ಭಾರತದ 9 ಮಾನವಹಕ್ಕು ಹೋರಾಟಗಾರರ ವಿರುದ್ಧ ಸ್ಪೈವೇರ್ ಬೇಹುಗಾರಿಕೆ!

Update: 2020-06-15 18:30 GMT

ಹೊಸದಿಲ್ಲಿ, ಜೂ.15: ಭಾರತದ ಒಂಭತ್ತು ಮಂದಿ ಮಾನವಹಕ್ಕು ಹೋರಾಟಗಾರರ ವಿರುದ್ಧ ಸ್ಪೈವೇರ್ ಅಭಿಯಾನವನ್ನು ನಡೆಸಲಾಗಿತ್ತು ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಹಾಗೂ ಇಂಟರ್‌ನೆಟ್ ಕಣ್ಗಾವಲು ಸಂಸ್ಥೆ ಸಿಟಿಝನ್ ಲ್ಯಾಬ್ ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು Thewire.in ವರದಿ ಮಾಡಿದೆ.

ಈ ಮಾನವಹಕ್ಕು ಹೋರಾಟಗಾರರ ಚಟುವಟಿಕೆಗಳ ಹಾಗೂ ಸಂಪರ್ಕಗಳ ಬಗ್ಗೆ ನಿಗಾ ಇರಿಸುವುದೇ ಇದರ ಉದ್ದೇಶವಾಗಿತ್ತು ಎಂದು ತನಿಖಾ ವರದಿ ತಿಳಿಸಿದೆ. ಭಾರತದ ಪ್ರಸಿದ್ಧ ಸಾಮಾಜಿಕ ಹೋರಾಟಗಾರರು, ನ್ಯಾಯವಾದಿಗಳು, ವಿದ್ವಾಂಸರು ಹಾಗೂ ಪತ್ರಕರ್ತರು ಸ್ಪೈವೇರ್ ದಾಳಿಗೆ ಒಳಗಾದವರಲ್ಲಿ ಸೇರಿದ್ದಾರೆ.

ಈ 9 ಮಂದಿಯ ಪೈಕಿ 7 ಮಂದಿ ಭೀಮಾಕೋರೆಗಾಂವ್ ಹಿಂಸಾಚಾರದಲ್ಲಿ ಪೊಲೀಸರಿಂದ ದೋಷಾರೋಪಪಟ್ಟಿ ದಾಖಲಿಸಲ್ಪಟ್ಟವರಾಗಿದ್ದಾರೆಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ವರದಿ ಮಾಡಿದೆ.

ಜನವರಿ ಹಾಗೂ ಅಕ್ಟೋಬರ್ 2019ರವರೆಗೆ ಮಾನವಹಕ್ಕುಗಳ ಹೋರಾಟಗಾರರನ್ನು ಗುರಿಯಿರಿಸಿ ಅವರ ಇಮೇಲ್‌ಗಳಿಗೆ ಲಿಂಕ್‌ಗಳನ್ನು ಕಳುಹಿಸಲಾಗಿತ್ತು. ಒಂದು ವೇಳೆ ಈ ಲಿಂಕ್‌ಗಳಿಗೆ ಕ್ಲಿಕ್ ಮಾಡಿದಲ್ಲಿ ಕೂಡಲೇ ಅವರ ಕಂಪ್ಯೂಟರ್‌ನಲ್ಲಿ ಸ್ಪೈವೇರ್‌ಗಳು ಸೇರಿಕೊಳ್ಳುತ್ತಿದ್ದವು. ಆ ಮೂಲಕ ಅವರ ಚಟುವಟಿಕೆಗಳು ಹಾಗೂ ಸಂಪರ್ಕಗಳ ಬಗ್ಗೆ ಗೂಢಚರ್ಯೆ ನಡೆಸಲಾಗುತ್ತಿತ್ತು ಎಂದು ಸಿಟಿಝನ್ ಲ್ಯಾಬ್-ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ವರದಿ ತಿಳಿಸಿದೆ.

ಆದಾಗ್ಯೂ ಈ ಸ್ಪೈವೇರ್ ಅಭಿಯಾನದ ಹಿಂದೆ ಯಾರ ಕೈವಾಡವಿದೆಯೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ನ್ಯಾಯವಾದಿ, ಸಾಮಾಜಿಕ ಹೋರಾಟಗಾರ್ತಿ ನಿಹಾಲ್‌ಸಿಂಗ್ ಬಿ.ರಾಥೋಡ್, ಡೇಗ್ರಿ ಪ್ರಸಾದ್ ಚೌಹಾಣ್, ಯುಗ್ ಮೋಹಿತ್ ಚೌಧುರಿ ಹಾಗೂ ರಾಗಿಣಿ ಅಹುಜಾ, ಶಿಕ್ಷಣತಜ್ಞರಾದ ಪಾರ್ತೊ ಸಾರಥಿ ರೇ ಹಾಗೂ ಪಿ.ಕೆ.ವಿಜಯನ್, ಮಾನವಹಕ್ಕು ಹೋರಾಟಗಾರ ಸಂಸ್ಥೆ ಜಗದಾಳ್‌ಪುರ ಕಾನೂನು ನೆರವು ಸಮೂಹ (ಜೆಎಜಿಎಲ್‌ಎಜಿ) ಹಾಗೂ ನ್ಯಾಯವಾದಿ ಶಾಲಿನಿ ಗೇರಾ ಅವರು ಸ್ಪೈವೇರ್‌ಗಳ ಗುರಿಗಳಾಗಿದ್ದರೆಂದು ವರದಿಯು ಹೇಳಿದೆ.

ಭೀಮಾ-ಕೋರೆಗಾಂವ್ ಹಿಂಸಾಚಾರದ ವರದಿ ಮಾಡಿರುವ ಮಹಾರಾಷ್ಟ್ರದ ಪತ್ರಕರ್ತೆ ಇಶಾ ಖಂಡೇಲ್‌ವಾಲ್ ಕೂಡಾ ಸ್ಪೈವೇರ್‌ಗಳನ್ನು ಒಳಗೊಂಡ ಇಮೇಲ್ ಬಂದಿದ್ದವು. ಆದರೆ ಅವರ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News