ನಮ್ಮೊಳಗಿಳಿದು ನಮ್ಮವರೇ ಆದ ನಿಸಾರ್
ಕನ್ನಡದ ಮಟ್ಟಿಗೆ ಕವಿ ಎಂದಾಕ್ಷಣ ಕೆಲವು ಹೆಸರುಗಳು ಕಣ್ಮುಂದೆ ಸುಳಿದಾಡುತ್ತವೆ. ಅಂತಹ ಹೆಸರುಗಳ ಪೈಕಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಕೂಡ ಒಬ್ಬರು. ಕವಿಯಾಗಿ, ವಿಮರ್ಶಕರಾಗಿ ಮತ್ತು ವೈಚಾರಿಕ ಬರಹಗಾರರಾಗಿ ಪ್ರಸಿದ್ಧರಾದ ನಾಡೋಜ ನಿಸಾರ್ ಅಹಮದ್, ನವೋದಯ-ನವ್ಯ ಎರಡೂ ಪ್ರಕಾರಗಳನ್ನು ಒಗ್ಗಿಸಿಕೊಂಡ ವಿಶಿಷ್ಟ ಗುಂಪಿಗೆ ಸೇರಿದವರು. ಈ ಬಗ್ಗೆ ಕೇಳಿದರೆ, ‘ನವೋದಯ ಬೇರು, ನವ್ಯ ಚಿಗುರು. ಒಂದು ರಮ್ಯತೆ, ಮತ್ತೊಂದು ವೈಚಾರಿಕತೆ. ಕೆಲವರಿಗೆ ರಮ್ಯತೆ ಇಷ್ಟ, ಕೆಲವರಿಗೆ ವೈಚಾರಿಕತೆ ಇಷ್ಟ. ನನ್ನೊಳಗೆ ಎರಡೂ ಇದ್ದದ್ದು ನನ್ನ ಅದೃಷ್ಟ’ ಎಂದಿದ್ದರು.
ಮೂರು ತಿಂಗಳ ಹಿಂದೆ ನಿಸಾರ್‌ರನ್ನು ನೋಡಲೇಬೇಕೆಂದು ಅವರ ಮನೆಗೆ ಹೋಗಿದ್ದೆ. ಬೀಗ ಎದುರಾಗಿತ್ತು. ಫೋನಾಯಿಸಿದಾಗ, ‘ಓ ಸಾರಿನಪ್ಪ, ಹೆಂಡತಿ ಇಲ್ವಲ್ಲಾ, ಮಗನನ್ನು ಆಸ್ಪತ್ರೆ ಸೇರಿಸಿದ್ದೇನೆ, ಓಡಾಟ, ಮನೆ ನನ್ನನ್ನೇ ದೂರ ಇಟ್ಟಿದೆ...’ ಎಂದವರು ಮನೆ-ಮಡದಿ ಕಳೆದುಕೊಂಡವರ ಕಷ್ಟವನ್ನು ಕ್ವಿಚಿತ್ತಾಗಿ ದಾಟಿಸಿ, ದಂಗುಬಡಿಸಿ ‘ಬನ್ನಿ, ಮಾತಾಡೋಣ’ ಎಂದು ಆ ಕ್ಷಣವೇ ಹಗುರಾಗಿಸಿದ್ದರು. ಛೇ, ಯಾಕಾದರೂ ಈ ಹೊತ್ತಿನಲ್ಲಿ ಒಂಟಿ ಜೀವವನ್ನು ಕಾಡಿಸಿದೆನೋ ಎಂಬ ಅಳುಕುಂಟಾಯಿತು. ಅವರಿದ್ದದ್ದೇ ಹಾಗೆ. ಕಷ್ಟ, ಕರುಣೆ, ಯಾತನೆಗಳನ್ನೆಲ್ಲ ತನ್ನೊಳಗೆ ತುಂಬಿಕೊಂಡಿದ್ದರೂ ಹೊರಗಿನ ಸಮಾಜಕ್ಕೆ ಅದಾವುದೂ ಕಾಣಿಸದಂತೆ ಸದಾ ಸೂಟು ಧರಿಸುತ್ತಿದ್ದರು. ಎಲ್ಲರನ್ನೂ ಆಪ್ತವಾಗಿ ಕಾಣುತ್ತಿದ್ದರು. ಎಲ್ಲರಿಗೂ ಪ್ರೀತಿ ತೋರಿಸುತ್ತಿದ್ದರು. ಯಾರಿಗೂ ನೋವುಂಟು ಮಾಡದ, ಇನ್ನೊಬ್ಬರ ನೋವನ್ನೂ ತನ್ನದೆಂದು ಭಾವಿಸುವ ಭಾವಜೀವಿಯಾಗಿದ್ದರು. ಕನ್ನಡದ ಮಟ್ಟಿಗೆ ಕವಿ ಎಂದಾಕ್ಷಣ ಕೆಲವು ಹೆಸರುಗಳು ಕಣ್ಮುಂದೆ ಸುಳಿದಾಡುತ್ತವೆ. ಅಂತಹ ಹೆಸರುಗಳ ಪೈಕಿ ಪ್ರೊ. ಕೆ.ಎಸ್. ನಿಸಾರ್ ಅಹಮದ್ ಕೂಡ ಒಬ್ಬರು. ಕವಿಯಾಗಿ, ವಿಮರ್ಶಕರಾಗಿ ಮತ್ತು ವೈಚಾರಿಕ ಬರಹಗಾರರಾಗಿ ಪ್ರಸಿದ್ಧರಾದ ನಾಡೋಜ ನಿಸಾರ್ ಅಹಮದ್, ನವೋದಯ-ನವ್ಯ ಎರಡೂ ಪ್ರಕಾರಗಳನ್ನು ಒಗ್ಗಿಸಿಕೊಂಡ ವಿಶಿಷ್ಟ ಗುಂಪಿಗೆ ಸೇರಿದವರು. ಈ ಬಗ್ಗೆ ಕೇಳಿದರೆ, ‘ನವೋದಯ ಬೇರು, ನವ್ಯ ಚಿಗುರು. ಒಂದು ರಮ್ಯತೆ, ಮತ್ತೊಂದು ವೈಚಾರಿಕತೆ. ಕೆಲವರಿಗೆ ರಮ್ಯತೆ ಇಷ್ಟ, ಕೆಲವರಿಗೆ ವೈಚಾರಿಕತೆ ಇಷ್ಟ. ನನ್ನೊಳಗೆ ಎರಡೂ ಇದ್ದದ್ದು ನನ್ನ ಅದೃಷ್ಟ’ ಎಂದಿದ್ದರು. ಹೌದು, ಕನ್ನಡದ ಅದೃಷ್ಟವೂ ಕೂಡ.
ಇದು ಅವರು ಹೇಳಿದಷ್ಟು ಸುಲಭವಲ್ಲ. ಸುಳ್ಳೂ ಅಲ್ಲ. ಬೆರಗುಟ್ಟಿಸುವಂಥದ್ದೂ ಅಲ್ಲ. ಎಲ್ಲ ಮಕ್ಕಳಂತೆ ನಿಸಾರರು ಬೆಳೆದಿದ್ದರೂ, ಅವರಲ್ಲೊಂದು ವಿಶೇಷವಿದೆ. ಕನ್ನಡ ಮನಸ್ಸು ಅವರ ಬದುಕಿನುದ್ದಕ್ಕೂ ಅವರನ್ನು ಪೊರೆದಿದೆ. ಕನ್ನಡ ಕಾವ್ಯಲೋಕದಲ್ಲಿ ಅವರನ್ನು ಅಜರಾಮರರನ್ನಾಗಿಸಿದೆ. ದೇವನಹಳ್ಳಿಯ ಬಾಲ್ಯ, ಅಪ್ಪನ ಅರೇಬಿಯನ್ ನೈಟ್ಸ್ ಕತೆಗಳು, ಕಮಲಾ ಟೀಚರ್ ಕಲಿಸಿದ ಧರಣಿ ಮಂಡಲ ಹಾಡು, ದೊಡ್ಡ ಮಾವಳ್ಳಿಯ ಓಣಿ ಹುಡುಗರೊಂದಿಗಿನ ಆಟ, ಮುಸ್ಲಿಮ್ ಮನೆಯ ಉರ್ದು, ಬೀದಿಯ ಕನ್ನಡ, ಪಕ್ಕದಲ್ಲಿಯೇ ಭಾವಲೋಕವನ್ನು ವಿಸ್ತರಿಸುವ ಏಕಾಂತಕ್ಕೆ ಹೇಳಿಮಾಡಿಸಿದ ಲಾಲ್ ಬಾಗ್, ಲೋಕಾಂತಕ್ಕೆ ಗಾಂಧಿ ಬಝಾರ್, ಕನ್ನಡ ಕಲಿಸಿ ಕಕ್ಕುಲಾತಿ ತೋರಿದ ಗುರುಗಳು, ಸಹಪಾಠಿಗಳ ಸಹೃದಯತೆ.. ಎಲ್ಲವೂ ರಕ್ತಮಾಂಸದಂತೆ ಬೆರೆತುಹೋಗಿದೆ. ಬರವಣಿಗೆಯ ಮೂಲಕ ಕನ್ನಡಕ್ಕೆ ದಕ್ಕಿದೆ.
5.2.1936ರಲ್ಲಿ ದೇವನಹಳ್ಳಿಯಲ್ಲಿ ಜನಿಸಿದ ನಿಸಾರ್ ಅಹಮದ್ ಅವರ ತಂದೆ ಸರಕಾರಿ ನೌಕರಿಯಲ್ಲಿದ್ದರು. ಆಗಲೇ ಅವರು, ಮಗ ಕನ್ನಡ ಕಲಿತರೆ ಭವಿಷ್ಯ ಉಜ್ವಲವಾಗುತ್ತದೆಂದು ಭಾವಿಸಿ, ಕನ್ನಡ ಶಾಲೆಗೆ ಸೇರಿಸಿದ್ದರು. ಚಿಕ್ಕಂದಿನಲ್ಲಿಯೇ ಓದುವ, ಬರೆಯುವ ಗೀಳು ಹತ್ತಿಕೊಂಡಿತ್ತು. ಒಬ್ಬನೇ ಕೂತು ಬರೆಯುವುದನ್ನೂ ಕಂಡ ಅಮ್ಮ, ‘ಎ ಬೊಮ್ಮನ್ ಕಿ ಬಚ್ಚಾ ಕ್ಯಾಲಿಕಾ’ ಎಂದು ರೇಗಿಸಿದ್ದೂ ಇತ್ತು. ಹತ್ತನೇ ವಯಸ್ಸಿಗೆ ಕವನ ಕುಡಿಯೊಡೆದಿತ್ತು. ಬರೆದದ್ದನ್ನು ಎಲ್.ಗುಂಡಪ್ಪ ಮೇಸ್ಟ್ರಿಗೆ ಕೊಟ್ಟಾಗ, ಅವರು ಅವುಗಳನ್ನು ಸಾರ್ವಜನಿಕ ಸಮಾರಂಭಗಳಲ್ಲಿ ಓದಿ, ನಿಸಾರ್ ಎಂಬ ಹುಡುಗನನ್ನು ಕವಿಯಾಗಿಸಿದ್ದರು. ಮುಂದೆ ಕವನ ಓದಲು ಕರೆಯುತ್ತಿದ್ದ ಆಕಾಶವಾಣಿ ನಿಸಾರ್‌ರನ್ನು ಕರ್ನಾಟಕಕ್ಕೆ ಪರಿಚಯಿಸಿತ್ತು.
ಆಕಾಶವಾಣಿಯಲ್ಲಿ ಆಗ 15 ನಿಮಿಷದ ಒಂದು ಕವನ ಓದಿದರೆ 15 ರೂ. ಕೊಡುತ್ತಿದ್ದರಂತೆ. ಎರಡು ತಿಂಗಳಿಗೊಂದು ನಿಸಾರ್ ಕವನ ತಪ್ಪದೇ ಬಿತ್ತರಗೊಳ್ಳುತ್ತಲಿದ್ದು, ಸಮಕಾಲೀನ ಕವಿಗಳಾದ ಪಿ.ಲಂಕೇಶ್ ಮತ್ತು ಸುಮತೀಂದ್ರ ನಾಡಿಗರಲ್ಲಿ ಹೊಟ್ಟೆಕಿಚ್ಚಿಗೆ ಕಾರಣವಾಗಿದ್ದೂ ಇದೆ. ಆ ಇಬ್ಬರು ಗೆಳೆಯರಿಂದಾದ ಉಪದ್ವ್ಯಾಪಗಳನ್ನು ನಿಸಾರರು, ‘‘ಲಂಕೇಶ ಕೆಟ್ಟ ಟೀಚರ್, ಕೆಟ್ಟದಾಗಿ ಪದ್ಯ ಓದುತ್ತಿದ್ದ, ಉಚ್ಛಾರ ಸರಿ ಇರಲಿಲ್ಲ. ಸಿಡುಕು ಸ್ವಭಾವ ಬೇರೆ. ತುಂಬಾ ಒರಟ. ಆದರೆ ಹೃದಯವಂತ, ಸೃಜನಶೀಲ ಪ್ರತಿಭಾವಂತ. ಇನ್ನೊಬ್ಬನದು ಇನ್ನೊಂದು ರೀತಿ, ಅದನ್ನು ಹೇಳದಿರುವುದೇ ಒಳ್ಳೇದು ಬಿಡಿ. ಆಶ್ಚರ್ಯವೆಂದರೆ, ನಾವು ಮೂರೂ ಜನ ಒಟ್ಟಿಗೆ ಸೇರಿದರೆ ಬಿಯರ್ ಕುಡಿಯುತ್ತಿದ್ದೆವು, ಹರಟೆ ಹೊಡೆಯುತ್ತಿದ್ದೆವು, ಬುದ್ಧಿಗೆ ಸಾಣೆ ಹಿಡಿದುಕೊಳ್ಳುತ್ತಿದ್ದೆವು’’ ಎಂದು ಮೆಲುಕು ಹಾಕಿದ್ದಿದೆ.
ಲಂಕೇಶರೆಂದಾಕ್ಷಣ ನೆನಪಾಯಿತು. ಲಂಕೇಶರು ಸಂಪಾದಿಸಿದ ‘ಅಕ್ಷರ ಹೊಸ ಕಾವ್ಯ’ವನ್ನು ಪತ್ರಿಕೆ ಪ್ರಕಾಶನದಿಂದ ಮರುಮುದ್ರಿಸುವಾಗ, ಕನ್ನಡದ ಹೆಸರಾಂತ ಕವಿಗಳ, ಒಬ್ಬೊಬ್ಬರ ಉತ್ತಮವೆನ್ನುವ, ಐದಾರು ಕವಿತೆಗಳು ಸೇರಿ, ಸಾವಿರಾರು ಪದ್ಯಗಳನ್ನು ಓದುವ ಭಾಗ್ಯ ನನ್ನದಾಗಿತ್ತು. ಎಲ್ಲವನ್ನು ಓದಿ, ಪ್ರೂಫ್ ತಿದ್ದಿದ ಮೇಲೆ ಲಂಕೇಶರು, ‘ಹೇಗಿದಾವೋ’ ಎಂದರು. ಗದ್ಯದಷ್ಟು ಸುಲಲಿತವಲ್ಲವಾದ್ದರಿಂದ ‘ಪದ್ಯ ಕಷ್ಟ ಸಾರ್’ ಎಂದಿದ್ದೆ. ಆಗ ಲಂಕೇಶರು ಕೆ.ಎಸ್.ನಿಸಾರ್ ಅಹಮದ್ ಅವರ ‘ಅಮ್ಮ, ಆಚಾರ, ನಾನು’ ಎಂಬ ಪದ್ಯ ಕೊಟ್ಟು ‘ಓದಿಕೊಂಡು ಬಾ’ ಎಂದು ಹೇಳಿ ವಿವರಿಸಲು ಸಿದ್ಧರಾಗಿದ್ದರು. ಆ ಕವಿತೆಯನ್ನು ಮತ್ತೊಮ್ಮೆ ಓದಿದಾಗ, ಆ ಸರಳ ಶೈಲಿ ನಿಸಾರ್‌ರನ್ನು ನನ್ನೊಳಗೆ ಇಳಿಸಿತ್ತು. ಮತ್ತೆ ಲಂಕೇಶರನ್ನು ಪದ್ಯಗಳ ಬಗ್ಗೆ ಕೇಳದಂತೆ ಮಾಡಿತ್ತು. ನಿಸಾರ್ ಅಹಮದ್ ಓದಿದ್ದು ಭೂವಿಜ್ಞಾನದಲ್ಲಿ ಎಂ.ಎಸ್ಸಿ, ಸರಕಾರಿ ಸೇವೆಗೆ ಸೇರಿದ್ದು ಸಹಾಯಕ ಭೂವಿಜ್ಞಾನಿಯಾಗಿ. ಭಾವಜೀವಿಗೆ ಜಡ ಕಲ್ಲು ಮಣ್ಣು ಅದಿರು ಒಗ್ಗಲಿಲ್ಲ. ಕೆಲಸ ಬಿಟ್ಟು ಕವಿಗೋಷ್ಠಿಗಳಲ್ಲಿ ಕವನ ಓದುವುದನ್ನೇ ಕೆಲಸ ಮಾಡಿಕೊಂಡರು. ಕವಿಗೋಷ್ಟಿಯಲ್ಲೊಮ್ಮೆ ಕವನ ಓದುವ ಮೂಲಕ ಕುವೆಂಪು ಕಣ್ಣಿಗೆ ಬಿದ್ದರು, ವಿಶ್ವವಿದ್ಯಾನಿಲಯದ ಅಧ್ಯಾಪಕರಾದರು. ಹಿರಿಯರಾದ ವಿ.ಸೀ., ಗುಂಡಪ್ಪ, ಮಾಸ್ತಿ, ಪುತಿನ, ಕುವೆಂಪು, ಬೇಂದ್ರೆಗಳಂತಹ ಗುರುಗಳ ಸಹವಾಸಕ್ಕೆ ಬಿದ್ದರು. ಗೋಪಾಲಕೃಷ್ಣ ಅಡಿಗರಂತಹ ಹಿರಿಯರ ಗೆಳೆತನ ಸಂಪಾದಿಸಿ ಹತ್ತಿರವಾದರು. ಗೆಳೆಯರಾದ ಅನಂತಮೂರ್ತಿ, ಲಂಕೇಶ್, ಶಾಂತಿನಾಥ ದೇಸಾಯಿ, ನಾಡಿಗ, ಚಂಪಾ, ವೈಎನ್‌ಕೆ ಜೊತೆ ಒಡನಾಡಿದರು. ಸಾಂಸ್ಕೃತಿಕ ಲೋಕದಲ್ಲಿ ವಿಹರಿಸತೊಡಗಿದರು.
ಕನ್ನಡ ಸಾಹಿತ್ಯ ಲೋಕದಲ್ಲಿ ನಿಸಾರ್ ಅಹಮದ್ ನಕ್ಷತ್ರದಂತೆ ಮಿಂಚಿದರೂ, ತಣ್ಣಗಿನ ಸ್ವಭಾವದಿಂದಾಗಿ ಎಲ್ಲರಿಂದ ಕೊಂಚ ಅಂತರ ಕಾಪಾಡಿಕೊಂಡವರು. ಹೆಚ್ಚು ಮಾತನಾಡದ ಅಂತರ್ಮುಖಿಯಾದ್ದರಿಂದ ಭಾವನೆಗಳನ್ನು ಅಭಿವ್ಯಕ್ತಿಸಲು ಬರವಣಿಗೆಯನ್ನು ಬಿಗಿಯಾಗಿ ಅಪ್ಪಿಕೊಂಡವರು. ಆಡಂಬರ, ಆರ್ಭಟ, ಅಬ್ಬರಗಳಿಂದ ದೂರ ಉಳಿದವರು. ಅವರ ಸ್ವಭಾವಕ್ಕೆ ಸಹಜವಾಗಿಯೇ ಬೆಂಗಳೂರಿನ ಲಾಲ್‌ಬಾಗ್ ಮತ್ತು ಗಾಂಧಿಬಝಾರ್ ಅವರ ಅಚ್ಚುಮೆಚ್ಚಿನ ತಾಣಗಳು, ಸಂವೇದನಾಶೀಲತೆಯ ಅವಿಭಾಜ್ಯ ಅಂಗಗಳು.
‘‘ಲಾಲ್‌ಬಾಗ್ ನನ್ನ ಅಂತರ್ಮುಖತೆಗೆ, ಏಕಾಂತಕ್ಕೆ ಪ್ರಶಸ್ತ್ಯವಾದ ಸ್ಥಳವಾಗಿತ್ತು. ಹಾಗೆಯೇ ಗಾಂಧಿ ಬಝಾರು, ಅ.ನ.ಸುಬ್ಬರಾಯರ ಕಲಾಭವನ... ಇದು ಲೋಕಾಂತ. ಬಾಹ್ಯ ಬೆಳವಣಿಗೆಗೆ ಗಾಂಧಿಬಝಾರು, ಆಂತರಿಕ ಚಿಂತನೆಗೆ ಲಾಲ್‌ಬಾಗ್. ಇವರೆಡೂ ನನ್ನ ಭಾವನೆಗಳಿಗೆ ಇಂಬು ನೀಡಿ ಬರೆಯಲು ಪ್ರೇರೇಪಿಸಿದವು’’ ಎನ್ನುವ ನಿಸಾರರು, ತಮ್ಮ ನಡೆ-ನುಡಿಗೆ ಉತ್ತರವೆಂಬಂತೆ, 1960ರಲ್ಲಿ ‘ಮನಸು ಗಾಂಧಿಬಝಾರು’ ಎಂಬ ಮೊದಲ ಕವನ ಸಂಕಲನವನ್ನು ಪ್ರಕಟಿಸಿದ್ದರು. ಅಲ್ಲಿಂದ ಶುರುವಾದ ಅವರ ಕಾವ್ಯಧಾರೆ ಇವತ್ತಿನವರೆಗೂ ಹರಿದಿತ್ತು.
ಅವರ ಖಜಾನೆಯಲ್ಲಿ 14 ಕವನ ಸಂಕಲನಗಳು, 8 ವಿಮರ್ಶೆ-ವಿಚಾರ ಸಾಹಿತ್ಯ, 4 ಅನುವಾದ, 5 ಮಕ್ಕಳ ಸಾಹಿತ್ಯ, 9 ಸಂಪಾದನೆ, 2 ಕತೆಗಳ ಸಮೃದ್ಧ ಸಾಹಿತ್ಯವೇ ತುಂಬಿದ್ದು, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿವೆ. ಸರಳ ಸಜ್ಜನಿಕೆಯ, ಸಿರಿ ಸಮೃದ್ಧಿಯ ಕವಿ ನಿಸಾರ್ ಅಹಮದ್‌ರ ಮೇಲೆ ಅವರ ಅಭಿಮಾನಿಗಳು ಅಭಿನಂದನಾ ಗ್ರಂಥವನ್ನು ಹೊರತಂದಿದ್ದಾರೆ. ಕನ್ನಡದ ಓದುಗರಿಗೆ ನಿಸಾರ್ ಅಹಮದ್‌ರ ಒಟ್ಟು ಸಾಹಿತ್ಯವನ್ನು ಸಂಕ್ಷಿಪ್ತರೂಪದಲ್ಲಿ ನೀಡುವ ಸಲುವಾಗಿ ನುಡಿ ಪ್ರಕಾಶನದ ರಂಗನಾಥ್ ‘ನಿಸಾರ್ ವಾಚಿಕೆ’ಯನ್ನು ಪ್ರಕಟಿಸಿದ್ದಾರೆ. ನಾಡಗೀತೆಯಷ್ಟೆ ಮಹತ್ವವಾದ, 24 ಬಾರಿ ಮುದ್ರಿತವಾಗಿರುವ ಇವರ ‘ನಿತ್ಯೋತ್ಸವ’ ಕವನ, ಸುಗಮ ಸಂಗೀತ ಕ್ಷೇತ್ರದಲ್ಲಿ ಹೊಸ ಹಾದಿಯನ್ನು ನಿರ್ಮಿಸಿ, ಭಾರತೀಯ ಭಾಷೆಗಳಲ್ಲಿಯೇ ಮೊತ್ತ ಮೊದಲನೆಯ ಭಾವಗೀತೆಗಳ ಧ್ವನಿಸುರುಳಿ ಎಂದು ದಾಖಲಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷರಾಗಿ, ಕನ್ನಡ ಭಾಷಾನುಷ್ಠಾನ ಹಾಗೂ ಗಡಿ ಸಲಹಾ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ ನಿಸಾರ್ ವಿವಾದಾತೀತ ವ್ಯಕ್ತಿ. ಕಾವ್ಯಪ್ರೀತಿಯ ನಿಸಾರರು ಸ್ಪಾನಿಷ್ ಕವಿ ಪ್ಯಾಬ್ಲೋ ನೆರೂಡನ ಕವಿತೆಗಳನ್ನು, ಶೇಕ್ಸ್‌ಪಿಯರ್ ನಾಟಕಗಳನ್ನು, ರಶ್ಯನ್ ಕತೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದವರು. ದೇಶ-ವಿದೇಶಗಳ ಗೌರವಕ್ಕೆ ಪಾತ್ರರಾದವರು. 84 ವರ್ಷಗಳ ತುಂಬುಜೀವನದಲ್ಲಿ ನಿಸಾರರಿಗೆ ಪ್ರತಿಷ್ಠಿತ ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳು ಸಂದಿವೆ. ಕುವೆಂಪು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇಂತಹ ಸಹೃದಯಿ, ಸುಸಂಸ್ಕೃತ ಕವಿ ನಿಸಾರ್, ಯಾವುದೇ ಸಭೆ, ಸಮಾರಂಭಕ್ಕೆ ಹೋದರು, ‘ಕನ್ನಡಿಗರು ತೋರಿದ ಪ್ರೀತಿಗೆ ಕೈ ಎತ್ತಿ ಮುಗಿಯುವುದೊಂದೇ’ ಎನ್ನುತ್ತಿದ್ದರು. ಹಿಂದೊಮ್ಮೆ, ದ.ರಾ.ಬೇಂದ್ರೆಯವರು, ‘ಇವ, ಇವ ನಿಸಾರ ಅಲ್ಲ, ಸಾರ. ಅಹಮತ್, ಮದ ಇವನಲ್ಲಿಲ್ಲ. ಬೆಳೀತಾನೆ, ಬೆಳೀತಾನೆ’ ಎಂದು ಬಾಯ್ತುಂಬ ಹರಸಿದ್ದರಂತೆ. ಬೇಂದ್ರೆಯವರು ಹೇಳಿದಂತೆಯೇ ನಿಸಾರರು ಬೆಳೆದಿದ್ದಾರೆ, ಕನ್ನಡಿಗರ ಮನದಲ್ಲಿ ಉಳಿದಿದ್ದಾರೆ. ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಎಂದು ಬರೆದವರು ಇಂದು, ನಮ್ಮೊಳಗಿಳಿದು ನಮ್ಮವರೇ ಆಗಿಹೋಗಿದ್ದಾರೆ.
ನಿಮ್ಮಡನಿದ್ದೂ ನಿಮ್ಮಂತಾಗದೆ
ನಿಮ್ಮಡನಿದ್ದೂ ನಿಮ್ಮಂತಾಗದೆ
ಜಗ್ಗಿದ ಕಡೆ ಬಾಗದೆ
ನಾನು ನಾನೇ ಆಗಿ, ಈ ನೆಲದಲ್ಲೆ ಬೇರೊತ್ತಿದರೂ ಬೀಗಿ
ಪರಕೀಯನಾಗಿ
ತಲೆಯೆತ್ತುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.
ವೃತ್ತದಲ್ಲಿ ಉನ್ಮತ್ತರಾದ
ನಿಮ್ಮ ಕುಡಿತ ಕುಣಿತ ಕೂಟಗಳು ಕೆಣಕಿ
ಕುಣಿಕೆ ಎಸೆದಿದ್ದರೂ
ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತ
ಸಂಯಮವನ್ನೇ ಪೋಷಿಸಿ ಸಾಕುತ್ತ
ರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.
ಒಳಗೊಳಗೇ ಬೇರು ಕೊಯ್ದು
ಲೋಕದೆದುರಲ್ಲಿ ನೀರು ಹೊಯ್ದು
ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ
ಗೊತ್ತಿಲ್ಲದಂತೆ ನಟಿಸಿ
ಚಕಾರವೆತ್ತದ ನಿಮ್ಮಡನೆ ಕಾಫಿ ಹೀರಿ ಪೇಪರೋದಿ ಹರಟಿ
ಬಾಳ ತಳ್ಳುವುದಿದೆ ನೋಡಿ
ಅದು ಬಲು ಕಷ್ಟದ ಕೆಲಸ.
ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು
ಸಂಶಯ ಪಂಜವೆತ್ತಿ
ನನ್ನ ನಂಬಿಕೆ ನೀಯತ್ತು ಹಕ್ಕು
ಕೊನೆಗೆ ಸಾಚಾತನವನ್ನು ಪರಚಿ, ಒತ್ತಿ
ನೋವಿಗೆ ಕಣ್ಣು ತುಂಬಿದ್ದರೂ,
ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳ
ನನ್ನೆದುರಿನಲ್ಲೇ ತನಿಖೆ ಮಾಡುವ ಕ್ಷಣವನ್ನ
ಹುಸಿನಗುತ್ತ ಎದುರಿಸುವುದಿದೆಯಲ್ಲ
ಅದು ಬಲು ಕಷ್ಟದ ಕೆಲಸ.
ಕವಿ - ಕೆ.ಎಸ್.ನಿಸಾರ್ ಅಹಮದ್
* * *
(ಸಂಜೆ ಐದರ ಮಳೆ ಸಂಕಲನದಿಂದ : 1970)