ಆರೋಗ್ಯಕ್ಕಿಂತ ಆರ್ಥಿಕತೆ ದೊಡ್ಡದಲ್ಲ: ಆರ್‌ಬಿಐಗೆ ಸುಪ್ರೀಂಕೋರ್ಟ್ ಕಿವಿಮಾತು
ಹೊಸದಿಲ್ಲಿ,ಮಾ.12: ಜನತೆಯ ಆರೋಗ್ಯವನ್ನು ಬದಿಗೊತ್ತಿ ಆರ್ಥಿಕ ಅಭಿವೃದ್ಧಿಗೆ ಕೇಂದ್ರ ಸರಕಾರವು ಆದ್ಯತೆ ನೀಡಕೂಡದೆಂದು ಸುಪ್ರೀಂಕೋರ್ಟ್ ಗುರುವಾರ ಅಭಿಪ್ರಾಯಿಸಿದೆ.
ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ವಿನಾಯಿತಿ ಅವಧಿ (ಮೊರಾಟೊರಿಯಂ ಪೀರಿಯಡ್)ಯನ್ನು ಜಾರಿಗೊಳಿಸಿದ್ದರೂ, ಬ್ಯಾಂಕುಗಳಿಗೆ ಅವಧಿ ಸಾಲದ ಮರುಪಾವತಿಯ ಮೇಲೆ ಬಡ್ಡಿ ವಿಧಿಸಲು ಅವಕಾಶ ನೀಡುವ ಸುತ್ತೋಲೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಆಲಿಕೆ ಸಂದರ್ಭದಲ್ಲಿ ಸುಪ್ರೀಂಕೋಟ್ ಹೀಗೆ ಹೇಳಿದೆ.
ಬ್ಯಾಂಕುಗಳು ಬಲವಂತಕ್ಕೊಳಗಾಗಿ ಸಾಲ ಮನ್ನಾ ಮಾಡುವುಕ್ಕೆ ತನ್ನ ವಿರೋಧವಿರುವುದಾಗಿ ಆರ್‌ಬಿಐ ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿತ್ತು. ಇದರಿಂದ ಬ್ಯಾಂಕುಗಳ ಆರ್ಥಿಕ ಸ್ವಾಸ್ಥದ ಮೇಲೂ ಪರಿಣಾಮ ಬೀರಲಿದೆ ಹಾಗೂ ಠೇವಣಿದಾರರ ಹಿತಾಸಕ್ತಿಯನ್ನೂ ಅಪಾಯಕ್ಕೆ ಸಿಲುಕಿಸಲಿದೆ ಎಂದು ಅದು ವಾದಿಸಿತ್ತು.
ಆದರೆ ಅದಕ್ಕೆ ಸಹಮತ ವ್ಯಕ್ತಪಡಿಸದ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು “ಆರೋಗ್ಯಕ್ಕಿಂತ ಆರ್ಥಿಕ ಅಂಶವು ದೊಡ್ಡದೇನಲ್ಲ’’ ಎಂದು ವಾದಿಸಿತು.
ಲಾಕ್‌ಡೌನ್ ಅವಧಿಯಲ್ಲಿ ಸಾಲಮರುಪಾವತಿಗೆ ರಿಯಾಯಿತಿ ಘೋಷಿಸಿರುವ ಹೊರತಾಗಿಯೂ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿಯನ್ನು ವಸೂಲಿ ಮಾಡಬಹುದೆಂದು ಆರ್‌ಬಿಐ ಸುತ್ತೋಲೆ ಹೊರಡಿಸಿರುವುದನ್ನು ಪ್ರಶ್ನಿಸಿ ಆಗ್ರಾದ ಗಜೇಂದ್ರ ಶರ್ಮಾ ಎಂಬವರು ಅರ್ಜಿ ಸಲ್ಲಿಸಿದ್ದರು. ಎಸ್.ಕೆ. ಕೌಲ್ ಹಾಗೂ ಎಂ.ಆರ್.ಸಾ ಸದಸ್ಯರಾಗಿರುವ ನ್ಯಾಯಪೀಠವು ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿತು.
ಕೇಂದ್ರ ವಿತ್ತ ಸಚಿವಾಲಯ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ ಪರವಾಗಿ ತಾನು ಈ ಬಗ್ಗೆ ಸಮಗ್ರ ಉತ್ತರವೊಂದನ್ನು ಸಲ್ಲಿಸಲು ಬಯಸುವುದಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಜೂನ್ 12ಕ್ಕೆ ಮುಂದೂಡಿತು.