ಕೊರೋನ ಸೋಂಕು: ಸಕ್ರಿಯ- ಚೇತರಿಕೆ ಪ್ರಕರಣಗಳ ನಡುವಿನ ಅಂತರ 1 ಲಕ್ಷಕ್ಕೂ ಅಧಿಕ

Update: 2020-06-28 18:31 GMT

ಹೊಸದಿಲ್ಲಿ, ಜೂ.28: ದೇಶದಲ್ಲಿ ಸಕ್ರಿಯ ಕೊರೋನ ಸೋಂಕು ಪ್ರಕರಣ ಹಾಗೂ ಚೇತರಿಕೆ ಪ್ರಮಾಣದ ನಡುವಿನ ಅಂತರ 1 ಲಕ್ಷವನ್ನು ಮೀರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ರವಿವಾರ ಹೇಳಿದೆ.

ಶನಿವಾರದ ವೇಳೆಗೆ ದೇಶದಲ್ಲಿ ಕೊರೋನ ಸಕ್ರಿಯ ಪ್ರಕರಣಕ್ಕಿಂತ ಗುಣಮುಖರಾಗುವ ಪ್ರಮಾಣ 1,06,661 ಹೆಚ್ಚಿದೆ . ಇದುವರೆಗೆ 3,09,712 ಜನ ಚೇತರಿಸಿಕೊಂಡಿದ್ದು, ರವಿವಾರದ ಬೆಳಗ್ಗಿನವರೆಗಿನ 24 ಗಂಟೆಗಳಲ್ಲಿ 13,882 ರೋಗಿಗಳು ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಪ್ರಮಾಣ 58.56% ಆಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ದೇಶದಲ್ಲಿ ಈಗ 2,03,051 ಸಕ್ರಿಯ ಪ್ರಕರಣಗಳಿದ್ದು, ಎಲ್ಲಾ ಪ್ರಕರಣಗಳೂ ಸೂಕ್ತ ವೈದ್ಯಕೀಯ ನಿಗಾ ವ್ಯವಸ್ಥೆಯಲ್ಲಿದೆ. ಸರಕಾರ ಹಾಗೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ಶ್ರೇಣೀಕೃತ, ಪ್ರತಿಬಂಧಕ ಮತ್ತು ಪೂರ್ವನಿಯಾಮಕ ಕ್ರಮಗಳಿಂದಾಗಿ, ನಿಯಂತ್ರಣ ಕ್ರಮಗಳು ಪ್ರೋತ್ಸಾಹಕ ಫಲಿತಾಂಶ ನೀಡುತ್ತಿವೆ. ಕೊರೋನ ಸೋಂಕು ಪರೀಕ್ಷೆಗೆ ದೇಶದಲ್ಲಿ ಈಗ 749 ಸರಕಾರಿ, 287 ಖಾಸಗಿ ಕ್ಷೇತ್ರದ ಪ್ರಯೋಗಾಲಯಗಳಿವೆ. ಪ್ರತೀ ದಿನ 2 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 2,31,095 ಮಾದರಿ ಪರೀಕ್ಷಿಸಲಾಗಿದೆ. ಇದುವರೆಗೆ 82,27,802 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಕೊರೋನ ಸೋಂಕಿಗೆ ಚಿಕಿತ್ಸೆಗೆ ಸಂಬಂಧಿತ ಮೂಲಸೌಕರ್ಯಗಳನ್ನು ಬಲಪಡಿಸಲಾಗಿದ್ದು, ಈಗ ದೇಶದಲ್ಲಿ ಕೊರೋನ ಸೋಂಕಿತರಿಗೆ ಚಿಕಿತ್ಸೆಗೆಂದೇ 1,055 ಆಸ್ಪತ್ರೆಗಳಿದ್ದು 1,77,529 ಪ್ರತ್ಯೇಕ ಬೆಡ್‌ಗಳು, 23,168 ಐಸಿಯು ಬೆಡ್‌ಗಳು ಹಾಗೂ 78,060 ಆಮ್ಲಜನಕ ವ್ಯವಸ್ಥೆಯ ಬೆಡ್‌ಗಳಿವೆ. ಜೊತೆಗೆ ಕೊರೋನ ಸೋಂಕಿತರ ಚಿಕಿತ್ಸೆಗೆಂದೇ 2,400 ಆರೋಗ್ಯ ಕೇಂದ್ರಗಳಿದ್ದು ಇವುಗಳಲ್ಲಿ 1,40,099 ಪ್ರತ್ಯೇಕ ಬೆಡ್, 11,508 ಐಸಿಯು ಬೆಡ್, 51,371 ಆಮ್ಲಜನಕ ವ್ಯವಸ್ಥೆಯ ಬೆಡ್‌ಗಳಿವೆ. ಅಲ್ಲದೆ , 9,519 ಕೊರೋನ ಆರೈಕೆ ಕೇಂದ್ರಗಳಿದ್ದು ಇದರಲ್ಲಿ 8,34,128 ಬೆಡ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸರಕಾರ 187.43 ಲಕ್ಷ ಎನ್95 ಮಾಸ್ಕ್‌ಗಳು, 116.99 ಲಕ್ಷ ಪಿಪಿಇ ಸಾಧನಗಳನ್ನು ರಾಜ್ಯ ಸರಕಾರ/ಕೇಂದ್ರಾಡಳಿತ ಪ್ರದೇಶಗಳಿಗೆ ಒದಗಿಸಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News