ಗಲ್ವಾನ್ ಎಫೆಕ್ಟ್: 5,000 ಕೋ.ರೂ.ಗಳ ಮೂರು ಚೀನಿ ಯೋಜನೆಗಳನ್ನು ತಡೆಹಿಡಿದ ಮಹಾರಾಷ್ಟ್ರ
ಮುಂಬೈ,ಜೂ.22: ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಿ ಸೈನಿಕರೊಂದಿಗೆ ಹಿಂಸಾತ್ಮಕ ಘರ್ಷಣೆಗಳಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಗಡಿಯಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರವು ಚೀನಾದ ಕಂಪನಿಗಳೊಂದಿಗೆ ತಾನು ಒಪ್ಪಂದ ಮಾಡಿಕೊಂಡಿದ್ದ ಮೂರು ಯೋಜನೆಗಳನ್ನು ತಡೆಹಿಡಿದಿದೆ.
5,000 ಕೋ.ರೂ.ಗೂ ಹೆಚ್ಚಿನ ಉದ್ದೇಶಿತ ಹೂಡಿಕೆಗಳ ಈ ಯೋಜನೆಗಳನ್ನು ಗಡಿ ಘರ್ಷಣೆಗೆ ಕೆಲವೇ ಗಂಟೆಗಳ ಮುನ್ನ ‘ಮ್ಯಾಗ್ನೆಟಿಕ್ ಮಹಾರಾಷ್ಟ್ರ 2.0 ’ಹೂಡಿಕೆದಾರರ ಸಮ್ಮೇಳನದಲ್ಲಿ ಅಂತಿಮಗೊಳಿಸಲಾಗಿತ್ತು.
ಕೇಂದ್ರದೊಂದಿಗೆ ಸಮಾಲೋಚನೆಯ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಯೋಜನೆಗಳನ್ನು ತಡೆಹಿಡಿಯಲಾಗಿದ್ದು,ಕೇಂದ್ರದ ಮುಂದಿನ ನಿರ್ದೇಶಕ್ಕಾಗಿ ಕಾಯುತ್ತಿದ್ದೇವೆ ಎಂದು ಮಹಾರಾಷ್ಟ್ರದ ಕೈಗಾರಿಕಾ ಸಚಿವ ಸುಭಾಷ ದೇಸಾಯಿ ಅವರು ಸೋಮವಾರ ಸುದ್ದಿಸಂಸ್ಥೆಗೆ ತಿಳಿಸಿದರು.
ಮಹಾರಾಷ್ಟ್ರ ಆರ್ಥಿಕ ಪುನಃಶ್ಚೇತನದ ಪ್ರಯತ್ನವಾಗಿ ಕಳೆದ ಸೋಮವಾರ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆದಿದ್ದ ಸಮ್ಮೇಳನದಲ್ಲಿ ಚೀನದ ರಾಯಭಾರಿ ಸನ್ ವೀಡಾಂಗ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚೀನಾ,ದಕ್ಷಿಣ ಕೊರಿಯಾ,ಸಿಂಗಾಪುರ ಮತ್ತು ಅಮೇರಿಕದಂತಹ ರಾಷ್ಟ್ರಗಳೊಡನೆ ಒಂದು ಡಝನ್ ಒಪ್ಪಂದಗಳಿಗೆ ಅಂಕಿತ ಹಾಕಲಾಗಿತ್ತು. ಅದೇ ದಿನ ರಾತ್ರಿ ಲಡಾಖ್ ಗಡಿಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆಗಳು ನಡೆದಿದ್ದವು.
ಮಹಾರಾಷ್ಟ್ರವು ಅಂಕಿತ ಹಾಕಿರುವ ಒಪ್ಪಂದಗಳಲ್ಲಿ ಚೀನಾದ ಹೆಂಗ್ಲಿ ಇಂಜಿನಿಯರಿಂಗ್ ಜೊತೆ 250 ಕೋ.ರೂ.,ಗ್ರೇಟ್ ವಾಲ್ ಮೋಟರ್ಸ್ ಜೊತೆ 3,770 ಕೋ.ರೂ. ಮತ್ತು ಪಿಎಂಐ ಎಲೆಕ್ಟ್ರೋ ಮೊಬಿಲಿಟಿ ಜೊತೆಗೆ 1,000 ಕೋ.ರೂ.ಗಳ ಯೋಜನೆಗಳು ಸೇರಿವೆ.
ಲಡಾಖ್ ಘರ್ಷಣೆಗಳ ಬಳಿಕ ಹಲವಾರು ರಾಜ್ಯಗಳು ಚೀನಿ ಕಂಪನಿಗಳೊಂದಿಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಪುನರ್‌ಪರಿಶೀಲಿಸುತ್ತಿವೆ.