ಕೊರೋನ ಬಿಚ್ಚಿಟ್ಟ ಪ್ರಜಾಪ್ರಭುತ್ವದ ಅಧೋಗತಿ

Update: 2020-05-10 08:54 GMT

ಬಂಡವಾಳವಾದಿ ಆರ್ಥಿಕ ವ್ಯವಸ್ಥೆಯ ವಾಸ್ತವಿಕತೆಗಳು ಎಂಬ ಬಿರುಗಾಳಿಯ ಆಘಾತಕ್ಕೆ ‘ಕಾನೂನಿನ ಮುಂದೆ ಎಲ್ಲಾ ಪ್ರಜೆಗಳೂ ಸಮಾನರು’ ಎಂಬ ಧ್ಯೇಯವಾಕ್ಯವಿರುವ ಪ್ರಜಾಪ್ರಭುತ್ವದ ನೌಕೆಯೂ ‘ಮನುಷ್ಯ ತನ್ನ ಮೇಲೆ ತಾನೇ ಹಕ್ಕು ಹೊಂದಿರುತ್ತಾನೆ’ ಎನ್ನುವ ಉದಾರವಾದದ ನೌಕೆಯೂ ನುಚ್ಚುನೂರಾಗಲಿವೆ. 20ನೇ ಶತಮಾನದ ಜರ್ಮನ್ ಇತಿಹಾಸಜ್ಞ ರುಡಾಲ್ಫ್ ರಾಕರ್

ಭಾರತವನ್ನು ಒಂದು ಸರ್ವತಂತ್ರ ಸ್ವತಂತ್ರ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾತಾಂತ್ರಿಕ ಗಣತಂತ್ರವಾಗಿ ಸ್ಥಾಪಿಸಲು ಸಂಕಲ್ಪ ತೊಟ್ಟು ಸರ್ವರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ; ಚಿಂತನೆ, ಅಭಿವ್ಯಕ್ತಿ, ನಂಬಿಕೆ, ಮತ, ಉಪಾಸನೆಯ ಸ್ವಾತಂತ್ರ್ಯ; ಸ್ಥಾನಮಾನ, ಅವಕಾಶಗಳಲ್ಲಿ ಸಮಾನತೆ; ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಘನತೆಯನ್ನು ಒದಗಿಸುವ ಭರವಸೆಯೊಂದಿಗೆ ಎಲ್ಲರ ನಡುವೆ ಸಹೋದರತೆ ಬೆಳೆಸುವುದನ್ನು ಮೂಲ ಆಶಯಗಳಾಗಿಟ್ಟುಕೊಂಡು ನಮಗೆ ನಾವು ಕೊಟ್ಟುಕೊಂಡಿರುವ ಸಂವಿಧಾನ 1950ರಿಂದ ಜಾರಿಗೆ ಬಂದಿದೆ. ಆ ಚಾರಿತ್ರಿಕ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ‘ಭಾರತದಲ್ಲಿ ನಾವಿಂದು ಕೇವಲ ರಾಜಕೀಯ ಸಮಾನತೆಯನ್ನು ತರುತ್ತಿದ್ದೇವೆ. ಆದರೆ ಎಲ್ಲಿಯ ತನಕ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳನ್ನು ಸಹ ಸಾಧಿಸುವುದಿಲ್ಲವೋ ಅಲ್ಲಿಯ ತನಕ ಭಾರತದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗದು’ ಎಂಬರ್ಥದ ಮಾತುಗಳನ್ನಾಡಿದ್ದರು. ತದನಂತರದಲ್ಲಿ ಪ್ರಗತಿಪರ ಚಿಂತಕರು, ಸಮಾಜ ವಿಜ್ಞಾನಿಗಳು ಮುಂತಾದವರು ಆಳ್ವಿಕರನ್ನು ಕಾಲಕಾಲಕ್ಕೆ ಎಚ್ಚರಿಸುತ್ತಲೇ ಬಂದಿದ್ದಾರಾದರೂ ಅದೆಲ್ಲ ಗೋರ್ಕಲ್ಲ ಮೇಲೆ ಮಳೆ ಸುರಿದಂತಾಗಿದೆ. ಸಂವಿಧಾನ ಜಾರಿಗೆ ಬಂದು ಏಳು ದಶಕಗಳೇ ಸಂದಿವೆಯಾದರೂ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಳು ಇನ್ನೂ ಗಗನಕುಸುಮವಾಗಿಯೇ ಉಳಿದಿವೆ. ಸಾಮಾಜಿಕ ಅಸಮಾನತೆಗೆ ಕಾರಣವಾದ ಮತಾಂಧತೆ, ಜಾತಿಪದ್ಧತಿಗಳನ್ನು ನಿರ್ಮೂಲನ ಮಾಡುವಲ್ಲಿ ನಮ್ಮ ಸಾಧನೆ ತೀರಾ ತೀರಾ ಕಳಪೆಯಾಗಿದೆ. ಇವು ನೆಲದ ವಾಸ್ತವಗಳು. ಆದರೆ ಇವುಗಳ ಪೈಕಿ ಹೆಚ್ಚಿನವು ಜನಸಾಮಾನ್ಯರ ಮಟ್ಟಕ್ಕೆ ಜಿನುಗಿರಲಿಲ್ಲ. ಇಂದು ಆ ವಾಸ್ತವಾಂಶಗಳನ್ನು ಲೋಕಕ್ಕೆಲ್ಲಾ ಅರಿವು ಮಾಡಿಕೊಟ್ಟಿರುವುದೇ ಕೋವಿಡ್-19. ಅದು ಹೇಗೆಂದು ಮುಂದೆ ನೋಡೋಣ. ಸಾಮಾಜಿಕ ಅಸಮಾನತೆ ಎನ್ನುವುದು ಒಂದು ಅಗಾಧ ವ್ಯಾಪ್ತಿಯ ವಿಷಯವಾಗಿದ್ದು ಅದನ್ನು ಪ್ರತ್ಯೇಕವಾಗಿ ಪ್ರಸ್ತುತಪಡಿಸಬೇಕಾಗುತ್ತದೆ. ಈ ಪುಟ್ಟ ಲೇಖನದಲ್ಲಿ ನಾನು ಕೇವಲ ಆರ್ಥಿಕ ಅಸಮಾನತೆಯ ಮೇಲಷ್ಟೆ ಕೇಂದ್ರೀಕರಿಸುತ್ತಿದ್ದೇನೆ.

ಆರ್ಥಿಕ ಅಸಮಾನತೆ ಬೆಳೆಯುತ್ತಿರುವುದೇಕೆ?

ಪ್ರಜಾಪ್ರಭುತ್ವ ಮತ್ತು ಬಂಡವಾಳಶಾಹಿ ಸ್ವಭಾವತಃ ಒಂದಕ್ಕೊಂದು ಸಂಪೂರ್ಣ ವಿರುದ್ಧವಾಗಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಹಳಸಲು ಸತ್ಯವೆಂದು ಸುಪ್ರಸಿದ್ಧ ದಾರ್ಶನಿಕ ನೋಮ್ ಚಾಮ್ಸ್ಕಿ ಹೇಳುತ್ತಾನೆ. ಅವೆರಡೂ ಒಟ್ಟಿಗೆ ಇರುವ ವ್ಯವಸ್ಥೆಯನ್ನು ಆತ ಬಂಡವಾಳಶಾಹಿ ಪ್ರಜಾಪ್ರಭುತ್ವ ಎಂದು ಕರೆಯುತ್ತಾನೆ. ಇಂದು ವಿಶ್ವದ ಬಹುತೇಕ ರಾಷ್ಟ್ರಗಳು ಹೆಚ್ಚುಕಡಿಮೆ ಇದೇ ವರ್ಗಕ್ಕೆ ಸೇರುತ್ತವೆ. ಬಂಡವಾಳಶಾಹಿ ಪ್ರಜಾಪ್ರಭುತ್ವದಲ್ಲಿ ಬಂಡವಾಳಶಾಹಿಯದೇ ಮೇಲುಗೈ. ಅಲ್ಲಿನ ಪ್ರಜಾತಾಂತ್ರಿಕ ವ್ಯವಸ್ಥೆ ತುಂಬ ಕಿರಿದಾದ ವ್ಯಾಪ್ತಿಯೊಳಗೆ ಕಾರ್ಯಾಚರಿಸುತ್ತದೆ. ನಮ್ಮ ಭಾರತವೂ ಇಂದು ನಿಜವಾದ ಅರ್ಥದಲ್ಲಿ ಪ್ರಜಾತಾಂತ್ರಿಕ ಗಣರಾಜ್ಯವಾಗಿ ಉಳಿದಿಲ್ಲ. ನಮ್ಮಲ್ಲೀಗ ಇರುವುದು ಇದೇ ಬಂಡವಾಳಶಾಹಿ ಪ್ರಜಾಪ್ರಭುತ್ವ. ತಮ್ಮದು ಕಲ್ಯಾಣರಾಜ್ಯವೆಂದು ಕರೆದುಕೊಂಡ ನಮ್ಮ ಕೆಲವು ಸರಕಾರಗಳು ಬಾಯುಪಚಾರಕ್ಕೆಂಬಂತೆ ಜಾರಿಗೊಳಿಸಿದ ಒಂದೆರಡು ಸುಧಾರಣೆಗಳು ಮತ್ತು ಕಾನೂನುಗಳು (ಉದಾ: ಆಹಾರದ ಹಕ್ಕು) ಅರೆಮನಸ್ಸಿನ ಅನುಷ್ಠಾನಕ್ಕೆ ತುತ್ತಾಗಿದ್ದರೆ ಖುಲ್ಲಂಖುಲ್ಲಾ ಬಂಡವಾಳಿಗರ ಪರವಾದ ಸರಕಾರಗಳಂತೂ ಕಲ್ಯಾಣರಾಜ್ಯ ಪರಿಕಲ್ಪನೆಗೆ ತಿಲಾಂಜಲಿ ನೀಡಿ ಬಿಟ್ಟಿವೆ. ಬಂಡವಾಳಶಾಹಿ ಸಿದ್ಧಾಂತ ತೀವ್ರ ಆರ್ಥಿಕ ಅಸಮಾನತೆಗೆ ಕಾರಣವಾಗಲಿದೆಯೆಂದು ವಿಶ್ವದ ಅನೇಕ ತತ್ವಜ್ಞಾನಿಗಳು ಹಲವು ಶತಮಾನಗಳಿಂದ ಹೇಳುತ್ತಾ ಬಂದಿದ್ದಾರೆ. ‘‘ಕೆಳಮಟ್ಟದ ವರೆಗೆ ತೊಟ್ಟಿಕ್ಕುವ ಅಭಿವೃದ್ಧಿ’’ಯ ಭರವಸೆ ನೀಡಿದ ನವಉದಾರವಾದಿ ನೀತಿಗಳನ್ನು ಅಳವಡಿಸಿಕೊಂಡ ನಂತರದಲ್ಲಂತೂ ಆರ್ಥಿಕ ಅಸಮಾನತೆ ಆಗಸದೆತ್ತರಕ್ಕೆ ಬೆಳೆದಿದೆ.

ಖಾಸಗೀಕರಣ, ಉದಾರೀಕರಣ, ಜಾಗತೀಕರಣದ ಪರಿಣಾಮವಾಗಿ ದಾರಿದ್ರ್ಯದ ಮಟ್ಟದಲ್ಲಿ ತೀವ್ರ ಹೆಚ್ಚಳವಾಗಿರುವುದರ ಜೊತೆಯಲ್ಲೇ ಬಿಲಿಯಾಧಿಪತಿಗಳ ಸಂಖ್ಯೆಯಲ್ಲಿಯೂ ಹಲವು ಪಟ್ಟು ಏರಿಕೆಯಾಗಿರುವ ವಾಸ್ತವವನ್ನು ಹಲವು ಅಧ್ಯಯನಗಳು ಬಹಿರಂಗಪಡಿಸಿವೆ. ಆದರೆ ಹೆಚ್ಚಿನ ಜನರ ಗ್ರಹಿಕೆಗೆ ನಿಲುಕಿರದ ಈ ಸತ್ಯವನ್ನು ಲೋಕದ ಮುಂದೆ ನಿಚ್ಚಳವಾಗಿ ತೆರೆದಿಡಲು ಕೋವಿಡ್-19 ಎಂಬ ಹೆಮ್ಮಾರಿಯೇ ಬೇಕಾಯಿತೆನ್ನುವುದು ಬೇಸರದ ಸಂಗತಿ. ಕೊರೋನ ಸೃಷ್ಟಿಸಿರುವ ತಲ್ಲಣ ಮತ್ತು ದುರಂತಗಳ ನಡುವಿನಲ್ಲೂ ಇದನ್ನೊಂದು ಧನಾತ್ಮಕ ಅಂಶವಾಗಿ ನೋಡಬೇಕೆಂದು ನನಗನಿಸುತ್ತದೆ. ದೇಶದಲ್ಲಿ ಕೋವಿಡ್-19 ಉಲ್ಬಣಗೊಳ್ಳುತ್ತಿದ್ದಂತೆ ಮುಂದಾಲೋಚನೆ ಇಲ್ಲದೆ ಜಾರಿಗೊಳಿಸಿದ ಲಾಕ್‌ಡೌನ್‌ನ ಪರಿಣಾಮವಾಗಿ ನಗರ ಪ್ರದೇಶಗಳ ಲಕ್ಷಾಂತರ ವಲಸೆ ಕಾರ್ಮಿಕರು ಏಕಾಏಕಿಯಾಗಿ ನಿರುದ್ಯೋಗಿಗಳಾದರೆ ಅತ್ತ ಹಳ್ಳಿಗಳಲ್ಲಿ ರೈತರೂ ತಾವು ಬೆಳೆದ ಬೆಳೆಯನ್ನು ಮಾರಲಾಗದೆ ಅತೀವ ಸಂಕಷ್ಟಕ್ಕೀಡಾಗಿದ್ದಾರೆ. ಊಟ, ವಸತಿ, ಸಂಬಳದ ಏರ್ಪಾಟು ಮಾಡುತ್ತೇಂದ ಸರಕಾರದ ಭರವಸೆಗಳು ಹುಸಿಯಾದಾಗ ಸಾವಿರಾರು ವಲಸಿಗರು ಕಾಲ್ನಡಿಗೆಯಲ್ಲೇ ತಮ್ಮತಮ್ಮ ಊರುಗಳಿಗೆ ಹೊರಟ ಆ ಮನಕಲಕುವ ದೃಶ್ಯಗಳನ್ನು ನೋಡದವರಾರು? ಹೇಗಾದರೂ ಊರಿಗೆ ಸೇರಬೇಕೆಂಬ ಹಂಬಲದೊಂದಿಗೆ ಮಕ್ಕಳುಮರಿಗಳನ್ನು, ವೃದ್ಧರನ್ನು ಹೊತ್ತುಕೊಂಡು ಸಾಮಾನು ಸರಂಜಾಮುಗಳೊಂದಿಗೆ ಸುಡುಬಿಸಿಲಿನಲ್ಲಿ ಹೆಜ್ಜೆ ಹಾಕುತ್ತಿರುವ ಚಿತ್ರಗಳನ್ನು ನೋಡಿದಾಗ ಕರುಳು ಕಿತ್ತು ಬರುತ್ತದೆ. 12ರ ಹರೆಯದ ಓರ್ವ ಬಾಲಕಿ ಮತ್ತು ಇದೀಗ ಮಹಾರಾಷ್ಟ್ರದಲ್ಲಿ ರೈಲಿನಡಿ ಸಿಲುಕಿದ 16 ಕಾರ್ಮಿಕರನ್ನೂ ಒಳಗೊಂಡಂತೆ ಅನೇಕರು ಅರ್ಧದಾರಿಯಲ್ಲೆ ಪ್ರಾಣಬಿಟ್ಟ ಹೃದಯ ವಿದ್ರಾವಕ ಘಟನೆಗಳ ಬಗ್ಗೆ ಓದುತ್ತಿದ್ದಂತೆ ಕಣ್ಣಾಲಿಗಳು ಒದ್ದೆಯಾಗುತ್ತವೆ. ಅದೇ ರೀತಿ ಗ್ರಾಮೀಣ ಭಾರತದ ಕೃಷಿಕರು ತಮ್ಮ ಬೆಳೆಗಳನ್ನು ತಾವೇ ನಾಶಪಡಿಸುತ್ತಿರುವುದನ್ನು ಕಂಡು ಕಣ್ಣೀರು ಹಾಕದವರಾರು?

ನಮ್ಮ ಸರಕಾರಗಳು ಅದೇಕೆ ಲಾಕ್‌ಡೌನ್‌ಗೆ ಮುನ್ನ ಗುಪ್ತಚರ ಇಲಾಖೆಗಳ ಮೂಲಕ ವಲಸಿಗರ ಅಭಿಪ್ರಾಯವನ್ನರಿತು ಅವರನ್ನು ಕೂಡಲೇ ಹುಟ್ಟೂರುಗಳಿಗೆ ಕಳುಹಿಸುವ ಕನಿಷ್ಠ ಮಾನವೀಯತೆಯನ್ನೂ ತೋರಲಿಲ್ಲವೆಂಬ ಪ್ರಶ್ನೆ ಅನೇಕರನ್ನು ಕಾಡಿರಬಹುದು. ಉತ್ತರ ಸರಳ. ಬಂಡವಾಳಶಾಹಿ ಪ್ರಜಾಪ್ರಭುತ್ವವಾಗಿ ಪರಿಣಮಿಸಿರುವ ಭಾರತದ ಪ್ರಭುತ್ವ ಮತ್ತು ಅದರ ವಿವಿಧ ಸಂಸ್ಥೆಗಳು ಸಹಜವಾಗಿ ಬಂಡವಾಳಿಗರ ಪರವಾಗಿ ಯೋಚಿಸುತ್ತವೆಯೇ ಹೊರತು ಶ್ರಮಿಕರ ಪರವಾಗಿ ಅಲ್ಲ. ಸಾಲದುದಕ್ಕೆ ಲಾಕ್‌ಡೌನ್ ಪ್ರಾರಂಭವಾಗಿ ಬರೋಬ್ಬರಿ ಒಂದು ತಿಂಗಳ ನಂತರ ವಲಸಿಗರನ್ನು ಬಸ್ಸು, ರೈಲುಗಳಲ್ಲಿ ಕಳುಹಿಸುವ ಬಗ್ಗೆ ಯೋಚಿಸಿದ ಸರಕಾರಗಳು ಅವರಿಗೆಲ್ಲ ಉಚಿತ ಪ್ರಯಾಣದ ವ್ಯವಸ್ಥೆ ಮಾಡುವ ಬದಲು ಅವರಿಂದಲೇ ದುಬಾರಿ ದರ ವಸೂಲಿ ಮಾಡಲು ಮುಂದಾಗಿದ್ದು ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಇನ್ನೊಂದೆಡೆ ಲಾಕ್‌ಡೌನ್ ನಿಧಾನಕ್ಕೆ ತೆರವುಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಉದ್ಯಮಗಳನ್ನು ಪುನರಾರಂಭಿಸಲು ವಲಸೆ ಕಾರ್ಮಿಕರು ಬೇಕೆಂದು ಆಗ್ರಹಿಸಿದಂತಹ ಬಂಡವಾಳಿಗರ ಲಾಬಿಗಳಿಗೆ ಮಣಿದ ಸರಕಾರಗಳು ‘ಊರಿಗೆ ಹೋಗಬೇಡಿ. ನೀವು ನಮಗೆ ಬೇಕು’ ಎಂದು ವಲಸಿಗರಲ್ಲಿ ಕೈಮುಗಿದು ಬೇಡಿಕೊಳ್ಳುವುದನ್ನು ನೋಡುವಾಗ ನಗುವೂ ಅಳುವೂ ಒಟ್ಟೊಟ್ಟಿಗೆ ಬರುತ್ತಿವೆ.

ಅಂಕಿಅಂಶಗಳ ಪ್ರಕಾರ ಕೋವಿಡ್-19 ವೇಗವಾಗಿ ಹರಡುತ್ತಿರುವುದು ಬಡವರು, ನಿರ್ಗತಿಕರು, ವಲಸಿಗರು ಮತ್ತು ಬಡ ಅಲ್ಪಸಂಖ್ಯಾತರೇ ಹೆಚ್ಚಿರುವ ನಗರಗಳ ಜನನಿಬಿಡ ವಸತಿ ಪ್ರದೇಶಗಳು ಮತ್ತು ಸ್ಲಂಗಳಲ್ಲಿ. ಇವರಿಗೆಲ್ಲ ಸಂವಿಧಾನದಲ್ಲಿ ಹೇಳಿರುವ ನ್ಯಾಯ; ಸಮಾನತೆ; ಘನತೆಯ ಬದುಕು ಮುಂತಾದ ಹಕ್ಕುಗಳನ್ನು ಒದಗಿಸದೆ ಇಂತಹ ದುಸ್ತರ, ಅಸಹನೀಯ ಬದುಕಿನತ್ತ ದೂಡಿರುವುದೇ ನಮ್ಮ ಸಂವೇದನಾಶೂನ್ಯ ಬಂಡವಾಳಶಾಹಿ ಪ್ರಜಾಸತ್ತೆ. ಸಂಕ್ಷೇಪವಾಗಿ ಹೇಳುವುದಾದರೆ ಇದೆಲ್ಲವೂ ಮಾನವೀಯತೆಯಿಲ್ಲದ ಬಂಡವಾಳಶಾಹಿ ಪ್ರಜಾಸತ್ತೆ ಮತ್ತು ಬಂಡವಾಳವಾದಿ ಪ್ರಭುತ್ವಗಳ ಸಹಜ ನಡೆಯಾಗಿದೆ. ಕಟುವಾಸ್ತವ ಏನೆಂದರೆ ಕಾರ್ಮಿಕರನ್ನು ಕೇವಲ ತನ್ನ ಲಾಭಕ್ಕಾಗಿ ಬಳಸಿಕೊಂಡು ಕಾಲಕಸಕ್ಕಿಂತಲೂ ಕೀಳಾಗಿ ಕಾಣುವ ಬಂಡವಾಳಶಾಹಿಯ ಪಾಲಿಗೆ ಕಾರ್ಮಿಕರೆಂದರೆ ಬಳಸಿ ಬಿಸಾಕುವ ವಸ್ತುಗಳ ಹಾಗೆ. ಇಂತಹ ಪ್ರಭುತ್ವಗಳು ಅವರು ಎಲ್ಲಿ, ಹೇಗೆ ವಾಸ ಮಾಡುತ್ತಾರೆ, ಅವರಿಗೆಲ್ಲ ಕಾಲಕಾಲಕ್ಕೆ ಸೂಕ್ತ ಸಂಬಳ ಸಿಗುತ್ತಿದೆಯೇ, ಕಾಂಟ್ರಾಕ್ಟರುಗಳ ಕಪಿಮುಷ್ಟಿಯಲ್ಲಿ ನರಳುತ್ತಿದ್ದಾರೆಯೇ, ಕಾರ್ಮಿಕ ಕಾಯ್ದೆಗಳನ್ನು ಸರಿಯಾಗಿ ಪಾಲಿಸಲಾಗುತ್ತಿದೆಯೇ ಎಂಬಿತ್ಯಾದಿ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ‘ಮಾನವನ ವೈಯಕ್ತಿಕ ಉದ್ದೇಶಗಳನ್ನು ಪರಿಗಣಿಸದೆ ಆತನನ್ನು ತನ್ನ ಇಚ್ಛಾನುಸಾರಿ ಗುರಿಗಳ ಸಾಧನೆಗೋಸ್ಕರ ಒಂದು ಉಪಕರಣವಾಗಿ ಬಳಸಿಕೊಳ್ಳುವುದು’ ಪ್ರಭುತ್ವದ ಪ್ರವೃತ್ತಿಯಾಗಿದೆ ಎಂದು 18ನೇ ಶತಮಾನದ ಚಿಂತಕ ವಿಲ್‌ಹೆಲ್ಮ್ ವೊನ್ ಹೊಂಬಾಲ್ಟ್ ತನ್ನ ಪ್ರಭುತ್ವದ ಮಧ್ಯಪ್ರವೇಶದ ಮಿತಿಗಳು (Limits of State Action) ಎಂಬ ಗ್ರಂಥದಲ್ಲಿ ವಿವರಿಸುತ್ತಾನೆ. ಅರ್ಥಾತ್, ಆಳದಲ್ಲಿ ಪ್ರಭುತ್ವವು ಒಂದು ತೀವ್ರ ಮಾನವವಿರೋಧಿ ಸಂಸ್ಥೆಯಾಗಿದೆ.

ಆದೇಶಗಳಿಗೆ ತಲೆಬಾಗಿ ಯಾಂತ್ರಿಕವಾಗಿ ಕೆಲಸಮಾಡುವ ಕಾರ್ಮಿಕನ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಆಳುವ ವರ್ಗಗಳು ಅರ್ಥಾತ್ ಬಂಡವಾಳವಾದಿಗಳು ಆತ ತಲುಪಿರುವ ಸ್ಥಿತಿಯನ್ನು ತಿರಸ್ಕಾರದಿಂದ ಕಾಣುತ್ತವೆ ಎಂದು ಹೊಂಬಾಲ್ಟ್ ಹೇಳುತ್ತಾನೆ. ಅಂತಹ ವ್ಯವಸ್ಥೆಯಲ್ಲಿ ಕಾರ್ಮಿಕ ತಿರಸ್ಕಾರಯೋಗ್ಯನಾಗಿ, ಮನುಷ್ಯನ ಒಂದು ತುಣುಕಾಗಿ, ಮೇಲಿನಿಂದ ನಿರ್ದೇಶಿಸಲ್ಪಡುವ ಉತ್ಪಾದನಾ ಪ್ರಕ್ರಿಯೆಯಲ್ಲಿ ಒಂದು ಉಪಕರಣವಾಗಿ ಬದುಕಿರುತ್ತ್ತಾನೆ. ಭಾರತದಲ್ಲಿ ಆಳುವ ವರ್ಗಗಳು ಶ್ರಮಿಕರನ್ನು ಅತ್ಯಂತ ನಿಕೃಷ್ಟವಾಗಿ ಪರಿಗಣಿಸುವುದಕ್ಕೆ ಇನ್ನೂ ಒಂದು ಕಾರಣ ಇದೆ. ಅದುವೆ ಇಲ್ಲಿನ ಜಾತಿ ಮತ್ತು ಜನಾಂಗ ಶ್ರೇಷ್ಠತೆ. ಗಮನಿಸಬೇಕಾದ ಅಂಶವೆಂದರೆ ಶ್ರಮಿಕರಲ್ಲಿ ಹೆಚ್ಚಿನವರು ದಲಿತ, ಬುಡಕಟ್ಟು, ಅಲ್ಪಸಂಖ್ಯಾತ ಮೊದಲಾದ ತಳ ಸಮುದಾಯಗಳಿಗೆ ಸೇರಿದವರು. ಬಂಡವಾಳವಾದಿ ಆರ್ಥಿಕ ಸಂಬಂಧಗಳಿಂದಾಗಿ ಶಾಶ್ವತಗೊಳ್ಳುವ ಜೀತವು ಗುಲಾಮಗಿರಿಗಿಂತಲೂ ಹೀನಾಯವಾದದ್ದೆಂದು 1767ರಷ್ಟು ಹಿಂದೆಯೇ ಘೋಷಿಸಿದ್ದ ಚಿಂತಕ ಸೀಮೋನ್ ಲಂಗೆಯ ಮಾತುಗಳು ಇಂದಿಗೂ ಪ್ರಸ್ತುತವಿವೆ: ‘‘ಬದುಕುವುದಕ್ಕೆ ಇನ್ಯಾವುದೇ ದಾರಿ ಇಲ್ಲವೆಂದಾದಾಗ ನಮ್ಮ ಕೃಷಿಕಾರ್ಮಿಕರು ನೆಲವನ್ನು ಉತ್ತು ತಮಗೆ ಉಣಸಿಗದ ಬೆಳೆಯನ್ನು ಬೆಳೆಯಲೇಬೇಕಾದ ನಿರ್ಬಂಧಕ್ಕೆ ಒಳಗಾಗುತ್ತಾರೆ; ನಮ್ಮ ಮೇಸ್ತ್ರಿಗಳು ತಮಗೆ ಇರಸಿಗದ ಕಟ್ಟಡಗಳನ್ನು ಕಟ್ಟುವ ನಿರ್ಬಂಧಕ್ಕೆ ಒಳಗಾಗುತ್ತಾರೆ. ತಮ್ಮ ಮೇಲೆ ಕೃಪೆತೋರಿ ತಮ್ಮನ್ನು ಖರೀದಿಸುವ ಧಣಿಗಳಿಗಾಗಿ ಯಾವ ಮಾರುಕಟ್ಟೆಗಳಲ್ಲಿ ಅವರು ಕಾಯುತ್ತಾ ಕೂರುತ್ತಾರೋ ಅಲ್ಲಿಗೆ ಅವರನ್ನು ಎಳೆತರುವುದೇ ದಾರಿದ್ರ್ಯ.

ಶ್ರೀಮಂತನನ್ನು ಇನ್ನಷ್ಟು ಶ್ರೀಮಂತನನ್ನಾಗಿಸಲು ತಮಗೆ ಅನುಮತಿ ನೀಡಬೇಕೆಂದು ಮಂಡಿಯೂರಿ ಪ್ರಾರ್ಥಿಸುವಂತೆ ಅವರನ್ನು ಬಲಾತ್ಕರಿಸುವುದೇ ದಾರಿದ್ರ್ಯ......... ನಾನು ದುಃಖದಿಂದ ಕೂಡಿದವನಾಗಿ ನೇರಮಾತುಗಳಲ್ಲಿ ಹೇಳುತ್ತೇನೆ: ಹಸಿವಿನಿಂದ ಸಾಯುವ ಭಯ ಕ್ಷಣಕ್ಷಣಕ್ಕೂ ನೀಡುವ ಯಮಯಾತನೆಯೇ ಅವರಿಗೆ ಸಿಕ್ಕಿರುವ ಒಟ್ಟಾರೆ ಲಾಭ........ ಅವರನ್ನು ಅತ್ಯಂತ ಕ್ರೂರವಾದ ಪರಾಧೀನ ಸ್ಥಿತಿಗೆ ಇಳಿಸುವುದೇ ಬಡತನ.’’ ಬಂಡವಾಳಶಾಹಿ ಪ್ರಜಾಪ್ರಭುತ್ವದ ಸ್ವರೂಪ ಇಂದು ಭಾರತವನ್ನೂ ಒಳಗೊಂಡಂತೆ ವಿಶ್ವದ ಬಂಡವಾಳಶಾಹಿ ಪ್ರಜಾಪ್ರಭುತ್ವಗಳಲ್ಲಿ ಎರಡು ಪ್ರತ್ಯೇಕ ಅಧಿಕಾರ ವ್ಯವಸ್ಥೆಗಳಿರುವುದನ್ನು ಗಮನಿಸಬಹುದು. ಒಂದು, ರಾಜಕೀಯ ವ್ಯವಸ್ಥೆ. ಇನ್ನೊಂದು ಆರ್ಥಿಕ ವ್ಯವಸ್ಥೆ. ರಾಜಕೀಯ ವ್ಯವಸ್ಥೆಯಲ್ಲಿ ತತ್ವಶಃ ಜನರಿಂದ ಚುನಾಯಿಸಲ್ಪಡುವ ಪ್ರತಿನಿಧಿಗಳು ಸಾರ್ವಜನಿಕ ಕಾರ್ಯನೀತಿಗಳನ್ನು ನಿರ್ಧರಿಸುತ್ತಾರೆ ಎನ್ನಲಾಗುತ್ತದೆ. ಆರ್ಥಿಕ ವ್ಯವಸ್ಥೆ ಎನ್ನುವುದು ತತ್ವಶಃ ಖಾಸಗಿ ಅಧಿಕಾರದ ವ್ಯವಸ್ಥೆ. ಇದರಲ್ಲಿರುವುದು ಕಾರ್ಪೊರೇಟ್ ಸಂಸ್ಥೆಗಳು.

ಅಧಿಕಾರಕ್ಕಾಗಿ ಮೇಲಾಟ ನಡೆಸುವ ರಾಜಕೀಯ ಪಕ್ಷಗಳು ಪ್ರಕಟಿಸುವ ಕಾರ್ಯಸೂಚಿಗಳು ಮೂಲತಃ, ಕೊಂಚ ಮಾರ್ಪಾಟುಗಳೊಂದಿಗೆ, ಒಂದು ಅಥವಾ ಇನ್ನೊಂದು ಕ್ಷೇತ್ರದ ಕಾರ್ಪೊರೇಟ್ ಗಣ್ಯರ ಹಿತಾಸಕ್ತಿಗಳೇ ಆಗಿರುತ್ತವೆೆ. ಖಾಸಗಿ ಅಧಿಕಾರದ ವ್ಯವಸ್ಥೆ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೇಲೆ ಪ್ರಚಂಡ ಪ್ರಭಾವವನ್ನು ಬೀರುತ್ತದೆ. ಇದು ಬಹುಸ್ಪಷ್ಟ ವಿಧಾನಗಳಲ್ಲಿ ನಡೆಯುತ್ತದೆ: ಮಾಧ್ಯಮಗಳನ್ನು ನಿಯಂತ್ರಿಸುವ ಮೂಲಕ, ರಾಜಕೀಯ ಸಂಘಟನೆಗಳನ್ನು ನಿಯಂತ್ರಿಸುವ ಮೂಲಕ ಅಥವಾ ಸ್ವತಃ ಸಂಸದೀಯ ವ್ಯವಸ್ಥೆಗೇ ಅತ್ಯುಚ್ಚ ಮಟ್ಟದ ಸಿಬ್ಬಂದಿಯೊನ್ನೊದಗಿಸುವ ಮೂಲಕ. ಖಾಸಗಿ ಶಕ್ತಿಕೇಂದ್ರಗಳ ಪ್ರಭಾವವೇ ಹೆಚ್ಚಿರುವ ಬಂಡವಾಳಶಾಹಿ ಪ್ರಜಾಸತ್ತೆಯಲ್ಲಿನ ಪ್ರಜಾತಾಂತ್ರಿಕ ವ್ಯವಸ್ಥೆ ಒಂದು ಕಿರಿದಾದ ವ್ಯಾಪ್ತಿಯೊಳಗೆ ಕಾರ್ಯಾಚರಿಸುತ್ತದೆ. ಇನ್ನೊಂದು ವಿಧದಲ್ಲಿ ಹೇಳುವುದಾದರೆ ಬಂಡವಾಳಶಾಹಿ ಪ್ರಜಾಪ್ರಭುತ್ವಗಳಲ್ಲಿ ಕಾರ್ಪೊರೇಟ್ ಮಾಲಕರು, ಮ್ಯಾನೇಜರುಗಳು, ತಂತ್ರಜ್ಞಪ್ರಭುಗಳು (technocrats) ಮೊದಲಾದವರನ್ನೊಳಗೊಂಡ ಗಣ್ಯವರ್ಗವೇ ಆರ್ಥಿಕ ವ್ಯವಸ್ಥೆಯ ಜತೆಜತೆಗೆ ಪರೋಕ್ಷವಾಗಿ ರಾಜಕೀಯ ವ್ಯವಸ್ಥೆಯನ್ನೂ ಬಹುದೊಡ್ಡ ಮಟ್ಟಿನಲ್ಲಿ ಆಳುತ್ತಿದೆ. ಹೀಗಿರುವಾಗ ಪ್ರಜಾಪ್ರಭುತ್ವ ಎನ್ನುವುದು ಒಟ್ಟಾರೆ ಒಂದು ಮೋಸದಾಟವಾಗಿಬಿಡುತ್ತದೆ ಎಂದು ಚಾಮ್ಸ್ಕಿ ಹೇಳುತ್ತಾನೆ. ವಾಸ್ತವವಾಗಿ ಚುನಾಯಿತ ರಾಜಕೀಯ ಪಕ್ಷ ಮತ್ತು ಆಡಳಿತಶಾಹಿಗಳು ಖಾಸಗಿ ಶಕ್ತಿಕೇಂದ್ರಗಳ ತಾಳಕ್ಕೆ ತಕ್ಕಂತೆ ಕುಣಿಯುವ ಕೀಲುಗೊಂಬೆಗಳೇ ಹೊರತು ಇನ್ನೇನೂ ಅಲ್ಲ. ಹೀಗಾಗಿ ಖಾಸಗಿ ಶಕ್ತಿಕೇಂದ್ರಗಳ ಹಿತಾಸಕ್ತಿಗಳೇ ‘‘ರಾಷ್ಟ್ರೀಯ ಹಿತಾಸಕ್ತಿ’’ ಎಂದಾಗಿದೆ. ಉದ್ದೇಶಪೂರ್ವಕವಾಗಿ ಗಾಳಿ ಸುದ್ದಿ, ಸುಳ್ಳು ಸುದ್ದಿ, ಉತ್ಪ್ರೇಕ್ಷಿತ ಸುದ್ದಿ, ಭಟ್ಟಂಗಿತನದ ಸುದ್ದಿ ಇತ್ಯಾದಿಗಳನ್ನು ವ್ಯಾಪಕವಾಗಿ ಹರಡುವ ಮೂಲಕ, ಮಂಕುಬೂದಿ ಎರಚುವ ಮೂಲಕ ಈ ವಾಸ್ತವಾಂಶಗಳನ್ನು ಮುಚ್ಚಿಹಾಕಲು ಅಪರಿಮಿತ ಯತ್ನಗಳಾಗುತ್ತವೆ. ‘ಸಂವೇದನಾಶೀಲ (soulful) ಕಾರ್ಪೊರೇಟ್ ಸಂಸ್ಥೆ’, ‘ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ’ ಮೊದಲಾದ ಶಬ್ದಪುಂಜಗಳು ಹುಟ್ಟಿಕೊಂಡಿರುವುದೇ ಈ ಹಿನ್ನೆಲೆಯಲ್ಲಿ.

ಸೈನಿಕ ಪ್ರವೃತ್ತಿಯನ್ನು ಬಿತ್ತಿ ಬೆಳೆಸುವ ಬಂಡವಾಳಶಾಹಿ

ದ್ವಿತೀಯ ಮಹಾಯುದ್ಧೋತ್ತರ ಜಗತ್ತಿಗೆ ವಿವಿಧ ದೇಶಗಳ ಸೇನೆಗಳು ಶಸ್ತ್ರಾಸ್ತ್ರಗಳ ಸರಬರಾಜಿಗಾಗಿ ಸಲ್ಲಿಸುವ ಆರ್ಡರುಗಳ ಆಸರೆ ಬೇಕಾಗಿದೆ. ಅಂತಹ ಆಸರೆ ಯಾಕೆ ಬೇಕೆಂಬುದನ್ನು ಅಮೆರಿಕದ ಬೃಹತ್ ಯುದ್ಧೋದ್ಯಮ ಕೂಟಗಳಲ್ಲೊಂದಾದ ಎಲ್‌ಟಿವಿ ಏರೋಸ್ಪೇಸ್‌ನ ಉಪಾಧ್ಯಕ್ಷ ಸ್ಯಾಮುವೆಲ್ ಎಫ್.ಡೌನರ್ ಹೀಗೆ ವಿವರಿಸುತ್ತಾನೆ: ‘‘ಅವುಗಳನ್ನು ಕೊಂಡುಕೊಳ್ಳುವಂತೆ ಮಾಡುವ ಆಕರ್ಷಣೆಯ ವಿಷಯವೇ ಮಾತೃಭೂಮಿಯ ರಕ್ಷಣೆ. ಇದು ರಾಜಕಾರಣಿಗಳು ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕೋಸ್ಕರ ಇಟ್ಟುಕೊಂಡಿರುವ ಅತ್ಯಂತ ಆಕರ್ಷಕ ವಿಷಯಗಳಲ್ಲೊಂದು. ನೀವು ರಾಷ್ಟ್ರದ ಅಧ್ಯಕ್ಷ ಅಥವಾ ಅರಸ, ಪ್ರಧಾನಿ ಇತ್ಯಾದಿ ಆಗಿದ್ದರೆ, ನಿಮಗೆ ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸುವ ಅಂಶ ಬೇಕೆನಿಸಿ ಅದರ ಶ್ರೇಷ್ಠತೆಯನ್ನು ಹಾಡಿಹೊಗಳಿ ಪ್ರಚಾರ ಮಾಡಬೇಕೆಂದಾದರೆ ಹಾರ್ಲೆಮ್ (ಕರಿಯರ ಸ್ಲಂ), ವಾಟ್ಸ್(ವಿದ್ಯುಚ್ಛಕ್ತಿ) ಗಳನ್ನು ಪ್ರಚಾರ ಮಾಡಲಾರಿರಿ. ಆದರೆ ಆತ್ಮರಕ್ಷಣೆ ಮತ್ತು ಹೊಸ ಪರಿಸರಗಳನ್ನು ಪ್ರಚಾರ ಮಾಡಬಲ್ಲಿರಿ...........’’ ಭಾರೀ ಅರ್ಥಗರ್ಭಿತವಾದ ಮಾತುಗಳಿವು. ಬಂಡವಾಳವಾದಿ ಪ್ರಭುತ್ವಗಳು ಸಮಾಜದಲ್ಲಿ ಸೈನಿಕ ಪ್ರವೃತ್ತಿಯನ್ನು ಬಿತ್ತಿ ಬೆಳೆಸುವ ಕೆಲಸವನ್ನೂ ಮಾಡುತ್ತಿರುವ ವಿಷಯ ಇದರಿಂದ ಸ್ಪಷ್ಟವಾಗುತ್ತದೆ. ಸ್ವದೇಶಿಯರಲ್ಲಿ ಸಂಶಯಪಿಶಾಚಿತನವನ್ನು ಬೆಳೆಸಿ ಅವರನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕಾಗಿ ಹೆಣೆಯಲಾಗಿರುವ ಈ ತಂತ್ರ ಭಾರತವೂ ಸೇರಿದಂತೆ ವಿಶ್ವದ ಅನೇಕ ದೇಶಗಳಿಗೆ ಅನ್ವಯಿಸುತ್ತದೆ. ಇಂದು ವಿಶ್ವದ ವಿವಿಧ ಪ್ರಭುತ್ವಗಳು ಕನಿಷ್ಠ ಒಂದಾದರೂ ‘‘ಶಾಶ್ವತ ಶತ್ರು’’ವನ್ನು ಇಟ್ಟುಕೊಂಡಿವೆ. ಅದು ‘‘ಶತ್ರು ರಾಷ್ಟ್ರ’’ದ ರೂಪದಲ್ಲಿರಬಹುದು ಅಥವಾ ‘‘ಉಗ್ರಗಾಮಿ ಸಂಘಟನೆ’’ಗಳ ರೂಪದಲ್ಲಿರಬಹುದು. ಅಂದಹಾಗೆ ಇಲ್ಲಿ ಒಂದು ವಿಷಯವನ್ನು ಹೇಳಲೇಬೇಕಾಗಿದೆ. ದಶಕಗಳ ಹಿಂದೆ ಶೀತಲ ಸಮರ ಕೊನೆಗೊಂಡಾಗ ಅದುವರೆಗೆ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಅಮೆರಿಕದ ಯುದ್ಧೋದ್ಯಮ ಇದ್ದಕ್ಕಿದ್ದಂತೆ ಡೋಲಾಯಮಾನ ಸ್ಥಿತಿಗೆ ತಲುಪಿದಾಗ ಅದರ ನೆರವಿಗೆ ಬಂದಿರುವುದೇ ಜಾಗತಿಕ ಮಟ್ಟದ ಭಯೋತ್ಪಾದನೆ. ಇಂದು ಅಂತರ್‌ರಾಷ್ಟ್ರೀಯ ಸಭೆಗಳಲ್ಲಿ, ಉಭಯ ದೇಶಗಳ ನಡುವಿನ ಒಪ್ಪಂದಗಳಲ್ಲಿ ‘‘ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟ’’ ಎಂಬ ವಾಕ್ಯಗಳು ಇದ್ದೇ ಇರುವುದನ್ನು ನೀವು ಗಮನಿಸಿರಬಹುದು. ಅಧಿಕಾರಸ್ಥರ ಭರವಸೆಗಳು ಮತ್ತು ರಾಷ್ಟ್ರೀಯ ಬಜೆಟ್ಟುಗಳಲ್ಲಿ ಯುದ್ಧೋಪಕರಣಗಳ ಖರೀದಿಗಾಗಿ ಅತ್ಯಧಿಕ ಮೊತ್ತವನ್ನು ಮೀಸಲಿಡುವುದರ ಹೊರತಾಗಿಯೂ ಈ ‘‘ಶಾಶ್ವತ ಶತ್ರು’’, ‘‘ಭಯೋತ್ಪಾದಕ ಸಂಘಟನೆ’’ಗಳನ್ನು ಮಟ್ಟಹಾಕಲು ಸಾಧ್ಯವಾಗದಿರುವುದೇಕೆಂದು ನೀವೇ ಊಹಿಸಿ.

  ನೈಜ ಪ್ರಜಾತಂತ್ರಕ್ಕಾಗಿ ಹಂಬಲಿಸುತ್ತಿರುವ ಭಾರತೀಯರು
ಬಂಡವಾಳಶಾಹಿ ಪ್ರಜಾಪ್ರಭುತ್ವವನ್ನು ಆಧುನಿಕ ರಾಜಕೀಯ ಪ್ರಜಾಪ್ರಭುತ್ವ ಎಂದು ಕರೆಯಬಹುದು. ರಾಜಕೀಯ ಅರ್ಥಶಾಸ್ತ್ರಜ್ಞ ಹಾಗೂ ಆಧುನಿಕ ಪ್ರಜಾಸತ್ತೆಯ ತತ್ವಸಿದ್ಧಾಂತಿ ಜೋಸೆಫ್ ಶುಂಪೀಟರ್ ಪ್ರಕಾರ ಆಧುನಿಕ ರಾಜಕೀಯ ಪ್ರಜಾಪ್ರಭುತ್ವ ಎಂದರೆ ‘‘ಮತದಾರರು ತಮ್ಮ ಸಮಸ್ಯೆಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತಲೂ ನಿರ್ಧಾರ ತೆಗೆದುಕೊಳ್ಳಲಿರುವ ವ್ಯಕ್ತಿಗಳನ್ನು ಚುನಾಯಿಸುವುದೇ ಮುಖ್ಯವಾಗಿರುವ ವ್ಯವಸ್ಥೆ.’’ ಈಗ ನಮ್ಮ ಭಾರತದ ಪರಿಸ್ಥಿತಿಯನ್ನೊಮ್ಮೆ ನೋಡಿ. ಇಲ್ಲಿ ಮತದಾರರೆನ್ನಲಾದವರು ಯಾರನ್ನು ಕಾರ್ಲ್ ಮಾರ್ಕ್ಸ್ ಒಮ್ಮೆ ‘‘ಆಳುವ ವರ್ಗಗಳ ಪರಸ್ಪರ ವಿರೋಧಿ ಬಣಗಳು ಮತ್ತು ಕುಟಿಲ ಜೀವಿಗಳು’’ ಎಂದು ಕರೆದಿದ್ದನೋ ಅಂಥವರ ನಡುವಿನಿಂದಲೇ ಕೆಲವರನ್ನು ಚುನಾಯಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ಹಲವು ವರುಷಗಳೇ ಕಳೆದಿವೆ. ಭಾರತದ ಜನತೆ ಉತ್ತಮ ಆಡಳಿತಕ್ಕಾಗಿ ಹ�

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News