ಜಮ್ಮು ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದಿಂದ ಗುಂಡಿನ ದಾಳಿ: ಯೋಧ ಹುತಾತ್ಮ

Update: 2020-06-14 16:00 GMT

ಹೊಸದಿಲ್ಲಿ, ಜೂ.14: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆಯಲ್ಲಿ ಪಾಕಿಸ್ತಾನದ ಸೇನಾಪಡೆ ಕದನವಿರಾಮ ಉಲ್ಲಂಘಿಸಿ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಭಾರತದ ಓರ್ವ ಯೋಧ ಹುತಾತ್ಮರಾಗಿದ್ದು, ಇತರ ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಪೂಂಚ್ ಜಿಲ್ಲೆಯ ಶಹಪುರ-ಕೆರ್ನಿ ವಲಯದಲ್ಲಿ ಪಾಕ್ ಪಡೆ ಶನಿವಾರ ರಾತ್ರಿ ಅಪ್ರಚೋದಿತವಾಗಿ ಗುಂಡಿನ ದಾಳಿ ಆರಂಭಿಸಿದಾಗ ಅದಕ್ಕೆ ಭಾರತದ ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ. ಗುಂಡಿನ ದಾಳಿಯಲ್ಲಿ ಭಾರತದ ಸೇನೆಯ ಸಿಪಾಯಿ ಲುಂಗಾಂಬು ಅಬೋನ್‌ಮೆಯ್ ಹಾಗೂ ಇತರ ಮೂರು ಯೋಧರು ಗಾಯಗೊಂಡಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೆ ಲುಂಗಾಂಬು ಮೃತಪಟ್ಟರು ಎಂದು ಅಧಿಕಾರಿಗಳು ಹೇಳಿದ್ದಾರೆ.

ರವಿವಾರ ಬೆಳಿಗ್ಗೆ ಬಾರಾಮುಲ್ಲಾದ ರಾಂಪುರ ವಲಯದಲ್ಲಿ ಪಾಕ್ ಸೇನೆ ಮೋರ್ಟರ್ ಶೆಲ್ ದಾಳಿ ನಡೆಸಿದೆ. ಕಳೆದ ಮೂರು ದಿನಗಳಲ್ಲಿ ರಾಂಪುರ ವಲಯದಲ್ಲಿ ಎರಡು ಬಾರಿ ಮತ್ತು ಉತ್ತರ ಕಾಶ್ಮೀರ ಜಿಲ್ಲೆಯಲ್ಲಿ ಮೂರು ಬಾರಿ ಪಾಕ್ ಪಡೆಗಳು ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿವೆ ಎಂದು ರಕ್ಷಣಾ ಪಡೆಯ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News