ದಿಲ್ಲಿಯ ಕ್ವಾರಂಟೈನ್‌ನಲ್ಲಿ ಇಬ್ಬರು ತಬ್ಲೀಗಿ ಸದಸ್ಯರು ಮೃತ್ಯು: ತನಿಖೆಗೆ ಅಲ್ಪಸಂಖ್ಯಾತರ ಆಯೋಗ ಆಗ್ರಹ

Update: 2020-04-26 16:31 GMT

ಹೊಸದಿಲ್ಲಿ, ಎ.26: ವಾಯುವ್ಯ ದಿಲ್ಲಿಯ ಸುಲ್ತಾನ್‌ಪುರಿ ಪ್ರದೇಶದಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿದ್ದ ಇಬ್ಬರು ತಬ್ಲೀಗಿ ಜಮಾಅತ್ ಸದಸ್ಯರು ಮೃತಪಟ್ಟಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ದಿಲ್ಲಿಯ ಅಲ್ಪಸಂಖ್ಯಾತರ ಆಯೋಗ , ಪ್ರಕರಣ ತನಿಖೆ ನಡೆಸುವಂತೆ ದಿಲ್ಲಿಯ ಮುಖ್ಯಮಂತ್ರಿಯನ್ನು ಹಾಗೂ ಲೆಫ್ಟಿನೆಂಟ್ ಗವರ್ನರ್‌ರನ್ನು ಆಗ್ರಹಿಸಿದೆ.

 10 ದಿನಗಳ ಹಿಂದೆ ಹಾಜಿ ರಿಝ್ವಾನ್ ಮೃತಪಟ್ಟಿದ್ದರೆ, ಎಪ್ರಿಲ್ 22ರಂದು 60 ವರ್ಷದ ಮುಹಮ್ಮದ್ ಮುಸ್ತಫಾ ಮೃತರಾಗಿದ್ದಾರೆ. ಇಬ್ಬರೂ ತಮಿಳುನಾಡಿನವರು ಮತ್ತು ಫೆಬ್ರವರಿಯಲ್ಲಿ ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಆಯೋಗ ತಿಳಿಸಿದೆ.

ಕ್ವಾರಂಟೈನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಮತ್ತು ಅಧಿಕಾರಿಗಳ ನಿರ್ದಯ, ಸಂವೇದನಾಹೀನ ಮತ್ತು ಅಸಹಕಾರದ ವರ್ತನೆ ಮತ್ತು ಈ ಕೇಂದ್ರಗಳಿಗೆ ಆಹಾರದ ಅನಿಯಮಿತ ಪೂರೈಕೆಯ ಕಾರಣ ಮಧುಮೇಹ ರೋಗದಿಂದ ಬಳಲುತ್ತಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಆಯೋಗದ ಅಧ್ಯಕ್ಷ ಝಫರುಲ್ ಇಸ್ಲಾಂ ಖಾನ್ ಮತ್ತು ಸದಸ್ಯ ಕರ್ತಾರ್ ಸಿಂಗ್ ಕೊಚ್ಚಾರ್ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಮತ್ತು ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್‌ಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕ್ವಾರಂಟೈನ್ ಕೇಂದ್ರದಲ್ಲಿ ಭಾರತೀಯರು ಮಾತ್ರವಲ್ಲದೆ ಮಲೇಶ್ಯಾ, ಥೈಲ್ಯಾಂಡ್, ಶ್ರೀಲಂಕಾ ಮತ್ತು ಕಿರ್ಗಿಸ್ಥಾನದ ನಾಗರಿಕರಿದ್ದಾರೆ. ಇವರಲ್ಲಿ ಹಿರಿಯರು, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರೂ ಇದ್ದಾರೆ. ಆದರೆ ಇಲ್ಲಿರುವವರನ್ನು ಅಧಿಕಾರಿಗಳು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಬೆಳಗ್ಗಿನ ಉಪಾಹಾರ 11 ಗಂಟೆಗೆ, ರಾತ್ರಿಯ ಊಟ 10ರಿಂದ 11 ಗಂಟೆಯ ವೇಳೆ ಪೂರೈಸಲಾಗುತ್ತಿದೆ. ಊಟವನ್ನು ತಿನ್ನಲೇ ಸಾಧ್ಯವಿಲ್ಲ. ಹಲವರು ಹೊಟ್ಟೆನೋವಿನಿಂದ ಬಳಲುತ್ತಿದ್ದು ವಾಂತಿ ಮಾಡಿಕೊಂಡಿದ್ದಾರೆ. ಅಲ್ಲದೆ ಔಷಧದ ಅಗತ್ಯವಿರುವವರಿಗೆ ಸರಿಯಾಗಿ ಔಷಧ ಪೂರೈಸುತ್ತಿಲ್ಲ. ಈ ಕಾರಣದಿಂದ ಈಗಾಗಲೇ ಇಬ್ಬರು ಮೃತಪಟ್ಟಿದ್ದಾರೆ ಎಂದು ಆಯೋಗದ ಪತ್ರದಲ್ಲಿ ತಿಳಿಸಲಾಗಿದೆ.

ಇಲ್ಲಿರುವ ಹಲವು ತಬ್ಲೀಗಿ ಜಮಾಅತ್ ಸದಸ್ಯರು 25 ದಿನ ಪೂರೈಸಿದ್ದು 14 ದಿನದ ಕ್ವಾರಂಟೈನ್ ಅವಧಿಗಿಂತ ಇದು ಬಹುತೇಕ ದುಪ್ಪಟ್ಟಾಗಿದೆ. ಆದ್ದರಿಂದ ನೆಗೆಟಿವ್ ವರದಿ ಬಂದವರನ್ನು ತಕ್ಷಣ ಇಲ್ಲಿಂದ ಬಿಡುಗಡೆಗೊಳಿಸಬೇಕು. ಕ್ವಾರಂಟೈನ್‌ನಲ್ಲಿ ಇರುವವರಿಗೆ ಔಷಧ, ಆಹಾರದ ಸಕಾಲಿಕ ಪೂರೈಕೆಯನ್ನು ಖಾತರಿಗೊಳಿಸಬೇಕು ಮತ್ತು ಇದರಲ್ಲಿ ಆಗುವ ಲೋಪಕ್ಕೆ ಈ ಪ್ರದೇಶದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ರನ್ನು ಹೊಣೆಯಾಗಿಸಬೇಕು ಎಂದು ಆಯೋಗ ಆಗ್ರಹಿಸಿದೆ.

ಅಲ್ಲದೆ ರಮಝಾನ್ ಹಿನ್ನೆಲೆಯಲ್ಲಿ, ಉಪವಾಸದ ಅವಧಿಗೆ ಹೊಂದಿಕೊಂಡು ಆಹಾರ ಒದಗಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News