‘ಕೊರೋನ ಅಂತ್ಯಕ್ಕಾಗಿ’ ದೇವಸ್ಥಾನದಲ್ಲಿ ವ್ಯಕ್ತಿಯ ತಲೆ ಕಡಿದ ಅರ್ಚಕ !
ಭುವನೇಶ್ವರ, ಮೇ 28: ವೃದ್ಧ ಅರ್ಚಕನೋರ್ವ ದೇವಸ್ಥಾನದೊಳಗೆ ವ್ಯಕ್ತಿಯೋರ್ವನನ್ನು ತಲೆ ಕಡಿದು ಹತ್ಯೆ ಮಾಡಿದ ಘಟನೆ ಒಡಿಶಾದ ಕಟಕ್ ಜಿಲ್ಲೆಯಲ್ಲಿ ನಡೆದಿದೆ. ತಾನು ಕೋವಿಡ್-19 ಪಿಡುಗನ್ನು ಅಂತ್ಯಗೊಳಿಸಲು ಮಾನವ ಬಲಿಯನ್ನು ನೀಡಿದ್ದಾಗಿ ಆರೋಪಿಯು ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಸಂಸಾರಿ ಓಝಾ (70) ಗುರುವಾರ ಬೆಳಿಗ್ಗೆ ಪೊಲೀಸರಿಗೆ ಶರಣಾಗಿದ್ದು, ಸ್ಥಳೀಯ ನಿವಾಸಿ ಸರೋಜಕುಮಾರ ಪ್ರಧಾನ (52) ಎಂಬಾತನನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಲೋಕ ರಂಜನ ರೇ ತಿಳಿಸಿದರು.
ನರಸಿಂಗಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಧಹುದಾ ಗ್ರಾಮದಲ್ಲಿಯ ಬ್ರಾಹ್ಮಣಿ ದೇವಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.
ಕೋವಿಡ್-19 ಪಿಡುಗನ್ನು ಅಂತ್ಯಗೊಳಿಸಲು ತನಗೆ ನರಬಲಿ ಯನ್ನು ನೀಡುವಂತೆ ದೇವಿಯು ಕನಸಿನಲ್ಲಿ ಆದೇಶಿಸಿದ್ದಳು ಎಂದು ಓಝಾ ಹೇಳಿಕೊಂಡಿದ್ದಾನೆ ಎಂದು ರೇ ತಿಳಿಸಿದರು.
ಆದರೆ, ಗ್ರಾಮದಲ್ಲಿಯ ಮಾವಿನ ತೋಟವೊಂದಕ್ಕೆ ಸಂಬಂಧಿಸಿದಂತೆ ಓಝಾ ಮತ್ತು ಪ್ರಧಾನ ನಡುವೆ ದೀರ್ಘಕಾಲದಿಂದ ವಿವಾದವಿತ್ತು ಎಂದು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ದೇವಿಯನ್ನು ಸಂತುಷ್ಟಗೊಳಿಸಲು ಮತ್ತು ಕೋವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಮಾನವ ಜನಾಂಗವನ್ನು ರಕ್ಷಿಸಲು ತಾನು ನರಬಲಿಯನ್ನು ನೀಡಿದ್ದೇನೆ ಎಂಬ ಆರೋಪಿಯ ಹೇಳಿಕೆಯನ್ನು ಅಥವಾ 70 ವರ್ಷದ ವೃದ್ಧ ಒಬ್ಬನೇ 52ರ ಹರೆಯದ ವ್ಯಕ್ತಿಯನ್ನು ಕೊಂದಿದ್ದಾನೆ ಎನ್ನುವುದನ್ನು ಪೊಲೀಸರು ನಂಬಿಲ್ಲ. ಕೊಲೆಯ ಹಿಂದಿನ ಕಾರಣವನ್ನು ತಿಳಿಯಲು ತನಿಖೆಯನ್ನು ಕೈಗೊಂಡಿರುವ ಅವರು,ಕೊಲೆಗೆ ಬಳಸಿದ್ದ ಕೊಡಲಿಯನ್ನು ವಶಪಡಿಸಿಕೊಂಡಿದ್ದಾರೆ.