ಎಫ್‌ಐಆರ್ ರದ್ದತಿಗೆ ನಕಾರ: ಪೊಲೀಸ್ ವಿಚಾರಣೆಗೆ ಹಾಜರಾಗುವಂತೆ ಅರ್ನಬ್ ಗೋಸ್ವಾಮಿಗೆ ಬಾಂಬೈ ಹೈಕೋರ್ಟ್ ಆದೇಶ
ಮುಂಬೈ: ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಸಂಬಂಧ ಜೂನ್ 10ರಂದು ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವಂತೆ ಬಾಂಬೈ ಹೈಕೋರ್ಟ್ ಅರ್ನಬ್ ಅವರಿಗೆ ಸೂಚಿಸಿದೆ.
ತಮ್ಮ ವಿರುದ್ಧದ ಎಫ್‌ಐಆರ್ ರದ್ದು ಮಾಡಬೇಕು ಎಂದು ಕೋರಿ ಅರ್ನಬ್ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಶುಕ್ರವಾರಕ್ಕೆ ಮುಂದೂಡಿದೆ ಎಂದು ಕಾನೂನು ಸುದ್ದಿಗಳ ವೆಬ್‌ಸೈಟ್ BarandBench.com ವರದಿ ಮಾಡಿದೆ.
ನ್ಯಾಯಮೂರ್ತಿ ಉಜ್ಜಲ್ ಭೂಯನ್ ಮತ್ತು ರಿಯಾಝ್ ಛಾಗ್ಲಾ ಅವರನ್ನು ಒಳಗೊಂಡ ನ್ಯಾಯಪೀಠ ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿ ಈ ಸೂಚನೆ ನೀಡಿತು.
ಪ್ರೈಮ್‌ಟೈಮ್ ಚರ್ಚಾ ಕಾರ್ಯಕ್ರಮದಲ್ಲಿ ವ್ಯಕ್ತಪಡಿಸಿದ್ದ ಅಭಿಪ್ರಾಯದ ಹಿನ್ನೆಲೆಯಲ್ಲಿ ಎ. 22 ಹಾಗೂ ಮೇ 2ರಂದು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಗೋಸ್ವಾಮಿ ಬಾಂಬೈ ಹೈಕೋಟ್‌ಗೆ ಅರ್ಜಿ ಸಲ್ಲಿಸಿದ್ದರು. ವಲಸೆ ಕಾರ್ಮಿಕರು ಮುಂಬೈನ ಬಾಂದ್ರಾದಲ್ಲಿ ಎ. 14ರಂದು ನಡೆಸಿದ ಸಮಾವೇಶದ ವಿರುದ್ಧ ಹಾಗೂ ಪಲ್ಘಾರ್ ಹತ್ಯೆ ಪ್ರಕರಣದ ಸಂಬಂಧ ಅರ್ನಬ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸಮುದಾಯಗಳ ನಡುವೆ ಸಾಮರಸ್ಯ ಕೆಡಿಸುವಂಥ ದ್ವೇಷಪೂರಿತ ಹೇಳಿಕೆಯನ್ನು ಗೋಸ್ವಾಮಿ ನೀಡಿದ್ದರು ಎಂದು ಆಪಾದಿಸಲಾಗಿದೆ.
ಇದಕ್ಕೂ ಮುನ್ನ ಎಫ್‌ಐಆರ್ ರದ್ದತಿಗೆ ನಿರಾಕರಿಸಿದ ಸುಪ್ರೀಂಕೋರ್ಟ್, ಸೂಕ್ತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಗೋಸ್ವಾಮಿ ಬಾಂಬೈ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಯನ್ನು ಮಂಗಳವಾರ ಆರಂಭಿಸಿದಾಗ ಗೋಸ್ವಾಮಿ ಪರ ವಕೀಲ ಹರೀಶ್ ಸಾಳ್ವೆ, ತಮ್ಮ ಕಕ್ಷಿದಾರರು ಪೊಲೀಸ್ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಮಾಡಿದ ಮನವಿಗೆ ಮಹಾರಾಷ್ಟ್ರ ಸರ್ಕಾರವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಾಲ್ ಆಕ್ಷೇಪ ವ್ಯಕ್ತಪಡಿಸಿದ್ದರು.