ಮೂರು ತಿಂಗಳುಗಳಿಂದ ವೇತನವಿಲ್ಲ: ದಿಲ್ಲಿ ಆಸ್ಪತ್ರೆಯ ವೈದ್ಯರಿಂದ ಸಾಮೂಹಿಕ ರಾಜೀನಾಮೆಯ ಬೆದರಿಕೆ

Update: 2020-06-11 13:44 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಜೂ.11: ಮಾರ್ಚ್ ತಿಂಗಳಿನಿಂದ ಬಾಕಿಯಿರುವ ತಮ್ಮ ವೇತನಗಳನ್ನು ಪಾವತಿಸದಿದ್ದರೆ ಸಾಮೂಹಿಕವಾಗಿ ರಾಜೀನಾಮೆಗಳನ್ನು ಸಲ್ಲಿಸುವುದಾಗಿ ಉತ್ತರ ದಿಲ್ಲಿ ಮಹಾನಗರ ಪಾಲಿಕೆ (ಎಂಸಿಡಿ) ಅಧೀನದ ಕಸ್ತೂರಬಾ ಆಸ್ಪತ್ರೆಯ ಕಿರಿಯ ವೈದ್ಯರು ಬೆದರಿಕೆಯೊಡ್ಡಿದ್ದಾರೆ.

ತಮ್ಮ ಬೇಡಿಕೆ ಈಡೇರದಿದ್ದರೆ ಜೂ.16ರಂದು ಸಾಮೂಹಿಕ ರಾಜೀನಾಮೆಗಳನ್ನು ಸಲ್ಲಿಸುವುದಾಗಿ ವೈದ್ಯರು ಆಸ್ಪತ್ರೆಯ ಅಧಿಕಾರಿಗಳಿಗೆ ಸಲ್ಲಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. ಈ ಆಸ್ಪತ್ರೆಯು ಸುಮಾರು 100 ಕಿರಿಯ ವೈದ್ಯರನ್ನು ಹೊಂದಿದೆ.

‘ಮೂರು ತಿಂಗಳುಗಳಿಂದ ನಮ್ಮ ವೇತನಗಳನ್ನು ಪಾವತಿಸಿಲ್ಲ. ಈ ಬಗ್ಗೆ ನಾವು ಪದೇ ಪದೇ ಕೇಳಿದ್ದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಬಾರಿ ಲಿಖಿತ ಪತ್ರವನ್ನು ಸಲ್ಲಿಸಿದ್ದೇವೆ. ನಾವು ಕೊರೋನವೈರಸ್ ಮುಂಚೂಣಿಯ ಕಾರ್ಯಕರ್ತರಾಗಿದ್ದರೂ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಕ್ಯಾಂಪಸ್‌ನ ಹೊರಗೆ ವಾಸವಿರುವ ವೈದ್ಯರು ಮನೆಬಾಡಿಗೆ,ಪ್ರಯಾಣ ವೆಚ್ಚ,ಸಂಸಾರ ನಿರ್ವಹಣೆಗಾಗಿ ಪರದಾಡುತ್ತಿದ್ದಾರೆ’ ಎಂದು ಆಸ್ಪತ್ರೆಯ ಕಿರಿಯ ವೈದ್ಯರ ಸಂಘದ ವಕ್ತಾರ ಡಾ.ಅಭಿಮಾನ ಚೌಹಾಣ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಹಣಕಾಸು ಕೊರತೆಯ ಕಾರಣದಿಂದ ವೇತನಗಳನ್ನು ಪಾವತಿಸಲು ಸಾಧ್ಯವಾಗಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಸಂಗೀತಾ ನಾಂಗಿಯಾ ತಿಳಿಸಿದ್ದಾರೆ ಎಂದು ಚೌಹಾಣ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News