ಕೊರೋನ ವೈರಸ್ ನಿಂದ ಮನುಷ್ಯರು ಕಲಿಯಬೇಕಾಗಿರುವುದು ಏನು?

Update: 2020-05-14 09:21 GMT

ನನ್ನ ಗೆಳೆಯನೊಬ್ಬ ಕೊರೋನ ವೈರಸ್ ನಿಂದ ಮನುಷ್ಯ ಕಲಿಯುವುದೇನಾದರೂ ಇದೆಯಾ ಎಂದು ಪ್ರಶ್ನಿಸಿದ. ಹೌದು ಇದೆ ಎಂದು ಉತ್ತರಿಸಿದೆ. ಏನದು ಎಂದ.

ಮುಂದುವರೆದ ನಾನು, ಈ ವೈರಸ್ ಬಾವಲಿ (Bat)ಯಿಂದ ಬಂದಿದೆ ಎಂದು ಡಬ್ಲ್ಯು.ಎಚ್.ಓ ವಿಜ್ಞಾನಿಗಳು ಹೇಳುತ್ತಿದ್ದರೂ ಎಲ್ಲಿ, ಹೇಗೆ ಹುಟ್ಟಿತು, ಕೊರೋನ ಅಂತ ಯಾಕೆ ಹೆಸರಿಡಲಾಯಿತು ಎಂಬುದು ಈವರೆಗೆ ಖಚಿತವಾಗಿಲ್ಲ. ಪರಿಹಾರವೂ ಅಸ್ಪಷ್ಟ. ಆದರೆ, ಪರಿಣಾಮ ಮಾತ್ರ ಸ್ಪಷ್ಟ. ಅದುವೇ ವಿಶ್ವದಲ್ಲಿ ಸರ್ವರಿಗೂ ವಿವರಿಸಲಾಗದಂತಹ ಮಾನಸಿಕ ಒತ್ತಡ, ಸಾವಿನ ಭಯ. ಪಾರಾದರೆ ಮರುಜನ್ಮ ಪ್ರಾಪ್ತವಾದಂತೆಯೇ.

ಕಾಡುನಾಶ, ಅಪರಿಮಿತ ಗಣಿಗಾರಿಕೆ, ಕಸದ ಗೂಡಾಗುತ್ತಿರುವ ನಗರ ಪ್ರದೇಶಗಳು, ವಾಯುಮಾಲಿನ್ಯಗಳು ಪ್ರಕೃತಿ ಸಂಪತ್ತನ್ನು ನಾಶಪಡಿಸುತ್ತಿವೆ. ಮಳೆಯ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. ದಿನೇ ದಿನೇ ಭೂಮಿಯ ಮೇಲೆ ಉಷ್ಣಾಂಶ ಏರುತ್ತಿದೆ. ನಿಸರ್ಗದ ಈ ಆಕ್ರಮಣವನ್ನು ನೋಡುತ್ತಿದ್ದರೆ ಈ ಜಗತ್ತು ಕಂಡ ಅಪರೂಪದ ವಿಜ್ಞಾನಿ ಸ್ಟೀಫನ್ ವಿಲಿಯಂ ಹಾಕಿಂಗ್ಸ್ 2017ರಲ್ಲಿ ಮನುಷ್ಯ ಜೀವಿ ಇನ್ನೂ 100 ವರ್ಷಗಳಲ್ಲಿ ಬೇರೊಂದು ಗ್ರಹವನ್ನು ಹುಡುಕಿಕೊಳ್ಳಬೇಕಾಗುತ್ತದೆ ಎಂದು ಹೇಳಿದ ಮಾತು ನಿಜ  ಆಗುವುದರಲ್ಲಿ ಸಂಶಯವೇ ಕಾಣುತ್ತಿಲ್ಲ. ಮನುಷ್ಯ ತನ್ನ ಇತಿಮಿತಿಗಳನ್ನು ಅರಿಯದೆ ಬದುಕಲು ಆಶಿಸುತ್ತಿದ್ದಾನೆ. ಸಂಪತ್ತಿದ್ದರೂ, ಸಮಾಧಾನ ಬೇಕಲ್ಲ. ಈ ವೈರಸ್ ಅನ್ನು 'ನಿಸರ್ಗ ಪ್ರತೀಕಾರದ ಮಾತೃ' ಎಂದು ಕರೆಯಲಾಗಿದೆ.

ಈ ವೈರಸ್ ಪರಾವಲಂಬಿ. ತನ್ನಷ್ಟಕ್ಕೆ ತಾನು ಬಹಳ ಕಾಲ ಬದುಕದು. ಅಂದರೆ ಬದುಕಲು ಇನ್ನೊಂದು ಜೀವಿಯನ್ನು  ಅವಲಂಬಿಸಲೇಬೇಕು. ಅದಕ್ಕಾಗಿ ಅದು ಸಾಯುವ ಮುನ್ನ ಬದುಕಲು ಬೇಕಾದ ಆತಿಥ್ಯಕಾರಿಣಿ(host)ಯನ್ನು ಹುಡುಕುತ್ತಾ  ಹೊರಡುತ್ತೆ. ಸಿಗದಿದ್ದರೆ ಅದಕ್ಕೆ ಸಾವು.

ಈವರೆಗೆ ವಿಶ್ವದಲ್ಲಿ 2,80,454, ಭಾರತದಲ್ಲಿ 2109(ಮೇ,9)ಜನರ ಬಲಿ ತೆಗೆದುಕೊಂಡು ಮೆರೆಯುತ್ತಿದೆ. ಆತಿಥ್ಯಕಾರಿಣಿಯ ಹುಡುಕಾಟ ಸಮುದ್ರಗಳಲ್ಲಿರಬಹುದು, ಅದರ ಆಚೆ ಇರಬಹುದು, ಎಷ್ಟೇ ದೂರವಿರಬಹುದು, ಒಟ್ಟಿನಲ್ಲಿ ವಿಶ್ವದಾದ್ಯಂತ ಆ ಆತಿಥ್ಯಕಾರಿಣಿಯ ಹುಡುಕಾಟದಲ್ಲಿ ಈ ವೈರಸ್ ಗೆ ಯಾವ ಧರ್ಮ, ಜಾತಿ, ಲಿಂಗ, ಬಣ್ಣ, ವಯಸ್ಸು, ಹುಟ್ಟಿದ ಜಾಗ, ಭಾಷೆ, ವಾಸದ ಸ್ಥಳ, ಸಿರಿವಂತ-ಬಡವ, ಅಧಿಕಾರಸ್ತನೇ, ಚಕ್ರವರ್ತಿ, ಸರ್ವಾಧಿಕಾರಿಯೇ ಎಂಬ ಯಾವುದೇ ಬೇಧ-ಭಾವವಿಲ್ಲ.

ನನ್ನ ಮಾತಿನ ಮಧ್ಯೆಯ ಮರು ಪ್ರಶ್ನೆ. ತಾರತಮ್ಯರಹಿತ ಬದುಕಿಗಾಗಿಯೇ ವಿಶ್ವದಾದ್ಯಂತ ಚಿಂತನೆ, ಹೋರಾಟ ಮನುಷ್ಯ ಪ್ರಪಂಚ ಹುಟ್ಟಿದಂದಿನಿಂದಲೂ ನಡೆಯುತ್ತಿದೆ. ಆದರೆ ತಾರತಮ್ಯರಹಿತ ಬದುಕನ್ನು ಸಾಧಿಸಲಾಗಿಲ್ಲ. ಸಾಧಿಸುವುದಿರಲಿ ಆ ಹೋರಾಟದ ಪ್ರಯತ್ನದ ಮಧ್ಯೆ ಧರ್ಮ, ಜಾತಿ, ಲಿಂಗ ಇತ್ಯಾದಿಗಳ ಹೆಸರಿನಲ್ಲಿ ಕೊಲೆ  ಅವಮಾನಗಳು ನಡೆಯುತ್ತಿರುವುದು ವಾಸ್ತವ.

ಈ ದುಷ್ಟ ಬುದ್ಧಿಗಳಾವುವು ಇಲ್ಲದಿರುವುದೇ ತಾರತಮ್ಯ ರಹಿತ, ಸಮಾನತೆಯ ಜೀವನದ ಅರ್ಥ. ಈ ಅರ್ಥವನ್ನಂತೂ ಕೊರೋನ ವೈರಸ್ ಇಡೀ ವಿಶ್ವದಾದ್ಯಂತ  ನೆನಪಿಸಿದೆ. ಇದು ಮಾರಣಾಂತಿಕ ಕೊರೋನ  ವೈರಸ್ ನಿಂದ ಸರ್ವರೂ ತಿಳಿಯಬೇಕಾದ  ಒಂದು ಒಳ್ಳೆಯ ಲಕ್ಷಣ ಎಂದು ನನ್ನ  ಗೆಳೆಯನಿಗೆ ಉತ್ತರಿಸಿದೆ. ಆ ಗೆಳೆಯನಿಂದ ಮರುಪ್ರಶ್ನೆ ಬರಲಿಲ್ಲ..!               

-ಎಚ್. ಕಾಂತರಾಜ

ಮಾಜಿ ಅಧ್ಯಕ್ಷರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ

Writer - -ಎಚ್. ಕಾಂತರಾಜ

contributor

Editor - -ಎಚ್. ಕಾಂತರಾಜ

contributor

Similar News