ದಿಲ್ಲಿಯ ಸೆಂಟ್ರಲ್ ವಿಸ್ಟಾ ಯೋಜನೆಗೆ ತಡೆಹೇರಲು ಸುಪ್ರೀಂ ಕೋರ್ಟ್ ನಕಾರ

Update: 2020-04-30 17:47 GMT

ಹೊಸದಿಲ್ಲಿ,ಎ.30: ಸಂಸತ್ ಭವನ ಹಾಗೂ ಸಚಿವಾಲಯಗಳನ್ನು ನಿರ್ಮಿಸುವ ಕೇಂದ್ರ ಸರಕಾರದ ವಿಸ್ಟಾ ಯೋಜನೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಗುರುವಾರ ನಿರಾಕರಿಸಿದೆ.

 20 ಸಾವಿರ ಕೋಟಿ ರೂ. ವೆಚ್ಚದ ವಿಸ್ಟಾ ಯೋಜನೆಯಡಿ ಕೇಂದ್ರ ಸರಕಾರವು ದಿಲ್ಲಿಯ ಲ್ಯುತೆನ್ಸ್ ಪ್ರದೇಶದಲ್ಲಿ ಸಂಸತ್‌ಭವನ ಹಾಗೂ ಇತರ ಕಾರ್ಯಾಲಯಗಳನ್ನು ಹೊಸತಾಗಿ ನಿರ್ಮಿಸಲಿದೆ.

‘‘ ಕೋವಿಡ್-19 ಹಾವಳಿಯ ಈ ಸಮಯದಲ್ಲಿ ಯಾರೂ ಕೂಡಾ ಯಾವುದೇ ಯೋಜನೆಯನ್ನು ಕೈಗೆತ್ತಿಕೊಳ್ಳುವುದಿಲ್ಲ. ಹೀಗಿರುವಾಗ ಅರ್ಜಿಯ ಆಲಿಕೆಯನ್ನು ತುರ್ತಾಗಿ ನಡೆಸಬೇಕಾದ ಅಗತ್ಯವಿರುವುದಿಲ್ಲ’’ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ ತಿಳಿಸಿತು.

   ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದ್ದಾರೆ. ‘‘ ನೂತನ ಸಂಸತ್ ಭವನ ನಿರ್ಮಿಸುವುದರಿಂದ ಯಾರಿಗಾದರೂ ಸಮಸ್ಯೆಯಿದೆಯೇ? ’’ ಎಂದು ಪ್ರಶ್ನಿಸಿದರು. 2022ರಲ್ಲಿ ನಡೆಯುವ 75ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ನೂತನ ಸಂಸತ್ ಭವನವನ್ನು ರಾಷ್ಟ್ರಕ್ಕೆ ಸಮರ್ಪಿಸುವ ಯೋಜನೆಯನ್ನು ಕೇಂದ್ರ ಸರಕಾರ ಹೊಂದಿದೆ ಎಂದವರು ಹೇಳಿದರು.

     ಕೇಂದ್ರ ಸರಕಾರದ ವಿಸ್ಟಾ ಯೋಜನೆಯನ್ನು ಪ್ರಶ್ನಿಸಿ ನ್ಯಾಯವಾದಿ ರಾಜೀವ್ ಸೂರಿ ಅವರು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬೃಹತ್ ಯೋಜನೆ ಯಿಂದಾಗಿ ನೆಲದ ಬಳಕೆಯಲ್ಲಿ ಅಕ್ರಮವಾದ ಬದಲಾವಣೆಯುಂಟಾಗುತ್ತದೆ ಎಂದವರು ವಾದಿಸಿದ್ದರು. ವಿಸ್ಟಾ ಯೋಜನೆಯ ವಿರುದ್ಧ ದಿಲ್ಲಿ ಅಭಿವೃದ್ಧಿ ಪ್ರಾಧಿಕಾರವು ಡಿಸೆಂಬರ್ 19ರಂದು ಜಾರಿಗೊಳಿಸಿದ ಸಾರ್ವಜನಿಕ ನೋಟಿಸ್‌ನ್ನು ಕೇಂದ್ರ ಸರಕಾರವು ಮಾರ್ಚ್ 29ರಂದು ಜಾರಿಗೊಳಿಸಿದ ಅಧಿಸೂಚನೆಯು ಅಮಾನ್ಯಗೊಳಿಸಿದೆ. ಇದು ಕಾನೂನು ಮತ್ತು ನ್ಯಾಯಾಂಗ ಶಿಷ್ಟಾಚಾರದ ದಮನವೆಂದು ಅರ್ಜಿದಾರರು ವಾದಿಸಿದ್ದರು.

   ವಿಸ್ಟಾ ಯೋಜನೆಯಡಿ ಸಂಸತ್‌ಭವನ, ರಾಷ್ಟ್ರಪತಿ ಭವನ, ಪ್ರಮುಖ ಸಚಿವಾಲಯಗಳಿರುವ ನಾರ್ತ್ ಹಾಗೂ ದಕ್ಷಿಣ ಬ್ಲಾಕ್ ಕಟ್ಟಡಗಳು ಮತ್ತು ಇಂಡಿಯಾ ಗೇಟ್ ಕಟ್ಟಡವನ್ನು ಕೂಡಾ ಪುನರ್‌ನಿರ್ಮಿಸಲಾಗುವುದು.ಇದರ ಜೊತೆಗೆ ಪ್ರಧಾನಿ ಹಾಗೂ ಉಪರಾಷ್ಟ್ರಪತಿಯವರ ನಿವಾಸಗಳನ್ನು ಒಳಗೊಂಡ ನೂತನ ವಸತಿ ಸಂಕೀರ್ಣ ಕೂಡಾ ನಿರ್ಮಾಣವಾಗಲಿದೆ.

 ವಿಸ್ಟಾ ಯೋಜನೆಯನ್ನು ವಿರೋಧಿಸಿ ಈಗಾಗಲೇ ನ್ಯಾಯಾಲಯಲ್ಲಿ ಅರ್ಜಿಯೊಂದು ವಿಚಾರಣೆಗೆ ಬಾಕಿಯಿದ್ದು, ಮತ್ತೆ ಅದನ್ನೇ ನಕಲು ಮಾಡುವ ಅಗತ್ಯವಿಲ್ಲವೆಂದು ನ್ಯಾಯಪೀಠವು ಅರ್ಜಿಯನ್ನು ತಿರಸ್ಕರಿಸುತ್ತಾ ಅಭಿಪ್ರಾಯಿಸಿತು.

ನ್ಯಾಯವಾದಿ ಸೂರಿ ಅವರು ಈಗಾಗಲೇ ಈ ಯೋಜನೆಯ ವಿರುದ್ಧ ಅರ್ಜಿಯೊಂದನ್ನು ಸಲ್ಲಿಸಿದ್ದು, ವಿಚಾರಣೆಗೆ ಬಾಕಿಯುಳಿದಿರುವ ಹಿನ್ನೆಲೆಯಲ್ಲಿ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೇಂದ್ರ ವಿಸ್ಟಾ ಯೋಜನೆಯ ಕಾಮಗಾರಿ 2021ರ ನವೆಂಬರ್‌ನಲ್ಲಿ ಪೂರ್ಣಗೊಳ್ಳುವ ಉದ್ದೇಶ ಹೊಂದಿದೆ. 2022ರ ಮಾರ್ಚ್‌ನೊಳಗೆ ನೂತನ ಸಂಸತ್ ಭವನ ಹಾಗೂ 2024ರ ಮಾರ್ಚ್‌ನೊಳಗೆ ಕೇಂದ್ರ ಸಚಿವಾಲಯ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News