ದಿಲ್ಲಿ ವಿವಿ ಅಧೀನದ ಕಾಲೇಜಿಗೆ ಸಾವರ್ಕರ್ ಹೆಸರು ನಾಮಕರಣ: ಕಾಂಗ್ರೆಸ್ ವಿರೋಧ
ಹೊಸದಿಲ್ಲಿ: ದಿಲ್ಲಿ ವಿವಿಯ ಅಧೀನದ ಕಾಲೇಜಿಗೆ ವಿನಾಯಕ ದಾಮೋದರ್ ಸಾವರ್ಕರ್ ಹೆಸರನ್ನು ನಾಮಕರಣ ಮಾಡುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ.
ʼಬ್ರಿಟಿಷರ ಬಳಿ ಕ್ಷಮಾಪಣೆಗೆ ಅರ್ಜಿ ಸಲ್ಲಿಸಿದವರನ್ನು ಬಿಜೆಪಿ ವೈಭವೀಕರಿಸುತ್ತಿದೆʼ ಎಂದು ದಿಲ್ಲಿ ವಿವಿಯ ಅಧೀನದ ನಜಾಫ್ ಗಢದ ಕಾಲೇಜಿಗೆ ಸಾವರ್ಕರ್ ಹೆಸರನ್ನು ಆಯ್ಕೆ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.
ಈ ಕುರಿತು ರಾಜ್ಯಸಭಾ ಸಂಸದ ನಾಸೀರ್ ಹುಸೇನ್ ಮಾತನಾಡಿದ್ದು, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ಲಕ್ಷಿಸಿ, ಬ್ರಿಟಿಷರೊಂದಿಗೆ ಸಹಕರಿಸಿದಾತನನ್ನು ಬಿಜೆಪಿ ಸಮರ್ಥಿಸುತ್ತಿದೆ. ಅನೇಕ ಜನರು ದೇಶಕ್ಕಾಗಿ ಅಪಾರ ಕೊಡುಗೆ ನೀಡಿದ್ದಾರೆ. ಬ್ರಿಟಿಷರಿಗೆ ಕ್ಷಮಾಪಣಾ ಅರ್ಜಿಗಳನ್ನು ಬರೆದು ಅವರಿಂದ ಪಿಂಚಣಿ ಸ್ವೀಕರಿಸಿದವರನ್ನು ಬಿಜೆಪಿ ಸಮರ್ಥಿಸುತ್ತಿದೆ ಎಂದು ಹೇಳಿದ್ದಾರೆ.
ಡಿಸೆಂಬರ್ 26ರಂದು ನಿಧನರಾದ ಕಾಂಗ್ರೆಸ್ ನಾಯಕ ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ಹೊಸ ಕಾಲೇಜಿಗೆ ಇಡಬೇಕೆಂದು NSUI ಆಗ್ರಹಿಸಿದೆ. ಈ ಕುರಿತು ಎನ್ ಎಸ್ ಯುಐ ರಾಷ್ಟ್ರೀಯ ಅಧ್ಯಕ್ಷರಾದ ವರುಣ್ ಚೌಧರಿ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಕಾಲೇಜಿಗೆ ಮನಮೋಹನ್ ಸಿಂಗ್ ಅವರ ಹೆಸರಿಡುವಂತೆ ಆಗ್ರಹಿಸಿದ್ದಾರೆ.
ʼಆತ್ಮೀಯ ನರೇಂದ್ರ ಮೋದಿ ಜೀ, ನೀವು ಸಾವರ್ಕರ್ ಅವರ ಹೆಸರಿನಲ್ಲಿ ಕಾಲೇಜಿಗೆ ಶೀಲಾನ್ಯಾಸ ನೆರವೇರಿಸುವಾಗ, ಹೊಸ ಕಾಲೇಜಿಗೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಹೆಸರನ್ನು ಇಡಬೇಕೆಂದು NSUI ಒತ್ತಾಯಿಸುತ್ತದೆ. ಅವರು ಹಲವಾರು ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರು ಮತ್ತು ಕೇಂದ್ರೀಯ ವಿಶ್ವವಿದ್ಯಾಲಯಗಳ ಕಾಯ್ದೆಯನ್ನು ತಂದರು. ಕೇಂದ್ರೀಯ ವಿಶ್ವವಿದ್ಯಾಲಯಕ್ಕೂ ಅವರ ಹೆಸರನ್ನು ಇಡಬೇಕುʼ ಎಂದು ವರುಣ್ ಚೌಧರಿ ಪತ್ರದಲ್ಲಿ ಆಗ್ರಹಿಸಿದ್ದಾರೆ.