ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ನೀರು, ಬಿಸ್ಕೆಟ್ ಎಸೆಯುತ್ತಿರುವ ವಿಡಿಯೋ ವೈರಲ್: ಭಾರೀ ಆಕ್ರೋಶ

Update: 2020-04-27 07:49 GMT

ಲಕ್ನೋ : ಉತ್ತರ ಪ್ರದೇಶದ ಆಗ್ರಾದಲ್ಲಿ ಬೀಗ ಜಡಿದ ಗೇಟುಗಳ ಒಳಗಿನ ಕ್ವಾರಂಟೈನ್ ಕೇಂದ್ರಗಳಲ್ಲಿ ಚಹಾ, ಬಿಸ್ಕೆಟ್ ಹಾಗೂ ನೀರಿನಂಥ ಅಗತ್ಯ ವಸ್ತುಗಳಿಗೂ ಜನ ಹಪಹಪಿಸುತ್ತಿರುವ ವೀಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಕೊರತೆ ನೀಗಿಸಲು ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ಹೇಳಿದೆ.

25 ಸೆಕೆಂಡ್‍ಗಳ ಎರಡು ವೀಡಿಯೊಗಳ ಪೈಕಿ ಒಂದರಲ್ಲಿ ವೈಯಕ್ತಿಕ ಸುರಕ್ಷಾ ಸಾಧನಗಳನ್ನು ಧರಿಸಿದ ವ್ಯಕ್ತಿ ಬಿಸ್ಕೆಟ್ ಪ್ಯಾಕೆಟ್‍ಗಳನ್ನು ಗೇಟಿನ ಸಮೀಪ ಎಸೆಯುತ್ತಿರುವ ಹಾಗೂ ಅದಕ್ಕಾಗಿ ಗೇಟಿನ ಒಳಗಿನಿಂದ ಕೈಚಾಚುತ್ತಿರುವ ದೃಶ್ಯವಿದೆ.

ಗೇಟಿನ ಹೊರಗೆ ನೀರಿನ ಬಾಟಲಿಗಳನ್ನು ಕೂಡಾ ಇಡಲಾಗಿದ್ದು, ಅದಕ್ಕಾಗಿಯೂ ಒಳಗಿನಿಂದ ಕೈಚಾಚುತ್ತಿರುವುದು ಕಂಡುಬರುತ್ತದೆ. ಕ್ವಾರಂಟೈನ್‍ನಲ್ಲಿ ಇದ್ದವರ ನಡುವೆ ಸಾಮಾಜಿಕ ಅಂತರ ಕಾಪಾಡುವುದು ಅಗತ್ಯವಾಗಿದ್ದು, ಈ ಅಂಶವೇ ಕೇಂದ್ರದಲ್ಲಿ ಇಲ್ಲದಿರುವುದು ದೃಶ್ಯಾ ವಳಿಯಿಂದ ಕಂಡುಬರುತ್ತದೆ. ಗೇಟಿನ ಹಿಂದೆ ಕ್ವಾರಂಟೈನ್‍ನಲ್ಲಿರುವ ಜನ ಗುಂಪು ಸೇರಿರುವುದು ಕಾಣಿಸುತ್ತಿದೆ.

“ಪ್ರತ್ಯೇಕವಾಗಿ ಇರುವ ಜನರ ಸ್ಥಿತಿ ಇದು. ನಮಗೆ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಇದುವರೆಗೂ ನಡೆದಿಲ್ಲ. ಆಹಾರ ಮತ್ತು ನೀರಿಗೂ ಸರಿಯಾದ ವ್ಯವಸ್ಥೆ ಇಲ್ಲ. ಪ್ರತಿಯೊಬ್ಬರನ್ನೂ ನಿರ್ಲಕ್ಷಿಸಲಾಗುತ್ತಿದೆ” ಎಂದು ಮಹಿಳೆ ಹೇಳುತ್ತಿರುವುದು ಮತ್ತೊಂದು ವೀಡಿಯೊ ತುಣುಕಿನಲ್ಲಿ ಕೇಳಿಸುತ್ತಿದೆ. ಚಹಾ ಕಪ್‍ಗಳನ್ನು ಕೂಡಾ ಗೇಟಿನ ಹೊರಗಡೆ ಇಟ್ಟಿರುವುದು ಕಂಡುಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News