ಎಲ್ಲಾ ಹೊಸ ಸ್ಮಾರ್ಟ್‌ಫೋನ್‌ಗಳಿಗೆ ‘ಆರೋಗ್ಯ ಸೇತು’ ಕಡ್ಡಾಯ

Update: 2020-04-30 16:19 GMT

 ಹೊಸದಿಲ್ಲಿ,ಎ.19: ಎಲ್ಲಾ ನೂತನ ಸ್ಮಾರ್ಟ್‌ಫೋನ್‌ಗಳಿಗೆ ಆರೋಗ್ಯ ಸೇತು ಆ್ಯಪ್ ನೋಂದಣಿ ಕಡ್ಡಾಯವೆಂದು ಕೇಂದ್ರ ಸರಕಾರದ ಮೂಲಗಳು ಗುರುವಾರ ತಿಳಿಸಿವೆ. ಲಾಕ್‌ಡೌನ್ ಹೇರಿಕೆಯನ್ನು ಹಿಂತೆಗೆದುಕೊಂಡ ಬಳಿಕ ಮಾರಾಟಕ್ಕೆ ಲಭ್ಯವಾಗುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್, ಅಗತ್ಯ ಸೇವೆಯಾಗಿರಬೇಕು ಹಾಗೂ ನೂತನ ಸ್ಮಾರ್ಟ್‌ಫೋನ್ ಖರೀದಿಸಿದ ವ್ಯಕ್ತಿಗಳು ಅದನ್ನು ಬಳಸುವ ಮುನ್ನ ಈ ಆ್ಯಪ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಎಂದು ಅವು ಹೇಳಿವೆ.

ತನ್ನ ಈ ನಿರ್ಧಾರವನ್ನು ಜಾರಿಗೆ ತರಲು, ಕೇಂದ್ರ ಸರಕಾರವು ನೋಡಲ್ ಏಜೆನ್ಸಿಗಳನ್ನು ನೇಮಿಸಲಿದೆ. ಭಾರತದಲ್ಲಿ ಮಾರಾಟವಾಗುವ ಎಲ್ಲಾ ನೂತನ ಸ್ಮಾರ್ಟ್‌ಫೋನ್‌ಗಳಲ್ಲಿ ಆರೋಗ್ಯ ಸೇತು ಆ್ಯಪ್ ಇನ್‌ಬ್ಯುಲ್ಟ್ ಆಗಿರುವಂತೆ ಈ ನೋಡಲ್ ಏಜೆನ್ಸಿಗಳು ಕ್ರಮ ಕೈಗೊಳ್ಳಲಿವೆ.

ಆರೋಗ್ಯ ಸೇತು ಆ್ಯಪ್ ಬಿಡುಗಡೆಯಾದ ಬಳಿಕ ದೇಶಾದ್ಯಂತ 7.5 ಕೋಟಿ ಮೊಬೈಲ್ ಫೋನ್‌ಗಳಲ್ಲಿ ಅಳವಡಿಕೆಯಾಗಿರುವುದಾಗಿ ವರದಿಯಾಗಿದೆ. ಗೂಗಲ್‌ಪ್ಲೇಸ್ಟೋರ್ ಒಂದರಿಂದಲೇ ಆರೋಗ್ಯಸೇತು ಆ್ಯಪ್ 5 ಕೋಟಿ ಡೌನ್‌ಲೋಡ್‌ಗಳಾಗಿವೆ.

ಜನಸಮುದಾಯ ನಡುವೆ ಕೊರೋನ ವೈರಸ್ ಸೋಂಕು ಹರಡುವುದನ್ನು ಪತ್ತೆಹಚ್ಚಲು ಆರೋಗ್ಯಸೇತು ಆ್ಯಪ್ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಅದು ಬ್ಲೂಟೂಥ್ ಹಾಗೂ ಜಿಪಿಎಸ್ ವ್ಯವಸ್ಥೆಯನ್ನು ಬಳಸಿಕೊಂಡು ಬಳಕೆದಾರನ ಸ್ಥಳವನ್ನು ಪತ್ತೆಹಚ್ಚಬಲ್ಲದು. ಈ ಆ್ಯಪ್ ಕೋವಿಡ್-19 ರೋಗಿಗಳ ಮೇಲೆ ನಿಗಾವಿರಿಸಬಲ್ಲದು ಹಾಗೂ ಸೋಂಕಿತನಿರುವ ಸ್ಥಳದ ವಿವರ ಹಾಗೂ ಆತನ ಪ್ರವಾಸ ಇತಿಹಾಸವನ್ನು ಪತ್ತೆಹಚ್ಚಬಲ್ಲದು.

ಕೋರೊನ ವೈರಸ್ ರೋಗಲಕ್ಷಣಗಳ ಬಗ್ಗೆಯೂ ಬಳಕೆದಾರರಿಗೆ ಆರೋಗ್ಯ ಸೇತು ಆ್ಯಪ್ ಮಾಹಿತಿ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News