ರಸ್ತೆಪಕ್ಕದಲ್ಲಿ ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕ ಮಹಿಳೆ ಮತ್ತೆ 160 ಕಿ.ಮೀ. ನಡೆದಳು!

Update: 2020-05-10 17:53 GMT
ಸಾಂದರ್ಭಿಕ ಚಿತ್ರ

ಸೆಂಧ್ವಾ(ಮ.ಪ್ರ),ಮೇ 10: ಕೊರೋನ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಶಿಕ್‌ನಿಂದ ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ ತನ್ನ ಸ್ವಗ್ರಾಮಕ್ಕೆ ನಡೆದುಕೊಂಡೇ ಹೊರಟಿದ್ದ 30ರ ಹರೆಯದ ಗರ್ಭಿಣಿಯೋರ್ವಳು ದಾರಿಮಧ್ಯೆಯೇ ಮಗುವಿಗೆ ಜನನ ನೀಡಿದ ಘಟನೆ ನಾಶಿಕ್ ಮತ್ತು ಧುಳೆ ನಡುವಿನ ಗ್ರಾಮವೊಂದರಲ್ಲಿ ಮೇ 5ರಂದು ನಡೆದಿದೆ.

ತಾಯಿ ಶಕುಂತಲಾ ಮತ್ತು ನವಜಾತ ಶಿಶು ಆರೋಗ್ಯದಿಂದಿವೆ ಎಂದು ಸೆಂಧ್ವಾ ಪೊಲೀಸ್ ಠಾಣಾಧಿಕಾರಿ ವಿ.ಎಸ್.ಪರಿಹಾರ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು. ಶಕುಂತಲಾ ಹೆರಿಗೆಯಾದ ಒಂದು ಗಂಟೆಯ ಬಳಿಕ ನವಜಾತ ಶಿಶುವಿನೊಡನೆ ಮತ್ತೆ ಕಾಲ್ನಡಿಗೆಯನ್ನು ಆರಂಭಿಸಿ ಸುಮಾರು 160 ಕಿ.ಮೀ.ದೂರವನ್ನು ಕ್ರಮಿಸಿರುವುದು ಪೊಲೀಸರನ್ನೇ ದಂಗು ಬಡಿಸಿದೆ.

 ಶಕುಂತಲಾ ಮತ್ತು ಆಕೆಯ ಕುಟುಂಬ ಸೇರಿದಂತೆ 16 ವಲಸೆ ಕಾರ್ಮಿಕರ ಗುಂಪನ್ನು ಶನಿವಾರ ಮಧ್ಯಪ್ರದೇಶ-ಮಹಾರಾಷ್ಟ್ರ ಗಡಿಯಲ್ಲಿರುವ ಬಿಜಸಾನ್ ತನಿಖಾ ಠಾಣೆಯ ಬಳಿ ಪೊಲೀಸರು ತಡೆದು ನಿಲ್ಲಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಆ ವೇಳೆಗಾಗಲೇ ಈ ಗುಂಪು 210 ಕಿ.ಮೀ.ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿತ್ತು. ಗುಂಪಿನಲ್ಲಿದ್ದ ಇತರ ಮಹಿಳೆಯರು ರಸ್ತೆಪಕ್ಕದಲ್ಲಿ ಶಕುಂತಲಾಳ ಹೆರಿಗೆಯನ್ನು ಮಾಡಿಸಿದ್ದರು.

ಶನಿವಾರ ಗುಂಪಿನಲ್ಲಿದ್ದ ಎಲ್ಲರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿದ ಪೊಲೀಸರು ಅವರನ್ನು ಬಸ್‌ನಲ್ಲಿ ಅವರ ಸ್ವಗ್ರಾಮಕ್ಕೆ ಕಳುಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News