ತ್ರಿಚಕ್ರ ಸೈಕಲ್ ತುಳಿದುಕೊಂಡೇ ತಂದೆ, ತಾಯಿಯನ್ನು 600 ಕಿ.ಮೀ. ದೂರದ ಮನೆ ತಲುಪಿಸಿದ 11 ವರ್ಷದ ಬಾಲಕ

Update: 2020-05-25 16:20 GMT

ಬಿಹಾರ: ಉತ್ತರ ಪ್ರದೇಶದಿಂದ 600 ಕಿ.ಮೀ. ದೂರದ ತನ್ನ ಗ್ರಾಮ ತಲುಪಲು 11 ವರ್ಷದ ಬಾಲಕನೊಬ್ಬ ತನ್ನ ಹೆತ್ತವರನ್ನು ತ್ರಿಚಕ್ರದ ಸೈಕಲನ್ನು 9 ದಿನಗಳ ಕಾಲ ತುಳಿದುಕೊಂಡು ತೆರಳಿದ ಘಟನೆ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಬಾಲಕನ ಸಾಹಸದ ವಿಡಿಯೋ ವೈರಲ್ ಆಗುತ್ತಿದೆ. ಈ ಬಾಲಕನ ಹೆಸರು ತಬಾರಕ್. ಘಟನೆಯ ವಿಡಿಯೋವನ್ನು ಶೇರ್ ಮಾಡಿರುವ ಹಲವರು ಟ್ವಿಟರ್ ನಲ್ಲಿ ಪ್ರಧಾನಿ ಮೋದಿಯವರ ‘ಆತ್ಮನಿರ್ಭರ್ ಭಾರತ್’ ಅಭಿಯಾನವನ್ನು ಟೀಕಿಸಿದ್ದಾರೆ.

ಈ ಬಗ್ಗೆ ರಾಷ್ಟ್ರೀಯ ಜನತಾ ದಳ ನಾಯಕಿ ಮಧು ಸಿಂಗ್ ಟ್ವೀಟ್ ಮಾಡಿ, “ಶುಭಾಶಯಗಳು ಸ್ನೇಹಿತರೇ. ಭಾರತದ ಮೊದಲ ಮತ್ತು ಯುವ ಸ್ವಾವಲಂಬಿ (ಆತ್ಮ ನಿರ್ಭರ್ ಅಭಿಯಾನ ಟೀಕಿಸಿ) ನನಗೆ ಸಿಕ್ಕಿದ್ದಾನೆ. 11 ವರ್ಷದ ಬಾಲಕ ತಬಾರಕ್” ಎಂದಿದ್ದಾರೆ.

“ಆತ್ಮನಿರ್ಭರ್ ಭಾರತದ ಒಂದು ದೃಶ್ಯ” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ತಬಾರಕ್ ನ ಹೆತ್ತವರಿಗೆ ಆರು ಮಂದಿ ಮಕ್ಕಳು. ಆತನ ಹಿರಿಯ ಸಹೋದರ ಲಾಕ್ ಡೌನ್ ಪರಿಣಾಮ ತಮಿಳುನಾಡಿನಲ್ಲಿ ಸಿಲುಕಿಕೊಂಡಿದ್ದಾನೆ. ಆತನಿಗೆ ಮೂವರು ಸಹೋದರಿಯರಿದ್ದು, ಒಬ್ಬಾಕೆಗೆ ಮದುವೆಯಾಗಿದೆ.

ಬಿಹಾರದವರಾದ ಈತನ ಕುಟುಂಬಕ್ಕೆ ಸ್ವಂತ ಭೂಮಿಯಿಲ್ಲ. ಅಪಘಾತವೊಂದರಲ್ಲಿ ತಬಾರಕ್ ನ ತಾಯಿ ಒಂದು ಕಣ್ಣನ್ನು ಕಳೆದುಕೊಂಡಿದ್ದಾರೆ. ಕಳೆದ 20 ವರ್ಷಗಳಿಂದ ತಬಾರಕ್ ತಂದೆ ಇಸ್ರಾಫೀಲ್ ವಾರಣಾಸಿಯಲ್ಲಿ ಮಾರ್ಬಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೂ ಕೂಡ ಅಪಘಾತವೊಂದರಲ್ಲಿ ಕಾಲಿಗೆ ಗಂಭೀರ ಗಾಯವಾಗಿದೆ.

“ನನ್ನೊಂದಿಗೆ ಹೆತ್ತವರಿದ್ದಾರೆ. ದಾರಿಯಲ್ಲಿ ಸಾವಿರಾರು ಜನರು ನಡೆದುಕೊಂಡೇ ಬರುತ್ತಿದ್ದಾರೆ” ಎಂದು ತಬಾರಕ್ ಹೇಳುತ್ತಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News