ಚೀನಿ ಕಂಪೆನಿಗೆ ನೀಡಿದ ಬಿಡ್ ರದ್ದುಗೊಳಿಸಿ: ಮೋದಿ ಸರಕಾರಕ್ಕೆ ಆರೆಸ್ಸೆಸ್ ಅಂಗಸಂಸ್ಥೆಯ ಆಗ್ರಹ

Update: 2020-06-16 11:16 GMT

#ಕೇವಲ 44 ಕೋಟಿ ರೂ.ಗಳಿಗಾಗಿ ಎಲ್ & ಟಿಯ ಬಿಡ್ ತಿರಸ್ಕೃತ: ಟ್ವಿಟರಿಗರ ಆಕ್ರೋಶ

ಹೊಸದಿಲ್ಲಿ: ದಿಲ್ಲಿ- ಮೀರತ್ ಆರ್ ಆರ್ ಟಿಎಸ್ (ರೀಜನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಂ) ಯೋಜನೆಯ ಭಾಗವಾಗಿ ಸುರಂಗ ಮಾರ್ಗ ನಿರ್ಮಾಣಕ್ಕೆ ಅತ್ಯಂತ ಕನಿಷ್ಠ ದರದ ಬಿಡ್ ಸಲ್ಲಿಸಿರುವ ಚೀನೀ ಕಂಪೆನಿ ಶಾಂಘಾಯ್ ಟನಲ್ ಎಂಜಿನಿಯರಿಂಗ್ ಕಂಪೆನಿ ಲಿಮಿಟೆಡ್ ನ ಬಿಡ್ ರದ್ದುಪಡಿಸಬೇಕೆಂದು ಆರೆಸ್ಸೆಸ್ ಅಂಗಸಂಸ್ಥೆ ಸ್ವದೇಶಿ ಜಾಗರಣ್ ಮಂಚ್ ಆಗ್ರಹಿಸಿದೆ. ಭಾರತವನ್ನು ಸ್ವಾವಲಂಬಿ ದೇಶವನ್ನಾಗಿಸುವ ಕುರಿತಂತೆ ಸರಕಾರ ಗಂಭೀರವಾಗಿದ್ದರೆ ಈ ಬಿಡ್ ರದ್ದುಪಡಿಸಬೇಕೆಂದು ಮಂಚ್ ಹೇಳಿದೆ.

“ಸರಕಾರ ಆತ್ಮ ನಿರ್ಭರ್ ಭಾರತ್ ಎಂದು ಹೇಳುತ್ತಿದೆ. ಹೀಗಿರುವಾಗ ದೇಶೀಯ ಕಂಪೆನಿಗಳನ್ನು ಪ್ರೋತ್ಸಾಹಿಸಬೇಕಿರುವಾಗ ಸರಕಾರ ಚೀನೀ ಕಂಪೆನಿಗೆ ಹೇಗೆ ಗುತ್ತಿಗೆ ನೀಡಬಹುದು?” ಎಂದು ಸ್ವದೇಶಿ ಜಾಗರಣ್ ಮಂಚ್ ಪ್ರಶ್ನಿಸಿದೆ ಎಂದು ಅದರ ರಾಷ್ಟ್ರೀಯ ಸಹಸಂಚಾಲಕ ಅಶ್ವನಿ ಮಹಾಜನ್ ಹೇಳಿದ್ದಾರೆ.

ಚೀನೀ ಕಂಪೆನಿಗಳ ವಿಶ್ವಾಸಾರ್ಹತೆಯ ಪ್ರಶ್ನೆಯೂ ಇದೆ ಎಂದು ಹೇಳಿರುವ ಮಹಾಜನ್, “ಈ ಹಿಂದೆ ಭದ್ರತೆಯ ಕಾರಣಗಳಿಗಾಗಿ 5ಜಿ ಟ್ರಯಲ್‍ಗಳಿಗಾಗಿ ಹುವಾಯಿ ಕಂಪೆನಿಯ ಭಾಗವಹಿಸುವಿಕೆಯನ್ನು ವಿರೋಧಿಸಿದ್ದೆವು, ಈಗ ದೇಶೀಯ ಕಂಪೆನಿಗಳಿಗೆ ಉತ್ತೇಜನ ನೀಡಬೇಕೆಂದು ಬಯಸುತ್ತೇವೆ'' ಎಂದು ತಿಳಿಸಿದ್ದಾರೆ.

ನ್ಯಾಷನಲ್ ಕ್ಯಾಪಿಟಲ್ ರೀಜನ್ ಟ್ರಾನ್ಸ್‍ಪೋರ್ಟ್ ಕಾರ್ಪೊರೇಶನ್ ಈ ಭೂಗತ ಸಿವಿಲ್ ನಿರ್ಮಾಣ ಕಾಮಗಾರಿಗಾಗಿ  ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ತಾಂತ್ರಿಕ ಬಿಡ್ ಆಹ್ವಾನಿಸಿತ್ತು.

ಶಾಂಘಾಯ್ ಕಂಪೆನಿ ಹೊರತಾಗಿ ನಾಲ್ಕು ಇತರ ಕಂಪೆನಿಗಳು ತಾಂತ್ರಿಕ ಬಿಡ್‍ಗೆ ಅರ್ಹಗೊಂಡಿದ್ದರೆ, ಫೈನಾನ್ಶಿಯಲ್ ಬಿಡ್‍ನಲ್ಲಿ ಶಾಂಘಾಯ್ ಕಂಪೆನಿ ಕಡಿಮೆ ಮೊತ್ತದ ಬಿಡ್ಡರ್ ಆಗಿದ್ದರಿಂದ ಆಯ್ಕೆಯಾಗಿತ್ತು. ಈ ಯೋಜನೆಗೆ ಚೀನಾ ಕಂಪೆನಿ ಘೋಷಿಸಿದ ಬಿಡ್ ಮೊತ್ತ ರೂ 1,126 ಕೋಟಿ ಆಗಿದ್ದರೆ, ಎಲ್ & ಟಿ ರೂ  1,170 ಕೋಟಿ, ಗುಲೆರ್ ಮಾರ್ಕ್ ರೂ 1,326 ಕೋಟಿ, ಟಾಟಾ ಪ್ರಾಜೆಕ್ಟ್ಸ್ ರೂ 1,346 ಕೋಟಿ ಹಾಗೂ ಅಫ್ಕಾನ್ಸ್ ಇನ್‍ಫ್ರಾಸ್ಟ್ರಕ್ಚರ್  ರೂ 1,400 ಕೋಟಿಗೆ ಬಿಡ್ ಮೊತ್ತ ಉಲ್ಲೇಖಿಸಿತ್ತು.

ಮತ್ತೊಂದೆಡೆ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಮುಂದುವರಿದಿರುವಂತೆಯೇ ಈ ಬಿಡ್ ಅನ್ನು ಚೀನಾ ದೇಶದ ಕಂಪೆನಿಗೆ ನೀಡಿರುವ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇಂತಹ ಪ್ರಮುಖ ಯೋಜನೆಗಳನ್ನು ಚೀನಾಗೆ ಬಿಟ್ಟುಕೊಡುವುದರ ಮೂಲಕ ದೇಶದ ಭದ್ರತೆಯ ಅಪಾಯವಿದೆ ಎಂದು ಟ್ವಿಟರಿಗರು ಅಭಿಪ್ರಾಯಿಸುತ್ತಿದ್ದಾರೆ. ಕೇವಲ 44 ಕೋಟಿ ರೂ.ಗಳಿಗಾಗಿ ಎಲ್ & ಟಿಯ ಬಿಡ್ ಅನ್ನು ತಿರಸ್ಕರಿಸಲಾಗಿದೆ ಎಂದು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News