ಮನೆಯಿಂದ ಹೊರಕ್ಕೆಳೆದು, ಮರಕ್ಕೆ ಕಟ್ಟಿಹಾಕಿ ಯುವಕನನ್ನು ಜೀವಂತ ದಹಿಸಿದರು!

Update: 2020-06-02 12:14 GMT

ಪ್ರತಾಪ್‍ಗಢ: ರಾತ್ರಿ ವೇಳೆ 22 ವರ್ಷದ ಯುವಕನೊಬ್ಬನನ್ನು ದುಷ್ಕರ್ಮಿಗಳು ಮನೆಯಿಂದ ಹೊರಕ್ಕೆಳೆದು, ಮರಕ್ಕೆ ಕಟ್ಟಿಹಾಕಿ ಬೆಂಕಿ ಹಚ್ಚಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಪ್ರತಾಪ್‍ಗಢ ಜಿಲ್ಲೆಯಲ್ಲಿ ಸಂಭವಿಸಿದೆ.

ಕುಟುಂಬದ ಮಹಿಳೆಯೊಬ್ಬರ ಜತೆ ಪ್ರೇಮ ಸಂಬಂಧದ ವಿಚಾರದಲ್ಲಿ ಈ ಹತ್ಯೆ ನಡೆದಿದೆ ಎನ್ನಲಾಗಿದೆ.

ಹಲವು ಮಂದಿ ರಾತ್ರಿ ವೇಳೆ ಮನೆಗೆ ನುಗ್ಗಿ ಯುವಕನನ್ನು ಮನೆಯಿಂದ ಹೊರಕ್ಕೆ ಎಳೆದು, ಮರಕ್ಕೆ ಕಟ್ಟಿ ಹಾಕಿದರು. ಬಳಿಕ ಬೆಂಕಿ ಹಚ್ಚಿದರು ಎಂದು ವರದಿಯಾಗಿದೆ. ಘಟನೆ ಬಳಿಕ ಗ್ರಾಮಕ್ಕೆ ಬಂದ ಪೊಲೀಸ್ ತಂಡದ ಮೇಲೂ ದಾಳಿ ಮಾಡಲಾಗಿದೆ. ದ್ವಿಚಕ್ರ ವಾಹನಗಳು ಹಾಗೂ ಮೋಟಾರ್ ಸೈಕಲ್‍ಗೆ ಬೆಂಕಿ ಹಚ್ಚಲಾಗಿದ್ದು, ಪೊಲೀಸರ ಮೇಲೆ ಗ್ರಾಮಸ್ಥರ ಒಂದು ಗುಂಪು ಹಲ್ಲೆ ಮಾಡಿದ್ದು ಕೆಲ ಪೊಲೀಸರು ಗಾಯಗೊಂಡಿದ್ದಾರೆ.

ಮೃತ ವ್ಯಕ್ತಿಯನ್ನು ಅಂಬಿಕಾ ಪ್ರಸಾದ್ ಪಟೇಲ್ ಎಂದು ಗುರುತಿಸಲಾಗಿದೆ. ಈತ ಕಳೆದ ವರ್ಷ ಮಹಿಳೆಯೊಬ್ಬರ ಜತೆ ಪ್ರೇಮ ಸಂಬಂಧ ಹೊಂದಿದ್ದ. ಆದರೆ ಮಹಿಳೆಯ ಕುಟುಂಬದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕೆಲ ತಿಂಗಳ ಹಿಂದೆ ಮಹಿಳೆ ಪೊಲೀಸ್ ಪೇದೆಯಾಗಿ ಆಯ್ಕೆಯಾಗಿ, ಕಾನ್ಪುರದಲ್ಲಿ ಕರ್ತವ್ಯಕ್ಕೆ ನಿಯೋಜಿತರಾಗಿದ್ದರು. ಕಳೆದ ವಾರ ಅವರಿಬ್ಬರು ಜೊತೆಯಾಗಿ ಇರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಈ ಫೋಟೊವನ್ನು ಅಂಬಿಕಾ ಪ್ರಸಾದ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ ಎಂದು ಮಹಿಳೆ ಹಾಗೂ ಆಕೆಯ ಕುಟುಂಬದವರು ಆಪಾದಿಸಿದ್ದರು. ಪಟೇಲ್ ವಿರುದ್ಧ ಮಹಿಳೆ ಪ್ರಕರಣ ದಾಖಲಿಸಿದ್ದರು. ನೆರೆಹೊರೆಯ ಕೆಲವರ ವಿರುದ್ಧ ಇದೀಗ ಪಟೇಲ್‍ನನ್ನು ಜೀವಂತವಾಗಿ ದಹಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಮುಖ್ಯಸ್ಥ ಅಭಿಷೇಕ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News