ಹೀಗೊಂದು ಸುಖಾಂತ

Update: 2020-05-08 16:23 GMT

ಲಾಕ್ ಡೌನ್‌‌ ಘೋಷಣೆಯಾದ ದಿನದಿಂದ ಹೆಚ್ಚೂಕಮ್ಮಿ ಸ್ತಬ್ಧವಾಗಿದ್ದ ಪುಣ್ಯಕೋಟಿ ನಗರಕ್ಕೆ ಮೂರು ಸರ್ಕಾರಿ ವಾಹನಗಳು ಒಟ್ಟೊಟ್ಟಿಗೆ  ನುಗ್ಗಿಬಂದವು. ಬಂದ ವೇಗ ನೋಡಿದರೆ ಯಾರಾದರೂ ಹೆದರಲೇಬೇಕು. ರಾಜು ಪೂಜಾರಿಯ ಮನೆಯ ಎದುರು ತಂಗಿದ ಜೀಪುಗಳಿಂದ ಅಧಿಕಾರಿಗಳು ಮತ್ತು ಪೋಲೀಸರು ಮನೆಯಂಗಳ ಪ್ರವೇಶಿಸಿ ನಿಂತು ಕರೆದರು ".. ರಾಜು ಪೂಜಾರಿ ಯಾರು ?"

ನಿಮಿಷ ಬಿಟ್ಟು ಹೊರಬಂದ ರಾಜುವಿಗೆ ತನ್ನ ತಪ್ಪಿನ ಅರಿವಾಗಿ ಮುಂದೇನು ಕಾದಿದೆಯೋ ಎನ್ನುವ ಭೀತಿ ಕಾಡಿತು. ಲಾಕ್ ಡೌನ್  ಇರುವಾಗ ರಾಜು ತನ್ನ ಮನೆಯಲ್ಲಿ ಮಗನ ಬರ್ತ್ ಡೇ ಆಚರಿಸಿದ್ದ. ಹೆಚ್ಚೇನಿಲ್ಲ 'ಕೇವಲ' ನಲವತ್ತು- ಐವತ್ತು ಜನ ಸೇರಿದ್ದರು. ಊಟ ಆದ ಕೂಡಲೇ ಬಂದವರೆಲ್ಲರೂ ಮರಳಿದ್ದರು. ನೆಂಟರು ತೆರಳಿದ ನಂತರ ಈ ಜೀಪುಗಳು ಬಂದಿದ್ದವು.  ತಹಸೀಲ್ದಾರ್ ಹೇಳಿದರು: " ನಿಮ್ಮ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ."  ಅಕ್ಕಪಕ್ಕದ ಮನೆಯವರೆಲ್ಲ ಕಿಟಕಿಗಳಿಂದ ಇಣುಕುತ್ತಿದ್ದರು.

ರಾಜು ತಹಸೀಲ್ದಾರ್ ಮತ್ತು ಪೊಲೀಸರ ಕ್ಷಮೆ ಕೇಳಿದ. "ಬಂದವರಲ್ಲಿ ಒಬ್ಬರಿಗೆ ಸೋಂಕು ಇದ್ದರೂ ಇಡೀ ಗ್ರಾಮವು ಕಂಟೈನ್ಮೆಂಟ್  ಝೋನ್ ಆಗಿಬಿಡ್ತದೆ. ಈ ಟೈಮಲ್ಲಿ ಇದೆಲ್ಲ ಬೇಕಾ ? ಒಂದು ವರ್ಷ ಬರ್ತ್ ಡೇ ಮಾಡದಿದ್ರೆ ಏನು ಮುಳುಗಿ ಹೋಗ್ತದೆ ?" 

ತಹಸೀಲ್ದಾರ್ ಕೆಂಡವಾಗಿದ್ದರು.

ಹುಟ್ಡಿದ ಹಬ್ಬ ಆಚರಿಸಿದ್ದನ್ನು ಪೊಲೀಸರಿಗೆ ತಿಳಿಸಿ, ಕರೆಸಿದ ಬಗಲಿನಲ್ಲಿರುವ ಶತ್ರು ಯಾರಿರಬಹುದು ಎನ್ನುವ  ಯೋಚನೆ ತಲೆಗೆ ಹತ್ತಿದಂತಾದಾಗ ತಹಸೀಲ್ದಾರರು ದೊಡ್ಡದಾಗಿ ಕೇಳಿದರು "ಇಲ್ಲಿ ಕಾಮತ್ ಯಾರು?" 
 ರಾಜುವಿಗೆ ಈಗ  ಅರ್ಥವಾಯ್ತು. ಈ ಕೊಂಕಣಿ ಮನುಷ್ಯನಿಗೆ ನಾವು ಮೇಲೆ ಬಂದದ್ದು ನೋಡಲಿಕ್ಕೆ ಕಷ್ಟ ಆಗ್ತದೆ. ನಮ್ಮ ಖುಷಿ ನೋಡಲಿಕ್ಕೆ  ಆಗುವುದಿಲ್ಲ.. ಎಂಥ ನಂಜು- ಮತ್ಸರ ಎಂದೆಲ್ಲ  ಆಲೋಚಿಸುತ್ತ ರಾಜು ಎದುರು  ಮನೆಯ ಕಡೆಗೆ ಬೆರಳು ತೋರಿಸಿದ.

ತಹಸೀಲ್ದಾರರು ಅವರ ಮೊಬೈಲಿನಿಂದ ಕರೆಮಾಡಿ ಕಾಮತರನ್ನು ಕರೆದರು. ರಾಜು ಹೇಳಿದ "ಮೇಡಂ, ನನ್ನ ಹೆಂಡತಿ ಬಸುರಿ. ಮೊದಲ ಮಗನ ಐದನೇ ವರ್ಷದ ಬರ್ತಡೇ ಮಾಡಲೇಬೇಕಂತ ಹಠ ಹಿಡಿದಿದ್ದಳು. ಈಗ ಬೇಡ ಎಂದರೆ ಕೇಳಲಿಲ್ಲ. ಅವಳಿಗೆ ಬೇಸರ ಆಗ್ತದೆ ಅಂತ ಮಾಡಿದ್ದು.. ತಪ್ಪಾಯ್ತು"

ತಹಸೀಲ್ದಾರರು ಕೇಳುವ ಸ್ಥಿತಿಯಲ್ಲಿರಲಿಲ್ಲ.

"ನೀವು ಲಿಖಿತ ದೂರು  ನೀಡುತ್ತೀರಾ? ಎಷ್ಟು ಜನ ಬಂದಿದ್ದರು? ಸಾಕ್ಷಿ ಏನಿದೆ ?" ರಾಜುವಿನ ಮನೆಯ ಬಳಿ ಬಂದ ಕಾಮತರನ್ನು ತಹಸೀಲ್ದಾರರು ಪ್ರಶ್ನಿಸಿದರು. "ಮೇಡಂ, ಲಾಕ್ ಡೌನ್ ಅವಧಿಯಲ್ಲಿ ಜನ ಸೇರಿಸಿ ಫಂಕ್ಷನ್ ಮಾಡಬಾರದು ಎಂದು ಇವರಿಗೆ ಗೊತ್ತಿಲ್ಲವೆ ? ನನಗೇನೂ ನಷ್ಟ ಇಲ್ಲದೇ ಇರಬಹುದು. ಆದರೆ ಈ ರಾಜು ತೊಟ್ಟೆ ಹಾಲು ಹಾಕಲು ಪ್ರತಿದಿನ ಏನಿಲ್ಲವೆಂದರೂ ನೂರಿನ್ನೂರು ಮನೆಗೆ ಹೋಗುತ್ತಾನೆ. ಕೊರೊನಾ ಹರಡಲು ಇನ್ನೇನು ಬೇಕು? ಇವರ ಮೂರ್ಖತನದಿಂದ ಊರು ನಾಶವಾಗಬಾರದು..  ನನ್ನ ಕಾಳಜಿ ಇಷ್ಟೇ..  ತಮಗೆ ಬೇಕಾದರೆ ಲಿಖಿತ ದೂರು ನೀಡುತ್ತೇನೆ. ಸಾಕ್ಷಿ ಬೇಕಾದ್ರೆ ನನ್ನ ಮನೆಯ ಹೊರಗೆ ಇರುವ ಹೊರಗಿರುವ ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವುದನ್ನು ಒಮ್ಮೆ  ನೋಡಿಬಿಡಿ."

ಕೊರೊನಾ ಕಂಟಕದ ವೇಳೆಯಲ್ಲಿ ನೆರೆ ಮನೆಯವರ ಗುಣ ತಿಳಿಯಿತು. ಇಂಥವರಿಂದ ದೂರ ಇರಬೇಕು...  ಎಂದೆಲ್ಲ ಅಕ್ಕಪಕ್ಕದ ಮನೆಯವರು ಆಡಿಕೊಂಡರು. ಸುದ್ದಿ ಊರಿಡೀ ಹರಡಿತು. ಕೆಲವರು ರಾಜು ಪೂಜಾರಿಯನ್ನು ಹಳಿದರೆ ಹಲವರು ಕಾಮತನಿಗೆ  ಅಧಿಕಪ್ರಸಂಗ.... ಎಂದರು.

ಇಷ್ಟೆಲ್ಲ ಆದ ನಂತರ ನೆರೆ ಕರೆ ಆಗಿದ್ದ ಮನೆಗಳು ನೆರೆ 'ಹೊರೆ' ಆಗಿಬಿಟ್ಟವು. ಎದುರು ಮನೆಯವರು ಎದುರು ಬದುರಾದಾಗ ಮುಖ ನೋಡುವುದನ್ನು ಬಿಟ್ಟುಬಿಟ್ಟರು.

ತಿಂಗಳು ಉರುಳಿತು. ರಾಜುವಿನ‌ ಹೆಂಡತಿಗೆ ಹೆರಿಗೆ ನೋವು. ಆಸ್ಪತ್ರೆ ತಲುಪಿದಂತೆ ವೈದ್ಯರು ಪರೀಕ್ಷಿಸಿ "ನಾರ್ಮಲ್ ಕಷ್ಟ. ಸಿಸೆರಿಯನ್ನೇ ಆಗಬೇಕು. ತಡ ಮಾಡುವಂತಿಲ್ಲ. ಪೇಶಂಟ್ ಅನಿಮಿಕ್ ಇರುವುದರಿಂದ ರಕ್ತದ ವ್ಯವಸ್ಥೆಯನ್ನು ಮಾಡಿ" ಎಂದರು ಒಂದೇ ಉಸುರಿಗೆ. 

ಸಿಸ್ಟರ್ ಕೊಟ್ಟ ಬ್ಲಡ್ ಸ್ಯಾಂಪಲ್ ಮತ್ತು ಪತ್ರವನ್ನು  ಬ್ಲಡ್ ಬ್ಯಾಂಕಲ್ಲಿ ಕೊಟ್ಟ ರಾಜು ಪೂಜಾರಿಗೆ ಹೊಸ ಆಘಾತ ಕಾದಿತ್ತು. ಬೇಕಾದ ಗುಂಪಿನ ರಕ್ತದ ದಾಸ್ತಾನು ಇರಲಿಲ್ಲ !  "ಸರ್ ನೆಗೆಟಿವ್ ಗ್ರೂಪ್ ಸದ್ಯ ಯಾವ ಬ್ಲಡ್ ಬ್ಯಾಂಕಲ್ಲೂ ಇಲ್ಲ. ಬೆಳಿಗ್ಗೆಯಿಂದ ನಿಮ್ಮದು ನಾಲ್ಕನೇ ವಿಚಾರಣೆ. ಕೊರೊನಾ, ರಮದಾನ್  ಉಪವಾಸ, ಕಾಲೇಜ್ ಬಂದ್... ಹೀಗೆಲ್ಲ ಆಗಿ ಕ್ಯಾಂಪ್ ಸಿಗ್ತಿಲ್ಲ. ಆದರೂ ನಮ್ಮ ರೆಗ್ಯುಲರ್ ಡೋನರ್ಸ್ ಇದ್ದಾರೆ. ಅವರಿಗೆ ಕಾಲ್ ಮಾಡ್ತೇನೆ. ಮೆಸೇಜ್ ಹಾಕ್ತೇನೆ. ನೀವೂ ಪ್ರಯತ್ನಿಸಿ. ಎ ನೆಗೆಟಿವ್ ಗ್ರೂಪಿನ ಡೋನರ್ ಬೇಕು...  

ರಾಜುವಿಗಿದು ಹೊಸದು. ಏನು ಮಾಡಿದರೂ ಅದೆಷ್ಟು ಜನರಿಗೆ  ಫೋನು ಮಾಡಿದರೂ ವ್ಯವಸ್ಥೆ ಆಗಲಿಲ್ಲ. ಈ ಮದ್ಯೆ ವೈದ್ಯರೂ ರೇಗಿದರು..  "ಇದನ್ನೆಲ್ಲ ಪೇಶಂಟ್ ಅಡ್ಮಿಟ್ ಮಾಡುವ ಮೊದಲು ನೀವು ರೆಡಿ ಮಾಡಬೇಕಲ್ಲ ರಾಯರೇ.. ಹಾಗೆ ದಿಢೀರ್ ಬೇಕಂತ ಹೇಳಿದಾಗ ಸಿಗ್ಲಿಕ್ಕೆ ಅದೇನು ನಂದಿನಿ ಹಾಲಾ ? ಬ್ಲಡ್ ಸಿಗುವುದು ಖಾತ್ರಿ ಆಗದೇ ನಾನೇನೂ ಮಾಡಲಾರೆ. ನಾನೂ ನಮ್ಮ ರೋಟರಿ ಕ್ಲಬ್ ಮೆಂಬರ್ಸ್ ಗ್ರೂಪಿಗೆ ಮೆಸ್ಸೇಜ್ ಹಾಕಿದ್ದೇನೆ. ನನಗೆ ಬೇರೆ ಕೇಸೂ ಉಂಟು.. " ರಾಜು ಪೂಜಾರಿಗೆ ಒಂದೂ ಅರ್ಥವಾಗಲಿಲ್ಲ. ದುಡ್ಡು ಕೊಟ್ರೂ ಸಿಗುವುದಿಲ್ಲ..ರಕ್ತ ಕೊಡುವ ಜನರೂ  ಸಿಗುವುದಿಲ್ಲ.. ಅಸ್ಪತ್ರೆಯವರಿಗೆ ಜವಾಬ್ದಾರಿ ಇಲ್ಲವಂತೆ.. ಇದನ್ನೆಲ್ಲ ಹೇಗೆ ಸುಧಾರಿಸುವುದು? ನಾನೇನು ಕುದ್ರೋಳಿ ಗಣೇಶನಾ ? ತಲೆ ಬಿಸಿಯಲ್ಲಿ ಅಡ್ಡಾಡುತಿದ್ದ ರಾಜುವಿಗೆ ಒಂದೂ ತಿಳಿಯಲಿಲ್ಲ.

ಫೋನ್ ರಿಂಗ್ ಆದದ್ದು ಕೂಡಲೇ ತಿಳಿಯಲಿಲ್ಲ. ಪಕ್ಕದಲ್ಲಿರುವವರು ರಾಜುವನ್ನು ಎಚ್ಚರಿಸಿದರು. ಅಷ್ಟರಲ್ಲೇ ಮತ್ತೆ ಕರೆ ಬಂತು. "ಸರ್, ಇದು ಬ್ಲಡ್ ಬ್ಯಾಂಕಿನಿಂದ. ಒಬ್ಬ ಡೋನರ್, ಅವರ ಹೆಸರು ಪುಂಡಲೀಕ ಕಾಮತ್ ಅಂತೆ. ನಿಮ್ಮ ಪಕ್ಕದ ಮನೆಯಲ್ಲೇ ಇರುವವರಂತೆ. ನಿಮಗೆ ಬೇಕಾದ ಗುಂಪಿನ ಬ್ಲಡ್ ಡೊನೇಟ್ ಮಾಡಿ ಹೋಗಿದ್ದಾರೆ..."

ಬ್ಲಡ್ ಬ್ಯಾಂಕಿಗೆ ಧಾವಿಸಿದ ರಾಜು ಪೂಜಾರಿಗೆ ಅಚ್ಚರಿ ಕಾದಿತ್ತು. 

ರಕ್ತ ಸಿದ್ಧವಾಗಿತ್ತು.

Writer - ರಾಜೇಂದ್ರ ಪೈ

contributor

Editor - ರಾಜೇಂದ್ರ ಪೈ

contributor

Similar News