ದಿಲ್ಲಿಯಿಂದ ಮುಂಬೈಗೆ ನವ್ಲಾಖಾ ಸ್ಥಳಾಂತರ: ಹೈಕೋರ್ಟಿಗೆ ವಿವರಣೆ ನೀಡದೆ ಸುಪ್ರೀಂನಿಂದ ತಡೆಯಾಜ್ಞೆ ಪಡೆದ ಎನ್‍ಐಎ

Update: 2020-06-03 11:56 GMT

ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖಾ ಅವರನ್ನು ದಿಲ್ಲಿಯಿಂದ ಮುಂಬೈಗೆ ಕರೆದುಕೊಂಡು ಹೋಗಿರುವ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ದಿಲ್ಲಿ ಹೈಕೋರ್ಟ್‍ ನೀಡಿದ ಆದೇಶಕ್ಕೆ ತಡೆಯಾಜ್ಞೆ ಕೋರಿ ರಾಷ್ಟ್ರೀಯ ತನಿಖಾ ಏಜೆನ್ಸಿ ಮಂಗಳವಾರ ಸುಪ್ರೀಂ ಕೋರ್ಟ್ ಕದ ತಟ್ಟಿದೆ.

ಜಸ್ಟಿಸ್ ಅರುಣ್ ಮಿಶ್ರಾ ಅವರ ನೇತೃತ್ವದ ಪೀಠ ವಿಚಾರಣೆ ಕೈಗೆತ್ತಿಕೊಂಡು ಈ ಪ್ರಕರಣ ಕುರಿತಂತೆ ಹೈಕೋರ್ಟಿನ ವಿಚಾರಣೆಗೆ ತಡೆ ಹೇರಿತಲ್ಲದೆ, ಜೂನ್ ಮಧ್ಯಭಾಗದಲ್ಲಿ ವಿಚಾರಣೆ ನಡೆಸಲು ನಿರ್ಧರಿಸಿದೆ. ಈ ವಿಚಾರಣೆ ಸಂದರ್ಭ ನವ್ಲಾಖಾ ಅವರ ವಕೀಲರು ಹಾಜರಿರಲಿಲ್ಲ.

ಎನ್‍ಐಎ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದ ಮೇಲ್ಮನವಿ ಅಪೀಲಿನ ಪ್ರತಿಯನ್ನು ನವ್ಲಾಖಾ ಅವರ ವಕೀಲರಿಗೆ ನೀಡಲಾಗಿರಲಿಲ್ಲ   ಹಾಗೂ ಈ ಪ್ರಕರಣದ ವಿಚಾರಣೆಯನ್ನು ಅತ್ಯಂತ ಶೀಘ್ರವಾಗಿ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಕ್ರಮ ಕೈಗೊಂಡಿರುವುದು ಅಚ್ಚರಿ ಮೂಡಿಸಿದೆ.

ನವ್ಲಾಖಾ ಅವರ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟಿನಲ್ಲಿ ಬಾಕಿಯಿರುವಂತೆಯೇ  ಕೇವಲ ಐದು ನಿಮಿಷಗಳ ಮುಂಚೆ ಮಾಹಿತಿ ನೀಡಿ ನವ್ಲಾಖಾ ಅವರನ್ನು ಇತ್ತೀಚೆಗೆ ಮುಂಬೈ ರೈಲಿನಲ್ಲಿ ಕರೆದುಕೊಂಡು ಹೋಗಲಾಗಿದ್ದ ಕ್ರಮ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News