‘ಪಿಎಂ ಕೇರ್ಸ್’ ನಿಧಿಯನ್ನು ಮಹಾಲೇಖ ಪಾಲರು ಪರಿಶೀಲಿಸುವುದಿಲ್ಲ: ವರದಿ

Update: 2020-04-24 18:29 GMT

ಹೊಸದಿಲ್ಲಿ,ಎ.24: ಕೊರೋನ ವೈರಸ್ ಬಿಕ್ಕಟ್ಟನ್ನು ಎದುರಿಸಲು ಸಂಪನ್ಮೂಲಗಳ ಸಂಗ್ರಹಕ್ಕಾಗಿ ಸ್ಥಾಪಿಸಲಾಗಿರುವ ಪಿಎಂ ಕೇರ್ಸ್ ನಿಧಿಯನ್ನು ಭಾರತದ ಮಹಾಲೇಖಪಾಲ (ಸಿಎಜಿ)ರ ಕಚೇರಿಯು ಪರಿಶೋಧಿಸುವುದಿಲ್ಲ ಎಂದು ಸಿಎಜಿಯಲ್ಲಿನ ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.

ನಿಧಿಯು ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ದೇಣಿಗೆಗಳನ್ನು ಆಧರಿಸಿರುವುದರಿಂದ ದತ್ತಿರೂಪದ ಈ ನಿಧಿಯನ್ನು ಪರಿಶೋಧಿಸಲು ನಮಗೆ ಹಕ್ಕು ಇಲ್ಲ ಎಂದು ಈ ಮೂಲಗಳು ಹೇಳಿವೆ.

ಮಾ.28ರಂದು ಸ್ಥಾಪಿಸಲಾದ ಈ ನಿಧಿಗೆ ಪ್ರಧಾನಿ ನರೇಂದ್ರಮೋದಿ ಅವರು ಅಧ್ಯಕ್ಷರಾಗಿದ್ದು, ಹಿರಿಯ ಸಂಪುಟ ಸಚಿವರು ಟ್ರಸ್ಟಿಗಳಾಗಿದ್ದಾರೆ.

 ಟ್ರಸ್ಟಿಗಳು ಸೂಚಿಸಿದರೆ ಮಾತ್ರ ಈ ನಿಧಿಯ ಲೆಕ್ಕ ಪರಿಶೋಧನೆಯನ್ನು ನಡೆಸಬಹುದು ಎಂದು ಮೂಲಗಳು ಹೇಳಿದವು. ಟ್ರಸ್ಟಿಗಳು ನೇಮಕಗೊಳಿಸುವ ಸ್ವತಂತ್ರ ಆಡಿಟರ್‌ಗಳು ಪಿಎಂ ಕೇರ್ಸ್ ನಿಧಿಯ ಲೆಕ್ಕ ಪರಿಶೋಧನೆಯನ್ನು ನಡೆಸುತ್ತಾರೆ ಎಂದು ಸರಕಾರದ ಮೂಲಗಳು ಹೇಳಿವೆ ಎಂದು ವರದಿಗಳು ತಿಳಿಸಿವೆ.

 1948ರಿಂದಲೇ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್‌ಆರ್‌ಎಫ್)ಯು ಅಸ್ತಿತ್ವದಲ್ಲಿರುವುದರಿಂದ ಪಿಎಂ ಕೇರ್ಸ್ ನಿಧಿಯ ಅಗತ್ಯವನ್ನು ಪ್ರತಿಪಕ್ಷಗಳು ಈಗಾಗಲೇ ಪ್ರಶ್ನಿಸಿವೆ. ರಾಜ್ಯಗಳ ಪರಿಹಾರ ನಿಧಿಗಿಂತ ಹೆಚ್ಚಿನ ಆದ್ಯತೆಯನ್ನು ಪಿಎಂ ಕೇರ್ಸ್ ನಿಧಿಗೆ ನೀಡಿರುವುದಕ್ಕೆ ಹಲವಾರು ಮುಖ್ಯಮಂತ್ರಿಗಳು ಸಹ ಪ್ರಶ್ನೆಗಳನ್ನೆತ್ತಿದ್ದಾರೆ ಮತ್ತು ಶಂಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಸಿಎಜಿಯು ಪಿಎಂಎನ್‌ಆರ್‌ಎಫ್‌ನ ಲೆಕ್ಕ ಪರಿಶೋಧನೆಯನ್ನೂ ನಡೆಸುವುದಿಲ್ಲ, ಆದರೆ ಇದು 2013ರ ಉತ್ತರಾಖಂಡ ನೆರೆಯ ಬಳಿಕ ಪರಿಹಾರವನ್ನು ಒದಗಿಸಿದಾಗ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನೆತ್ತಲು ಸಿಎಜಿಗೆ ತಡೆಯಾಗಿರಲಿಲ್ಲ.

ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ದೇಣಿಗೆಗಳನ್ನು ಅವಲಂಬಿಸಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ)ಯಂತಹ ಅಂತರರಾಷ್ಟ್ರೀಯ ಸಂಸ್ಥೆಗಳು ಸಹ ಲೆಕ್ಕ ಪರಿಶೋಧನೆಗೊಳಗಾಗುತ್ತಿವೆ. ಸದ್ಯ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಸಿಎಜಿ ಡಬ್ಲುಎಚ್‌ಒದ ಲೆಕ್ಕ ಪರಿಶೋಧನೆಯನ್ನು ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News