಾನವತಾವಾದಿ -ನ್ಯಾಯಪರ ನಿಸ್ವಾರ್ಥಿ ‘ಅರ್ಬನ್ ನಕ್ಸಲ’ರೋ?

ಅಥವಾ ಪರಮ ಸ್ವಾರ್ಥಿ ರಾಜಿಕೋರ ಹಾಗು ಸೋಗಲಾಡಿ ದೇಶಭಕ್ತರೋ?

ಈ ದೇಶ ತನ್ನ ಆಯ್ಕೆಯನ್ನು ಸ್ಪಷ್ಟ ಮಾಡಿಕೊಳ್ಳಬೇಕಿದೆ..

ಅಲ್ಲವೇ?

(ಸಾಗರ್ ಬರೆದ ಇಂಗ್ಲಿಷ್ ಪತ್ರದ ಮೂಲ ಕೆಳಗಿನ ಲಿಂಕಿನಲ್ಲಿದೆ. ಆಸಕ್ತರು ಗಮನಿಸಬಹುದು )

- ಶಿವಸುಂದರ್

https://sabrangindia.in/article/sagar-son-father-vernon-happy-birthday-dada

Writer - - ಶಿವಸುಂದರ್

contributor

Editor - - ಶಿವಸುಂದರ್

contributor

Similar News