2,000 ಕಿ.ಮೀ. ದೂರದ ಮನೆಗೆ 60,000 ರೂ. ಟ್ಯಾಕ್ಸಿ ಬಾಡಿಗೆ!

Update: 2020-04-25 17:03 GMT

ಜೈಪುರ, ಎ.25: ಕೊರೋನ ಸೋಂಕು ತೀವ್ರವಾಗಿದ್ದ ಇರಾನ್‌ನಲ್ಲಿ ಸಿಲುಕಿದ್ದ ಇಬ್ಬರು ಭಾರತೀಯ ವಿದ್ಯಾರ್ಥಿಗಳನ್ನು ಅಲ್ಲಿಂದ ವಿಶೇಷ ವಿಮಾನದ ಮೂಲಕ ಭಾರತಕ್ಕೆ ಕರೆತಂದು ರಾಜಸ್ತಾನದಲ್ಲಿ 40 ದಿನಗಳ ಕ್ವಾರಂಟೈನ್ ನಲ್ಲಿಡಲಾಗಿತ್ತು. ಈಗ ಕ್ವಾರಂಟೈನ್ ಮುಗಿದ ಬಳಿಕ ಲಾಕ್‌ಡೌನ್‌ನಿಂದಾಗಿ ತಮ್ಮ ಹುಟ್ಟೂರಿಗೆ ತೆರಳಲು ಪ್ರಯಾಸ ಪಡುವಂತಾಗಿದೆ.

ಇರಾನ್‌ನ ಟೆಹರಾನ್‌ನಲ್ಲಿರುವ ವಿವಿಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಯಾಗಿದ್ದ ಮಿನ್ಹಾಜ್ ಆಲಮ್ ಮತ್ತು ಮುಹಮ್ಮದ್ ಎಂಬ ವಿದ್ಯಾರ್ಥಿಗಳನ್ನು ವಿಶೇಷ ವಿಮಾನದ ಮೂಲಕ ಅಲ್ಲಿಂದ ತೆರವುಗೊಳಿಸಿ ಮಾರ್ಚ್ 15ರಂದು ಕೊರೋನ ಸೋಂಕು ಪರೀಕ್ಷೆಗೆ ಒಳಪಡಿಸಿದ ಬಳಿಕ, ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಸೇನಾ ಶಿಬಿರದಲ್ಲಿ ಕ್ವಾರಂಟೈನ್‌ನಲ್ಲಿರಿಸಲಾಗಿತ್ತು. 40 ದಿನದ ಕ್ವಾರಂಟೈನ್ ವಾಸ ಮುಗಿದ ಬಳಿಕ ಈಗ ಆಲಮ್ ತನ್ನ ಹುಟ್ಟೂರು, ಪಶ್ಚಿಮ ಬಂಗಾಳದ ಉತ್ತರದಿನಾಜ್‌ಪುರ ಜಿಲ್ಲೆಗೆ (ಜೈಸಲ್ಮೇರ್‌ನಿಂದ ಸುಮಾರು 2,000 ಕಿ.ಮೀ ದೂರದಲ್ಲಿದೆ) ಹೋಗಲು ನಿರ್ಧರಿಸಿ ಅಧಿಕಾರಿಗಳಿಗೆ ತಿಳಿಸಿದಾಗ, ಸ್ವಂತ ವ್ಯವಸ್ಥೆ ಮಾಡಿಕೊಂಡು ಹೋಗುವಂತೆ ತಿಳಿಸಿದ್ದಾರೆ.

ಟ್ಯಾಕ್ಸಿಯವರನ್ನು ಸಂಪರ್ಕಿಸಿದಾಗ 60,000 ರೂ. ಬಾಡಿಗೆ ಕೇಳಿದ್ದಾರೆ. ಇಷ್ಟು ಹಣ ನೀಡಲು ತನ್ನಿಂದಾಗದು. ತನ್ನೊಂದಿಗೇ ಕ್ವಾರಂಟೈನ್ ವಾಸದಲ್ಲಿದ್ದ ಕಾಶ್ಮೀರದ ಯಾತ್ರಿಗಳು ಮತ್ತು ವಿದ್ಯಾರ್ಥಿಗಳನ್ನು ಅಧಿಕಾರಿಗಳು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಆದರೆ ತನ್ನ ವಿಷಯದಲ್ಲಿ ಈ ತಾರತಮ್ಯವೇಕೆ ಎಂದು ಪ್ರಶ್ನಿಸಿರುವ ಆಲಂ, ಸರಕಾರ ನೆರವಿಗೆ ಮುಂದೆ ಬರಬೇಕು ಎಂದು ಆಗ್ರಹಿಸಿದ್ದಾನೆ.

ಮುಹಮ್ಮದ್ ಬಿಹಾರದ ಮುಝಫ್ಫರ್‌ಪುರ ಜಿಲ್ಲೆಯ ನಿವಾಸಿಯಾಗಿದ್ದು ಈತನೂ ಹುಟ್ಟೂರಿಗೆ ತೆರಳಲು ಸಾರಿಗೆ ವ್ಯವಸ್ಥೆಯಿಲ್ಲದೆ, ದುಬಾರಿ ಟ್ಯಾಕ್ಸಿ ಬಾಡಿಗೆ ಪಾವತಿಸಲು ಸಾಧ್ಯವಾಗದೆ ಕಂಗಾಲಾಗಿದ್ದಾನೆ. ಈ ಮಧ್ಯೆ, ಇಬ್ಬರ ವಿದ್ಯಾರ್ಥಿಗಳ ಕುಟುಂಬದವರಿಗೂ ಶುಕ್ರವಾರ ಜೈಸಲ್ಮೇರ್‌ನ ಅಧಿಕಾರಿಗಳಿಂದ ಫೋನ್ ಕರೆ ಬಂದಿದ್ದು, ವಿದ್ಯಾರ್ಥಿಗಳ ವಾಪಸಾತಿಗೆ ವ್ಯವಸ್ಥೆ ಮಾಡುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ವಿದ್ಯಾರ್ಥಿಗಳ ಕುಟುಂಬದವರು ಹೇಳಿದ್ದಾರೆ. ಆದರೆ ಸೇನೆಯು ಕ್ವಾರಂಟೈನ್ ಕೇಂದ್ರದ ಉಸ್ತುವಾರಿ ಮತ್ತು ನಿರ್ವಹಣೆಯನ್ನು ಮಾತ್ರ ನಡೆಸುತ್ತಿದೆ. ಅಲ್ಲಿರುವ ವ್ಯಕ್ತಿಗಳ ಸಂಚಾರದ ಬಗ್ಗೆ ಗೃಹ ಇಲಾಖೆ ನಿರ್ಧರಿಸುತ್ತದೆ ಎಂದು ಸೇನಾ ವಕ್ತಾರ ಕ ಸೊಂಬಿತ್ ಘೋಷ್ ಹೇಳಿದ್ದಾರೆ.

ಕ್ವಾರಂಟೈನ್ ಮುಗಿಸಿದ ವ್ಯಕ್ತಿಗಳನ್ನು ಅವರ ಹುಟ್ಟೂರಿಗೆ ಸಾಗಿಸಲು ಯಾವುದಾದರೂ ವ್ಯವಸ್ಥೆಯಿದೆಯೇ ಎಂಬ ಬಗ್ಗೆ ತನಗೆ ಮಾಹಿತಿಯಿಲ್ಲ ಎಂದು ಗೃಹ ಇಲಾಖೆಯ ವಕ್ತಾರೆ ವಸುಧಾ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News