ಪಿಪಿಇ ಕಿಟ್‌ಗಳ ರಫ್ತು ನಿಷೇಧ ಕೋರಿದ ಅರ್ಜಿ: ಕೇಂದ್ರ, ದಿಲ್ಲಿ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2020-06-24 15:23 GMT

ಹೊಸದಿಲ್ಲಿ, ಜೂ.24: ಕೊರೋನ ವೈರಸ್ ಸೋಂಕಿನ ಸಂದರ್ಭದಲ್ಲಿ ವೈಯಕ್ತಿಕ ರಕ್ಷಣಾ ಸಾಧನಗಳ(ಪಿಪಿಇ) ಕಿಟ್ ಮತ್ತು ಮೆಡಿಕಲ್ ಮಾಸ್ಕ್‌ಗಳ ರಫ್ತಿನ ಮೇಲೆ ವಿಧಿಸಿರುವ ನಿಷೇಧವನ್ನು ಪ್ರಶ್ನಿಸಿ ಖಾಸಗಿ ಸಂಸ್ಥೆಯೊಂದು ಸಲ್ಲಿಸಿರುವ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸುವಂತೆ ದಿಲ್ಲಿ ಹೈಕೋರ್ಟ್ ಕೇಂದ್ರ ಸರಕಾರ ಹಾಗೂ ದಿಲ್ಲಿ ಸರಕಾರಕ್ಕೆ ಸೂಚಿಸಿದೆ. ಪಿಪಿಇ ಕಿಟ್ ಹಾಗೂ ಮಾಸ್ಕ್‌ಗಳ ಖರೀದಿಗಾರರಿಗೆ ದೇಶದಲ್ಲಿ ಕೊರತೆಯಿದೆ. ಸೀಮಿತ ಮಾರುಕಟ್ಟೆಯ ಕಾರಣ ಬೇಡಿಕೆ ಕಡಿಮೆಯಿದೆ. ಆದ್ದರಿಂದ ಆರ್ಥಿಕ ಸಂಕಷ್ಟ ನಿವಾರಿಸಲು ಇವುಗಳ ರಫ್ತಿನ ಮೇಲಿರುವ ನಿಷೇಧವನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಕೋರಿ ಥಾಮ್ಸನ್ ಪ್ರೆಸ್ ಸರ್ವಿಸಸ್ ಹಾಗೂ ಇತರ ಕೆಲವು ಸಂಸ್ಥೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು.

ದೇಶದಲ್ಲಿ ಮೆಡಿಕಲ್ ಮಾಸ್ಕ್‌ಗಳ ಹಾಗೂ ಪಿಪಿಇ ಕಿಟ್‌ಗಳ ಕೊರತೆಯಾಗಬಾರದೆಂಬ ಕಾರಣಕ್ಕೆ ಇವುಗಳ ರಫ್ತಿಗೆ ನಿಷೇಧ ವಿಧಿಸಲಾಗಿದೆ. ಅಲ್ಲದೆ ಸರಕಾರಕ್ಕೆ ದೊರೆತ ಮಾಹಿತಿಯಂತೆ ದೇಶದಲ್ಲಿ ಖರೀದಿಗಾರರ ಕೊರತೆಯಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್, ಕೇಂದ್ರ ಸರಕಾರದ ಪ್ರತಿನಿಧಿ ಮಣೀಂದರ್ ಆಚಾರ್ಯ ನ್ಯಾಯಾಲಯದ ಗಮನ ಸೆಳೆದರು. ಈ ಪ್ರಕರಣದಲ್ಲಿ ಕೇಂದ್ರದ ಜೊತೆ ದಿಲ್ಲಿ ಸರಕಾರವನ್ನೂ ಕಕ್ಷಿದಾರನೆಂದು ಪರಿಗಣಿಸುವಂತೆ ಸೂಚಿಸಿದ ನ್ಯಾಯಾಧೀಶ ಸಂಜೀವ್ ಸಚ್‌ದೇವ , ಅರ್ಜಿಗೆ ಎರಡು ವಾರದೊಳಗೆ ಉತ್ತರಿಸುವಂತೆ ಸೂಚಿಸಿ ಜುಲೈ 10ಕ್ಕೆ ವಿಚಾರಣೆಯನ್ನು ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News