ಉದ್ಯೋಗಿಗಳ ನೈತಿಕ ಸ್ಥೈರ್ಯ ಹೆಚ್ಚಿಸಲು ವೇತನ ಏರಿಸಿದ ಏಶಿಯನ್ ಪೇಂಟ್ಸ್ !

Update: 2020-05-15 17:49 GMT

ಮುಂಬೈ, ಮೇ 15: ದೇಶದ ಅತ್ಯಂತ ದೊಡ್ಡ ಬಣ್ಣ ತಯಾರಿಕೆ ಕಂಪನಿಯಾಗಿರುವ ಏಶಿಯನ್ ಪೇಂಟ್ಸ್ ಪ್ರವಾಹಕ್ಕೆ ಎದುರಾಗಿ ಈಜುತ್ತಿದೆ. ಲಾಕ್‌ಡೌನ್‌ನಿಂದಾಗಿ ತಮ್ಮ ಉತ್ಪನ್ನಗಳಿಗೆ ಬೇಡಿಕೆ ಕುಂಠಿತಗೊಂಡು ಕಂಪನಿಗಳು ವೇತನ ಮತ್ತು ಉದ್ಯೋಗಗಳನ್ನು ಕಡಿತಗೊಳಿಸುತ್ತಿರುವ ಈ ಸಮಯದಲ್ಲಿ ಏಶಿಯನ್ ಪೇಂಟ್ಸ್ ತನ್ನ ಉದ್ಯೋಗಿಗಳ ನೈತಿಕ ಸ್ಥೈರ್ಯವನ್ನು ಹೆಚ್ಚಿಸಲು ಅವರ ವೇತನಗಳಲ್ಲಿ ಏರಿಕೆ ಮಾಡುತ್ತಿದೆ.

ಮಾರಾಟ ವಿಭಾಗಕ್ಕೆ ಅದರ ನೆರವಿನ ವ್ಯಾಪ್ತಿಯು ಪಾರ್ಟ್‌ನರ್ ಸ್ಟೋರ್‌ಗಳಿಗೆ ಆಸ್ಪತ್ರೆ ವೆಚ್ಚ ಪಾವತಿ ಮತ್ತು ವಿಮಾ ಸೌಲಭ್ಯ ಹಾಗೂನೇರ ನಗದು ಬೆಂಬಲವನ್ನು ಒಳಗೊಂಡಿದೆ. ಕಂಪನಿಯು ತನ್ನ ಗುತ್ತಿಗೆದಾರರ ಖಾತೆಗಳಿಗೆ 40 ಕೋ.ರೂ.ಗಳ ವರ್ಗಾವಣೆಯನ್ನೂ ಮಾಡಿದೆ.

ಕಂಪನಿಯು ಕೇಂದ್ರ ಮತ್ತು ರಾಜ್ಯ ಕೋವಿಡ್-19 ಪರಿಹಾರ ನಿಧಿಗಳಿಗೆ 35 ಕೋ.ರೂ.ಗಳ ದೇಣಿಗೆಗಳನ್ನು ಸಲ್ಲಿಸಿದೆ. ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ದೇಶಕ್ಕೆ ನೆರವಾಗಲು ಸ್ಯಾನಿಟೈಸರ್‌ಗಳನ್ನೂ ಅದು ತಯಾರಿಸುತ್ತಿದೆ.

‘ನಿಜವಾದ ನಾಯಕತ್ವದ ಮತ್ತು ತನ್ನೆಲ್ಲ ಪಾಲುದಾರರ ಕಾಳಜಿಯನ್ನು ವಹಿಸುವ ಸಂಸ್ಥೆಯೊಂದರ ಉದಾಹರಣೆಯೊಂದನ್ನು ನಾವು ಸ್ಥಾಪಿಸಬೇಕಿದೆ. ಇಂತಹ ಎಲ್ಲ ಉಪಕ್ರಮಗಳ ಬಗ್ಗೆ ನಾನು ನಿಯಮಿತವಾಗಿ ಆಡಳಿತ ಮಂಡಳಿಗೆ ಮಾಹಿತಿ ನೀಡುತ್ತಿರುತ್ತೇನೆ ಮತ್ತು ಅದರ ಅನುಮತಿಯನ್ನು ಪಡೆದುಕೊಳ್ಳುತ್ತೇನೆ ’ಎಂದು ಸುದ್ದಿಸಂಸ್ಥೆಗೆ ತಿಳಿಸಿದ ಏಶಿಯನ್ ಪೇಂಟ್ಸ್‌ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮಿತ ಸಿಂಗ್ಲೆ ಅವರು,ನಾನಿದನ್ನು ಪ್ರತಿಯೊಬ್ಬ ಉದ್ಯೋಗಿಯ ಜೊತೆಯೂ ಸಂವಾದಿಸುವ ಮತ್ತು ಅನಿಶ್ಚಿತತೆಯ ಮಾರುಕಟ್ಟೆಯಲ್ಲಿ ಅವರ ಕಳವಳಗಳಿಗೆ ಸಾಂತ್ವನ ಹೇಳುವ ಅವಕಾಶವನ್ನಾಗಿ ಪರಿಗಣಿಸಿದ್ದೇನೆ’ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News