ಹಿರಿಯ ಸಹೋದರಿಯನ್ನು ಹೆಚ್ಚು ಇಷ್ಟಪಡುತ್ತಾಳೆ ಎಂದು ತನ್ನ ತಾಯಿಯನ್ನೇ ಇರಿದು ಕೊಂದ ಕಿರಿಯ ಪುತ್ರಿ!
ಮುಂಬೈ: ತನ್ನ ಪುತ್ರಿಯನ್ನು ನೋಡಿಕೊಂಡು ಬರಲೆಂದು, ಕೂಗಳತೆಯ ದೂರದಲ್ಲಿದ್ದ ಆಕೆಯ ನಿವಾಸಕ್ಕೆ ಭೇಟಿ ನೀಡಿದ್ದ ಮಹಿಳೆಯೊಬ್ಬರು ಪುತ್ರಿಯಿಂದಲೇ ಹತ್ಯೆಗೊಳಗಾಗಿರುವ ಆಘಾತಕಾರಿ ಘಟನೆ ಗುರುವಾರ ತಡ ರಾತ್ರಿ ಕುರ್ಲಾದ ಖುರೇಶಿ ನಗರದಲ್ಲಿ ನಡೆದಿದೆ.
ತನ್ನ ತಾಯಿ ನನಗಿಂತ ನನ್ನ ಹಿರಿಯ ಸಹೋದರಿಯನ್ನೇ ಹೆಚ್ಚು ಇಷ್ಟಪಡುತ್ತಾಳೆ ಎಂದು ತಪ್ಪು ಗ್ರಹಿಕೆಗೊಳಗಾಗಿದ್ದ ಕಿರಿಯ ಪುತ್ರಿಯು ತನ್ನ ಮನೆಗೆ ಬಂದ ತಾಯಿಯನ್ನು ಚಾಕುವಿನಿಂದ ಇರಿದು ಕೊಂದಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು 41 ವರ್ಷದ ರೇಶ್ಮಾ ಮುಝಫ್ಫರ್ ಖಾಝಿ ಎಂದು ಗುರುತಿಸಲಾಗಿದೆ.
62 ವರ್ಷದ ಮೃತ ಸಬೀರಾ ಬಾನು ತಮ್ಮ ಪುತ್ರನೊಂದಿಗೆ ಮುಂಬ್ರಾದಲ್ಲಿ ವಾಸಿಸುತ್ತಿದ್ದರು. ಗುರುವಾರ ತಡ ರಾತ್ರಿ ತಮ್ಮ ಕಿರಿಯ ಪುತ್ರಿಯನ್ನು ನೋಡಲೆಂದು ಆಕೆ ವಾಸಿಸುತ್ತಿರುವ ಖುರೇಶಿ ನಗರದ ನಿವಾಸಕ್ಕೆ ಭೇಟಿ ನೀಡಿದಾಗ, ಅವರಿಬ್ಬರ ನಡುವೆ ವಾಗ್ಯುದ್ಧ ನಡೆದಿದೆ. ಪರಿಸ್ಥಿತಿ ಉದ್ವಿಗ್ನ ಸ್ವರೂಪಕ್ಕೆ ತಿರುಗಿದ್ದು, ಕುಪಿತ ಪುತ್ರಿ ರೇಶ್ಮಾ ಮುಝಫ್ಫರ್, ಅಡುಗೆ ಕೋಣೆಯಲ್ಲಿದ್ದ ಚಾಕುವಿನಿಂದ ತನ್ನ ತಾಯಿಯನ್ನು ಇರಿದು ಹತ್ಯೆಗೈದಿದ್ದಾಳೆ. ನನ್ನ ತಾಯಿಯು ನನಗಿಂತ ನನ್ನ ಹಿರಿಯ ಸಹೋದರಿಯನ್ನು ಹೆಚ್ಚು ಇಷ್ಟಪಡುತ್ತಾಳೆ ಎಂಬ ತಪ್ಪು ಗ್ರಹಿಕೆಯಿಂದ ರೇಶ್ಮಾ ಈ ಕೃತ್ಯವೆಸಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ತಾಯಿಯನ್ನು ಹತ್ಯೆಗೈಯ್ಯುತ್ತಿದ್ದಂತೆಯೇ ನೇರವಾಗಿ ಚುನಾಭಟ್ಟಿ ಪೊಲೀಸ್ ಠಾಣೆಗೆ ತೆರಳಿರುವ ರೇಶ್ಮಾ, ತನ್ನ ಅಪರಾಧ ಕೃತ್ಯವನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ತಕ್ಷಣವೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಆರೋಪಿಯ ತಾಯಿ ಸಬೀನಾ ಬಾನು ಮೃತಪಟ್ಟಿರುವುದು ಖಚಿತಪಡಿಸಿಕೊಂಡ ನಂತರ, ಆಕೆಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಈ ಘಟನೆಯ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದು, ಘಟನೆಗೆ ಕಾರಣವಾದ ಸನ್ನಿವೇಶಗಳು ಹಾಗೂ ರೇಶ್ಮಾಳ ಮಾನಸಿಕ ಆರೋಗ್ಯ ಸ್ಥಿತಿಯ ಬಗ್ಗೆ ಅರಿಯಲು ಆಕೆಯ ಕುಟುಂಬದ ಸದಸ್ಯರು ಹಾಗೂ ನೆರೆಹೊರೆಯವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.